ಕೊಡಗಿನಲ್ಲಿ ವಿಭಿನ್ನ, ವಿಶಿಷ್ಟ ‘ಚಿನ್ನತಪ್ಪ’ ಹಬ್ಬ: ಏನಿದರ ವಿಶೇಷತೆ ಗೊತ್ತೇ?
ಮಡಿಕೇರಿ, ಫೆಬ್ರವರಿ 20: ಕೊಡಗಿನಲ್ಲಷ್ಟೆ ನಡೆಯುವ ಕೃಷ್ಣನ ಕೊಳಲಿನ ಹಬ್ಬ ಅರ್ಥಾತ್ ಚಿನ್ನತಪ್ಪ ಉತ್ಸವನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಹೀಗಾಗಿ ಇದು ಅಪರೂಪದ, ವಿಭಿನ್ನ, ವಿಶಿಷ್ಟ ಹಬ್ಬವಾಗಿ ಗಮನಸೆಳೆಯುತ್ತದೆ. ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬವು ಈ ಬಾರಿ ಫೆಬ್ರವರಿ 21 ರಿಂದ 23ರವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯದೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ.
ಮಡಿಕೇರಿಯಿಂದ ನಾಪೋಕ್ಲು ಮೂಲಕ ಭಾಗಮಂಡಲಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 40 ಕಿ.ಮೀ. (ಭಾಗಮಂಡಲಕ್ಕೆ 6 ಕಿಮೀ) ದೂರದಲ್ಲಿ ಸಿಗುವ ಅಯ್ಯಂಗೇರಿ ಗ್ರಾಮದಲ್ಲಿ ಶ್ರೀಕೃಷ್ಣ ದೇಗುಲವಿದ್ದು ಇಲ್ಲಿಯೇ ಚಿನ್ನತಪ್ಪ ಹಬ್ಬ ನಡೆಯುತ್ತಿದೆ. ಹಬ್ಬದ ಮೂರು ದಿನಗಳ ಆಚರಣೆ ಹೇಗಿರುತ್ತದೆ? ಎಂದರೆ ಮೊದಲ ದಿನ ವಿವಿಧ ಭಾಗಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ಕೃಷ್ಣನ ಕೊಳಲಿನ ನಾದವನ್ನು ಆಲಿಸಿಸುತ್ತಾರೆ. ಬಳಿಕ ಸೂರ್ಯಾಸ್ತವಾಗುತ್ತಿದ್ದಂತೆ ಸಮೀಪದ ಕಲ್ಲು ಹೊಳೆಗೆ ತೆರಳಿದ ಅಲ್ಲಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ಆ ನಂತರ ಎರಡನೇ ದಿನದ ನಸುಕಿನ 3 ಗಂಟೆಯವರೆಗೆ ಧಾರಾಪೂಜೆ ನಡೆಯುತ್ತದೆ. ಅಂದು ಮಧ್ಯಾಹ್ನ ದೇವಾಲಯದಿಂದ ಶ್ರೀಕೃಷ್ಣನದು ಎನ್ನಲಾದ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತೆಗೆಯಲಾಗುತ್ತದೆ. ಹಬ್ಬಕ್ಕೆ ನಿಗದಿಪಡಿಸಿದ ಕುಟುಂಬದ ಹಿರಿಯರು ಕೊಳಲನ್ನು ಹಿಡಿದು ನಿರ್ದಿಷ್ಟ ಸ್ಥಳಗಳಲ್ಲಿ ಮೂರು ಬಾರಿ ನುಡಿಸುತ್ತಾ 'ಊರ ಮಂದ್'ಗೆ ತೆರಳುತ್ತಾರೆ. ಅಲ್ಲಿ ಅಶ್ವತ್ಥ ವೃಕ್ಷದ ಕೆಳಗೆ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಕೃಷ್ಣನ ಕೊಳಲನ್ನು ನುಡಿಸಲಾಗುತ್ತದೆ.. ಇದೇ ಸಂದರ್ಭ ನಾಳಿಯಂಡ ಮಾನಿ ಎಂಬಲ್ಲಿಂದ ಎತ್ತುಪೋರಾಟದೊಂದಿಗೆ ಹೊರಟ ಶ್ವೇತ ವಸ್ತ್ರಧರಿಸಿದ ಮಹಿಳೆಯರು ಚೆಂಬುಚೆರ್ಕ್ ಹೊತ್ತು ಊರಮಂದ್ ಗೆ ಬರುತ್ತಾರೆ. ಆ ನಂತರ ಊರಮಂದ್ ಗದ್ದೆಯಲ್ಲಿ ಮೂರು ಸುತ್ತು ಎತ್ತು ಪೋರಾಟ ನಡೆಯುತ್ತದೆ.
ಹಬ್ಬದ ಕಟ್ಟು ಸಡಿಲಿಸುವ ಸಂಪ್ರದಾಯ
ಇದೇ ವೇಳೆ ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಹಬ್ಬದ ಕಟ್ಟು ಸಡಿಲಿಸಲಾಗುತ್ತದೆ. ತಪ್ಪಡ್ಕ ಸಲ್ಲಿಸಿದ ಬಳಿಕ ಶುದ್ಧಮುದ್ರಿಕೆಯವರನ್ನು ಮೀನಿಗೆ ಅಕ್ಕಿ ಹಾಕಲು ಆಹ್ವಾನಿಸಲಾಗುತ್ತದೆ. ಧಾರಾಪೂಜೆ ನಡೆದ ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೀನಿಗೆ ಅಕ್ಕಿ ಹಾಕಿದ ಬಳಿಕ ದೇವಾಲಯಕ್ಕೆ ತೆರಳುವುದರೊಂದಿಗೆ ಹಬ್ಬದ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಗುತ್ತದೆ.
ಮೂರನೇ ಮತ್ತು ಕೊನೆಯ ದಿನ ಗ್ರಾಮದ ಭಕ್ತರು ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಬ್ಬವನ್ನು ಅಯ್ಯಂಗೇರಿ ಗ್ರಾಮದ ಗೊಲ್ಲ ಜನಾಂಗ ಬಾಂಧವರು ಗ್ರಾಮದ 14 ಕುಲದವರೊಂದಿಗೆ ಭಾಗಿಯಾಗಿ ಆಚರಣೆ ಮಾಡುತ್ತಾರೆ. ಇನ್ನು ಚಿನ್ನತಪ್ಪ ಹಬ್ಬವನ್ನು ಗ್ರಾಮಸ್ಥರು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಹಬ್ಬ ಆಚರಣೆಯ ಮುನ್ನ ಅಶ್ವತ್ಥ ವೃಕ್ಷಕ್ಕೆ ಕಟ್ಟು ಕಟ್ಟಲಾಗುತ್ತದೆ. ಅದರಂತೆ ಅಂದಿನಿಂದ ಹಬ್ಬ ಮುಗಿಯುವ ತನಕ ಊರೊಳಗೆ ಪ್ರಾಣಿ ಹಿಂಸೆ, ಮಾಂಸ ಸೇವನೆ ಸೇರಿದಂತೆ ಮದುವೆ ಇನ್ನಿತರ ಶುಭಕಾರ್ಯ ಮಾಡುವಂತಿಲ್ಲ.

ಕೃಷ್ಣನ ಕೊಳಲೆಂದು ನಂಬಿರುವ ಜನ
ಇಷ್ಟೇ ಅಲ್ಲದೆ, ಹಬ್ಬದ ಸಂದರ್ಭ ಗ್ರಾಮದಲ್ಲಿ ಮಂಚದಲ್ಲಿ ಮಲಗುವಂತಿಲ್ಲ. ಎಲ್ಲರೂ ಮನೆಯಲ್ಲಿ ಅವಲಕ್ಕಿಯನ್ನೇ ಸೇವಿಸಬೇಕು ಎಂಬಂತಹ ಕಟ್ಟುಪಾಡು ಆಚರಣೆಯಲ್ಲಿರುತ್ತದೆ. ಧಾರೆಪೂಜೆ, ಪಟ್ಟಣಿ, ಭಂಡಾರ ಹಾಕುವುದು ಹೀಗೆ ಮೂರು ದಿನಗಳ ಕಾಲ ನಡೆಯುವ ಹಬ್ಬದ ಆಚರಣೆ ಕೂಡ ವಿಭಿನ್ನವೂ, ವಿಶಿಷ್ಟವೂ ಆಗಿರುತ್ತದೆ. ಹಬ್ಬದ ಮೊದಲ ದಿನ ಬೆಳಿಗ್ಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಾಲಯಕ್ಕೆ ಆಗಮಿಸುವ ತಕ್ಕ ಮುಖ್ಯಸ್ಥರು ಹಬ್ಬಕ್ಕೆ ಚಾಲನೆ ನೀಡುತ್ತಾರೆ. ಈ ಸಂದರ್ಭ ದೇವಾಲಯದ ಒಂದು ಪಾರ್ಶ್ವದಲ್ಲಿ ಚಂಡೆ ಸದ್ದು ನೀರವ ಮೌನವನ್ನು ಸೀಳಿ ಹಬ್ಬಕ್ಕೆ ರಂಗು ನೀಡುತ್ತದೆ.
ಇನ್ನು ಇಲ್ಲಿನ ದೇಗುಲದಲ್ಲಿರುವ ಕೊಳಲನ್ನು ಕೃಷ್ಣನ ಕೊಳಲೆಂದು ಜನ ನಂಬುತ್ತಾರೆ. ಇಲ್ಲಿಯೇ ಕೊಳಲನ್ನು ಊದುತ್ತಾ ಕೃಷ್ಣ ಸಂತೋಷದಿಂದ ದಿನ ಕಳೆಯುತ್ತಿದ್ದನೆಂದೂ ಆತ ಮಥುರೆಗೆ ಹೋಗುವ ಸಂದರ್ಭ ತನ್ನ ಮೆಚ್ಚಿನ ಕೊಳಲನ್ನು ಇಲ್ಲಿಯೇ ಬಿಟ್ಟು ಹೋದನಂತೆ. ಅದನ್ನು ಜೋಪಾನವಾಗಿರಿಸಿ ಪೂಜಿಸುತ್ತಾ ಬರಲಾಗುತ್ತಿದೆ. ಈ ಕೊಳಲನ್ನು ಶ್ವೇತ ವಸ್ತ್ರಗಳಿಂದ ಮುಚ್ಚಿ ವೀಕ್ಷಕರ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸುವುದು ಇಲ್ಲಿನ ಮತ್ತೊಂದು ವಿಶೇಷತೆ. ಹಾಗಾಗಿ ಇದುವರೆಗೆ ಕೃಷ್ಣನ ಕೊಳಲು ಹೇಗಿದೆ ಎಂಬುವುದು ಕೊಳಲನ್ನು ಊದುವ ತಕ್ಕ ಮುಖ್ಯಸ್ಥರನ್ನು ಹೊರತು ಬೇರೆಯವರಿಗೆ ತಿಳಿದಿಲ್ಲ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications