K. R. Ramesh Kumar Profile: ಖಡಕ್ ಸ್ಪೀಕರ್ ಎಂದು ಹೆಸರಾದ ಕೆ.ಆರ್.ರಮೇಶ್ ಕುಮಾರ್ ಪರಿಚಯ ಇಲ್ಲಿದೆ
ತಮ್ಮ ವಿದ್ಯಾರ್ಥಿ ದಿನಗಳಲ್ಲಿ ದೇವರಾಜ್ ಅರಸ್ ಅವರನ್ನು ಭೇಟಿಯಾಗಿದ್ದ ರಮೇಶ್ ಕುಮಾರ್ ಅವರಿಗೆ ರಾಜಕೀಯ ಪ್ರವೇಶಿಸಲು ಪ್ರೋತ್ಸಾಹ ನೀಡಿದ್ದು ಇವರೇ.
ಕೋಲಾರ, ಮಾರ್ಚ್ 06: ಕಾಂಗ್ರೆಸ್‌ನ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಕೆ.ಆರ್ ರಮೇಶ್ ಕುಮಾರ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರು. ತಮ್ಮ ಕ್ಷೇತ್ರದ ಜನರಿಂದ ಸ್ವಾಮಿ ಎಂದು ಕರೆಸಿಕೊಳ್ಳುವ ಅವರು ಇಲ್ಲಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶಾಸಕರು, ಸಚಿವರಾಗಿ ಕಾರ್ಯ ನಿರ್ವಹಿಸಿರುವ ಇವರು ಕರ್ನಾಟಕ ವಿಧಾನಸಭೆಯ 16 ನೇ ಸ್ಪೀಕರ್ ಆಗಿಯೂ, ನಟರಾಗಿಯೂ ಪರಿಚಿತರು.
ಕೆ. ರಾಮಯ್ಯ ರಮೇಶ್ ಕುಮಾರ್ ಅವರು 22 ನವೆಂಬರ್ 1949 (ವಯಸ್ಸು 73) ರಲ್ಲಿ ಶ್ರೀನಿವಾಸಪುರದ ಅಡಗಲು ಎಂಬಲ್ಲಿ ಜನಿಸಿದರು. ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಕೆ. ಆರ್. ರಮೇಶ್ ಕುಮಾರ್ ಬೆಂಗಳೂರಲ್ಲಿ ಬಿಎಸ್‌ಸಿ ಪದವಿ ವ್ಯಾಸಂಗ ಮುಗಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ 'ಎಕ್ಸ್ಪೋ-70' ವಿಚಾರದಲ್ಲಿ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಇಳಿದ ನಾಯಕರಲ್ಲಿ ರಮೇಶ್ ಕುಮಾರ್ ಹೆಸರು ಕೂಡ ಸೇರಿದೆ.
ತಮ್ಮ ವಿದ್ಯಾರ್ಥಿ ದಿನಗಳಲ್ಲಿ ದೇವರಾಜ್ ಅರಸ್ ಅವರನ್ನು ಭೇಟಿಯಾಗಿದ್ದ ರಮೇಶ್ ಕುಮಾರ್ ಅವರಿಗೆ ರಾಜಕೀಯ ಪ್ರವೇಶಿಸಲು ಪ್ರೋತ್ಸಾಹ ನೀಡಿದ್ದು ಇವರೇ. 1978 ರಲ್ಲಿ ರಮೇಶ್ ಕುಮಾರ್ (ಸ್ವಾಮಿ) ಮೊದಲ ಬಾರಿಗೆ ಇಂದಿರಾ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಎದುರಿಸಿದ ಅವರು ಕಾಂಗ್ರೆಸ್‌ನ ಆರ್.ಜಿ ನಾರಾಯಣರೆಡ್ಡಿ ಅವರನ್ನು 19,800 ಮತಗಳ ಅಂತರದಿಂದ ಸೋಲಿಸಿದ್ದರು. ಆಗ ಅವರಿಗೆ ಕೇವಲ 29 ವರ್ಷ ವಯಸ್ಸು.

