ಮತದಾರರ ಪಟ್ಟಿ ಪರಿಷ್ಕರಣೆ; ಹೆಸರು ಸೇರಿಸುವುದು ಹೇಗೆ?
ಬೆಂಗಳೂರು, ನವೆಂಬರ್ 20: ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಕರ್ನಾಟಕದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಹೊಸ ಹೆಸರು ಸೇರ್ಪಡೆ ಸೇರಿದಂತೆ ವಿವಿಧ ಬದಲಾವಣೆಗಳಿಗೆ ಅವಕಾಶ ನೀಡಲಾಗಿದೆ.
1/1/2021ಕ್ಕೆ 18 ವರ್ಷ ತುಂಬುವ ಯುವಕ/ಯುವತಿಯರು ಸಮೀಪದ ಕೇಂದ್ರಕ್ಕೆ ಹೋಗಿ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಬಹುದಾಗಿದೆ. ಪ್ರತಿಯೊಬ್ಬರು ಸಹ ಬೂತ್ ಮಟ್ಟದ ಕಚೇರಿಗೆ ಹೋಗಿ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಾತರಿಪಡಿಸಿಕೊಳ್ಳಬಹುದು.
ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ನಮೂನೆ-6ರಲ್ಲಿ ಅರ್ಜಿಯನ್ನು ಹಾಕಬೇಕು. ಭಾವಚಿತ್ರ, ಶಾಲಾ ಟಿಸಿ ಅಥವ ನಕಲು ಅಂಕಪಟ್ಟಿ, ಆಧಾರ್ ನಕಲು, ರೇಷನ್ ಕಾರ್ಡ್ ನಕಲು ಪ್ರತಿಯನ್ನು ಹಾಜರುಪಡಿಸಬೇಕಾಗುತ್ತದೆ.

ಪಟ್ಟಿಯಲ್ಲಿರುವ ನಿಮ್ಮ ಹೆಸರನ್ನು ವಜಾ ಮಾಡಲು ನಮೂನೆ -7ರಲ್ಲಿ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಮೃತ ವ್ಯಕ್ತಿಯ ಹೆಸರು ಮರಣ ದೃಢೀಕರಣ ಪತ್ರ, ವಿವಾಹ ಅಥವ ವಲಸೆ ಹೋದಲ್ಲಿ ಮಹಜರು ಹಾಜರುಪಡಿಸಬೇಕು.
ಮತದಾರರ ಪಟ್ಟಿಯಲ್ಲಿ ಹೆಸರು ತಿದ್ದುಪಡಿ ಮಾಡಲು ಜನರು ನಮೂನೆ-8ರಲ್ಲಿ ಅರ್ಜಿ ಸಲ್ಲಿಸಬೇಕು. ಹೆಸರಿನ ಬಗ್ಗೆ ದಾಖಲುಗಳಾದ ಟಿ. ಸಿ. ಅಂಕಪಟ್ಟಿ ನಕಲು, ಆಧಾರ್ ಕಾರ್ಡ್ ನಕಲು, ಪಾನ್ ಕಾರ್ಡ್ ನಕಲು ಹಾಜರುಪಡಿಸಬೇಕು.
ಎಲ್ಲಾ ಬದಲಾವಣೆಗಳನ್ನು ಮಾಡಿ ಹೊಸ ಕರಡು ಮತದಾರರ ಪಟ್ಟಿಯನ್ನು ಜನವರಿ 14ರೊಳಗೆ ಪ್ರಕಟಿಸಲಾಗುತ್ತದೆ. ಭಾವಚಿತ್ರ ಇರುವ ಅಂತಿಮ ಮತದಾರರ ಪಟ್ಟಿ ಜನವರಿ 18ರಂದು ಪ್ರಕಟವಾಗಲಿದೆ.
ಜನರು ನವೆಂಬರ್ 22 ರಿಂದ ಪ್ರತಿ ಭಾನುವಾರಗಳಂದು ತಮ್ಮ ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ, ನಿಗಧಿತ ನಮೂನೆ ಮೂಲಕ ಅರ್ಜಿ ಸಲ್ಲಿಸಬಹುದು.












Click it and Unblock the Notifications