ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ; ಮುಂಜಾಗೃತಾ ಕ್ರಮಗಳು
ನೈಋತ್ಯ ಮುಂಗಾರು ಮಳೆಯ ಸಮಯವಾಗಿದ್ದರೂ ಸಹ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಮನೆಯ ಹೊರಾಂಗಣದಲ್ಲಿರುವ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆಯ ನೀರು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಇದರಿಂದಾಗಿ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.
ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಮೆದುಳು ಜ್ವರ ಹಾಗೂ ಆನೆಕಾಲು ರೋಗಗಳ ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ ಹಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜನರಿಗೆ ಮಾಹಿತಿ ನೀಡಿದ್ದಾರೆ.
ಮುಂಜಾಗ್ರತಾ ಕ್ರಮಗಳು
ಈಡಿಸ್ ಸೊಳ್ಳೆಗಳು ಹರಡುವ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ರೋಗವು ವೈರಾಣು ಸೋಂಕಾಗಿದ್ದು, ಇದಕ್ಕೆ ಯಾವುದೇ ನಿರ್ದಿಷ್ಠ ಚಿಕಿತ್ಸೆ ಹಾಗೂ ಲಸಿಕೆ ಇರುವುದಿಲ್ಲ. ಆದರೆ ರೋಗ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಹಾಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ ಪಕ್ಷದಲ್ಲಿ ಡೆಂಗ್ಯೂ ಜ್ವರವು ಡೆಂಗ್ಯೂ ರಕ್ತಸ್ರಾವ ಜ್ವರ ಹಾಗೂ ಡೆಂಗ್ಯೂ ಆಘಾತ ಜ್ವರಕ್ಕೆ ತಿರುಗಿ ಮಾರಣಾಂತಿಕವಾಗಿ ಸಾವು ಸಂಭವಿಸಬಹುದು.
ಆದ್ದರಿಂದ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ನಿಯಂತ್ರಣದಲ್ಲಿ ರೋಗ ಹರಡುವ ಈಡಿಸ್ ಸೊಳ್ಳೆಗಳ ನಿಯಂತ್ರಣವೇ ಅತೀ ಮುಖ್ಯ ವಿಧಾನವಾಗಿದೆ. ಈ ಸೊಳ್ಳೆಗಳು ಮನೆಗಳಲ್ಲಿನ ನೀರಿನ ಶೇಖರಣೆಗಳಲ್ಲಿ ಹಾಗೂ ಮನೆಗಳ ಸುತ್ತಮುತ್ತಲಿನ ಪರಿಸರದಲ್ಲಿ ಮಳೆನೀರು ಸಂಗ್ರಹವಾಗುವ ತ್ಯಾಜ್ಯ ವಸ್ತುಗಳಲ್ಲಿ ಉತ್ಪತ್ತಿಯಾಗುವುದರಿಂದ ಇವುಗಳ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಬೇಕು.
ಮುಂಗಾರು ಮಳೆ ಸಮಯವಾಗಿದ್ದರೂ ಸಹ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಮನೆಯ ಹೊರಾಂಗಣದಲ್ಲಿರುವ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ, ಅಲ್ಲದೇ ನೀರಿನ ಅಸಮರ್ಪಕ ಪೂರೈಕೆಯ ಪರಿಣಾಮ ಮನೆಗಳಲ್ಲಿ ಅಧಿಕವಾಗಿರುವ ನೀರಿನ ಸಂಗ್ರಾಹಕಗಳಲ್ಲಿ ಈಡಿಸ್ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದಕ್ಕೆ ಪೂರಕವಾಗಿ ತಾಪಮಾನದ ಏರಿಳಿತ, ಡೆಂಗ್ಯೂ ಹರಡುವ ಸೊಳ್ಳೆಗಳ ಜೀವಿತ ಅವಧಿಗೆ ಅನುಕೂಲಕರವಾಗಿದ್ದು, ಡೆಂಗ್ಯೂ ಜ್ವರ ಪ್ರಕರಣಕ್ಕೆ ಕಾರಣವಾಗುತ್ತದೆ.
ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿನ ಎಲ್ಲಾ ನೀರಿನ ಸಂಗ್ರಾಹಕಗಳು ಮತ್ತು ಮೇಲ್ಚಾವಣಿಯಲ್ಲಿರುವ ತೊಟ್ಟಿಯ ನೀರನ್ನು ಕನಿಷ್ಠ ವಾರಕ್ಕೊಮ್ಮೆ ಖಾಲಿ ಮಾಡಿ ಉಜ್ಜಿ ತೊಳೆದು ಒಣಗಿಸಿ ನೀರನ್ನು ಮತ್ತೆ ತುಂಬಿಸಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚಬೇಕು. ಮನೆಯ ಸುತ್ತಮುತ್ತಲಿನ ಪರಿಸರದಲ್ಲಿನ ಒಡೆದ ಬಾಟಲಿ, ಟಿನ್, ಟೈರ್ ಮತ್ತಿತರ ಘನತ್ಯಾಜ್ಯ ವಸ್ತುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವುದು.
