ಬೆಂಗಳೂರಲ್ಲಿ ಹೆಚ್ಚಾಯ್ತು ನಕಲಿ ಅಪಘಾತಗಳು, ಹೇಗೆ ನಡೆಯುತ್ತೆ ಈ ಖತರ್ನಾಕ್ ಕೃತ್ಯ?
ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನವೂ ಜನಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಅಪರಾಧ ಪ್ರಕರಣಗಳು ಕೂಡ ಮಿತಿಮೀರುತ್ತವೆ. ಪೊಲೀಸರು ಎಷ್ಟೇ ಅಲರ್ಟ್ ಆದರೂ ಟೆಕ್ನಾಲಜಿ ಎಷ್ಟೆಲ್ಲ ಮುಂದುವರಿದಿದ್ದರೂ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ಬೆಂಗಳೂರಿನಲ್ಲಿ ಹೊಸ ರೀತಿಯ ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಲ್ಲಿವರೆಗೆ ಸಾಮಾನ್ಯ ಎನಿಸಿಕೊಂಡಿದ್ದ ರಸ್ತೆ ಅಪಘಾತಗಳು ಇದೀಗ ನಕಲಿ ಅಪಘಾತಗಳೆಂಬ ಹೊಸ ರೂಪ ಪಡೆದುಕೊಂಡಿದೆ.
ಹೌದು, ಬೆಂಗಳೂರಿನಲ್ಲಿ ಇತ್ತೀಚೆಗೆ ನಕಲಿ ಅಪಘಾತಗಳ ಹಾವಳಿ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಈ ನಕಲಿ ಅಪಘಾತದ ಅರ್ಥವೇನೆಂದರೆ ಹೆಸರೇ ಹೇಳುವಂತೆ ಇದು ನಿಜವಾಗಿ ಸಂಭವಿಸುವ ಅಪಘಾತವಲ್ಲ. ಬದಲಿಗೆ ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ಅಪಘಾತಗಳು. ರಸ್ತೆಗಳಲ್ಲಿ ಯಾರಿಗೋ ವಾಹನ ಡಿಕ್ಕಿ ಹೊಡೆದರೆ ಅದು ಸಾಮಾನ್ಯ ಅಪಘಾತ. ಅದೇ ಬೇಕಂತಲೇ ವಾಹನಗಳಿಗೆ ಅಡ್ಡ ಬಂದು ಬಿದ್ದರೆ ಅದೇ ನಕಲಿ ಅಪಘಾತ.

ಇಂತಹ ವಿಚಿತ್ರ ಬೆಳವಣಿಗೆಯು ಬೆಂಗಳೂರಿನಲ್ಲಿ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ರಸ್ತೆಗಳಲ್ಲಿ ಏಕಾಏಕಿ ವಾಹನಗಳಿಗೆ ಅಡ್ಡ ಬರುತ್ತಿರುವ ಖತರ್ನಾಕ್ ಗ್ಯಾಂಗ್‌ವೊಂದು ಸಕ್ರಿಯವಾಗಿದೆ. ಹೆಚ್ಚಾಗಿ ಈ ಗ್ಯಾಂಗ್ ನಿಧಾನವಾಗಿ ಬರುವ ಕಾರುಗಳನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಸಂಚರಿಸುವಾಗ ದಿಢೀರನೆ ಕಾರುಗಳಿಗೆ ಅಡ್ಡ ಬಂದು ಅಪಘಾತವಾದಂತೆ ಡವ್ ಮಾಡುತ್ತಿರುವ ಕಿರಾತಕರ ಕೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್ ಆಗುತ್ತಿವೆ.
ಕಾರಿನಲ್ಲಿರುವವರು ಅಯ್ಯೋ ನಾವೇ ಅವರಿಗೆ ಡಿಕ್ಕಿ ಹೊಡೆದಿದ್ದೇವೆ? ಎಂದು ಭಾಸವಾಗುವಂತೆ ಮಾಡಿ, ಅವರ ಮೇಲೆ ಜಗಳಕ್ಕಿಳಿಯುವುದು, ಕೊನೆಗೆ ಅವರಿಂದ ಹಣ ವಸೂಲಿ ಮಾಡುವುದೇ ಈ ನಕಲಿ ಅಪಘಾತದ ಹಿಂದಿರುವ ಮಾಸ್ಟರ್ ಪ್ಲ್ಯಾನ್. ಕಾರಿನಲ್ಲಿ ಬರುವ ಕೆಲ ಅಮಾಯಕರನ್ನು ಯಾಮಾರಿಸುವುದೇ ಇವರ ಚಾಣಾಕ್ಷತನ ಎನ್ನಲಾಗಿದೆ. ಆದರೆ ಕಾರಿನಲ್ಲಿರು ಡ್ಯಾಶ್‌ಕ್ಯಾಮ್‌ಗಳೇ ಈ ನಕಲಿ ಅಪಘಾತಗಳನ್ನು ಮಾಡುವವರ ಮುಖವಾಡ ಕಳಚುತ್ತಿದೆ.
ಸಾಮಾನ್ಯವಾಗಿ ಚಾಲಕರು ರಸ್ತೆ ಮೇಲೆ ಮಾತ್ರ ನಿಗಾ ಇಡುವುದರಿಂದ ಯಾರು ಎಲ್ಲಿಂದ ಅಡ್ಡ ಬರುತ್ತಾರೆ ಎನ್ನುವುದು ಅಷ್ಟಾಗಿ ಗೊತ್ತಾಗುವುದಿಲ್ಲ. ಆದರೆ, ಡ್ಯಾಶ್‌ಕ್ಯಾಮ್ ಇರುವುದರಿಂದ ಈ ನಾಟಕ ಆಡುವವರ ಮುಖವಾಡ ಕಳಚಿಬೀಳುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಅದರಲ್ಲೂ ರಾತ್ರಿ ವೇಳೆ ಇಂತಹ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ ಎನ್ನಲಾಗಿದೆ.

ತಾವಾಗಿಯೇ ಬಂದು ಕಾರುಗಳಿಗೆ ಡಿಕ್ಕಿ ಹೊಡೆದುಕೊಂಡು ಬೀಳುವುದು, ಬಳಿಕ ಕಾರು ಚಾಲಕರ ಜೊತೆಗೆ ಬೀದಿಜಗಳ ಮಾಡುವುದು, ಇದಕ್ಕೆ ಹೆದರಿ ಕೆಲವರು ಹಣ ನೀಡಿ ಅಲ್ಲಿಂದ ಹೊರಟು ಹೋಗುತ್ತಾರೆ ಎನ್ನುವುದು ಕಿಡಿಗೇಡಿಗಳ ಪ್ಲ್ಯಾನ್ ಆಗಿದೆ. ಆದರೆ, ಡ್ಯಾಶ್‌ಕ್ಯಾಮ್‌ನಲ್ಲಿ ಇವರ ನಾಟಕಗಳು ಸೆರೆಯಾಗುತ್ತಿದ್ದು, ಅದನ್ನು ತೋರಿಸಿದ ಕೂಡಲೇ ಸೈಲೆಂಟಾಗಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಾರೆ.
ಸದ್ಯ ಇಂತದ್ದೇ ನಕಲಿ ಅಪಘಾತವೊಂದು ಕೆ.ಆರ್.ಪುರದ ಬಳಿ ಬೆಳಕಿಗೆ ಬಂದಿದೆ. ಪಾದಚಾರಿಯೊಬ್ಬರು ಉದ್ದೇಶಪೂರ್ವಕವಾಗಿ ಕಾರಿನ ಬಾನೆಟ್‌ಗೆ ಅಡ್ಡ ಬಂದು ಬಿದ್ದಿದ್ದಾರೆ. ಬಳಿಕ ಅವರಿಗೆ ಕಾರು ಡಿಕ್ಕಿ ಹೊಡೆದಂತೆ ನಟಿಸಿ, ಗಾಯಗಳಾಗಿವೆ ಎಂದು ನಾಟಕ ಆಡಿರುವ ಘಟನೆ ನಡೆದಿದೆ. ಆದರೆ ಡ್ಯಾಶ್‌ಕ್ಯಾಮ್‌ನಲ್ಲಿ ಇದೆಲ್ಲವೂ ರೆಕಾರ್ಡ್ ಆಗಿದ್ದರಿಂದ ಅವರ ಆಟ ನಡೆಯಲಿಲ್ಲ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸದ್ಯ ಡ್ಯಾಶ್‌ಕ್ಯಾಮ್‌ಗಳಿಂದಲೇ ಇಂತಕ ಕಿಡಿಗೇಡಿಗಳು ಸಿಕ್ಕಿಬೀಳುತ್ತಿದ್ದಾರೆ.












Click it and Unblock the Notifications