ವಿಶೇಷ ಲೇಖನ; ಬೆಂಗಳೂರಿನಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ 100 ದಿನಗಳನ್ನು ಪೂರೈಸಿದೆ. ನೂರು ದಿನಗಳಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಗ್ಯಾರಂಟಿಗಳು ಬೆಂಗಳೂರು ನಗರದಲ್ಲಿ ಹೇಗೆ ಜಾರಿಯಾಗಿವೆ? ಎಂಬ ವಿಶೇಷ ಲೇಖನ ಇಲ್ಲಿದೆ. ಬೆಂಗಳೂರು ವಾರ್ತಾ ಇಲಾಖೆ ಬರೆದ ಲೇಖನ ಇದಾಗಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವು 100 ದಿನಗಳ ಆಡಳಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ರಾಜ್ಯದ ಎಲ್ಲ ಜನರ ಅಭಿವೃದ್ಧಿಗಾಗಿ ಚುನಾವಣೆ ಮುನ್ನ ಘೋಷಿಸಿದ್ದ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಯುವನಿಧಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ 4ಕ್ಕೆ ಚಾಲನೆ ದೊರೆಕಿದೆ.

ಈ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ರಾಜ್ಯದೆಲ್ಲೆಡೆ ಇದು 'ನುಡಿದಂತೆ ನಡೆಯುವ ಸರ್ಕಾರ' ಎಂಬುದು ಇದೀಗ ಮನೆ ಮಾತಾಗಿದೆ. ರಾಜಧಾನಿಯಾದ ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ಯೋಜನೆಗಳು ಅತಿ ಹೆಚ್ಚು ಸಂಖ್ಯೆಯ ಫಲಾನುಭವಿಗಳನ್ನು ತಲುಪುತ್ತಿವೆ. ನಾಡಿನ ಮಹಿಳೆಯರು ಶಿಕ್ಷಣ, ಉದ್ಯೋಗ ಸಂಬಂಧಿತ ಪ್ರಯಾಣಗಳಿಗೆ ಮತ್ತೊಬ್ಬರ ಮೇಲೆ ಅವಲಂಬಿತರಾಗದೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ 'ಶಕ್ತಿ' ಯೋಜನೆಯನ್ನು ಜಾರಿಗೆ ತರಲಾಗಿದೆ.
ಶಕ್ತಿ ಯೋಜನೆ ಯಶಸ್ವಿ; ಬೆಂಗಳೂರು ನಗರ ಜಿಲ್ಲೆಯಾದ್ಯಾಂತ ನಿತ್ಯ 20.10 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ತಮ್ಮ ಕೆಲಸ ಕಾರ್ಯ ನಿಮಿತ್ತ ಉಚಿತವಾಗಿ ಸಂಚರಿಸುತ್ತಿದ್ದಾರೆ. ಯೋಜನೆ ಜಾರಿಯಾದ ದಿನದಿಂದ ಈ ವರೆಗೆ ಕೆಎಸ್‌ಆರ್‌ಟಿಸಿ ಒಟ್ಟು 14,31,30, 723 ಕೋಟಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಒಟ್ಟು 15,68,16,223 ಕೋಟಿ (ಒಟ್ಟು ಪ್ರಯಾಣ ಸಂಖ್ಯೆ 299,946,946) ಮಹಿಳೆಯರು ಉಚಿತ ಪ್ರಯಾಣ ನಡೆಸಿದ್ದು, ಒಟ್ಟು ಟಿಕೆಟ್ ಮೌಲ್ಯ 61,44,09,25,24 ಕೋಟಿ ರೂಪಾಯಿ ದಾಟಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಯೋಜನೆಯ ಫಲಾನುಭವಿಯಾದ ಅಶ್ವಿನಿ ಪ್ರತಿನಿತ್ಯ ಸಲ್ಲಹಳ್ಳಿಯಿಂದ ಶಾಂತಿನಗರದವರೆಗೆ ಪ್ರಯಾಣಿಸಲು 45 ರೂ. ಗಳ ಟಿಕೆಟ್ ಅನ್ನು ಖರೀದಿಸುತ್ತಿದ್ದರು. ಮಾಸಿಕ ಬಸ್ ಪಾಸ್ ಖರೀದಿಸಲು 1200 ರೂ. ಕೊಡಬೇಕಾಗಿತ್ತು. ಆದರೆ ಇದೀಗ 'ಶಕ್ತಿ' ಯೋಜನೆ ಜಾರಿಗೆ ಬಂದ ನಂತರ ಪಾಸ್ ಕೊಳ್ಳುವ ವೆಚ್ಚ ಉಳಿತಾಯವಾಗಿದೆ. ಅವರು, ಪ್ರತಿದಿನ ಕೆಲಸಕ್ಕೆ ತೆರಳುವ ತನ್ನಂತಹ ಮಹಿಳೆಯರಿಗೆ ಇದು ತುಂಬ ಅನುಕೂಲವಾಗಿದೆ ಎನ್ನುತ್ತಾರೆ. ಯೋಜನೆಯಿಂದ ನನಗೆ ವರ್ಷಕ್ಕೆ ಸುಮಾರು 15 ಸಾವಿರದಷ್ಟು ಉಳಿತಾಯವಾಗಲಿದೆ. ಈ ಹಣದಿಂದ ನನ್ನ ಮಗನ ವಿದ್ಯಾಭ್ಯಾಸ, ಮನೆ ಖರ್ಚು ನಿಭಾಯಿಸಲು ಸಹಾಯವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗೃಹಲಕ್ಷ್ಮಿ ಯೋಜನೆ; ಕುಟುಂಬ ನಿರ್ವಹಣೆಯ ಹೊಣೆ ಹೊತ್ತ ಮಹಿಳೆಯರು ನಿತ್ಯ ಎದುರಿಸುತ್ತಿರುವ ಬೆಲೆ ಏರಿಕೆಯ ಸಂಕಷ್ಟಗಳನ್ನು ತಗ್ಗಿಸಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ಸರ್ಕಾರವು 'ಗೃಹಲಕ್ಷ್ಮಿ' ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 7,79,603 ಲಕ್ಷ ಮಹಿಳೆಯರು ಈಗಾಗಲೇ ನೋಂದಾಯಿಸಿ ಕೊಂಡಿದ್ದಾರೆ. ಆಗಸ್ಟ್ ನೋಂದಾಯಿತ ಮಹಿಳೆಯರ ಬ್ಯಾಂಕ್ ಖಾತೆಗೆ ಮಾಸಿಕ ರೂ. 2,000 ನೇರ ವರ್ಗಾವಣೆಯಾಗುತ್ತಿದೆ.
ಪ್ರತಿ ಮನೆಯನ್ನು ಬೆಳಗುತ್ತಿರುವ 'ಗೃಹಜ್ಯೋತಿ' ಸರ್ಕಾರದ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಶೇ 68ರಷ್ಟು ಅಂದರೆ, 7,81,842 ಗ್ರಾಹಕರು ಸೇವಾಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಆಗಸ್ಟ್ 1 ರಿಂದ ನೋಂದಾಯಿತ ಗ್ರಾಹಕರಿಗೆ ಶೂನ್ಯ ಬಿಲ್ ವಿತರಿಸಲಾಗುತ್ತಿದೆ.
ಯೋಜನೆಯ ಫಲಾನುಭವಿ ಮಹದೇವಪುರದ ಶಾಂತಮ್ಮ ಮಾತನಾಡಿ, "ನಮಗೆ ಬರುವ ಸಂಬಳವು ಮನೆ ಬಾಡಿಗೆ, ಇತರೆ ಅಗತ್ಯ ಖರ್ಚುಗಳಿಗೆ ಸರಿ ಹೋಗುತ್ತಿದೆ. ಸರ್ಕಾರದ ಗೃಹಜ್ಯೋತಿ ಯೋಜನೆಯಿಂದ ಸ್ವಲ್ಪ ಹಣ ಉಳಿಸಲು ಅನುಕೂಲವಾಗಿದೆ. ಭವಿಷ್ಯಕ್ಕೆ ಸ್ವಲ್ಪ ಹಣವನ್ನು ಕೂಡಿ ಇಡಲು ಇದು ಸಹಾಕಾರಿಯಾಗಿದೆ" ಎಂದರು.












Click it and Unblock the Notifications