• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿಯನ್ನು ಸದೆಬಡಿಯಲು ಹೆಗಡೆ ತಂತ್ರಕ್ಕೆ ಕಾಂಗ್ರೆಸ್ ಮೊರೆ!

By ಆರ್ ಟಿ ವಿಠ್ಠಲಮೂರ್ತಿ
|

ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟವನ್ನು ಎದುರಿಸಲು ಕಾಂಗ್ರೆಸ್ ಹೈಕಮಾಂಡ್ ಈಗ ರಾಮಕೃಷ್ಣ ಹೆಗಡೆ ಮಾದರಿಯ ಯುದ್ಧ ತಂತ್ರವನ್ನು ಅನುಸರಿಸಲು ಮುಂದಾಗಿದೆ.

ಅಂದ ಹಾಗೆ ಮೂವತ್ತೈದು ವರ್ಷಗಳ ಹಿಂದೆ ಕಾಂಗ್ರಸ್ ಪಕ್ಷವನ್ನುಎದುರಿಸಲು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಸರ್ವಜಾತಿಯ ಸೇನಾಪಡೆಗಳನ್ನು ರಚಿಸುವ ತಂತ್ರ ರೂಪಿಸಿದ್ದರು.

ವಿಠ್ಠಲಮೂರ್ತಿ ಕಾಲಂ: ವಂಶ ಪಾರಂಪರ್ಯ ರಾಜಕಾರಣದ ಇತಿಹಾಸ

1983ರ ಚುನಾವಣೆಯಲ್ಲಿ ಕರ್ನಾಟಕ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ಕಂಡರೂ ಆಳದಲ್ಲಿ ಅದಕ್ಕೆ ಅಸ್ಥಿರತೆಯ ಭೀತಿ ಕಾಡುತ್ತಿತ್ತು. ಯಾಕೆಂದರೆ ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿ ಅಹಿಂದ ವರ್ಗಗಳ ಸೈನ್ಯವಿದ್ದರೆ, ಜನತಾ ಪಕ್ಷದ ಸರ್ಕಾರದ ಬೆನ್ನ ಹಿಂದೆ ಪ್ರಬಲ ವರ್ಗಗಳು ಇದ್ದವು ಎಂಬುದು ನಿಸ್ಸಂಶಯ.

ಪರಿಣಾಮವಾಗಿ, ಎಂಭತ್ಮೂರರಲ್ಲಿ ಜನತಾ ರಂಗ ಮೈತ್ರಿಕೂಟ ಅದೇನೇ ಹೋರಾಟ ನಡೆಸಿದರೂ ಸ್ವಯಂಬಲದ ಮೇಲೆ ಸರ್ಕಾರ ರಚಿಸಲು ಅಗತ್ಯವಾದ ನೂರಾ ಹದಿಮೂರು ಎಂಬ ಮ್ಯಾಜಿಕ್ ಸಂಖ್ಯೆಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಹೀಗಾಗಿ ಜನತಾರಂಗ ಮೈತ್ರಿಕೂಟ ಅನಿವಾರ್ಯವಾಗಿ ಹದಿನೆಂಟರಷ್ಟು ಶಾಸಕ ಬಲವನ್ನು ಹೊಂದಿದ್ದ ಬಿಜೆಪಿಯ ಬೆಂಬಲ ಪಡೆಯಬೇಕಾಯಿತು.

ಕೆಟ್ಟತನ ಹಾಗೂ ಒಳ್ಳೆಯತನದ ನಡುವೆ ವಿವೇಕ ಎಂಬ ಶ್ರೀಕೃಷ್ಣ!

ಆದರೆ ಈ ರೀತಿ ಬಾಹ್ಯ ಬೆಂಬಲ ನೀಡಿದರೂ ಭಾರತೀಯ ಜನತಾ ಪಕ್ಷ ನಿರಂತರವಾಗಿ ಹೆಗಡೆ ನೇತೃತ್ವದ ಜನತಾ ಸರ್ಕಾರಕ್ಕೆ ತಲೆ ನೋವಾಗಿ ಕಾಡುತ್ತಲೇ ಇತ್ತು. ಯಾವ ಕಾರ್ಯಕ್ರಮವನ್ನು ರೂಪಿಸಲು ಹೆಗಡೆ ಮುಂದಾದರೂ ಬಿಜೆಪಿಯ ಒಪ್ಪಿಗೆ ಪಡೆಯಲೇಬೇಕಿತ್ತು.

ಅಷ್ಟೊತ್ತಿಗಾಗಲೇ ಹೆಗಡೆ ಮುಖ್ಯಮಂತ್ರಿಯಾದ ಹಿನ್ನಲೆಯಲ್ಲಿ ಜನತಾ ಪಕ್ಷದ ಜತೆಗಿದ್ದ ಕ್ರಾಂತಿರಂಗ ಒಡೆದು ಅದರಲ್ಲಿದ್ದ ಬಂಗಾರಪ್ಪ ಹೊರಗೆ ಹೋಗಿದ್ದರು. ಹೀಗಾಗಿ ಸರ್ಕಾರ ರಚಿಸಿದರೂ ಮುಂದಿನ ದಿನಗಳಲ್ಲಿ ಇದು ಅಸ್ಥಿರತೆಯಿಂದಲೇ ಬಳಲುತ್ತದೆ ಎಂಬ ಆತಂಕ ಹೆಗಡೆ ಅವರನ್ನು ಕಾಡುತ್ತಲೇ ಇತ್ತು.

ಒಂದು ಯುದ್ಧ ತಂತ್ರ ರೂಪಿಸಿದ ಹೆಗಡೆ

ಒಂದು ಯುದ್ಧ ತಂತ್ರ ರೂಪಿಸಿದ ಹೆಗಡೆ

ಈ ಸಂದರ್ಭದಲ್ಲಿ ಅವರು ಒಂದು ಯುದ್ಧ ತಂತ್ರ ರೂಪಿಸಿದರು. ಯಾಕೆಂದರೆ ಅಷ್ಟೊತ್ತಿಗಾಗಲೇ ಜನತಾ ಪಕ್ಷದ ನೆತ್ತಿಯ ಮೇಲೆ ಒಂದು ಅಪವಾದ ಬೇರೆ ಕುಳಿತಿತ್ತು. ಅದೇನೆಂದರೆ, ಜನತಾ ಪಕ್ಷವೆಂದರೆ ಒಕ್ಕಲಿಗರು, ಲಿಂಗಾಯತರ ಹಿತವನ್ನೇ ಮುಖ್ಯವಾಗಿರಿಸಿಕೊಂಡ ಪಕ್ಷ ಎಂಬುದು. ಈ ಅಪವಾದವನ್ನು ದೂರ ಮಾಡಿಕೊಳ್ಳದೆ ಹೋಗಿದ್ದರೆ ಜನತಾ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬುದನ್ನು ಮನಗಂಡ ರಾಮಕೃಷ್ಣ ಹೆಗಡೆ ತಮ್ಮದೇ ಯುದ್ಧ ತಂತ್ರವೊಂದನ್ನು ಅನ್ವೇಷಿಸಿದರು. ಅದು ಸರ್ವ ಜಾತಿಗಳ ಸೈನ್ಯವನ್ನು ರೂಪಿಸುವುದು.

ಎಲ್ಲ ಜಾತಿ ನಾಯಕರನ್ನು ಒಗ್ಗೂಡಿಸಿದ ಹೆಗಡೆ

ಎಲ್ಲ ಜಾತಿ ನಾಯಕರನ್ನು ಒಗ್ಗೂಡಿಸಿದ ಹೆಗಡೆ

ಯಾಕೆಂದರೆ ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತ ಸಮುದಾಯಗಳ ನಾಯಕರು ಪ್ರಭಾವಿಯಾಗಿ ಕಾಣುತ್ತಿದ್ದರು. ಇದಕ್ಕೆ ಪ್ರತಿಯಾಗಿ ನಾವು ಒಕ್ಕಲಿಗ, ಲಿಂಗಾಯತ ನಾಯಕರನ್ನಷ್ಟೇ ಜನತಾ ಪಕ್ಷದ ಮುಂಚೂಣಿಯಲ್ಲಿ ನಿಲ್ಲಿಸಿಕೊಂಡರೆ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೆಗಡೆ ಅರ್ಥ ಮಾಡಿಕೊಂಡರು.

ಹೀಗೆ ಅರ್ಥ ಮಾಡಿಕೊಂಡವರೇ ಹಿಂದುಳಿದ ಸಮುದಾಯದಿಂದ ಆರ್.ಎಲ್.ಜಾಲಪ್ಪ, ಸಿಂಧ್ಯಾ ಅವರಂಥವರನ್ನು, ದಲಿತ ಸಮುದಾಯದಿಂದ ಡಿ.ಮಂಜುನಾಥ್, ರಮೇಶ್ ಜಿಗಜಿಣಗಿ ಅವರಂತವರನ್ನು, ಅಲ್ಪಸಂಖ್ಯಾತ ಸಮುದಾಯದಿಂದ ನಜೀರ್ ಸಾಬ್ ಸೇರಿದಂತೆ ಹಲವರನ್ನು ಜನತಾ ಪಕ್ಷದ ಮುಂಚೂಣಿಯಲ್ಲಿ ನಿಲ್ಲಿಸಿಕೊಂಡರು.

ಹೇಗಿದ್ದರೂ ಒಕ್ಕಲಿಗ ಸಮುದಾಯದ ದೇವೇಗೌಡರು, ಲಿಂಗಾಯತ ಸಮುದಾಯದ ಪಟೇಲ್, ಬೊಮ್ಮಾಯಿ ಅವರಂತವರು ಜನತಾ ಪಕ್ಷದ ಮುಂಚೂಣಿಯಲ್ಲಿ ಇದ್ದರು. ಅವರೆಲ್ಲರಿಗಿಂತ ಮುಖ್ಯವಾಗಿ ನಿಜಲಿಂಗಪ್ಪ ಅವರ ಕಟ್ಟಾಶಿಷ್ಯರಾಗಿದ್ದವರು ಎಂಬ ಕಾರಣಕ್ಕಾಗಿ ರಾಮಕೃಷ್ಣ ಹೆಗಡೆ ಅವರನ್ನು ಲಿಂಗಾಯತ ಸಮುದಾಯ ತನ್ನ ನಾಯಕ ಎಂದು ಒಪ್ಪಿಕೊಂಡಿತ್ತು.

ಭಾರೀ ಯಶಸ್ಸು ಕಂಡ ಹೆಗಡೆಯವರ ತಂತ್ರಗಾರಿಕೆ

ಭಾರೀ ಯಶಸ್ಸು ಕಂಡ ಹೆಗಡೆಯವರ ತಂತ್ರಗಾರಿಕೆ

ಹೀಗೆ ಸರ್ವ ಜಾತಿಗಳ ನಾಯಕರನ್ನು ಮುಂಚೂಣಿಯಲ್ಲಿ ನಿಲ್ಲಿಸಿಕೊಂಡರೆ ಕಾಂಗ್ರೆಸ್ ಸೈನ್ಯವನ್ನು ಎದುರಿಸಲು ಸಾಧ್ಯ ಎಂದು ಹೆಗಡೆ ರೂಪಿಸಿದ ತಂತ್ರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಯಿತು. ವಾಸ್ತವವಾಗಿ ತಮ್ಮ ಯುದ್ಧ ತಂತ್ರವನ್ನು ಅನುಷ್ಠಾನಗೊಳಿಸಲು ಹೆಗಡೆ ಅವರು ಅಧಿಕಾರಕ್ಕೆ ಬಂದ ಕೆಲವೇ ಕಾಲದಲ್ಲಿ ನಿರ್ಧರಿಸಿದರು. ಮತ್ತು ಅಂತಹ ಸನ್ನಿವೇಶವೂ ಎದುರಾಯಿತು.

ಅದೆಂದರೆ, ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಹತ್ಯೆಯಾದಾಗ ಲೋಕಸಭೆಗೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಂಪರ್ ಗೆಲುವು ಸಾಧಿಸಿತು. ಇದಕ್ಕೆ ಪ್ರತಿಯಾಗಿ ಹೆಗಡೆ ನೇತೃತ್ವದ ಜನತಾ ಪಕ್ಷ ಹೀನಾಯ ಸೋಲನುಭವಿಸಿತು.

