Explained: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಯೇ ಸವಾಲು!

ನವದೆಹಲಿ, ಜೂನ್ 09: ಜಗತ್ತಿನಾದ್ಯಂತ ಹರಡಿರುವ ಮತ್ತು ಹರಡುತ್ತಿರುವ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡಲು ಸಮರೋಪಾದಿಯಲ್ಲಿ ಲಸಿಕೆ ವಿತರಣೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆ ಹೈದ್ರಾಬಾದ್ ನಲ್ಲಿ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆ ಮತ್ತು ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ವಿತರಿಸುವುದಕ್ಕೆ ಅನುಮೋದನೆ ನೀಡಲಾಗಿದೆ.

ಕಳೆದ ಜನವರಿ 16ರಂದು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ಕೊರೊನಾವೈರಸ್ ಲಸಿಕೆ ವಿತರಿಸುವುದಕ್ಕೆ ಚಾಲನೆ ನೀಡಿದರು. ಆರಂಭಿಕ ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ನೀಡುವುದರಲ್ಲಿ ಆದ್ಯತೆ ನೀಡಲಾಯಿತು. ಪ್ರಸ್ತುತ ಮೇ ತಿಂಗಳಾಂತ್ಯದ ಅಂಕಿ-ಅಂಶಗಳ ಪ್ರಕಾರ, ಜಗತ್ತಿನಲ್ಲಿ ಅತಿಹೆಚ್ಚು ಜನರಿಗೆ ಲಸಿಕೆ ವಿತರಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ.

ಮೇ ತಿಂಗಳಾಂತ್ಯದ ಅಂಕಿ-ಅಂಶಗಳ ಪ್ರಕಾರ, ವಿಶ್ವದಲ್ಲೇ ಅತಿಹೆಚ್ಚು ಕೊರೊನಾವೈರಸ್ ಲಸಿಕೆ ವಿತರಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಅಮೆರಿಕಾ ಎರಡನೇ ಸ್ಥಾನದಲ್ಲಿದ್ದು, ಭಾರತವು ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. 2021ರ ವರ್ಷಾಂತ್ಯದ ವೇಳೆಗೆ ದೇಶದ ಪ್ರತಿಯೊಬ್ಬ ವಯಸ್ಕ ಪ್ರಜೆಗೆ ಲಸಿಕೆ ವಿತರಿಸುವುದರ ಮೂಲಕ ಅತಿಹೆಚ್ಚು ಲಸಿಕೆ ವಿತರಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನಕ್ಕೆ ಏರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದಲ್ಲಿ ಶೇ.12ರಷ್ಟು ಜನರಿಗೆ ಕೊವಿಡ್-19 ಲಸಿಕೆ ವಿತರಣೆ

ಭಾರತದಲ್ಲಿ ಶೇ.12ರಷ್ಟು ಜನರಿಗೆ ಕೊವಿಡ್-19 ಲಸಿಕೆ ವಿತರಣೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಆರಂಭವಾದ ನಂತರದಲ್ಲಿ ಮೇ ತಿಂಗಳ ಅಂತ್ಯದ ವೇಳೆಯ ಅಂಕಿ-ಅಂಶಗಳ ಪ್ರಕಾರ, 16.8 ಕೋಟಿ ಫಲಾನುಭವಿಗಳಿಗೆ ಮೊದಲ ಡೋಸ್ ನೀಡಲಾಗಿದೆ. 4.3 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಈವರೆಗೂ 136 ಕೋಟಿ ಜನಸಂಖ್ಯೆಯ ಶೇ.12ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ವಿತರಿಸಲಾಗಿದೆ. ಶೇ.03ರಷ್ಟು ಫಲಾನುಭವಿಗಳು ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

