ಏನಿದು 'ಜಾಗತಿಕ ಉಗ್ರ' ಪಟ್ಟ? ಘೋಷಣೆಯಿಂದ ಏನಾಗುತ್ತದೆ?
ಫೆಬ್ರವರಿ 14 ರಂದು ಪಾಕಿಸ್ತಾನಿ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಸಿಆರ್ ಪಿ ಎಫ್ ಯೋಧರ ಬೆಂಗಾವಲು ವಾಹನದ ಮೇಲೆ ನಡೆಸಿದ ದಾಳಿಯಲ್ಲಿ ನಲವತ್ತಕ್ಕೂ ಹೆಚ್ಚು ಯೋಧರು ಹುತಾತ್ಮರಾದ ನಂತರ 'ಜಾಗತಿಕ ಉಗ್ರ' ಎಂಬ ಪದ ಎಲ್ಲೆಲ್ಲೂ ಕೇಳಿಬಂತು.
ಈ ದಾಳಿಗೆ ಕಾರಣನಾದ ಜೆಇಎಂ ಮುಖಂಡ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂದು ಭಾರತ ವಿಶ್ವಸಂಸ್ಥೆಯ ಮುಂದೆ ಮನವಿ ಮಾಡಿತ್ತು ಹಾಗೆಯೇ ಆತನಿಗೆ ನೆಲೆ ನೀಡಿದ ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧದ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ವಿಶ್ವದ ನಾನಾ ದೇಶಗಳ ಮುಖೇನ ಭಾರತ ಒತ್ತಡ ಹೇರಿತ್ತು.
ಹಾಗಾದರೆ ಈ ಜಾಗತಿಕ ಉಗ್ರ ಎಂಬ ಹಣೆಪಟ್ಟಿ ಬಿದ್ದರೆ ಉಗ್ರರಿಗೆ ಉಂಟಾಗುವ ತೊಂದರೆ ಏನು? ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಹಲವು ದೇಶಗಳು ಒತ್ತಾಯಿಸಿದ್ದೇಕೆ?

ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು
ಒಬ್ಬ ಉಗ್ರನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ್ದೇ ಆದಲ್ಲಿ, ವಿಶ್ವ ಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಆತನಿಗೆ ಸಂಮಬಂಧಿಸಿದ ಆಸ್ತಿ ಮತ್ತು ಯಾವುದೇ ಆದಾಯವನ್ನು, ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.

ಪ್ರಯಾಣಕ್ಕೆ ನಿಷೇಧ
ಜಾಗತಿಕ ಉಗ್ರ ಎಂಬ ಹಣೆಪಟ್ಟಿ ಕಟ್ಟುಕೊಂಡವನು ಯಾವುದೇ ಕಾರಣಕ್ಕೂ ವಿಶ್ವಸಂಸ್ಥೆಯ ಯಾವುದೇ ಸದಸ್ಯ ರಾಷ್ಟ್ರಗಳಿಗೆ ಪ್ರಯಾಣಿಸುವಂತಿಲ್ಲ. ಆತನ ಪ್ರಯಾಣಕ್ಕೆ ಸಂಪೂರ್ಣ ನಿಷೇಧ ಹೇರಲಾಗುತ್ತದೆ.

ಶಸ್ತ್ರಾಸ್ತ್ರ ಪೂರೈಕೆ ಮತ್ತು ಬಳಕೆ ನಿಷೇಧ
ಜಾಗತಿಕ ಉಗ್ರನಿಗೆ ಮತ್ತು ಆತನಿಗೆ ಸಂಬಂಧಿಸಿದ ಸಂಘಟನೆಗೆ, ಆತ ಇರಬಹುದಾದ ಪ್ರದೇಶಕ್ಕೆ ಯಾವುದೇ ರಾಷ್ಟ್ರಗಳೂ, ವ್ಯಕ್ತಿ ಶಸ್ತ್ರಾಸ್ತ್ರ ಪೂರೈಕೆ ಮಾಡುವಂತಿಲ್ಲ. ಜೊತೆಗೆ ಆ ಹಣೆಪಟ್ಟಿ ಪಡೆದವರು ಶಸ್ತಾಸ್ತ್ರ ಬಳಕೆಯನ್ನೂ ಮಾಡುವಂತಿಲ್ಲ.

ಪಾಕಿಸ್ತಾನಕ್ಕೆ ಸಂಕಟ
ಮಸೂದ್ ಅಜರ್ ನನ್ನು ಇದೀಗ ಜಾಗತಿಕ ಉಗ್ರ ಎಂದು ಘೋಷಿಸಲಾಗಿದ್ದು, ಇದರಿಂದ ಪಾಕಿಸ್ತಾನದ ಮೇಲೆ ಭಾರೀ ಒತ್ತಡ ಹೇರಿದಂತಾಗಿದೆ. ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಂಡು, ಮಸೂದ್ ಅಜರ್ ನಂಥ ಉಗ್ರರಿಗೆ ನೆಲೆ ನೀಡುವುದನ್ನು ನಿಲ್ಲಿಸದೆ ಇದ್ದಲ್ಲಿ ಅದು ವಿಶ್ವದ ನಿಷ್ಠುರ ಕಟ್ಟಿಕೊಳ್ಳಬೇಕಾಗುತ್ತದೆ. ಅಲ್ಲದೆ, ಜಾಗತಿಕ ಉಗ್ರ ಎಂದು ಘೋಷಣೆ ಮಾಡುವುದರಿಂದ ಮಸೂದ್ ಅಜರ್ ನ ಎಲ್ಲಾ ಉಗ್ರ ಚಟುವಟಿಕೆಗಳಿಗೂ ನಿರ್ಬಂಧ ಹೇರಿದಂತಾಗುತ್ತದೆ.












Click it and Unblock the Notifications