Deepavali 2024: ದೀಪಾವಳಿ ಹಬ್ಬದ ದಿನ ಚಾಮರಾಜನಗರದ ಏಳು ಗ್ರಾಮಗಳಲ್ಲಿ ಕತ್ತಲೆ: ಯಾಕೆ?
ಚಾಮರಾಜನಗರ, ಅಕ್ಟೋಬರ್ 30: ದೇಶದಾದ್ಯಂತ ಹಣತೆ ಬೆಳಗಿ, ಪಟಾಕಿ ಸಿಡಿಸಿ, ಸಡಗರ, ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದರೆ ಇತ್ತ ಚಾಮರಾಜನಗರ ಜಿಲ್ಲೆಯ ಏಳು ಗ್ರಾಮಗಳ ಜನರು ದೀಪಾವಳಿಯನ್ನೇ ಆಚರಿಸುವುದಿಲ್ಲವಂತೆ. ಇದು ಅಚ್ಚರಿ ಎನಿಸಿದರೂ ಸತ್ಯ. ಹಾಗಾದರೆ ಈ ಗ್ರಾಮಗಳು ಯಾವುದು? ಮತ್ತು ಏಕೆ ದೀಪಾವಳಿಯನ್ನು ಆಚರಿಸುವುದಿಲ್ಲ ಎಂಬ ಕುತೂಹಲ ಕಾಡುವುದಂತು ನಿಜ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ, ವೀರನಪುರ, ಬನ್ನಿತಾಳಪುರ, ಮಾಡ್ರಹಳ್ಳಿ, ನಲ್ಲೂರು, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳು ದೀಪಾವಳಿ ಹಬ್ಬವನ್ನು ಆಚರಿಸದ ಗ್ರಾಮಗಳಾಗಿವೆ. ಏಕೆ ಈ ಗ್ರಾಮಗಳಲ್ಲಿ ಆಚರಣೆ ನಡೆಯುವುದಿಲ್ಲ ಎನ್ನುವುದನ್ನು ಹುಡುಕುತ್ತಾ ಹೋದರೆ ಅದಕ್ಕೆ ಕಾರಣ ಸಿಗುತ್ತವೆ. ಅಷ್ಟೇ ಅಲ್ಲದೆ ಈ ಊರುಗಳಲ್ಲಿ ದೀಪಾವಳಿ ಆಚರಣೆಯೇ ವಿಭಿನ್ನವಾಗಿರುವುದು ಗೋಚರಿಸುತ್ತದೆ.

ಇಲ್ಲಿ ಬುಧವಾರ ದಿನದಂದು ಬಲಿಪಾಡ್ಯಮಿ ಬಂದರೆ ಮಾತ್ರ ದೀಪಾವಳಿ ಆಚರಿಸುತ್ತಾರೆ. ಅದನ್ನು ಹೊರತು ಇತರೆ ದಿನಗಳಲ್ಲಿ ಬಂದರೆ ಈ ಊರುಗಳಲ್ಲಿ ದೀಪಾವಳಿ ಹಣತೆ ಬೆಳಗುವುದಿಲ್ಲವಂತೆ. ಹೀಗಾಗಿ ಎಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ ಈ ಏಳು ಗ್ರಾಮಗಳಲ್ಲಿ ಮಾತ್ರ ಮೌನ ಮನೆ ಮಾಡಿರುತ್ತದೆ. ಒಂದು ವೇಳೆ ಬಲಿಪಾಡ್ಯಮಿ ಬುಧವಾರದ ದಿನ ಬಂದರೆ ಆ ವರ್ಷ ಹಬ್ಬದ ಸಂಭ್ರಮ ಮುಗಿಲು ಮುಟ್ಟುತ್ತದೆ. ಆದರೆ ಈ ಬಾರಿ ಶನಿವಾರ ಬಲಿಪಾಡ್ಯಮಿ ಬಂದಿರುವುದರಿಂದ ಈ ಏಳು ಗ್ರಾಮಗಳ ಜನ ಹಬ್ಬದ ಆಚರಣೆಯಿಂದ ದೂರ ಇರಲಿದ್ದಾರೆ.
ಊರಿಗೆ ಕೆಡಕಾಗುತ್ತದೆಂಬ ಭಯ
ಇಷ್ಟಕ್ಕೂ ಈ ಆಧುನಿಕ ಕಾಲದಲ್ಲಿಯೂ ಇಂತಹ ನಂಬಿಕೆಯನ್ನಿಟ್ಟುಕೊಂಡು ಜನ ಬದುಕುತ್ತಿದ್ದಾರೆ ಎಂದರೆ ಅಚ್ಚರಿಯಾಗಬಹುದು. ಆದರೆ ತಲತಲಾಂತರದಿಂದ ರೂಢಿಸಿಕೊಂಡು ಬಂದಿರುವ ಪದ್ಧತಿಗೆ ಅಪಚಾರ ಮಾಡಲು ಇಲ್ಲಿನ ಜನ ತಯಾರಿಲ್ಲ. ಜತೆಗೆ ಆ ರೀತಿ ಮಾಡಿದರೆ ಊರಿಗೆ ಕೆಡಕಾಗುತ್ತದೆ ಎಂಬ ಭಯವೂ ಜನರನ್ನು ಕಾಡುತ್ತಿದೆ. ಹೀಗಾಗಿ ಹಿಂದಿನ ಪದ್ಧತಿಗೆ ಕಟ್ಟು ಬಿದ್ದು ಜನ ತಮ್ಮ ಗ್ರಾಮಗಳಲ್ಲಿ ದೀಪಾವಳಿ ಹಬ್ಬವನ್ನು ಮಾಡದೆ ತಮ್ಮ ಪಾಡಿಗೆ ತಾವು ಇರುತ್ತಾರೆ.
ಬೆಂಡಗಳ್ಳಿ, ವೀರನಪುರ, ಬನ್ನಿತಾಳಪುರ, ಮಾಡ್ರಹಳ್ಳಿ, ನಲ್ಲೂರು, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳಲ್ಲಿ ದೀಪಾವಳಿಯ ಬಲಿಪಾಡ್ಯಮಿ ಬುಧವಾರ ಬಿಟ್ಟು ವಾರದ ಬೇರೆ ಯಾವುದೇ ದಿನಗಳಲ್ಲಿ ಬಂದರೂ ಆಚರಣೆ ಮಾಡುವಂತಿಲ್ಲ ಎನ್ನುವ ಕಾರಣದಿಂದಾಗಿ ಬುಧವಾರ ಹಬ್ಬ ಬರಲಿ ಎಂದು ಜನ ಪ್ರಾರ್ಥಿಸುತ್ತಾರೆ.
ಕಳೆದ ಮೂರು ತಲೆಮಾರುಗಳಿಂದ ಈ ಏಳು ಗ್ರಾಮದವರು ಬುಧವಾರವೇ ಹಬ್ಬ ಆಚರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಒಂದು ವೇಳೆ ಬುಧವಾರದ ದಿನ ಹಬ್ಬ ಬಂದರೆ ಊರಿಗೆ ಊರೇ ಸಂಭ್ರಮದಿಂದ ತೇಲಾಡುತ್ತದೆ. ಅವತ್ತು ಹೊಸ ಬಟ್ಟೆ ತೊಟ್ಟು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಸುಗಳಿಗೆ ಸ್ನಾನ ಮಾಡಿಸಿ ಮನೆಯಲ್ಲಿ ಸಿಹಿ ಊಟ ಮಾಡುತ್ತಾರೆ.

ಬುಧವಾರ ಹಬ್ಬವಾದರೆ ರಾಸುಗಳಿಗೆ ಪೂಜೆ
ಇಷ್ಟಕ್ಕೂ ಬುಧವಾರ ಹೊರತು ಬೇರೆ ದಿನ ಹಬ್ಬ ಆಚರಿಸಿದರೆ ಏನಾಗುತ್ತದೆ ಎಂಬ ಕುತೂಹಲ ಎಲ್ಲರನ್ನು ಕಾಡದಿರದು. ಈ ಆಚರಣೆ ಹಿಂದಿನ ನಂಬಿಕೆಯನ್ನು ತೆರೆದಿಡುವ ಗ್ರಾಮಸ್ಥರು ಬುಧವಾರ ಹೊರತುಪಡಿಸಿ ಬೇರೆ ಯಾವುದೇ ದಿನಗಳಲ್ಲಿ ಹಬ್ಬ ಆಚರಿಸಿದರೇ ಊರಿಗೆ ಕೆಡಕಾಗುತ್ತವೆ. ಜಾನುವಾರುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತವೆಯಂತೆ. ಹೀಗಾಗಿ ಬುಧವಾರದಂದು ದೇವಸ್ಥಾನದಿಂದ ತೀರ್ಥ ತಂದು ಹಸುಗಳಿಗೆ ಸಿಂಪಡಿಸಿ, ಪೂಜೆ ಮಾಡಿ, ಬಳಿಕ ಹಸುಗಳನ್ನು ಊರಿನ ಸುತ್ತ ಒಂದು ಸುತ್ತು ಹಾಕಿಸುವ ಸಂಪ್ರದಾಯವೂ ಊರಲ್ಲಿದೆ.
ಆಧುನಿಕ ಕಾಲದಲ್ಲಿಯೂ ಇಂತಹದೊಂದು ಆಚರಣೆ ನಮ್ಮ ನಡುವೆ ಇರುವುದು ಅಚ್ಚರಿ ತರಬಹುದು. ಆದರೆ ದೀಪಾವಳಿ ಆಚರಣೆ ವಿಚಾರದಲ್ಲಿ ಏಳು ಗ್ರಾಮಗಳ ಜನರು ಮುಂದುವರೆಸಿಕೊಂಡು ಬಂದಿರುವ ಸಂಪ್ರದಾಯದ ಹಿಂದೆ ಬಲವಾದ ಕಾರಣಗಳು ಇಲ್ಲದೆ ಯಾವುದನ್ನೂ ಮಾಡುವುದಿಲ್ಲ. ಹೀಗಾಗಿಯೇ ಹಿರಿಯರ ನಂಬಿಕೆಯನ್ನು ಉಳಿಸಿಕೊಂಡು ಇಲ್ಲಿನವರು ಮುಂದೆ ಸಾಗುತ್ತಿರುವುದು ಎದ್ದು ಕಾಣಿಸುತ್ತಿದೆ.












Click it and Unblock the Notifications