1994ರಲ್ಲಿ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆ
ಮುಂದಿನ 1983 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ವತಂತ್ರವಾಗಿ ಸ್ಪರ್ಧಿಸಿದ್ದ ರಮೇಶ್ ಕುಮಾರ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ.ಕೆ. ವೆಂಕಟಶಿವಾರೆಡ್ಡಿ ವಿರುದ್ಧ ಕೇವಲ 700 ಮತಗಳ ಕಡಿಮೆ ಅಂತರದಿಂದ ಸೋಲು ಕಂಡಿದ್ದರು. 1985 ರ ಚುನಾವಣೆಯಲ್ಲಿ ರಮೇಶ್ ಕುಮಾರ್ ಜೆಪಿ ಟಿಕೆಟ್‌ನಲ್ಲಿ ನಿಂತು ಸುಮಾರು 7,000 ಮತಗಳಿಂದ ಐಎನ್‌ಸಿಯ ಜಿ ಕೆ ವೆಂಕಟಶಿವಾರೆಡ್ಡಿ ಅವರನ್ನು ಸೋಲಿಸಿದರು.
ಇದಾದ ನಂತರ 1989 ರ ಚುನಾವಣೆಯಲ್ಲಿ ರಮೇಶ್ ಕುಮಾರ್ ಅವರು ಐಎನ್‌ಸಿಯ ಜಿ.ಕೆ. ವೆಂಕಟಶಿವಾ ರೆಡ್ಡಿ ವಿರುದ್ಧ ಸುಮಾರು 8,000 ಮತಗಳಿಂದ ಸೋತರು. ಮುಂದಿನ 1994 ರ ಚುನಾವಣೆಯಲ್ಲಿ ರಮೇಶ್ ಕುಮಾರ್, ವೆಂಕಟ ಶಿವಾಡ್ಡಿ ಅವರನ್ನು ಸೋಲಿಸಿ ಸುಮಾರು 4,000 ಮತಗಳಿಂದ ಗೆದ್ದರು. ಅವರು ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು.

2004 ರಲ್ಲಿ ಕಾಂಗ್ರೆಸ್ ಸೇರಿದ ಕೆ.ಆರ್.ರಮೇಶ್ ಕುಮಾರ್
1999 ರ ಚುನಾವಣೆಯಲ್ಲಿ ರಮೇಶ್ ಕುಮಾರ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು ಮತ್ತು INC ಯ G. K. ವೆಂಕಟ ಶಿವ ರೆಡ್ಡಿ ಅವರ ವಿರುದ್ಧ ಸುಮಾರು 1,000 ಮತಗಳಿಂದ ಸೋತರು. 2004 ರ ಚುನಾವಣೆಯಲ್ಲಿ ರಮೇಶ್ ಕುಮಾರ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ಟಿಕೆಟ್‌ನಿಂದ 8,000 ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಬಿಜೆಪಿಗೆ ಸೇರಿದ್ದ ಜಿ.ಕೆ. ವೆಂಕಟಶಿವಾರೆಡ್ಡಿ ಅವರನ್ನು ಸೋಲಿಸಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ವಾಮಿಗೆ ಮುಖಾಮುಖಿ ಎಂದರೆ ಅದು ಜೆಡಿಎಸ್‌ನ ವೆಂಕಟಶಿವಾರೆಡ್ಡಿ. ಹೌದು, ಇಬ್ಬರ ಸತತವಾಗಿ 9 ಚುನಾವಣೆಗಳಲ್ಲಿ ಇಬ್ಬರು ಮುಖಾಮುಖಿಯಾಗಿದ್ದಾರೆ. ಒಮ್ಮೆ ರಮೇಶ್ ಕುಮಾರ್ ಗೆದ್ದರೆ, ಮತ್ತೊಮ್ಮೆ ವೆಂಕಟಶಿವಾರೆಡ್ಡಿ ಗೆಲುವು ಎನ್ನುವುದು ವಾಡಿಕೆಯಾಗಿದೆ. ಕ್ಷೇತ್ರದಲ್ಲಿ ಈವರೆಗೂ ಒಬ್ಬ ವ್ಯಕ್ತಿ ಎರಡು ಬಾರಿಗೆ ಗೆದ್ದ ಉದಾಹರಣೆಯಿರಲಿಲ್ಲ. ಆದರೆ, 2013 ಮತ್ತು 2018ರಲ್ಲಿಯೂ ಗೆಲ್ಲುವ ಮೂಲಕ ರಮೇಶ್ ಕುಮಾರ್ ಸತತ 2ನೇ ಬಾರಿ ಗೆದ್ದು ಇತಿಹಾಸ ಸೃಷ್ಟಿಸಿದರು.

ವಿಧಾನಸಭೆಯ ಖಡಕ್ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್
ಜೂನ್ 2016 ರಲ್ಲಿ, ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇರ್ಪಡೆಗೊಂಡರು. ರಮೇಶ್ ಕುಮಾರ್ ಅವರು ಕರ್ನಾಟಕ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಖಾತೆಯನ್ನು ಹೊಂದಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ 2018 ರಲ್ಲಿ ಅವರು 15 ನೇ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು. 25 ಮೇ 2018 ರಿಂದ 29 ಜುಲೈ 2019 ರವರೆಗೆ ಕರ್ನಾಟಕ ವಿಧಾನಸಭೆಯ 16 ನೇ ಸ್ಪೀಕರ್ ಆಗಿದ್ದರು.
ಆಪರೇಷನ್ ಕಮಲ ನಡೆದ ಸಂದರ್ಭದಲ್ಲಿ ಸ್ಪಿಕರ್ ಆಗಿದ್ದ ಕೆ.ಆರ್. ರಮೇಶ್ ಕುಮಾರ್ ಪಕ್ಷಾಂತರದ ವಿರುದ್ಧ ಆದೇಶ ಹೊರಡಿಸಿ ಗಮನ ಸೆಳೆದಿದ್ದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಆಪರೇಷನ್ ಕಮಲ ನಡೆದಾಗ 18 ಶಾಸಕರನ್ನು ಅನರ್ಹಗೊಳಿಸಿದ್ದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಹೊಸ ಬಿಜೆಪಿ ಸರ್ಕಾರ ರಚನೆ ಸುಲಭಕ್ಕೆ ಸಾಧ್ಯವಾಗದಂತೆ ಅವರು ತಮ್ಮ ಸ್ಪೀಕರ್ ಅಧಿಕಾರವನ್ನು ಬಳಸಿದ್ದರು.

ಪಕ್ಷಕ್ಕಿಂತ ಸ್ವಂತ ವರ್ಚಸ್ಸಿನಿಂದಲೇ ಆರು ಬಾರಿ ಶಾಸಕ ಸ್ಥಾನ!
ಶ್ರೀನಿವಾಸಪುರದಲ್ಲಿ ತಮ್ಮ ಸಮುದಾಯದ ಮತಗಳು ಕಡಿಮೆ ಸಂಖ್ಯೆಯಲ್ಲಿದ್ದರೂ ಸಹ ಬ್ರಾಹ್ಮಣ ಸಮುದಾಯದ ರಮೇಶ್ ಕುಮಾರ್‌ರವರು ತಮ್ಮ ಸ್ವಂತ ವರ್ಚಸ್ಸಿನಿಂದ ಆರು ಬಾರಿ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಸ್ವಾಮಿ ವರ್ಸಸ್ ವೆಂಕಟಶಿವಾರೆಡ್ಡಿ ರಾಜಕೀಯ ನಡೆಯುತ್ತಿದ್ದು, ಈ ಬಾರಿಯೂ ಮತ್ತೆ ಗೆಲುವು ದಾಖಲಿಸುವ ಹುಮ್ಮಸ್ಸಿನಲ್ಲಿ ರಮೇಶ್ ಕುಮಾರ್ ಇದ್ದಾರೆ.
ಶ್ರೀನಿವಾಸಪುರದಲ್ಲಿ ಗುಡಿಸಲು ಮುಕ್ತ ಕ್ಷೇತ್ರವಾಗಿಸಲು 13 ಸಾವಿರ ಮನೆ ನಿರ್ಮಾಣ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ನೀಡಿದ್ದ ಸಾಲ ಅವರ ಗೆಲುವಿಗೆ ಕಾರಣವಾಗಿತ್ತು. ಈಗ ಕೆ.ಸಿ ವ್ಯಾಲಿ ನೀರಾವರಿ ಯೋಜನೆ ಜಾರಿಗೊಳಿಸಿ ಜಿಲ್ಲೆಯ ಜನರ ಬೆಂಬಲ ಗಳಿಸಿದ್ದಾರೆ. ಹೀಗಾಗಿಯೇ ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದ್ದಾರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್.
*ಆಸ್ತಿ ವಿವರ*
ಸದ್ಯ ಬೆಂಗಳೂರಿನ ದೊಮ್ಮಲೂರಿನಲ್ಲಿ ನೆಲೆಸಿರುವ ಕೆ.ಆರ್. ರಮೇಶ್ ಕುಮಾರ್ ಅವರ ಒಟ್ಟು ಆಸ್ತಿ 11.63 ಕೋಟಿ. ಆಸ್ತಿ 13.92 ಕೋಟಿಯಿದ್ದರೇ, ಸಾಲ 2.3 ಕೋಟಿಯಿದೆ.












Click it and Unblock the Notifications