2021ರ ವರ್ಷಾಂತ್ಯದ ವೇಳೆಗೆ 73.1 ಜನರಿಗೆ ಉಚಿತ ಲಸಿಕೆ

2021ರ ವರ್ಷಾಂತ್ಯದ ವೇಳೆಗೆ 73.1 ಜನರಿಗೆ ಉಚಿತ ಲಸಿಕೆ

ದೇಶದ ಜನಸಂಖ್ಯೆಯ ಶೇ.34ರಷ್ಟು ಅಂದರೆ 46.3 ಕೋಟಿ ಮಕ್ಕಳು ಹಾಗೂ 18 ವರ್ಷಕ್ಕಿಂತ ಕೆಳಗಿನ ಯುವಕರಿದ್ದಾರೆ. 2021ರ ವರ್ಷಾಂತ್ಯದ ವೇಳೆಗೆ ಇವರನ್ನು ಹೊರತುಪಡಿಸಿ ಎಲ್ಲ ವಯೋಮಾನದ ಅರ್ಹರಿಗೆ ಕೊವಿಡ್-19 ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ. ಭಾರತವು ತನ್ನ ಜನಸಂಖ್ಯೆಯ ಶೇ.9ರಷ್ಟು ಫಲಾನುಭವಿಗಳಿಗೆ ಮಾತ್ರ ಲಸಿಕೆ ನೀಡುವುದಕ್ಕೆ ಸಿದ್ಧವಿಲ್ಲ. ಅದರ ಬದಲಿಗೆ ಮುಂದಿನ ಏಳು ತಿಂಗಳಿನಲ್ಲಿ ಉಳಿದ ಶೇ.54ರಷ್ಟು ಜನರಿಗೆ ಅಂದರೆ 73.1 ಕೋಟಿ ಫಲಾನುಭವಿಗಳಿಗೆ ಲಸಿಕೆ ವಿತರಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.

ಎಷ್ಟು ಹಂತಗಳಲ್ಲಿ ಕೊವಿಡ್-19 ಲಸಿಕೆ ವಿತರಣೆ

ಎಷ್ಟು ಹಂತಗಳಲ್ಲಿ ಕೊವಿಡ್-19 ಲಸಿಕೆ ವಿತರಣೆ

ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ವೇಗಕ್ಕೆ ಕಡಿವಾಣ ಹಾಕಲು ಮೂರು ಹಂತಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಮೂರನೇ ಹಂತದಲ್ಲಿ ಮೇ 1ರಿಂದ 18-44 ವಯೋಮಾನದವರಿಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.

7 ತಿಂಗಳಿಗೆ 159 ಕೋಟಿ ಡೋಸ್ ಕೊವಿಡ್-19 ಲಸಿಕೆ

7 ತಿಂಗಳಿಗೆ 159 ಕೋಟಿ ಡೋಸ್ ಕೊವಿಡ್-19 ಲಸಿಕೆ

ಜಾಗತಿಕ ಮಟ್ಟದ ಪೈಪೋಟಿ ನಡುವೆ 2021ರ ವರ್ಷಾಂತ್ಯದ ವೇಳೆಗೆ ಕೊರೊನಾವೈರಸ್ ಲಸಿಕೆ ವಿತರಣೆಯು ಒಂದು ಹಂತಕ್ಕೆ ತಲುಪಬೇಕಿದೆ. ಕೊವಿಡ್-19 ಲಸಿಕೆ ಎಲ್ಲಿ ಸಿಗುತ್ತದೆ, ಎಷ್ಟಕ್ಕೆ ಸಿಗುತ್ತದೆ, ಎಷ್ಟು ಪ್ರಮಾಣದಲ್ಲಿ ಸಿಗುತ್ತದೆ, ಅದನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಕುರಿತು ಸಾಮಾನ್ಯ ವ್ಯವಸ್ಥೆಯ ಬಗ್ಗೆ ಎಲ್ಲರಿಗೂ ತಿಳಿದಿರಬೇಕು. ಮುಂದಿನ ಏಳು ತಿಂಗಳಿನಲ್ಲಿ 12.5 ಕೋಟಿ ಮಂದಿಗೆ ಎರಡನೇ ಡೋಸ್ ಹಾಗೂ 73.1 ಕೋಟಿ ಫಲಾನುಭವಿಗಳಿಗೆ ಎರಡೂ ಡೋಸ್ ಲಸಿಕೆ ವಿತರಿಸಬೇಕಿದೆ. ಈ ಹಿನ್ನೆಲೆ 159 ಕೋಟಿ ಡೋಸ್ ಕೊವಿಡ್-19 ಲಸಿಕೆಯ ಅಗತ್ಯವಿದೆ. ಕೊರೊನಾವೈರಸ್ ಲಸಿಕೆ ಸಾಗಾಟ ಮತ್ತು ಬಳಕೆ ಸಂದರ್ಭದಲ್ಲಿ ವ್ಯರ್ಥವಾಗುವ ಲಸಿಕೆಯನ್ನು ಸೇರಿಸಿ ಒಟ್ಟು 164 ಕೋಟಿ ಡೋಸ್ ಲಸಿಕೆಯು ಬೇಕಾಗುತ್ತದೆ.

