ಚೀನಾದ ನೆಲದಲ್ಲಿ ಭಾರತದ ತಿರಂಗ ಹಾರಿಸಿದ ಭವಾನಿ: ಸಾಹಸ ಕ್ರೀಡಾಪಟುವಿನ ಅಚ್ಚರಿಯ ಸಾಧನೆ
ಮಹಿಳೆಯರು ಅಡುಗೆ ಮನೆಗಷ್ಟೇ ಸೀಮಿತ ಎಂಬತಹದೊಂದು ಕಾಲವಿತ್ತು. ಆದರೀಗ ಮಹಿಳೆಯರು ನಾಲ್ಕು ಗೋಡೆಯ ಅಡುಗೆ ಮನೆಯ ಪ್ರಪಂಚದಿಂದ ಹೊರ ಬಂದು ಅದೆಷ್ಟೋ ಕಾಲವಾಗಿ ಹೋಗಿದೆ. ಇವತ್ತು ಅವರು ಸಾಧನೆ ಮಾಡದ ಕ್ಷೇತ್ರಗಳೇ ಇಲ್ಲವಾಗಿವೆ. ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ ತಮ್ಮ ಕುಟುಂಬ, ಗ್ರಾಮ, ರಾಜ್ಯ, ದೇಶ ಹೀಗೆ ಎಲ್ಲರಿಗೂ ಕೀರ್ತಿ ತಂದಿದ್ದಾಳೆ. ರಾಜಕೀಯ, ಕಲೆ, ಕ್ರೀಡೆ, ಉದ್ಯಮ, ಕೃಷಿ ಹೀಗೆ ಯಾವ ಕ್ಷೇತ್ರವನ್ನೂ ಬಿಡದೆ ಎಲ್ಲದರಲ್ಲಿಯೂ ತನ್ನದೇ ಆದ ಸಾಧನೆ ಮಾಡಿ ಭೇಷ್ ಎನಿಸಿಕೊಳ್ಳುತ್ತಿದ್ದಾಳೆ.
ಕ್ರೀಡೆಗಳ ವಿಚಾರ ಬಂದಾಗ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಮಹಿಳೆಯರ ಸಾಧನೆ ಕಡಿಮೆ ಎನಿಸುತ್ತದೆ. ಆದಕ್ಕೆ ಕಾರಣಗಳು ಹಲವಾರು ಇವೆ. ಇಲ್ಲಿ ಪ್ರೋತ್ಸಾಹದ ಕೊರತೆ ಮತ್ತು ಕ್ರೀಡೆಯ ಕಡೆಗೆ ಹೋಗಿ ಅಲ್ಲಿ ಯಶಸ್ಸು ಕಾಣದೆ ಹೋದರೆ ಬದುಕಿನ ಗತಿಯೇನು ಎಂಬ ಪ್ರಶ್ನೆಗಳು ಹೆಚ್ಚಿನವರನ್ನು ಕಾಡುತ್ತಿದೆ. ಅದರಲ್ಲೂ ಕೆಲವೇ ಕೆಲವು ಕ್ರೀಡೆಗಳು ಮಾತ್ರ ಹಣ ತಂದು ಕೊಡುತ್ತವೆ. ಉಳಿದಂತೆ ಬಹುತೇಕ ಕ್ರೀಡೆಗಳ ಪರಿಸ್ಥಿತಿ ನೆಟ್ಟಗಿಲ್ಲ. ಜತೆಗೆ ಕ್ರೀಡಾಪಟುಗಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಹಣಕಾಸಿನ ನೆರವು ಸಿಗದ ಕಾರಣದಿಂದಾಗಿ ಕೆಲವೊಂದು ಕ್ರೀಡೆಗಳಲ್ಲಿ ಸಾಧಿಸಬೇಕೆನ್ನುವ ಛಲವಿದ್ದರೂ ಬಹುತೇಕ ಹೆಣ್ಣು ಮಕ್ಕಳು ಅದರಿಂದ ವಿಮುಖರಾಗಿ ಬಿಡುತ್ತಾರೆ.

