• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರನ್ನು ಆವರಿಸಿಕೊಳ್ಳುತ್ತಿದೆ ದಸರಾ ಕಳೆ

By ಲವಕುಮಾರ್ ಬಿ ಎಂ
|
Google Oneindia Kannada News

ಮೈಸೂರು, ಆಗಸ್ಟ್‌ 19: ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗುಂದಿತ್ತು. ಆದರೆ ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಸರ್ಕಾರ ಸಿದ್ಧತೆ ನಡೆಸುತ್ತಿರುವಾಗಲೇ ನಿಧಾನವಾಗಿ ದಸರಾ ಸಂಭ್ರಮಕ್ಕೆ ತೆರೆದುಕೊಳ್ಳುತ್ತಿದ್ದು, ದಿನಕಳೆದಂತೆಲ್ಲ ಮೈಸೂರನ್ನು ದಸರಾ ಕಳೆ ಆವರಿಸಲಿದೆ.

ಇದುವರೆಗೆ ಸುರಿದಿದ್ದ ಮಳೆ ಒಂದಿಷ್ಟು ಬಿಡುವುಕೊಟ್ಟಿದೆ. ಪರಿಣಾಮ ಮೈಸೂರಿನತ್ತ ಪ್ರವಾಸಿಗರು ಮುಖ ಮಾಡುತ್ತಿದ್ದಾರೆ. ಜತೆಗೆ ಇಲ್ಲಿನ ಜನ ನಾನಾ ಬಗೆಯಲ್ಲಿ ದಸರಾವನ್ನು ಬರಮಾಡಿಕೊಳ್ಳಲು ಸಿದ್ಧರಾಗುತ್ತಿದ್ದಾರೆ.

ಸಾಮಾನ್ಯವಾಗಿ ನಾಗರಪಂಚಮಿ ಕಳೆಯುತ್ತಿದ್ದಂತೆಯೇ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಅದರಲ್ಲೂ ಗೌರಿಗಣೇಶ ಹಬ್ಬ ಕಳೆದ ಬಳಿಕವಂತು ಜನ ಆಯುಧಪೂಜೆ ಮತ್ತು ದಸರಾ ಹಬ್ಬಗಳಿಗಾಗಿ ಕಾಯುವುದು ಮಾಮೂಲಿಯಾಗಿದೆ.

ದಸರಾ ವಿಶೇಷ; ಮೈಸೂರು ದಸರಾ ಗಜಪಡೆಯ ದಿನಚರಿ ಹೇಗಿದೆ ಗೊತ್ತಾ?ದಸರಾ ವಿಶೇಷ; ಮೈಸೂರು ದಸರಾ ಗಜಪಡೆಯ ದಿನಚರಿ ಹೇಗಿದೆ ಗೊತ್ತಾ?

ಸಾಮಾನ್ಯವಾಗಿ ದಸರಾ ನಾಡಹಬ್ಬವಾಗಿರುವುದರಿಂದ ಬರೀ ಮೈಸೂರಿನ ಜನರಿಗೆ ಮಾತ್ರವಲ್ಲದೆ, ರಾಜ್ಯ, ದೇಶ, ವಿದೇಶಗಳ ಜನರಿಗೂ ಅಚ್ಚುಮೆಚ್ಚು. ಹಿಂದಿನಿಂದಲೂ ದಸರಾ ನೋಡಲೆಂದೇ ದೇಶ, ವಿದೇಶಗಳಿಂದ ಜನ ಮೈಸೂರಿನತ್ತ ಬರುತ್ತಿದ್ದರು. ಈಗಲೂ ಬರುತ್ತಾರೆ. ಮುಂದೆಯೂ ಬರುತ್ತಾರೆ. ಆದರೆ ಕಳೆದ ಎರಡು ವರ್ಷಗಳ ಕಾಲ ಕೊರೊನಾ ಕಾರಣದಿಂದ ಸರಳವಾಗಿ ನಡೆಸಿದ್ದರಿಂದ ಮತ್ತು ದಸರಾದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶ ನೀಡದ ಕಾರಣದಿಂದ ಜನ ಇತ್ತ ಮುಖ ಮಾಡಿರಲಿಲ್ಲ.