ದೇಶದಲ್ಲಿ ತಿಂಗಳಿಗೆ 5 ಕೋಟಿ ಜನರಿಗೆ ಕೊರೊನಾ ಲಸಿಕೆ

ದೇಶದಲ್ಲಿ ತಿಂಗಳಿಗೆ 5 ಕೋಟಿ ಜನರಿಗೆ ಕೊರೊನಾ ಲಸಿಕೆ

ಭಾರತದಲ್ಲಿ ಮೇ ತಿಂಗಳಾಂತ್ಯದವರೆಗೆ ಸರಾಸರಿ ಒಂದು ತಿಂಗಳಿನಲ್ಲಿ 5 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗಿದೆ. ಈ ಪ್ರಮಾಣವನ್ನು ಮುಂದಿನ ಏಳು ತಿಂಗಳ ಅವಧಿಯಲ್ಲಿ ಹೆಚ್ಚಿಸುವ ಅಗತ್ಯತೆಯಿದೆ. ಕನಿಷ್ಠ ಒಂದು ತಿಂಗಳಿನಲ್ಲಿ ಸರಾಸರಿ 23 ಕೋಟಿ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ನೀಡಬೇಕು. ಆದ್ದರಿಂದ ಕೊವಿಡ್-19 ಲಸಿಕೆ ಆಮದು ಮಾಡಿಕೊಳ್ಳುವುದರ ಜೊತೆಗೆ ಲಸಿಕೆಯ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸಬೇಕಿದೆ.

ಕೊವಿಡ್-19 ಲಸಿಕೆ ಉತ್ಪಾದನೆ ಪ್ರಮಾಣ ಹೆಚ್ಚಳ

ಕೊವಿಡ್-19 ಲಸಿಕೆ ಉತ್ಪಾದನೆ ಪ್ರಮಾಣ ಹೆಚ್ಚಳ

ದೇಶದಲ್ಲಿ ಕೊರೊನಾವೈರಸ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ರೀತಿ ಕ್ರಮಗಳನ್ನು ತೆಗೆದುಕೊಂಡಿದೆ. ಕೊವಿಡ್-19 ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ತಂತ್ರಜ್ಞಾನ ವಿಸ್ತರಣೆ ಮಾಡಲಾಗುತ್ತಿದೆ. ಹೈದ್ರಾಬಾದ್ ಭಾರತ್ ಬಯೋಟೆಕ್ ಕಂಪನಿಯು ಮೂರು ಖಾಸಗಿ ವಲಯದ ಕಾರ್ಖಾನೆಗಳಿಗೆ ತಂತ್ರಜ್ಞಾನ ವರ್ಗಾವಣೆ ಮೂಲಕ ಲಸಿಕೆ ಉತ್ಪಾದನೆ ಪ್ರಮಾಣವನ್ನು ವೃದ್ಧಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದರ ಜೊತೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯನ್ನು ದೇಶದಲ್ಲಿ ಹೆಚ್ಚು ಹೆಚ್ಚು ಉತ್ಪಾದಿಸುವಂತೆ ನೋಡಿಕೊಳ್ಳಲಾಗುತ್ತಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಸಿಕೆ ವಿತರಣೆ ಕುಸಿತ

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಸಿಕೆ ವಿತರಣೆ ಕುಸಿತ

2021ರ ಏಪ್ರಿಲ್ ವೇಳೆಗೆ ಕೇಂದ್ರ ಸರ್ಕಾರದಿಂದ 16.37 ಕೋಟಿ ಡೋಸ್ ಲಸಿಕೆಯನ್ನು ರಾಜ್ಯ ಮತ್ತು ಕಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗಿತ್ತು. ಏಪ್ರಿಲ್ ತಿಂಗಳಾಂತ್ಯದ ವೇಳೆಗೆ ಒಟ್ಟು 15.5 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿತ್ತು. ಮೇ ತಿಂಗಳಿನಲ್ಲಿ 7.9 ಕೋಟಿ ಡೋಸ್ ಲಸಿಕೆಯಷ್ಟೇ ಉಳಿದಿದ್ದು, ಈ ಪೈಕಿ ಕೇವಲ 6.1 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ಮೇ ತಿಂಗಳಿನಲ್ಲಿ ಕೊವಿಡ್-19 ಲಸಿಕೆ ವಿತರಣೆಯಲ್ಲಿ ದಿಢೀರ್ ಕುಸಿತ ಕಂಡು ಬಂದಿತು. ಒಂದು ತಿಂಗಳಿನಲ್ಲಿ ಶೇ.32ರಷ್ಟು ಲಸಿಕೆ ವಿತರಣೆಯು ಇಳಿಮುಖವಾಯಿತು.

18-45 ವಯೋಮಾನದವರಿಗೆ ಲಸಿಕೆ ರಾಜ್ಯಗಳಿಗೆ ಬಿಟ್ಟಿದ್ದು

18-45 ವಯೋಮಾನದವರಿಗೆ ಲಸಿಕೆ ರಾಜ್ಯಗಳಿಗೆ ಬಿಟ್ಟಿದ್ದು

ಕಳೆದ ಜೂನ್ 7ರಂದು ಕೊರೊನಾವೈರಸ್ ಲಸಿಕೆ ವಿರುದ್ಧ ಹೋರಾಡುವುದಕ್ಕೆ "ರಾಷ್ಟ್ರೀಯ ಕೊವಿಡ್-19 ಲಸಿಕೆ ಕಾರ್ಯಕ್ರಮ"ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದರು. ಕೇಂದ್ರ ಸರ್ಕಾರದಿಂದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಸಲಾಗುವುದು. ಆದರೆ ಆರೋಗ್ಯ ಸಿಬ್ಬಂದಿ, ಮೊದಲ ಶ್ರೇಣಿ ಕಾರ್ಮಿಕರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆಗೆ ಮೊದಲ ಆದ್ಯತೆ ನೀಡಬೇಕು. 18-45 ವರ್ಷದ ಜನರಿಗೆ ಉಚಿತವಾಗಿ ಲಸಿಕೆ ನೀಡಬೇಕೇ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಲಸಿಕೆ ಪಡೆದುಕೊಳ್ಳಬೇಕೇ ಎಂಬುದನ್ನು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಗೆ ಬಿಡಲಾಗಿತ್ತು.

ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆ ಬೆಲೆ?

ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆ ಬೆಲೆ?

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರಕ್ಕೆ 400 ರೂಪಾಯಿ, ಖಾಸಗಿ ಆಸ್ಪತ್ರೆಗಳಿಗೆ 600 ರೂಪಾಯಿಗೆ ನೀಡಲಾಗುತ್ತಿದೆ. ಹೈದ್ರಾಬಾದಿನ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ರಾಜ್ಯ ಸರ್ಕಾರಕ್ಕೆ 600 ರೂಪಾಯಿ, ಖಾಸಗಿ ಆಸ್ಪತ್ರೆಗಳಿಗೆ 1200 ರೂಪಾಯಿಗೆ ನೀಡಲಾಗುತ್ತಿದೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳು ಲಸಿಕೆ ವಿತರಣೆಗೆ ಗರಿಷ್ಠ 150 ರೂಪಾಯಿ ಸೇವಾ ಶುಲ್ಕವನ್ನು ವಿಧಿಸುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ನೇರವಾಗಿ ಕಂಪನಿಗಳ ಕಡೆಯಿಂದ ಕೊರೊನಾವೈರಸ್ ಲಸಿಕೆಯನ್ನು ಖರೀದಿಸಿದ್ದಲ್ಲಿ ಹೆಚ್ಚುವರಿ ಹೊರೆಯಾಗಲಿದೆ. ರಾಜ್ಯ ಬಜೆಟ್ ನಲ್ಲಿ ಲಸಿಕೆ ಖರೀದಿಗೆ ಪ್ರತ್ಯೇಕ ಹಣವನ್ನು ತೆಗೆದಿಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಕೇಂದ್ರದಿಂದಲೇ ಶೇ.75ರಷ್ಟು ಕೊರೊನಾ ಲಸಿಕೆ ಉಚಿತ