ಆದರೆ ಕ್ರೀಡಾ ಕ್ಷೇತ್ರದಲ್ಲಿ ಯಾರೂ ಸಾಧಿಸದ ಸ್ಕೀಯಿಂಗ್ ನಲ್ಲಿ ತಾನು ಸಾಧಿಸಬೇಕೆಂದು ಹಠ ತೊಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾರತದ ಮೊದಲ ಮಹಿಳೆಯಾಗಿ ಗಮನಸೆಳೆದವರು ಕೊಡಗಿನ ಭವಾನಿ ತೆಕ್ಕಡ. ಬಹುಶಃ ಭಾರತ ಮಟ್ಟಿಗೆ ಅದರಲ್ಲೂ ದಕ್ಷಿಣ ಭಾರತದ ಮಟ್ಟಿಗೆ ಕನಸಿನ ಮಾತೇ ಆಗಿರುವ ಸ್ಕೀಯಿಂಗ್ ನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಬೇಕಾದ ತರಬೇತಿಯನ್ನು ಭಾರತ ಮತ್ತು ಹೊರದೇಶಗಳಲ್ಲಿ ಕಲಿತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವುದು ಸಾಧನೆಯೇ ಸರಿ.
ಚೀನಾದ ನೆಲದಲ್ಲಿ ಹಾರಿದ ಭಾರತದ ತಿರಂಗ
ಕ್ರೀಡಾ ಕ್ಷೇತ್ರದಲ್ಲಿ ಧೈತ್ಯ ಸಾಧನೆ ಮಾಡುವ ಚೀನಾದ ನೆಲಕ್ಕೆ ಹೋಗಿ ಅಲ್ಲಿ ಭಾರತದ ಪತಾಕೆಯನ್ನು ಹಾರಿಸಿದ್ದು ಭವಾನಿ ಅವರ ಸಾಧನೆಗೊಂದು ಕಿರೀಟ ಎಂದರೂ ತಪ್ಪಾಗಲಾರದು. ಅಷ್ಟೇ ಅಲ್ಲದೆ ಈ ಕ್ರೀಡೆಯಲ್ಲಿ ಚೀನಾದ ನೆಲಕ್ಕೆ ಕಾಲಿಟ್ಟ ಮೊದಲ ಮಹಿಳೆ ಎಂಬುದು ಕೂಡ ಇವರ ಸಾಧನೆ ಜತೆಗೆ ಸೇರಿಕೊಳ್ಳುತ್ತದೆ. ಚೀನಾಕ್ಕೆ ತೆರಳಿ ಚಳಿಗಾಲದ ಕ್ರೀಡೆಯಲ್ಲಿ ಸಾಧನೆ ಮಾಡುವುದಿರಲಿ. ಅಲ್ಲಿ ಆಟವಾಡಲು ಆಯ್ಕೆ ಆಗುವುದೇ ಒಂದು ಸಾಧನೆ ಅದರಲ್ಲೂ ಚೀನಾದ ಹೈಲಾಂಗ್ ಜಿಯಾಂಗ್‌ನ ಹರ್ಬಿನ್ ನಲ್ಲಿ ನಡೆದ 9ನೇ ಏಷ್ಯನ್ ಚಳಿಗಾಲದ ಕ್ರೀಡಾಕೂಟದಲ್ಲಿ ಕ್ರಾಸ್ ಕಂಟ್ರಿ ಸ್ಕೀಯಿಂಗ್ ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದೇ ಒಂದು ಸಾಧನೆ ಎಂದರೆ ತಪ್ಪಾಗಲಾರದು.
ಸ್ಕೀಯಿಂಗ್ ನಲ್ಲಿ ಏನಾದರೊಂದು ಸಾಧಿಸಬೇಕೆಂದು ಹೊರಟಿರುವ ಕೊಡಗಿನ ಭವಾನಿ ತೆಕ್ಕಡ ಅವರು ಕೊಡಗಿನಲ್ಲಿ ಹುಟ್ಟಿ ಕೊಡಗು ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಸ್ಕೀಯಿಂಗ್ ನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆ ಮಾಡುತ್ತಾ ಬಂದಿರುವುದನ್ನು ಗಮನಿಸಿದರೆ, ಮಹಿಳೆಗೆ ಸಾಧನೆ ಎಂಬುದು ಹೊರೆಯಲ್ಲ ಎಂಬುದು ಗೊತ್ತಾಗುತ್ತದೆ. ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಅವರ ಸಾಧನೆಯನ್ನು ಸ್ಮರಿಸುವುದು ನಮಗೊಂದು ಹೆಮ್ಮೆ ಎಂದರೆ ಅತಿಶಯೋಕ್ತಿ ಆಗಲಾರದು. ಮೈಕೊರೆಯುವ ಚಳಿಯನ್ನು ಲೆಕ್ಕಿಸದೆ ಅದರಲ್ಲಿಯೇ ಆಡುವ ಸ್ಕೀಯಿಂಗ್ ನ್ನು ದಕ್ಷಿಣ ಭಾರತದ ಮಹಿಳೆಯೊಬ್ಬಳು ಆಯ್ಕೆ ಮಾಡಿಕೊಂಡು ಭಾರತದ ಹೆಸರನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡುವುದು ಸುಲಭವೇನಲ್ಲ. ಇದು ಹೆಮ್ಮೆಯೇ ಸರಿ.