ಯಾವಾಗ ಈ ಬೆಳವಣಿಗೆ ನಡೆಯಿತೋ, ಆಗ ಹೆಗಡೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ನಿರ್ಧರಿಸಿದರು. ಮೊದಲನೆಯದಾಗಿ ತಮ್ಮ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಬಿಜೆಪಿಯ ಬೆಂಬಲ ಮುಂದಿನ ದಿನಗಳಲ್ಲಿ ಅನಿವಾರ್ಯವಾಗದಂತೆ ನೋಡಿಕೊಳ್ಳಬೇಕು ಎಂಬುದು. ಎರಡನೆಯದಾಗಿ, ಕಾಂಗ್ರೆಸ್ ಪಕ್ಷವನ್ನು ಎದುರಿಸಲು ರೂಪಿಸಿದ ಸರ್ವಜಾತಿಗಳ ಸೈನ್ಯ ಪ್ರಬಲವಾಗಿದೆಯೇ? ಎಂಬುದನ್ನು ಪರೀಕ್ಷಿಸುವುದು. ಹೀಗಾಗಿ ಅವರು ವಿಧಾನಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋದರು.

ಹೇಗಿದ್ದರೂ ಅವರ ಸರ್ಕಾರಕ್ಕೆ ಕೆಲವೇ ಕಾಲದಲ್ಲಿ ಒಳ್ಳೆಯ ಹೆಸರು ಬಂದಿತ್ತು. ಅದರೊಂದಿಗೆ ಈ ಪ್ರಯೋಗವೂ ಸೇರಿಕೊಂಡು ಎಂಭತ್ತೈದರ ಮಧ್ಯಂತರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವಂತಾಯಿತು.

ಜೆಡಿಎಸ್ ನಿರ್ದಿಷ್ಟ ಸಮುದಾಯದ ಪ್ರತಿನಿಧಿ

ಜೆಡಿಎಸ್ ನಿರ್ದಿಷ್ಟ ಸಮುದಾಯದ ಪ್ರತಿನಿಧಿ

ಯಾವಾಗ ಈ ಯಶಸ್ಸು ಸಾಧ್ಯವಾಯಿತೋ, ಆನಂತರ ಸರ್ವ ಜಾತಿಗಳ ಸೈನ್ಯವನ್ನು ಮುಂಚೂಣಿಯಲ್ಲಿಟ್ಟುಕೊಂಡು ಹೋಗುವುದು ಜನತಾ ಪಕ್ಷದ ಯುದ್ದ ತಂತ್ರವೇ ಆಗಿ ಹೋಯಿತು. ಯಾವಾಗ ಅದು ಈ ತಂತ್ರವನ್ನು ಅನುಸರಿಸಿದೆಯೋ? ಆಗೆಲ್ಲ ಯಶಸ್ಸು ಕಂಡಿದೆ.

ತೊಂಭತ್ನಾಲ್ಕರ ವಿಧಾನಸಭಾ ಚುನಾವಣೆ ಇದಕ್ಕೆ ಸಾಕ್ಷಿ. ಎಂಭತ್ತೊಂಭತ್ತರಲ್ಲಿ ಜನತಾದಳ ಒಡೆದು ಮೂಲೆಗುಂಪಾದರೂ ತೊಂಭತ್ನಾಲ್ಕರ ವೇಳೆಗೆ ತನ್ನ ಎಂದಿನ ಯುದ್ಧ ತಂತ್ರಕ್ಕೆ ಪೂರಕವಾಗಿ ಹೆಜ್ಜೆ ಇರಿಸಿತು. ಹೀಗಾಗಿ ಆ ಚುನಾವಣೆಯ ಸಂದರ್ಭದಲ್ಲಿ ಹೆಗಡೆ, ದೇವೇಗೌಡ, ಪಟೇಲ್, ಬೊಮ್ಮಾಯಿ, ಡಿ. ಮಂಜುನಾಥ್, ಸಿ.ಎಂ. ಇಬ್ರಾಹಿಂ, ಆರ್.ಎಲ್. ಜಾಲಪ್ಪ ಸೇರಿದಂತೆ ಎಲ್ಲ ಜಾತಿಗಳ ನಾಯಕರು ಜನತಾ ಪಕ್ಷದ ಮುಂಚೂಣಿಯಲ್ಲಿ ನಿಂತರು. ಪರಿಣಾಮವಾಗಿ ಜನತಾ ದಳ ಮರಳಿ ಅಧಿಕಾರಕ್ಕೆ ಬಂತು.

