ಬೆಂಗಳೂರು ತೊರೆದು ಈ ಪ್ರದೇಶಗಳಿಗೆ ಜನ ಹೆಚ್ಚಾಗಿ ಶಿಫ್ಟ್, ಕಾರಣವೇನು?
ಉದ್ಯೋಗಾವಕಾಶಗಳು, ವಾಸಕ್ಕೆ ಯೋಗ್ಯವಾದ ಸೌಕರ್ಯ, ವರ್ಷಪೂರ್ತಿ ಒಳ್ಳೆಯ ವಾತಾವರಣ ಸೇರಿದಂತೆ ಹಲವು ಕಾರಣಗಳಿಗಾಗಿ ವಿವಿಧ ರಾಜ್ಯದ ಜನರು ಸಿಲಿಕಾನ್ ಸಿಟಿ ಬೆಂಗಳೂರಿನತ್ತ ಗಂಟುಮೂಟೆ ಕಟ್ಟಿಕೊಂಡು ಬರುತ್ತಿದ್ದಾರೆ. ಈಗಾಗಲೇ ಹಲವರು ಎರಡು ದಶಕಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ದಿನ ಕಳೆದಂತೆ ಜನರ ವಲಸೆ ಹೆಚ್ಚಾದ ಕಾರಣ ಬೆಂಗಳೂರಲ್ಲಿ ಜನ ತುಂಬಿ ತುಳುಕಾಡುತ್ತಿದ್ದಾರೆ. ಈಗಂತೂ ಜನರು ಬೆಂಗಳೂರಿನ ಸಹವಾಸ ಸಾಕು ಎಂದು ಹೊರವಲಯಗಳತ್ತ ಮುಖಮಾಡುತ್ತಿರುವ ಪ್ರವೃತ್ತಿ ಹೆಚ್ಚಾಗಿದೆ.
ಹೌದು, ಬೆಂಗಳೂರಿನ ಟ್ರಾಫಿಕ್, ಬಾಡಿಗೆ ದರ ಹೆಚ್ಚಳ ಸೇರಿದಂತೆ ದುಬಾರಿ ಜೀವನ ನಡೆಸಲು ಪರದಾಡುವ ಬದಲಿಗೆ ನೆಮ್ಮದಿಯಾಗಿ ನಗರದಿಂದ ಹೊರಗಿದ್ದು ಬಿಡೋಣ ಎಂದು ಕುಟುಂಬ ಸಮೇತವಾಗಿ ಸ್ಥಳಾಂತರಗೊಳ್ಳುತ್ತಿದ್ದಾರೆ. ಸದ್ಯ ಬೆಂಗಳೂರು ಕೂಡ ದಿನದಿಂದ ದಿನಕ್ಕೆ ಬೆಳೆಯುತ್ತಾ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ. ಹಾಗಾಗಿ ನಗರದ ಒಳಗಿದ್ದರೆ ಜೀವನ ನಡೆಸುವುದು ಕಷ್ಟ ಎನ್ನುತ್ತಾ ಬೆಂಗಳೂರಿಗೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳತ್ತ ಶಿಫ್ಟ್ ಆಗುತ್ತಿದ್ದಾರೆ.

ಬೆಂಗಳೂರಿನ ಹಲವು ಏರಿಯಾಗಳು ಈಗಾಗಲೇ ಜನಸಂಖ್ಯೆ ಹೆಚ್ಚಾಗಿ ಇಕ್ಕಟ್ಟಾಗಿವೆ. ಅಲ್ಲಿ ಹತ್ತಾರು ವರ್ಷಗಳಿಂದ ವಾಸವಿದ್ದ ಜನರಿಗೆ ಮೊದಲಿನಂತೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮನೆಗಳನ್ನು ಶಿಫ್ಟ್ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿಗೆ ವಲಸೆ ಬಂದಿರುವ ಹೊರರಾಜ್ಯದವರು ಸೈಲೆಂಟಾಗಿ ಬೆಂಗಳೂರು ತೊರೆದು ಹೊರವಲಯಗಳಲ್ಲಿ ಹೋಗಿ ಮನೆ ಖರೀದಿಸುತ್ತಿದ್ದಾರೆ.
ಸದ್ಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶವು ಬೆಂಗಳೂರು ನಗರದಿಂದ ಹೊರಭಾಗದಲ್ಲೇ ಇದ್ದು, ಗ್ರಾಮೀಣ ಪ್ರದೇಶಗಳ ಹತ್ತಿರದಲ್ಲಿದೆ. ಮತ್ತೊಂದೆಡೆ ಈ ಪ್ರದೇಶ ವಾಣಿಜ್ಯ ಕೇಂದ್ರವಾಗಿಯೂ ಅಭಿವೃದ್ಧಿ ಹೊಂದುತ್ತಿದೆ. ಹಲವು ಬಿಲ್ಡರ್‌ಗಳು ಗ್ರಾಹಕರನ್ನು ಸೆಳೆಯಲು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದ್ದಾರೆ. ಜನ ಕೂಡ ನಾ ಮುಂದು ಎಂದು ಇಲ್ಲಿನ ಅಪಾರ್ಟ್‌ಮೆಂಟ್‌ಗಳಿಗೆ ಶಿಫ್ಟ್ ಆಗುತ್ತಿದ್ದಾರೆ. ಬೆಂಗಳೂರು ನಗರ ಭಾಗದಲ್ಲಿರುವ ಅಪಾರ್ಟ್‌ಮೆಂಟ್ ದರಗಳಿಗೆ ಹೋಲಿಸಿದರೆ ಹೊರವಲಯದಲ್ಲಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ನೆಮ್ಮದಿಯ ವಾತಾವರಣವಿದೆ ಎಂಬ ಕಾರಣಕ್ಕೆ ನೆಚ್ಚಿನ ಆಯ್ಕೆಯಾಗುತ್ತಿದೆ.

ಏರ್‌ಪೋರ್ಟ್ ಹತ್ತಿರವಿರುವ ಕಾರಣ ಇಲ್ಲಿನ ಜಮೀನು ದರಗಳೇನು ಕಡಿಮೆ ಇಲ್ಲ. ಆದರೂ ಬೆಂಗಳೂರಿನಲ್ಲಿ ಆಸ್ತಿ ಮಾಡುವುದಕ್ಕಿಂತ ಈ ಭಾಗದಲ್ಲಿ ನಿವೇಶನಗಳನ್ನು ಖರೀದಿಸಿದರೆ ಮುಂದಿನ ವರ್ಷಗಳಲ್ಲಿ ದುಪ್ಪಟ್ಟು ಲಾಭ ಪಡೆಯಬಹುದು ಎಂದು ಸಾಲ ಮಾಡಿಕೊಂಡಾದರೂ ಇಲ್ಲಿ ನಿವೇಶನಗಳನ್ನು ಖರೀದಿಸಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ವಿವಿಧ ಟೌನ್‌ಶಿಪ್‌ಗಳ ನೆಲೆ, ಪ್ರವಾಸೋದ್ಯಮಕ್ಕೂ ಪೂರಕ ವಾತಾವರಣ ಇರುವ ಕಾರಣ ಬೆಂಗಳೂರು ಬದಲಿಗೆ ಈ ಭಾಗದಲ್ಲೇ ನೆಮ್ಮದಿಯಾಗಿ ಇರಬಹುದು ಎಂದು ಜನ ಶಿಫ್ಟ್ ಆಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ, ಯಲಹಂಕ, ಸಾದಹಳ್ಳಿ, ರಾಜಾನುಕುಂಟೆ, ಹುಣಸಮಾರನಹಳ್ಳಿ, ಬಾಗಲೂರು, ಬೂದಿಗೆರೆ, ಚಿಕ್ಕಬಳ್ಳಾಪುರ, ವಿದ್ಯಾನಗರ, ಚಿಕ್ಕಜಾಲ ಸೇರಿದಂತೆ ಪ್ರಮುಖ ಏರಿಯಾಗಳಿಗೆ ಬೆಂಗಳೂರಿಗರು ಶಿಫ್ಟ್ ಆಗುತ್ತಿದ್ದಾರೆ. ಅಲ್ಲಿ ಬೆಂಗಳೂರಿಗೆ ಹೋಲಿಸಿದರೆ ಬಾಡಿಗೆ ಪ್ರಮಾಣ ಕೂಡ ಕಡಿಮೆ ಇದ್ದು, ಈ ಕಾರಣಕ್ಕೂ ಅತ್ತ ಮುಖಮಾಡುತ್ತಿದ್ದಾರೆ. ಅಲ್ಲಿ ಮನೆ ಬಾಡಿಗೆ 4,000 ರೂಪಾಯಿಯಿಂದ 10,000 ರೂಪಾಯಿವರೆಗೆ ಇದೆ. ಹೀಗಾಗಿ ಇವೆಲ್ಲ ಗ್ರಾಮೀಣ ಪ್ರದೇಶಗಳಾಗಿದ್ದು, ಈಗೀಗ ನಗರೀಕರಣಗೊಳ್ಳುತ್ತಿವೆ. ಈ ಹಿನ್ನೆಲೆ ಬೆಂಗಳೂರು ಬದಲಿಗೆ ಜನ ಈ ಏರಿಯಾಗಳಲ್ಲಿ ಹೆಚ್ಚಾಗಿ ನೆಲೆಸುತ್ತಿದ್ದಾರೆ.
ಸದ್ಯ ಬೆಂಗಳೂರು ಗ್ರಾಮಾಂತರ ಭಾಗದ ಎಲ್ಲ ತಾಲ್ಲೂಕುಗಳು ಬೆಂಗಳೂರಿಗೆ ಹೊಂದಿಕೊಂಡಿರುವುದರಿಂದ ಜನ ಈ ಭಾಗಗಳಿಗೆ ವಲಸೆ ಹೋಗಿ ನೆಲೆಯೂರುತ್ತಿದ್ದಾರೆ. ಬೆಂಗಳೂರಿಗೆ ಹೋಲಿಸಿದರೆ ಈ ಭಾಗದಲ್ಲಿ ನಿವೇಶನಗಳು ಕೈಗೆಟುಕುವ ದರಗಳಲ್ಲಿ ಸಿಗುತ್ತಿದ್ದು, ಕಡಿಮೆ ಖರ್ಚಿನಲ್ಲಿ ನೆಮ್ಮದಿಯ ಜೀವನ ಅರಸಿ ಈ ಕಡೆ ಬರುತ್ತಿದ್ದಾರೆ. ಕೆಲವರು ಬಾಡಿಗೆ ಮನೆಗಳಿಗೆ ತೆರಳುತ್ತಿದ್ದರೆ, ಹಲವರು ಸ್ವಂತ ಸೈಟ್ ಖರೀದಿಸಿ ಕನಸಿನ ಮನೆ ನಿರ್ಮಿಸಿಕೊಂಡು ಬರುತ್ತಿದ್ದಾರೆ. ನಿವೃತ್ತ ಅಧಿಕಾರಿಗಳು ಕುಟುಂಬಗಳು ಹೆಚ್ಚಾಗಿ ಈ ಭಾಗದತ್ತ ವಲಸೆ ಬರುತ್ತಿವೆ.











Click it and Unblock the Notifications