ಸಾಹಸ ಕ್ರೀಡೆಯನ್ನು ಸ್ವೀಕರಿಸಿ ಜಯಿಸಿದ ಭವಾನಿ
ಇತ್ತೀಚೆಗಿನ ಅವರ ಸಾಧನೆಯನ್ನು ನೋಡಿದ್ದೇ ಆದರೆ ಚೀನಾದ ಏಷ್ಯನ್ ವಿಂಟರ್ ಗೇಮ್ಸ್ ನ 1.3 ಕಿಮೀ ಕ್ಲಾಸಿಕ್ ಸ್ಪ್ರಿಂಟ್ ವಿಭಾಗದಲ್ಲಿ ಕ್ವಾರ್ಟ್‌ರ್ ಫೈನಲ್ ತಲುಪಿದ್ದು. 5 ಕಿಮೀ ವೈಯಕ್ತಿಕ ರೇಸ್ ನಲ್ಲಿ 18 ನಿಮಿಷ 10 ಸೆಕೆಂಡುಗಳಲ್ಲಿ ಗುರಿ ತಲಪುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಸ್ಕೀಯರ್ ಎಂಬ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಈಗಾಗಲೇ ನಾರ್ವೆಗೆ ತೆರಳಿ ಅಲ್ಲಿಯೂ ಭಾರತವನ್ನು ಪ್ರತಿನಿಧಿಸಿ ಬಂದಿದ್ದಾರೆ. ಇನ್ನು ಭವಾನಿ ಅವರ ಬಗ್ಗೆ ಹೇಳುವುದಾದರೆ, ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ, ಪಾರ್ವತಿ ದಂಪತಿ ಪುತ್ರಿ ಭವಾನಿ. ಇವರು ಶಾಲಾ ದಿನಗಳಲ್ಲಿಯೇ ಕ್ರೀಡೆ, ಎನ್‌ಸಿಸಿಯತ್ತ ಹೆಚ್ಚಿನ ಒಲವು ಹೊಂದಿದ್ದರು. ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಎನ್‌ಸಿಸಿಗೆ ಸೇರ್ಪಡೆಗೊಂಡ ಬಳಿಕ ಸಾಹಸಮಯ ಚಟುವಟಿಕೆಯತ್ತ ತನ್ನನ್ನು ತೊಡಗಿಸಿಕೊಳ್ಳಲು ಆರಂಭಿಸಿದರು.
ಮೊದಲಿಗೆ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ದಕ್ಷಿಣ ಕೊಡಗಿನ ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಮಡಿಕೇರಿ ತಾಲೂಕಿನ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಮುಗಿಸಿ, ಮಂಗಳೂರಿನ ಸೆಂಟ್ ಅಗ್ನೇಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಡಾರ್ಜಲಿಂಗ್ ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್‌ನಲ್ಲಿ ಬೋಧಕರಾಗಿಯೂ ಕೆಲಸ ಮಾಡಿದ್ದಾರೆ. ಪ್ರೌಢಶಾಲೆಯಿಂದಲೇ ಎನ್‌ಸಿಸಿಗೆ ಸೇರಿ ಕಾಲೇಜಿನಲ್ಲಿಯೂ ಅದನ್ನು ಮುಂದುವರೆಸಿ ವಿವಿಧ ಕ್ಯಾಂಪ್‌ಗಳಲ್ಲಿ ಭಾಗವಹಿಸಿ ತರಬೇತಿ ಪಡೆದು 2016ರಲ್ಲಿ ನವದೆಹಲಿಯ ರಾಜಪಥ್ ನಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಭಾಗವಹಿಸಿದ್ದು ಇವರ ಮತ್ತೊಂದು ಸಾಧನೆ.
ಸ್ಕೀಯಿಂಗ್‌ನಲ್ಲಿ ಮಾಡಿದ ಸಾಧನೆಗಳೇನು?
ಸ್ಕೀಯಿಂಗ್ ನಲ್ಲಿ ಇವರು ಹತ್ತು ಹಲವು ರೀತಿಯ ಸಾಧನೆಗಳನ್ನು ಮಾಡಿದ್ದು, ಅದನ್ನು ನೋಡುತ್ತಾ ಹೋದರೆ ಅಚ್ಚರಿಯಾಗುತ್ತದೆ. ಖೇಲೋ ಇಂಡಿಯಾ ವಿಂಟರ್ ಗೇಮ್ಸ್, -2020 (5 ಕಿಮೀ)ರಲ್ಲಿ ಕಂಚಿನ ಪದಕ, ಮೊದಲ ಖೇಲೋ ಇಂಡಿಯಾ ವಿಂಟರ್ ಗೇಮ್ಸ್-2020 (10 ಕಿಮೀ) ಕಂಚಿನ ಪದಕ, ಎರಡನೇ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ -2021 (1.4 ಕಿಮೀ) ಚಿನ್ನದ ಪದಕ, ಎರಡನೇ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2021 (5 ಕಿ ಮೀ) ಕಂಚಿನ ಪದಕ, ಆಲ್‌ಇಂಡಿಯಾ ಓಪನ್ ಸ್ಕೀ ಮತ್ತು ಸ್ನೋಬಾಲ್ ಚಾಂಪಿಯನ್‌ಷಿಪ್-2022 (1.5 ಕಿಮೀ) ಬೆಳ್ಳಿ ಪದಕ, ಆಲ್‌ಇಂಡಿಯಾ ಓಪನ್ ಸ್ಕೀ ಮತ್ತು ಸ್ನೋಬಾಲ್ ಚಾಂಪಿಯನ್ ಷಿಪ್-2022 (5 ಕಿಮೀ) ಕಂಚಿನ ಪದಕ ಪಡೆದುಕೊಂಡಿದ್ದಾರೆ.

ನ್ಯಾಷನಲ್ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಚಾಂಪಿಯನ್‌ಷಿಪ್ -2022 (5 ಕಿಮೀ) ಬೆಳ್ಳಿ ಪದಕ, ನ್ಯಾಷನಲ್ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಚಾಂಪಿಯನ್‌ಷಿಪ್ -2022 (10 ಕಿಮೀ) ಬೆಳ್ಳಿ ಪದಕ, ನ್ಯಾಷನಲ್ ವಿಂಟರ್ ಬೈಥ್ಲಾನ್ ಚಾಂಪಿಯನ್‌ಷಿಪ್-2022 (10 ಕಿಮೀ) ಬೆಳ್ಳಿ ಪದಕ, ನ್ಯಾಷನಲ್ ವಿಂಟರ್ ಬೈಥ್ಲಾನ್ ಚಾಂಪಿಯನ್‌ಷಿಪ್-2022 (5 ಕಿಮೀ) ಬೆಳ್ಳಿ ಪದಕ, ನ್ಯಾಷನಲ್ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಚಾಂಪಿಯನ್‌ಷಿಪ್ -2022 (1. 5 ಕಿಮೀ) ಚಿನ್ನದ ಪದಕ,
3ನೇ ಖೇಲೋ ಇಂಡಿಯಾ ವಿಂಟರ್ ಗೇಮ್ 2023 (10 ಕಿ ಮೀ) ಚಿನ್ನದ ಪದಕ, 3ನೇ ಖೇಲೋ ಇಂಡಿಯಾ ವಿಂಟರ್ ಗೇಮ್ 2023 (5 ಕಿ ಮೀ) ಚಿನ್ನದ ಪದಕ, 3ನೇ ಖೇಲೋ ಇಂಡಿಯಾ ವಿಂಟರ್ ಗೇಮ್ 2023 (1.5 ಕಿ ಮೀ) ಚಿನ್ನದ ಪದಕ ಗಳಿಸಿದ್ದಾರೆ. ಇನ್ನು ಮೂರನೇ ಖೇಲೋ ಇಂಡಿಯಾ ವಿಂಟರ್ ಗೇಮ್ 2024 (10 ಕಿ ಮೀ) ಚಿನ್ನದ ಪದಕ, 3ನೇ ಖೇಲೋ ಇಂಡಿಯಾ ವಿಂಟರ್ ಗೇಮ್ 2024 (10 ಕಿ ಮೀ) ಚಿನ್ನದ ಪದಕ, 3ನೇ ಖೇಲೋ ಇಂಡಿಯಾ ವಿಂಟರ್ ಗೇಮ್ 2024 (10 ಕಿ ಮೀ) ಚಿನ್ನದ ಪದಕ ವನ್ನು ಪಡೆದಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕ್ರೀಡಾತಾರೆ