ಯಾವಾಗಲು ಮೈತುಂಬಾ ಬಟ್ಟೆ ಧರಿಸಬೇಕು. ಹಗಲು ಹೊತ್ತಿನಲ್ಲಿ ನಿದ್ರಿಸುವ/ ವಿಶ್ರಾಂತಿ ಪಡೆಯುವ ಗರ್ಭಿಣಿಯರು ಮಕ್ಕಳು ಮತ್ತು ವೃದ್ದರು ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಬೇಕು. ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು.
ರೋಗದ ಲಕ್ಷಣಗಳು; ಡೆಂಗ್ಯೂ ಜ್ವರವು ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಸೊಳ್ಳೆ ಕಚ್ಚಿದ 5 ರಿಂದ 7 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಇದ್ದಕ್ಕಿದ್ದಂತೆ ವಿಪರೀತ ಜ್ವರ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು, ತೀವ್ರ ತಲೆನೋವು, ಮೈ-ಕೈ ಮತ್ತು ಕೀಲುನೋವು, ವಾಕರಿಕೆ/ ವಾಂತಿ, ಇವುಗಳ ಜೊತೆಗೆ ತೀವ್ರ ಹೊಟ್ಟೆನೋವು, ಬಾಯಿ, ಮೂಗು ಮತ್ತು ವಸಡುಗಳಲ್ಲಿ ರಕ್ತಸ್ರಾವದ ಗುರುತುಗಳು, ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು, ರಕ್ತಸ್ರಾವದ ಗುರುತುಗಳು, ಕಪ್ಪು ಬಣ್ಣದ ಮಲ ವಿಸರ್ಜನೆ, ವಿಪರೀತ ಬಾಯಾರಿಕೆ, ತಣ್ಣನೆಯ ಬಿಳುಚಿದ ಚರ್ಮ, ಜ್ಞಾನ ತಪ್ಪುವುದು, ರಕ್ತದೊತ್ತಡದ ಕುಸಿತ, ನಾಡಿಬಡಿತ ಕುಸಿತ ಇವುಗಳು ಡೆಂಗ್ಯೂ ರಕ್ತಸ್ರಾವ ಜ್ವರ ಮತ್ತು ಡೆಂಗ್ಯೂ ಆಘಾತ ಜ್ವರದ ಲಕ್ಷಣಗಳು.
ಈ ಲಕ್ಷಣ ಕಂಡುಬಂದ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಡೆಂಗ್ಯೂ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ವೈದ್ಯ ಪದ್ಧತಿ ಪಾಲಿಸದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಹಾಗೂ ಬ್ರೂಫನ್ ಅಥವಾ ಇತರೆ ನೋವು ನಿವಾರಕಗಳನ್ನು ಸೇವಿಸಬಾರದು. ಇದರಿಂದ ರಕ್ತಸ್ರಾವವಾಗುವ ಸಾಧ್ಯತೆಯಿದೆ.
ಯಾವುದೇ ಜ್ವರವಿರಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತಪರೀಕ್ಷೆ ಹಾಗೂ ಚಿಕಿತ್ಸೆ ಮಾಡಲಾಗುವುದು. ಡೆಂಗ್ಯೂ ಜ್ವರ/ ಚಿಕೂನ್ ಗುನ್ಯಾ ಬಗ್ಗೆ ಭಯಬೇಡ, ಆದರೆ ಎಚ್ಚರವಿರಲಿ. ಸಾರ್ವಜನಿಕರು ಈ ಮಾಹಿತಿ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಲಾಗಿದೆ.
-
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು -
ಮಾರ್ಚ್ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
E-Bike: ಗ್ರಾಮೀಣ ಆರೋಗ್ಯ ಸೇವೆಗೆ ಇ-ಬೈಕ್ ವೇಗ: ಮನೆ ಬಾಗಿಲಿಗೆ ವೈದ್ಯಕೀಯ ನೆರವು, ಏನಿದು ಯೋಜನೆ -
Gruha Arogya Scheme: ಕರ್ನಾಟಕಕ್ಕೆ ಕ್ಯಾನ್ಸರ್ ಕಂಟಕ, ಗ್ರಾಮೀಣ ಭಾಗದಲ್ಲಿ ಮಧುಮೇಹ, ರಕ್ತದೊತ್ತಡ ಹೆಚ್ಚಳ -
ಮಾರ್ಚ್ 16ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
ಬಿಸಿಲಿನ ಶಾಖದಿಂದ ಮುಕ್ತಿ ಪಡೆಯಲು ರಾಗಿ, ಬಾರ್ಲಿ ಮಾಲ್ಟ್ಗಳೇ ರಾಮಬಾಣ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು












Click it and Unblock the Notifications