 ದಸರಾಗಾಗಿ ಕಾಯುತ್ತಿರುವ ಜನತೆ

ದಸರಾಗಾಗಿ ಕಾಯುತ್ತಿರುವ ಜನತೆ

ಇದೀಗ ಎರಡು ವರ್ಷಗಳ ಬಳಿಕ ಮತ್ತೆ ಅದ್ಧೂರಿ ದಸರಾ ಆಚರಣೆ ಆಗುತ್ತಿರುವುದರಿಂದ ಎಲ್ಲರಲ್ಲೂ ಸಂಭ್ರಮ ಮನೆ ಮಾಡಿದೆ. ಜೊತೆಗೆ ದಸರಾ ನಂಬಿಕೊಂಡು ಮೈಸೂರಿನಲ್ಲಿ ವ್ಯಾಪಾರ ನಡೆಸುತ್ತಿರುವ ಸಣ್ಣಪುಟ್ಟ ವ್ಯಾಪಾರಿಗಳು, ಉದ್ಯಮಿಗಳು ಹೀಗೆ ಎಲ್ಲರೂ ಮತ್ತು ಎಲ್ಲ ಕ್ಷೇತ್ರಗಳ ಜನರು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ.

ಹಾಗೆ ನೋಡಿದರೆ ದಸರಾ ಅಂದರೆ ಸಂಭ್ರಮ, ಸಡಗರ ಮನೆ ಮಾಡುತ್ತದೆ. ಹಿಂದಿನ ಕಾಲದಲ್ಲಿ ಯಾವುದೇ ಮನೋರಂಜನೆ ದೊರೆಯದಿದ್ದ ಕಾಲದಲ್ಲಿ ಮತ್ತು ಕೃಷಿಯಲ್ಲಿಯೇ ಹೆಚ್ಚಿನ ಸಮಯವನ್ನು ಜನ ಕಳೆಯುತ್ತಿದ್ದರಿಂದ ದಸರಾ ಬಂತೆಂದರೆ ಕೇವಲ ಮೈಸೂರು ನಗರ ಮಾತ್ರವಲ್ಲ, ಗ್ರಾಮೀಣ ಪ್ರದೇಶದ ಜನರು ಸಂಭ್ರಮಿಸುತ್ತಿದ್ದರು. ಹಳ್ಳಿಗಳಿಂದ ನಗರಕ್ಕೆ ಬಂದು ಎಲ್ಲೆಂದರಲ್ಲಿ ಸುತ್ತಾಡಿ, ತಮಗೇನು ಬೇಕೋ ಅದೆಲ್ಲವನ್ನು ಖರೀದಿಸಿ ಖುಷಿಯಾಗಿ ಹಿಂತಿರುಗುತ್ತಿದ್ದರು.

 ಮಹಾರಾಜರ ಕಾಲದಿಂದಲೂ ದಸರಾ ವೀಕ್ಷೆಗೆ ಅವಕಾಶ

ಮಹಾರಾಜರ ಕಾಲದಿಂದಲೂ ದಸರಾ ವೀಕ್ಷೆಗೆ ಅವಕಾಶ

ಜನ ತಿಂಗಳು ಇರುವಾಗಲೇ ದಸರಾ ನೋಡಲು ಹೋಗುವ ಬಗ್ಗೆಯೇ ಕನಸು ಕಾಣುತ್ತಿದ್ದರು. ದಸರಾವನ್ನು ಅದ್ಧೂರಿಯಾಗಿ ನಡೆಸುತ್ತಿದ್ದ ಮಹಾರಾಜರು ದಸರಾ ನೋಡಲು ಬರುವ ಜನರಿಗೆ ಅನುಕೂಲವಾಗುವಂತೆ ವಾಸ್ತವ್ಯಕ್ಕೆ ಛತ್ರದ ವ್ಯವಸ್ಥೆಗಳನ್ನು ಮಾಡುತ್ತಿದ್ದರು. ಹಳ್ಳಿಗಳಿಂದ ಬರುವ ಜನರು ದಸರಾ ಸಂಭ್ರಮದಲ್ಲಿ ತೇಲಿ ಆ ಸುಂದರ ನೆನಪುಗಳನ್ನು ಹೊತ್ತುಕೊಂಡು ತಮ್ಮೂರಿನ ಹಾದಿ ಹಿಡಿಯುತ್ತಿದ್ದರು. ಇವರ ಪೈಕಿ ಹೆಚ್ಚಿನವರು ಮತ್ತೆ ಮೈಸೂರನ್ನು ನೋಡುತ್ತಿದ್ದದ್ದು ಮುಂದಿನ ದಸರಾದಲ್ಲಿಯೇ...

 ದಸರಾದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ

ದಸರಾದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ

ಮೈಸೂರು ದಸರಾದ ಇತಿಹಾಸವನ್ನು ತಿರುವಿ ನೋಡಿದರೆ ದಸರಾ ಜಂಬೂಸವಾರಿ, ಆಚರಣೆ ಸಂಪ್ರದಾಯಗಳಲ್ಲಿ ಸ್ವಲ್ಪ ಮಟ್ಟಿಗೆ ಬದಲಾಗಿದೆ. ಆದರೆ ಅದರಾಚೆಗೆ ಬಹಳಷ್ಟು ಬದಲಾವಣೆ ಮತ್ತು ಅಭಿವೃದ್ಧಿ ಕಂಡಿರುವುದನ್ನು ಕಾಣಬಹುದು.

ದಸರಾ ಸಂಬಂಧ ಹತ್ತಾರು ಹೊಸ ಕಾರ್ಯಕ್ರಮಗಳು ಹುಟ್ಟಿಕೊಂಡಿವೆ. ಸುಮಾರು ಹತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಖಾಸಗಿ ಕಾರ್ಯಕ್ರಮಗಳು ದಸರಾ ವೇಳೆ ನಡೆಯುತ್ತವೆ. ಇಷ್ಟೇ ಅಲ್ಲದೆ, ದಸರಾ ಸುತ್ತಲೂ ವ್ಯಾಪಾರ, ವಹಿವಾಟುಗಳು ಕೂಡ ತೆರೆದುಕೊಂಡಿವೆ. ಹೀಗಾಗಿ ದಸರಾ ಸಂಭ್ರಮದ ಜತೆ ಜತೆಯಲ್ಲಿಯೇ ಹಲವರ ಬದುಕು ಕೂಡ ಬೆರೆತುಕೊಂಡಿದೆ.

 ದಸರಾದಲ್ಲಿ ಹತ್ತಾರು ವಿಶೇಷತೆಗಳು

ದಸರಾದಲ್ಲಿ ಹತ್ತಾರು ವಿಶೇಷತೆಗಳು

ಹೀಗಾಗಿಯೇ ಪ್ರತಿಯೊಬ್ಬರೂ ಅದ್ಧೂರಿ ದಸರಾದ ಕನವರಿಕೆ ಮಾಡುತ್ತಿದ್ದರು. ಈ ಬಾರಿ ಎಲ್ಲವೂ ಸುಸೂತ್ರವಾಗಿ ನಡೆದಿದ್ದೇ ಆದರೆ ದಸರಾ ವೈಭವ ಮರುಕಳಿಸಲಿದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆಕಟ್ಟೆಗಳು ತುಂಬಿವೆ. ಎಲ್ಲಿ ನೋಡಿದರಲ್ಲಿ ಹಸಿರು ನಲಿದಾಡುತ್ತಿದೆ. ಒಂದೊಳ್ಳೆಯ ಸುಂದರ ಪರಿಸರ ನಿರ್ಮಾಣವಾಗಿದೆ. ಇದು ನಿಸರ್ಗವೇ ತಂದ ದಸರಾ ಕಳೆಯಾಗಿದೆ. ಇದೆಲ್ಲದರ ನಡುವೆ ಮೈಸೂರು ಎಲ್ಲರಿಗೂ ಇಷ್ಟವಾಗುತ್ತದೆ. ಟ್ರಾಫಿಕ್ ಕಿರಿಕಿರಿಯಿಲ್ಲ. ಪ್ರಶಾಂತ ವಾತಾವರಣ ಜತೆಗೆ ನಗರ ಸೇರಿದಂತೆ ಸುತ್ತಮುತ್ತ ಇರುವ ಪ್ರವಾಸಿ ತಾಣಗಳು, ದೈವಕ್ಷೇತ್ರಗಳು, ಆಹಾರ ಪದಾರ್ಥಗಳು, ಹೀಗೆ ಒಂದೆರಡಲ್ಲ ಹತ್ತಾರು ವಿಶೇಷತೆಗಳು ಸೆಳೆಯುತ್ತವೆ.

ಸಮುದ್ರಮಟ್ಟದಿಂದ ಸುಮಾರು 2525 ಅಡಿ ಎತ್ತರದಲ್ಲಿ ನಗರವಿರುವುದರಿಂದ ಬೇಸಿಗೆಯಲ್ಲಿ ಹೆಚ್ಚು ಸೆಖೆಯೂ ಇಲ್ಲದೆ, ಚಳಿಗಾಲದಲ್ಲಿ ಹೆಚ್ಚು ಚಳಿಯೂ ಇಲ್ಲದೆ ಆಹ್ಲಾದಕರ ವಾತಾವರಣದಿಂದ ಕೂಡಿರುತ್ತದೆ. ಇದೀಗ ದಸರಾಕ್ಕೆ ಮೈಸೂರು ತೆರೆದುಕೊಳ್ಳುತ್ತಿರುವುದರಿಂದ ದಿನಕಳೆದಂತೆ ದಸರಾ ಕಳೆ ನಗರವನ್ನು ಆವರಿಸಿಕೊಳ್ಳಲಿದೆ.

English summary
After 2 years of gap cultural city of Mysuru is ready to celebrate the Dasara grandly.karnataka government alst started preparation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X