ಮುಂದಿನ ದಿನಗಳಲ್ಲಿ ಸರ್ವ ಜಾತಿಯ ಸೇನಾ ಪಡೆಗಳನ್ನು ನಿರ್ಮಿಸಿಕೊಳ್ಳುವಲ್ಲಿ ಜನತಾ ಪರಿವಾರ ವಿಫಲವಾಯಿತು. ಪರಿಣಾಮವಾಗಿ ಜನತಾ ಪರಿವಾರದ ಕೊಂಡಿಯಾಗಿರುವ ಜೆಡಿಎಸ್ ಈಗ ನಿರ್ದಿಷ್ಟ ಜನಸಮುದಾಯವನ್ನು ಮಾತ್ರ ಆಕರ್ಷಿಸುತ್ತಿದೆ.

'ಜೆಡಿಎಸ್‌ ಮುಗಿಸಲು ಹೆಗ್ಗಡೆ ಪಿತೂರಿ ಮಾಡಿದ್ದರು'

ಸರ್ವ ಜಾತಿಗೆ ಕಾಂಗ್ರೆಸ್ಸಿನಲ್ಲಿ ಪ್ರಾತಿನಿಧ್ಯ

ಸರ್ವ ಜಾತಿಗೆ ಕಾಂಗ್ರೆಸ್ಸಿನಲ್ಲಿ ಪ್ರಾತಿನಿಧ್ಯ

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಅದು ಹಲ ಪ್ರಮುಖ ಜಾತಿಗಳ ಸೈನ್ಯವನ್ನು ತನ್ನ ಮುಂಚೂಣಿಯಲ್ಲಿಟ್ಟುಕೊಂಡಿದೆ. ಹೀಗಾಗಿ ಅದನ್ನು ಎದುರಿಸುವುದು ಸುಲಭದ ಕೆಲಸವಲ್ಲ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಮನದಟ್ಟಾಗಿದೆ. ಹೀಗಾಗಿಯೇ ಅದು ಇದ್ದಕ್ಕಿದ್ದಂತೆಯೇ ಮೂವತ್ತೈದು ವರ್ಷಗಳ ಹಿಂದೆ ರಾಮಕೃಷ್ಣ ಹೆಗಡೆ ರೂಪಿಸಿದ ಯುದ್ಧ ತಂತ್ರವನ್ನು ಸಾರಾಸಗಟಾಗಿ ಅಳವಡಿಸಿಕೊಳ್ಳಲು ಹೊರಟಿದೆ. ಕಳೆದ ಚುನಾವಣೆಯ ತನಕ ಅದಕ್ಕೆ ಅಹಿಂದ ವರ್ಗಗಳ ಸೇನಾಪಡೆಯೇ ಮುಖ್ಯವಾಗಿತ್ತು.

ಹಾಗೆಯೇ ಅಹಿಂದ ವರ್ಗಗಳ ಸೇನಾ ಪಡೆಯ ಜತೆ ಯಾವುದಾದರೂ ಒಂದು ಪ್ರಬಲ ವರ್ಗದ ಗಣನೀಯ ಬೆಂಬಲ ಸಾಕಿತ್ತು. ಆದರೆ ಈಗ ಎರಡು ಪ್ರಬಲ ವರ್ಗಗಳು ಒಂದೊಂದು ಪಕ್ಷಗಳ ಜತೆ ನಿಂತುಕೊಂಡಿರುವುದು ಸ್ಪಷ್ಟ. ಹೀಗಾಗಿ ಕಾಂಗ್ರಸ್ ಪಕ್ಷಕ್ಕೆ ತಾನೇ ಮುನ್ನಡೆಸಿಕೊಂಡು ಬಂದ ಅಹಿಂದ ಸೈನ್ಯದ ಮೂಲಕ ಬಂಪರ್ ಗೆಲುವು ಸಾಧಿಸುವ ವಿಶ್ವಾಸವಿಲ್ಲ. ಹೀಗಾಗಿ ಇದ್ದಕ್ಕಿದ್ದಂತೆ ಅದು ತನ್ನ ಯುದ್ಧ ತಂತ್ರವನ್ನು ಬದಲಿಸಿ, ಮೂವತ್ತೈದು ವರ್ಷಗಳ ಹಿಂದೆ ತಮ್ಮನ್ನು ಎದುರಿಸಲು ರಾಮಕೃಷ್ಣ ಹೆಗಡೆ ಯಾವ ಯುದ್ಧ ಮಾದರಿಯನ್ನು ಅಳವಡಿಸಿಕೊಂಡಿದ್ದರೋ? ಅದೇ ಮಾದರಿಯನ್ನು ಅಳವಡಿಸಿಕೊಳ್ಳಲು ಹೊರಟಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಬ್ರಾಹ್ಮಣ ಸಮುದಾಯದ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾಗಿ ಲಿಂಗಾಯತ ಸಮುದಾಯದ ಈಶ್ವರ್ ಖಂಡ್ರೆ, ಉಪ ಮುಖ್ಯಮಂತ್ರಿಯಾಗಿ ದಲಿತ ಸಮುದಾಯದ ಪರಮೇಶ್ವರ್, ಶಾಸಕಾಂಗ ಮತ್ತು ಸಮನ್ವಯ ಸಮಿತಿ ನಾಯಕರಾಗಿ ಹಿಂದುಳಿದ ಸಮುದಾಯಕ್ಕೆ ಸೇರಿದ ಸಿದ್ಧರಾಮಯ್ಯ ಹೀಗೆ ವಿವಿಧ ಜಾತಿಗಳ ನಾಯಕರನ್ನು ತನ್ನ ಮುಂಚೂಣಿಯಲ್ಲಿಟ್ಟುಕೊಂಡಿದೆ.

ಜಾತಿ ಯುದ್ಧವನ್ನು ಗೆಲ್ಲುತ್ತಾ ಕಾಂಗ್ರೆಸ್?

ಜಾತಿ ಯುದ್ಧವನ್ನು ಗೆಲ್ಲುತ್ತಾ ಕಾಂಗ್ರೆಸ್?

ಆದರೆ ಈ ಯುದ್ಧ ತಂತ್ರವನ್ನು ರಾಮಕೃಷ್ಣ ಹೆಗಡೆ ಜಾರಿಗೊಳಿಸಿದ ಸಂದರ್ಭದಲ್ಲಿ ಜಾಗತೀಕರಣ ಎಂಬುದು ದೇಶದೊಳಗೆ ಕಾಲಿಟ್ಟಿರಲಿಲ್ಲ. ಮುಂದೆ ತೊಂಭತ್ನಾಲ್ಕರಲ್ಲಿ ಜನತಾದಳ ಇದೇ ಯುದ್ಧ ತಂತ್ರವನ್ನು ಅನುಸರಿಸಲು ಹೊರಟಾಗಲೂ ಜಾಗತೀಕರಣದ ದುಷ್ಪರಿಣಾಮಗಳು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಜಾಗತೀಕರಣ ಎಂಬುದು ದೇಶವನ್ನೇ ಸಂಪೂರ್ಣವಾಗಿ ಆವರಿಸಿಕೊಂಡಿದೆ. ಮತ್ತು ತಮಗೆ ಯಾರು ಹಿತವರು? ಅಂತ ಆಯಾ ಜಾತಿಗಳು ಪೂರ್ವಭಾವಿಯಾಗಿ ನಿರ್ಧರಿಸಿವೆ.

ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಂಡು ಬಂದಿರುವ ಪ್ರಮುಖ ಅಂಶವೇ ಇದು. ಹೀಗಾಗಿ ಮೂವತ್ತೈದು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ರಾಮಕೃಷ್ಣ ಹೆಗಡೆ ರೂಪಿಸಿದ ಸರ್ವಜಾತಿಗಳ ಸೇನಾ ಪಡೆ ಎಂಬ ತಂತ್ರ, ಇವತ್ತಿನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕನಸನ್ನು ನನಸು ಮಾಡುವ ಶಕ್ತಿ ಹೊಂದಿದೆಯೇ? ಅನ್ನುವ ಅನುಮಾನ ರಾಜಕೀಯ ವಲಯಗಳನ್ನು ಕಾಡುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress has decided to adopt the technique incorporated by Ramakrishna Hegde to defeat Congress. Now, Congress is making use of same technique to give representation to all caste to defeat Narendra Modi in Karnataka. Political Analysis by Vittal Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more