ಬೊಂಬಾಟ್ ಮಗಾ: 12,000 ರೂಪಾಯಿಯಲ್ಲೇ ಇಡೀ ಭಾರತ ಸುತ್ತಿದ ಬೆಂಗಳೂರಿನ ಹುಡುಗ!
ನವದೆಹಲಿ, ಮೇ 8: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಜನರ ಜೀವನ ಶೈಲಿಯನ್ನೇ ಅದಲು-ಬದಲು ಮಾಡಿದೆ. ಮುಖ ಮುಚ್ಚಿಕೊಳ್ಳುವ ಹಾಗೆ ಮಾಸ್ಕ್ ತೊಟ್ಟು ಪರಸ್ಪರ ಅಂತರ ಕಾಯ್ದುಕೊಳ್ಳುವುದು ಒಂದು ಕಡೆಯ ನಿಯಮವಾಗಿದೆ. ಕೋವಿಡ್-19 ಕಟ್ಟುನಿಟ್ಟಿನ ನಿಯಮಗಳ ನಡುವೆ ಬದುಕು ಕಟ್ಟಿಕೊಳ್ಳುವುದೇ ಸವಾಲಾಗಿದೆ.
ಕೊರೊನಾವೈರಸ್ ಮತ್ತು ಲಾಕ್‌ಡೌನ್‌ಗಳು ಜನರ ದಿನಚರಿ, ಕೆಲಸ, ಉದ್ಯೋಗ, ಅಧ್ಯಯನ, ವ್ಯವಹಾರಗಳ ವೈಖರಿಯನ್ನೇ ಬದಲು ಮಾಡಿತ್ತು. ಇಂಥವರ ಮಧ್ಯೆ ದೇಶ ಸುತ್ತಿದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದಾರೆ.
ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಕೇರಳ ಕಣ್ಣೂರಿನ ವಿಶಾಲ್ ವಿಶ್ವನಾಥ್ ಎಂಬುವವರು ದೇಶ ಸುತ್ತಿದ್ದಾರೆ. 287 ದಿನಗಳಲ್ಲಿ 28 ರಾಜ್ಯಗಳನ್ನು ಸುತ್ತಿದ ಅವರು ಖರ್ಚು ಮಾಡಿದ್ದು ಮಾತ್ರ 12000 ರೂಪಾಯಿ. ಕೇವಲ 12000 ರೂಪಾಯಿಯಲ್ಲೇ ಇಡೀ ದೇಶ ಪ್ರವಾಸ ಮಾಡುವುದಕ್ಕೆ ಹೇಗೆ ಸಾಧ್ಯವಾಯಿತು ಎನ್ನುವ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.

28 ರಾಜ್ಯಗಳ ಪ್ರವಾಸಕ್ಕೆ 12000 ರೂ. ಖರ್ಚು
ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ನಡೆಸುತ್ತಿರುವ ಕೇರಳದ ಕಣ್ಣೂರಿನ ವಿಶಾಲ್ ವಿಶ್ವನಾಥ್ ಕೂಡ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಪರಿಣಾಮಗಳಿಂದ ಬೇಸತ್ತಿದ್ದರು. ಆದರೆ ಎದೆಗುಂದದೇ ಕಟ್ಟಿಯಾಗಿ ನಿಂತುಕೊಂಡರು. ಭಾರತದಾದ್ಯಂತ ಪ್ರವಾಸ ಮಾಡುವುದಕ್ಕಾಗಿ ಅಣಿಯಾದರು. ಅಲ್ಲಿಂದ ಮುಂದೆ ಆಗಿದ್ದೇ ಹೊಸ ದಾಖಲೆ. ಕೇವಲ 278 ದಿನಗಳಲ್ಲಿ 28 ರಾಜ್ಯಗಳನ್ನು ಸುತ್ತಿದ ವಿಶಾಲ್ ವಿಶ್ವನಾಥ್, ಅದಕ್ಕಾಗಿ ಕೇವಲ 12000 ರೂಪಾಯಿ ಖರ್ಚು ಮಾಡಿದ್ದರು.

ದೇಶ ಸುತ್ತಿದ ಬೆಂಗಳೂರಿನ ಹುಡುಗ ವಿಶಾಲ್ ವಿಶ್ವನಾಥ್
ಭಾರತವನ್ನು ಸುತ್ತಿದ ವಿಶಾಲ್ ವಿಶ್ವನಾಥ್ ಸದ್ಯಕ್ಕೆ ಬೆಂಗಳೂರಿನ ಹುಡುಗ. ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನೆಲೆಸಿರುವ ಅವರು, ತಮ್ಮ ವಿಶಿಷ್ಟ ಸಾಧನೆಯನ್ನು ಆಚರಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರ ಬಗ್ಗೆ ಬರೆಯುವ ಮೂಲಕ ಜಯೋತ್ಸವ ಆಚರಿಸಿದ್ದಾರೆ. ''ಅಂತಿಮವಾಗಿ, ನಾನು ಅದನ್ನು ಮಾಡಿದ್ದೇನೆ. ಈ ಜೀವನವು ನನಗೆ ಸಿಕ್ಕಿರುವ ಅತ್ಯುತ್ತಮ ಉಡುಗೊರೆ. ಇಂದು ನಾನು ಎಲ್ಲಾ 28 ರಾಜ್ಯಗಳನ್ನು ಒಳಗೊಂಡ ನನ್ನ ಅಖಿಲ ಭಾರತ ಬ್ಯಾಕ್‌ಪ್ಯಾಕಿಂಗ್‌ನ 278 ದಿನಗಳನ್ನು ಪೂರ್ಣಗೊಳಿಸಿದ್ದೇನೆ," ಎಂದು ಬರೆದುಕೊಂಡಿದ್ದಾರೆ.

ವಿಶಾಲ್ ವಿಶ್ವನಾಥ್ ರಾಷ್ಟ್ರ ಪ್ರವಾಸದ ಹಿಂದಿನ ಕಥೆ
ಇಡೀ ರಾಷ್ಟ್ರ ಪ್ರವಾಸ ಮಾಡುವುದಕ್ಕೆ ವಿಶಾಲ್ ವಿಶ್ವನಾಥ್ ತಮ್ಮದೇ ಆಗಿರುವ ಕಾರಣವನ್ನು ನೀಡಿದ್ದಾರೆ. "ಸಾಮಾನ್ಯವಾಗಿ ನಾವು ಯಾವಾಗಲೂ ಅಸಾಂಪ್ರದಾಯಿಕ ಪ್ರಯಾಣವನ್ನು ಇಷ್ಟಪಡುತ್ತೇವೆ. ಹಿಚ್ಚಿ ಕಿಂಗ್ ಮತ್ತು ಸಾರ್ವಜನಿಕ ಸಾರಿಗೆ ಮೂಲಕ ದಕ್ಷಿಣ ಭಾರತದಾದ್ಯಂತ ಸಣ್ಣ ಪ್ರವಾಸ ಮಾಡಿದ್ದೇನೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ನನ್ನ ವ್ಯವಹಾರವೆಲ್ಲ ಸ್ಥಗಿತಗೊಂಡಿತ್ತು. ಇದು ನಾನು ಇಡೀ ರಾಷ್ಟ್ರ ಪ್ರವಾಸದ ಬಗ್ಗೆ ಯೋಚಿಸುವಂತೆ ಮಾಡಿತು," ಎಂದು ವಿಶಾಲ್ ಹೇಳಿದರು.

28 ರಾಜ್ಯಗಳ ಪ್ರವಾಸದ ಅನುಭವ ಹಂಚಿಕೊಂಡ ವಿಶಾಲ್
ಕಳೆದ ಒಂಬತ್ತು ತಿಂಗಳಿಂದ ಟೆಂಟ್ ಹಾಕಿಕೊಂಡು ಬದುಕುವುದು. ಸ್ಥಳ ಸಿಕ್ಕಲ್ಲಿಯೇ ಟೆಂಟ್ ಹಾಕಿಕೊಂಡು ಮಲಗುವುದು. ಪ್ರವಾಸದ ಸಂದರ್ಭದಲ್ಲಿ ಹಣ್ಣು ಹಂಪಲು ಸೇವಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೆ ಎಂಬುದಾಗಿ ತಮ್ಮ ಪ್ರವಾಸದ ಅನುಭೂತಿಯನ್ನು ವಿಶಾಲ್ ವಿಶ್ವನಾಥ್ ಹಂಚಿಕೊಂಡರು. "ನಾನು ಭೇಟಿ ನೀಡಿದ ಸ್ಥಳಗಳು, ನಾನು ಭೇಟಿಯಾದ ಜನರು, ನಾನು ಏರಿದ ಪರ್ವತಗಳು, ನಾನು ನಡೆದ ರಸ್ತೆಗಳು, ನನ್ನ ಆಹಾರವು ಪ್ರತಿ ಕ್ಷಣವೂ ನನ್ನಲ್ಲಿ ವಿಭಿನ್ನ ರೀತಿಯ ಭಾವನೆಗಳನ್ನು ಮೂಡಿಸಿತು," ಎಂದು ಹೇಳಿದರು.

ವಿಶಾಲ್ ದೇಶ ಪ್ರವಾಸ ಶುರುವಾಗಿದ್ದು ಹೇಗೆ?
ಬೆಂಗಳೂರಿನಿಂದ ಗುವಾಹಟಿಗೆ ರೈಲಿನಲ್ಲಿ ಪ್ರಯಾಣಿಸುವ ಮೂಲಕ ವಿಶಾಲ್ ವಿಶ್ವನಾಥ್, ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅಲ್ಲಿಂದ ಈಶಾನ್ಯದಲ್ಲಿ ಅರುಣಾಚಲ ಪ್ರದೇಶಕ್ಕೆ ಹಾಗೂ ನಂತರ ಗೋವಾಕ್ಕೆ ಹೋದರು. ಅಲ್ಲಿಂದ ಕರ್ನಾಟಕಕ್ಕೆ ಆಗಮಿಸಿದ ನಂತರ ಅಂತಿಮವಾಗಿ ತವರೂರು ಕೇರಳದ ಕಣ್ಣೂರಿಗೆ ಹೋದರು.












Click it and Unblock the Notifications