ಕೇಂದ್ರದಿಂದಲೇ ಶೇ.75ರಷ್ಟು ಕೊರೊನಾ ಲಸಿಕೆ ಉಚಿತ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಕಾಲದ ಸಂದಿಗ್ಧತೆಯನ್ನು ಅರಿತುಕೊಂಡ ಕೇಂದ್ರ ಸರ್ಕಾರವು ಶೇ.75ರಷ್ಟು ಲಸಿಕೆಯನ್ನು ಉಚಿತವಾಗಿ ಪೂರೈಸುವುದಕ್ಕೆ ನಿರ್ಧರಿಸಿದೆ. ಪ್ರಧಾನಿ ಮೋದಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಿಯೂ ಆಗಿದೆ. ಶೇ.25ರಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುವುದಕ್ಕೆ ಲಸಿಕೆ ಉತ್ಪಾದನೆ ಕಂಪನಿಗಳಿಗೆ ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರ ಪೂರೈಸುವ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ನೀಡಲು ಅನುಮತಿಸಲಾಗಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲಿನ ಹೊರೆ ಇಳಿಕೆ

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲಿನ ಹೊರೆ ಇಳಿಕೆ

ಕೊರೊನಾವೈರಸ್ ಲಸಿಕೆಗೆ ದೆಹಲಿ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ತಮ್ಮ ಬಜೆಟ್ ನಲ್ಲಿ ನಿರ್ದಿಷ್ಟ ಪ್ರಮಾಣವನ್ನು ಎತ್ತಿಡಲಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಉಚಿತವಾಗಿ ಲಸಿಕೆ ಪೂರೈಸಲು ತೀರ್ಮಾನಿಸಿದೆ. 2021-22ನೇ ಸಾಲಿನಲ್ಲಿ ಒಟ್ಟು ಲಸಿಕೆ ವಿತರಣೆಗೆ 35,000 ಕೋಟಿ ಹಣವನ್ನು ಮೀಸಲು ಇರಿಸಲಾಗುತ್ತದೆ. ಇದರ ಹೊರತಾಗಿ 18 ರಿಂದ 45 ವರ್ಷದ ವಿದ್ಯಾರ್ಥಿಗಳು ಮತ್ತು ಮಧ್ಯಮ ವಯಸ್ಕರಿಗೆ ಲಸಿಕೆ ವಿತರಿಸುವುದು ದೊಡ್ಡ ಸವಾಲಾಗುತ್ತದೆ.

ಒಂದು ಗಂಟೆಯಲ್ಲಿ 1 ಲಕ್ಷ ಫಲಾನುಭವಿಗಳಿಗೆ ಕೊರೊನಾ ಲಸಿಕೆ

ಒಂದು ಗಂಟೆಯಲ್ಲಿ 1 ಲಕ್ಷ ಫಲಾನುಭವಿಗಳಿಗೆ ಕೊರೊನಾ ಲಸಿಕೆ

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 144 ದಿನಗಳಲ್ಲಿ 23,90,58,360 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಮಂಗಳವಾರ ರಾತ್ರಿ 7 ಗಂಟೆ ವೇಳೆಗೆ 25,58,652 ಮಂದಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ಈ ಪೈಕಿ 22,67,842 ಜನರಿಗೆ ಮೊದಲ ಡೋಸ್ ಹಾಗೂ 2,90,810 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

ಯಾವ ಹಂತದಲ್ಲಿ ಎಷ್ಟು ಫಲಾನುಭವಿಗಳಿಗೆ ಲಸಿಕೆ?

ಯಾವ ಹಂತದಲ್ಲಿ ಎಷ್ಟು ಫಲಾನುಭವಿಗಳಿಗೆ ಲಸಿಕೆ?

ಭಾರತದಲ್ಲಿ ಮೇ 1ರಿಂದ ಈವರೆಗೂ 3,17,37,869 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, 3,16,134 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ.

ದೇಶದಲ್ಲಿ ಈವರೆಗೂ 99,95,552 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 68,91,662 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 1,63,80,521 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 87,26,071 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.

ದೇಶದಲ್ಲಿ ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 7,25,46,765 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 1,15,34,478 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 6,12,75,505 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 1,94,36,078 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣ

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣ

ದೇಶದಲ್ಲಿ ಒಂದೇ ದಿನ 92,596 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1,62,664 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 2219 ಮಂದಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಒಟ್ಟು 2,90,89,069 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,75,04,126 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,53,528 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 12,31,415 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+