EPFO: ಪಿಎಫ್ ಅಡ್ವಾನ್ಸ್ ಪಡೆಯುವುದು ಈಗ ಮತ್ತಷ್ಟು ಸುಲಭ!
ನವದೆಹಲಿ, ಮೇ. 14 : ಪಿಎಫ್ ಖಾತೆಯಲ್ಲಿ ಹಣ ಜಮಾವಣೆ ಮಾಡಿರುವ ಉದ್ಯೋಗಿಗಳು ತಮ್ಮ ಅನಿವಾರ್ಯ ಕಾರಣಗಳಿಗಾಗಿ ಅಡ್ವಾನ್ಸ್ ಪಡೆಯಲು ಬಯಸಿದರೆ ಈಗ ಆರಾಮವಾಗಿ ಹಣ ಪಡೆಯಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಶಿಕ್ಷಣ, ಮದುವೆ ಮತ್ತು ವಸತಿಗೆ ಸಂಬಂಧಿಸಿದ ಅಡ್ವಾನ್ಸ್ ಕ್ಲೈಮ್‌ಗಳಿಗಾಗಿ ಆಟೋ ಕ್ಲೈಮ್ ಸೆಟಲ್‌ಮೆಂಟ್ ಅನ್ನು ಪರಿಚಯಿಸುವುದಾಗಿ ಘೋಷಿಸಿದೆ.
ಈ ಆಟೋ ಕ್ಲೈಮ್ ವ್ಯವಸ್ಥೆಯು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ತಮ್ಮ ಹಣವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇಪಿಎಫ್‌ಒ ಹೇಳಿಕೆಯ ಪ್ರಕಾರ, "ಅನಿರುದ್ಧ್ ಪ್ರಸಾದ್ ಅವರು 09.05.2024 ರಂದು ಪ್ಯಾರಾ 68J ಅಡಿಯಲ್ಲಿ ಅನಾರೋಗ್ಯಕ್ಕಾಗಿ ಅಡ್ವಾನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಅವರ ಅಡ್ವಾನ್ಸ್ ಕ್ಲೈಮ್ ಅನ್ನು 11.05.2024 ರಂದು ರೂ. 92,143/- ಕ್ಕೆ ಕೇವಲ 03 ದಿನಗಳೊಳಗೆ ಇತ್ಯರ್ಥಪಡಿಸಲಾಗಿದೆ. ಇಪಿಎಫ್‌ಒನಲ್ಲಿ ಅನಿರುದ್ಧ್ ಪ್ರಸಾದ್ ಅವರಂತಹ ಕಥೆಗಳು ಹಲವು ಇವೆ" ಎಂದು ಹೇಳಿದೆ.

ಅನಾರೋಗ್ಯದ ಅಡ್ವಾನ್ಸ್ ಉದ್ದೇಶಕ್ಕಾಗಿ ಏಪ್ರಿಲ್, 2020 ರಲ್ಲಿ ಕ್ಲೈಮ್ ಇತ್ಯರ್ಥದ ಆಟೋ ಮೋಡ್ ಅನ್ನು ಪರಿಚಯಿಸಲಾಗಿದೆ. ಈಗ ಈ ಮಿತಿಯನ್ನು ರೂ.1,00,000 ಕ್ಕೆ ಹೆಚ್ಚಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಸುಮಾರು 2.25 ಕೋಟಿ ಸದಸ್ಯರು ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.
2023-24 ರ ಹಣಕಾಸು ವರ್ಷದಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಸುಮಾರು 4.45 ಕೋಟಿ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿದೆ. ಅದರಲ್ಲಿ 60% ಕ್ಕಿಂತ ಹೆಚ್ಚು ಅಂದರೆ, 2.84 ಕೋಟಿ ಕ್ಲೈಮ್‌ಗಳು ಅಡ್ವಾನ್ಸ್ ಕ್ಲೈಮ್‌ಗಳಾಗಿವೆ. ಈ ವರ್ಷದಲ್ಲಿ ಇತ್ಯರ್ಥಪಡಿಸಲಾದ ಒಟ್ಟು ಅಡ್ವಾನ್ಸ್ ಕ್ಲೈಮ್‌ಗಳಲ್ಲಿ ಸುಮಾರು 89.52 ಲಕ್ಷ ಕ್ಲೈಮ್‌ಗಳನ್ನು ಆಟೋ ಮೋಡ್ ಬಳಸಿ ಇತ್ಯರ್ಥಪಡಿಸಲಾಗಿದೆ.
"ಈಸಿ ಆಫ್ ಲಿವಿಂಗ್" ಅನ್ನು ಸುಲಭಗೊಳಿಸಲು, ಇಪಿಎಫ್ ಸ್ಕೀಮ್, 1952 ರ ಪ್ಯಾರಾ 68K (ಶಿಕ್ಷಣ ಮತ್ತು ಮದುವೆ ಉದ್ದೇಶ) ಮತ್ತು 68B (ವಸತಿ ಉದ್ದೇಶ) ಅಡಿಯಲ್ಲಿ ಎಲ್ಲಾ ಕ್ಲೈಮ್‌ಗಳಿಗೆ ಸೆಲ್ಫ್ ಕ್ಲೈಮ್ ಪರಿಹಾರವನ್ನು ಈಗ ವಿಸ್ತರಿಸಲಾಗಿದೆ. ಹೆಚ್ಚುವರಿಯಾಗಿ, ಮಿತಿಯನ್ನು 50,000 ರಿಂದ ರೂ.1,00,000 ಕ್ಕೆ ದ್ವಿಗುಣಗೊಳಿಸಲಾಗಿದೆ. ಈ ಕ್ರಮವು ಲಕ್ಷಗಟ್ಟಲೆ ಇಪಿಎಫ್‌ಒ ಸದಸ್ಯರಿಗೆ ಉಪಯೋಗವಾಗಲಿದೆ.

ಆಟೋ ಸೆಟಲ್‌ಮೆಂಟ್ ಸಂಪೂರ್ಣ ಪ್ರಕ್ರಿಯೆಯು ಐಟಿ ವ್ಯವಸ್ಥೆಯಿಂದ ಚಾಲಿತವಾಗಿದೆ. ಮಾನವ ಹಸ್ತಕ್ಷೇಪವನ್ನು ತೆಗೆದುಹಾಕುತ್ತದೆ. ಕೆವೈಸಿ, ಎಲಿಜಬಿಲಿಟಿ ಮತ್ತು ಬ್ಯಾಂಕ್ ವ್ಯಾಲಿಡೇಷನ್‌ಗಳ ಮೂಲಕ ಯಾವುದೇ ಕ್ಲೈಮ್ ಅನ್ನು ಸ್ವಯಂಚಾಲಿತವಾಗಿ ಪಾವತಿ ಮಾಡಲು ಪ್ರಕ್ರಿಯೆಗೊಳಿಸಲಾಗುತ್ತದೆ. ಇದರ ಪರಿಣಾಮವಾಗಿ, ಅಡ್ವಾನ್ಸ್ ಕ್ಲೈಮ್ ಪ್ರಕ್ರಿಯೆ 10 ದಿನಗಳಿಂದ 3 ರಿಂದ 4 ದಿನಗಳೊಳಗೆ ಇಳಿಕೆಯಗಿದೆ.
ವಸತಿ, ಮದುವೆ ಮತ್ತು ಶಿಕ್ಷಣದ ಉದ್ದೇಶಗಳಿಗೆ ಆಟೋ ಕ್ಲೈಮ್ ವ್ಯಾಪ್ತಿಯ ವಿಸ್ತರಣೆ ಮತ್ತು ವರ್ಧನೆಯು ಅನೇಕ ಸದಸ್ಯರಿಗೆ ತಮ್ಮ ಹಣವನ್ನು ಕಡಿಮೆ ಅವಧಿಯೊಳಗೆ ಪಡೆಯಲು ನೇರವಾಗಿ ಸಹಾಯ ಮಾಡುತ್ತದೆ. ಇದು ಅವರ ಶಿಕ್ಷಣ, ಮದುವೆ ಅಥವಾ ಮನೆಯನ್ನು ತೆಗೆದುಕೊಳ್ಳುವವರಿಗೆ ಸಹಾಯವಾಗಲಿದೆ.












Click it and Unblock the Notifications