ಅಂತರಾಷ್ಟ್ರೀಯವಾಗಿ ಹತ್ತು ಹಲವು ಸಾಧನೆ ಮಾಡಿದ್ದು, ಎಫ್‌ಐಎಸ್ ಸ್ಕೀಯಿಂಗ್ ರೇಸ್ ಐಸ್‌ಲ್ಯಾಂಡ್ 2022 (1.2 ಕಿಮೀ) 7ನೇ ಸ್ಥಾನ, ಎಫ್‌ಐಎಸ್ ಸ್ಕೀಯಿಂಗ್ ರೇಸ್ ಐಸ್‌ಲ್ಯಾಂಡ್ 2022 (05 ಕಿಮೀ) 6ನೇ ಸ್ಥಾನ, ರೈಪ್ಫಿಸೆನ್ ಲಾಂಗ್‌ಲೌಫ್ ಕಪ್ ಇಟಲಿ, 2022 (05 ಕಿಮೀ) ಬೆಳ್ಳಿ ಪದಕ, ಏಷ್ಯನ್ ಸಮ್ಮರ್ ಬೈಥ್ಲಾನ್, ಕಝಕಿಸ್ತಾನ್, 2023 (7.5 ಕಿಮೀ) 17ನೇ ಸ್ಥಾನ,
ಎಫ್‌ಐಎಸ್ ಸ್ಕೀಯಿಂಗ್ ರೇಸ್ ಐಸ್‌ಲ್ಯಾಂಡ್ 2023 (1.2 ಕಿಮೀ) 4ನೇ ಸ್ಥಾನ, ಎಫ್‌ಐಎಸ್ ಸ್ಕೀಯಿಂಗ್ ರೇಸ್ ಐಸ್‌ಲ್ಯಾಂಡ್ 2023 (05 ಕಿಮೀ) 4 ನೇ ಸ್ಥಾನ, ನಾರ್ಡಿಕ್, ವಿಶ್ವ ಸ್ಕೀಯಿಂಗ್ ಚಾಂಪಿಯನ್ ಶಿಪ್ ಸ್ಲೊವೆನಿಯಾ 2023 (05 ಕಿಮೀ) 31ನೆ ಸ್ಥಾನ ಪಡೆದರೂ ಭಾರತದಿಂದ ಆಯ್ಕೆಯಾದ ಏಕೈಕ ಸ್ಫರ್ಧಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲದೆ, ಈಸ್ಟರ್ನ್ ಯೂರೋಪ್ ಕಪ್, ಕಝಕಿಸ್ತಾನ್ 2024 (5 ಕಿಮೀ) 36ನೇ ಸ್ಥಾನ, ಈಸ್ಟರ್ನ್ ಯೂರೋಪ್ ಕಪ್, ಕಝಕಿಸ್ತಾನ್ 2024 (1.4 ಕಿಮೀ) 43ನೇ ಸ್ಥಾನ ಪಡೆದುಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಕರ್ನಾಟಕ ಕಾಶ್ಮೀರ ಎಂದೇ ಕರೆಯುವ ಕೊಡಗಿನಲ್ಲಿ ಹುಟ್ಟಿ ಬೆಳೆದು ಕಾಶ್ಮೀರಕ್ಕೆ ತೆರಳಿ ಸ್ಕೀಯಿಂಗ್ ತರಬೇತಿ ಪಡೆದು ಅಲ್ಲಿ ನಡೆದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವು ಪಡೆದಿರುವುದಲ್ಲದೆ, ವಿದೇಶಗಳಿಗೂ ತೆರಳಿ ಅಲ್ಲಿಯೂ ಕಂಚು, ಬೆಳ್ಳಿ ಮತ್ತು ಚಿನ್ನದ ಪದಕಗಳಿಗೆ ಭಾಜನರಾಗಿರುವ ಭವಾನಿ ಅವರ ಸಾಧನೆ ಇತರೆ ಹೆಣ್ಣು ಮಕ್ಕಳಿಗೂ ಮಾದರಿಯಾಗಲಿ ಎಂಬುದೇ ನಮ್ಮ ಆಶಯ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications