Get Updates
Get notified of breaking news, exclusive insights, and must-see stories!

Kukke Subrahmanya: ನಾಗಾರಾಧನೆಯ ನಾಡು ಸುಬ್ರಹ್ಮಣ್ಯ ಕ್ಷೇತ್ರದ ವಿಶೇಷತೆ ಗೊತ್ತಾ?

ಸಹ್ಯಾದ್ರಿ ಶ್ರೇಣಿಯ ಕುಮಾರ ಪರ್ವತ, ಶೇಷ ಪರ್ವತ ಹಾಗೂ ಸಿದ್ದ ಪರ್ವತಗಳ ನಡುವೆ ನೆಲೆನಿಂತ ಪರಮಪವಿತ್ರ ಕ್ಷೇತ್ರ, ನಾಗಾರಾಧನೆಯ ನಾಡು ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಚಂಪಾಷಷ್ಠಿಯ ಸಂಭ್ರಮದಲ್ಲಿ ತೇಲಾಡುತ್ತಿದೆ. ಲಕ್ಷಾಂತರ ಭಕ್ತರು ನೆರೆದು ಸುಬ್ರಹ್ಮಣ್ಯನೊಂದಿಗೆ ಶಿವಪಾರ್ವತಿಯ ದರ್ಶನ ಮಾಡಿ ತೇರನ್ನು ಎಳೆದು ಪುನೀತರಾಗುವುದರೊಂದಿಗೆ ಈ ಕ್ಷಣಕ್ಕಾಗಿ ಕಾಯುತ್ತಿದ್ದ ಭಕ್ತರಲ್ಲಿ ನೆಮ್ಮದಿಯ ಭಾವ ಮೂಡಿದೆ.

ಸುಬ್ರಹ್ಮಣ್ಯ ಹಾಗೂ ಕುಕ್ಕೆ ಕ್ಷೇತ್ರವು ತನ್ನದೇ ಆದ ಮಹಿಮೆಯನ್ನು ಹೊಂದಿದೆ. ಈ ಕ್ಷೇತ್ರವು ನಾಗಪೂಜೆಗೆ ಹೆಸರುವಾಸಿಯಾಗಿದ್ದು, ವಲ್ಮೀಖ ಅರ್ಥಾತ್ ಹುತ್ತವನ್ನು ಪೂಜಿಸಲಾಗುತ್ತಿದ್ದು, ಅಲ್ಲಿಂದ ತೆಗೆದ ಮಣ್ಣು ಪ್ರಸಾದವಾಗಿದೆ. ಸರ್ಪದೋಷಕ್ಕೊಳಗಾದವರು ಇಲ್ಲಿ ಸರ್ಪ ಸಂಸ್ಕಾರ ಮಾಡಿ ತಮ್ಮ ಪಾಪ ಕಳೆದು ಕೊಳ್ಳುತ್ತಾರೆ. ಸುಬ್ರಹ್ಮಣ್ಯ ದೇವಾಲಯವು ಸುಮಾರು ಎಂಟನೆಯ ಶತಮಾನದ್ದು ಎನ್ನಲಾಗಿದೆ. ಇಲ್ಲಿ ನರಸಿಂಹ, ಉಮಾಮಹೇಶ್ವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆಯಾದರೂ ಸುಬ್ರಹ್ಮಣ್ಯನೇ ಆದಿದೈವನಾಗಿದ್ದಾನೆ.

Explore The Sacred Significance And Unique Features Of Kukke Subramanya Kshetra

ಇತಿಹಾಸವನ್ನು ನೋಡಿದ್ದೇ ಆದರೆ ಸುಬ್ರಹ್ಮಣ್ಯವು ಬಲ್ಲಾಳರಾಜನ ರಾಜಧಾನಿಯಾಗಿತ್ತು ಎನ್ನಲಾಗಿದೆ. ಇಲ್ಲಿನ ದೇವಾಲಯದಲ್ಲಿರುವ ಮೂರ್ತಿ ಬಲ್ಲಾಳ ಅರಸರದ್ದಾಗಿದೆ. ದಕ್ಷಿಣಕನ್ನಡ ಜಿಲ್ಲೆಯನ್ನು ಹನ್ನೊಂದನೇ ಶತಮಾನದಲ್ಲಿ ಹೊಯ್ಸಳ ಬಲ್ಲಾಳ ಅರಸರು ಆಳುತ್ತಿದ್ದರೆನ್ನಲಾಗಿದೆ. ಆದರೆ ಇಕ್ಕೇರಿ ಅರಸರು ಆಳ್ವಿಕೆ ನಡೆಸಲು ಆರಂಭಿಸಿದ ಬಳಿಕ ಕೆಲವೊಂದು ಗ್ರಾಮಗಳಲ್ಲಿ ಮಾತ್ರ ಬಲ್ಲಾಳ ಅರಸರ ಆಳ್ವಿಕೆ ನಡೆಯುತ್ತಿತ್ತು. ಆ ಸಂದರ್ಭ ಸುಬ್ರಹ್ಮಣ್ಯವೂ ಅವರ ಆಳ್ವಿಕೆಗೆ ಒಳಪಟ್ಟಿತ್ತು ಎನ್ನಲಾಗುತ್ತಿದೆ.

ಬಲ್ಲಾಳ ಅರಸರ ಮೂರ್ತಿಯ ಹಿಂದಿನ ಕಥೆಯೇನು?

ಈ ದೇಗುಲದಲ್ಲಿ ಪ್ರತಿಷ್ಠಾಪಿತವಾಗಿರುವ ಬಲ್ಲಾಳ ಅರಸರ ಮೂರ್ತಿಯ ಹಿಂದೆ ದಂತಕಥೆಯೊಂದು ಇರುವುದನ್ನು ನಾವು ಕಾಣಬಹುದು. ಅದೇನೆಂದರೆ ವೇದವ್ಯಾಸ ಸಂಪುಟದ ವಿಗ್ರಹವನ್ನು ಯಾರಿಂದಲೂ ಭಗ್ನಗೊಳಿಸುವುದು ಅಸಾಧ್ಯ ನಂಬಿಕೆ ಹರಡಿತ್ತು. ಇದನ್ನು ಪರೀಕ್ಷಿಸಿ ನೋಡಿಯೇ ಬಿಡೋಣ ಎಂಬ ತೀರ್ಮಾನಕ್ಕೆ ಬಂದ ಅರಸ ಆನೆಯ ಮೂಲಕ ಮುರಿಯಲು ಮುಂದಾದನು. ಈ ಸಂದರ್ಭ ಅರಸನಿಗೆ ಇದ್ದಕ್ಕಿಂದತೆಯೇ ಮೈಮೇಲೆ ಉರಿಬಾಧೆ ಕಾಣಿಸಿಕೊಂಡಿತು.

Explore The Sacred Significance And Unique Features Of Kukke Subramanya Kshetra

ತಕ್ಷಣ ಅವನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿದನೆಂದೂ ಈ ಸಂದರ್ಭ ಸುಬ್ರಹ್ಮಣ್ಯ ಸ್ವಾಮಿ ಅರಸನ ಪ್ರತಿಮೆಯನ್ನು ದೇವಾಲಯದ ಮುಖ್ಯದ್ವಾರದಲ್ಲಿಡಲು ಆದೇಶಿಸಿದನೆಂದೂ ಅದರಂತೆ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗಿದೆ. ಇಂದಿಗೂ ಕೂಡ ಚಂಪಾಷಷ್ಠಿಯ ದಿನದಂದು ಸುಬ್ರಹ್ಮಣ್ಯಸ್ವಾಮಿಯ ಉತ್ಸವ ಮೂರ್ತಿಯನ್ನು ಹೊರಗೆ ಮೆರವಣಿಗೆಯಲ್ಲಿ ತಂದಾಗ ಮೊದಲು ಬಲ್ಲಾಳರಸರ ಪ್ರತಿಮೆಗೆ ಪೂಜೆ ಸಲ್ಲಿಸಿದ ಬಳಿಕ ಮುಂದಿನ ಕೈಂಕರ್ಯಗಳು ನಡೆಯುತ್ತದೆ.

ಷಷ್ಠಿಗೆ ವಿವಿಧ ತೇರುಗಳ ಮೆರಗು

ಕುಮಾರಸ್ವಾಮಿಯು ದೇವಸೇನೆಯೊಂದಿಗೆ ಮತ್ತು ಭಕ್ತ ವಾಸುಕಿಯೊಂದಿಗೆ ಇಲ್ಲಿ ನೆಲೆಸಿದ್ದರಿಂದ ಪುತ್ರನ ಮೇಲಿನ ವಾತ್ಸಲ್ಯದಿಂದ ಶಿವಪಾರ್ವತಿಯರು ಕುಕ್ಕೆಲಿಂಗ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಕುಮಾರಸ್ವಾಮಿಯು ನಾಲ್ಕು ಪುರುಷಾರ್ಥಗಳನ್ನು ಅನುಗ್ರಹಿಸಬಲ್ಲ ದೇವತೆಯಾಗಿದ್ದು, ಬ್ರಹ್ಮಜ್ಞಾನ, ಆಯಸ್ಸು, ಆರೋಗ್ಯ, ಉಪಸ್ಮಾರ, ಕುಷ್ಠಾದಿ ಮಹಾರೊಗಗಳ ಪರಿಹಾರ, ಭೂತ ಪೀಡೆ ಪರಿಹಾರ, ಸಂತಾನ ಸೌಭಾಗ್ಯ, ಪುಷ್ಠಿ, ತುಷ್ಠಿ, ಕೀರ್ತಿ, ಶತ್ರುಜಯವನ್ನು ವಿಶೇಷವಾಗಿ ಕರುಣಿಸುತ್ತಿದ್ದಾನೆ. ಸುಬ್ರಹ್ಮಣ್ಯನಿಗೆ ಸ್ಕಂದ, ಕಾರ್ತಿಕೇಯ, ಷಣ್ಮುಖ, ಕುಮಾರಸ್ವಾಮಿ ಎಂಬ ನಾಮಗಳಿವೆ.

Explore The Sacred Significance And Unique Features Of Kukke Subramanya Kshetra

ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯನನ್ನು ನಾಗ(ಸರ್ಪ) ರೂಪದಲ್ಲಿ ಪೂಜಿಸಲಾಗುತ್ತಿದೆ. ಸರ್ಪದೋಷದಿಂದ ಬಳಲುವವರು ಇಲ್ಲಿ ಎರಡು ದಿನಗಳ ಕಾಲ ತಂಗಿ ಸೇವೆ ಕೈಗೊಂಡರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾಗಿಯೇ ನಾಗಪೂಜೆಯ ನಾಡಾಗಿ ಪ್ರಸಿದ್ಧಿ ಹೊಂದಿದೆ. ಇಲ್ಲಿನ ನಾಗಮಂಟಪದಲ್ಲಿ ಶಿಲಾ ನಾಗನ ಪ್ರತಿಷ್ಠೆ, ಆಶ್ಲೇಷ ಬಲಿ ಹೀಗೆ ವಿವಿಧ ಸೇವೆಗಳು ಕೂಡ ನಡೆಯುತ್ತವೆ. ಷಷ್ಠಿ ದಿನದಂದು ಬ್ರಹ್ಮರಥ, ಪಂಚಮಿ ತೇರು, ಚಂದ್ರಮಂಡಲ, ಹೂವಿನ ತೇರುಗಳನ್ನು ಎಳೆಯಲಾಗುತ್ತದೆ. ಇಲ್ಲಿರುವ ಬ್ರಹತ್ ಆಕಾರದ ರಥ ಸುಮಾರು ಒಂದೂವರೆ ಶತಮಾನಗಳ ಹಿಂದಿನದು ಎಂದು ಹೇಳಲಾಗಿದೆ.

ಗರುಡ ಕಂಬದಲ್ಲಿನ ವಿಶೇಷತೆ ಗೊತ್ತಾ?

ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು, ಮುಖ್ಯ ದ್ವಾರದ ಎದುರಿಗೆ ಸುಬ್ರಹ್ಮಣ್ಯ ಸ್ವಾಮಿಯ ಗರ್ಭಗುಡಿಯಿದೆ. ಈ ಗರ್ಭಗೃಹ ಮತ್ತು ನೂತನವಾಗಿ ಕಟ್ಟಲ್ಪಟ್ಟ ಮುಖಮಂಟಪದ ಮಧ್ಯದಲ್ಲಿ ಗರುಡ ಕಂಬವಿದೆ. ಈ ಗರುಡ ಕಂಬವನ್ನು ಗರುಡ ಮಂತ್ರವನ್ನು ಮಂತ್ರಿಸಿ ವಾಸುಕಿಯ ಉಸಿರಾಟದ ವಿಷಬಾಧೆ ತಟ್ಟಬಾರದೆಂಬ ಉದ್ದೇಶದಿಂದ ನಿರ್ಮಿಸಿರುವುದಾಗಿ ಹೇಳಲಾಗಿದೆ. ದೇವಾಲಯದಿಂದ ಉತ್ತರ ಭಾಗಕ್ಕೆ ತೆರಳಿದರೆ ಇಲ್ಲಿ ನಾವು ಹಲವು ಲಿಂಗಗಳನ್ನು ಕಾಣಬಹುದು. ಈ ಲಿಂಗಗಳನ್ನು ಕುಕ್ಕೆಯಲ್ಲಿಟ್ಟು ಪೂಜಿಸುತ್ತಿದ್ದುದರಿಂದ ಕುಕ್ಕೆಲಿಂಗ ಎಂದು ಕೂಡ ಕರೆಯಲಾಗುತ್ತಿದೆ.

ದೇವಸ್ಥಾನದಿಂದ ಅನತಿ ದೂರದಲ್ಲಿ ಆದಿಸುಬ್ರಹ್ಮಣ್ಯನ ದೇವಾಲಯವಿದೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದವರು ಇಲ್ಲಿಗೆ ತೆರಳಿ ದರ್ಶನ ಮಾಡದೆ ಮರಳುವಂತಿಲ್ಲ. ಇಲ್ಲೊಂದು ಬೃಹತ್ ವಲ್ಮಿಕ(ಹುತ್ತ) ಇದ್ದು, ಅಲ್ಲಿಂದ ತೆಗೆದ ಮಣ್ಣನ್ನು ಪ್ರಸಾದವಾಗಿ ನೀಡಲಾಗುತ್ತದೆ. ಸುಬ್ರಹ್ಮಣ್ಯ ದೇವಾಲಯದ ಸುತ್ತ ಹಲವು ದೇವಾಲಯಗಳನ್ನು ನಾವು ಕಾಣಬಹುದಾಗಿದೆ. ಸುಬ್ರಹ್ಮಣ್ಯ ದೇವಾಲಯದಿಂದ ಕೆಲವೇ ದೂರದಲ್ಲಿ ಕಾಶಿಕಟ್ಟೆಯಿದ್ದು, ಇಲ್ಲಿ ಆಂಜನೇಯ ಹಾಗೂ ಗಣಪತಿ ದೇವರುಗಳ ದೇವಾಲಯ ಹಾಗೂ ಬೃಹತ್ ಅಶ್ವತ್ಥ ಕಟ್ಟೆಯನ್ನೂ ಕಾಣಬಹುದು.

ಚರ್ಮರೋಗಗಳು ವಾಸಿಯಾಗುವ ನಂಬಿಕೆ

ತೇರು ಬೀದಿಯ ಉತ್ತರಕ್ಕೆ ದ್ವೈತ ಸಂಪ್ರದಾಯದ ಉತ್ತರಾದಿಮಠವಿದ್ದು, ಇಲ್ಲಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದಿಂದ ಕುಮಾರಧಾರಾ ನದಿಯತ್ತ ಸಾಗುವಾಗ ದಾರಿ ಮಧ್ಯೆ ಕಂಡು ಬರುವ ಬಿಲದ್ವಾರ ಪವಿತ್ರಕ್ಷೇತ್ರವಾಗಿದ್ದು, ಇದೊಂದು ಗುಹೆಯಾಗಿದ್ದು, ಇದಕ್ಕೆ ಎರಡು ದಾರಿಗಳಿವೆ. ಒಂದು ದಕ್ಷಿಣಕ್ಕೆ, ಮತ್ತೊಂದು ಉತ್ತರಕ್ಕೆ ಸಾಗುತ್ತದೆ. ಪುರಾಣದ ಪ್ರಕಾರ ಗರುಢ ನೀಡುತ್ತಿದ್ದ ತೊಂದರೆಯಿಂದ ತಪ್ಪಿಸಿಕೊಳ್ಳಲು ವಾಸುಕಿ ಈ ಗುಹೆಯಲ್ಲಿ ಆಶ್ರಯ ಪಡೆದಿದ್ದನೆಂದು ಹೇಳಲಾಗಿದೆ.

ಸುಬ್ರಹ್ಮಣ್ಯ ಕೇತ್ರದಲ್ಲಿ ಹರಿಯುವ ಕುಮಾರಧಾರಾ ನದಿ ಪವಿತ್ರವಾಗಿದ್ದು, ಇದು ಭೂಮಿಯ ಒಡಲಾಳದಿಂದ ಉಕ್ಕಿಹರಿದ ಎಲ್ಲಾ ತೀರ್ಥಗಳ ಸಾರವನ್ನು ಹೊಂದಿದೆ ಎಂದು ನಂಬಲಾಗಿದೆ. ಇದನ್ನು ಹಿಂದೆ ಮಹೀನದಿ ಎಂದು ಕರೆಯಲಾಗುತ್ತಿತ್ತಂತೆ ಕಾಲಾಂತರದಲ್ಲಿ ಈ ನದಿಯ ನೀರನ್ನು ಕುಮಾರಸ್ವಾಮಿ(ಸುಬ್ರಹ್ಮಣ್ಯ)ಯ ಪೂಜೆಯ ಅಭಿಷೇಕಕ್ಕೆ ಉಪಯೋಗಿಸಲು ಆರಂಭಿಸಿದ ಬಳಿಕ ಕುಮಾರಧಾರಾ ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ. ಈ ನದಿಯಲ್ಲಿ ಸ್ನಾನ ಮಾಡಿದರೆ ಚರ್ಮರೋಗಗಳು ವಾಸಿಯಾಗುವುದಾಗಿ ನಂಬಿಕೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+