• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರೇಂದ್ರ ಮೋದಿ ಮಂತ್ರಿ ಮಂಡಲದಲ್ಲಿ 'ಅಂಗಡಿ' ತೆರೆದ ಸುರೇಶ್

|

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿ, ಈ ಬಾರಿ ನರೇಂದ್ರ ಮೋದಿ ಸಂಪುಟದಲ್ಲಿ ಮಂತ್ರಿಯಾಗಿ ಮಿಂಚಲಿರುವ ಸುರೇಶ್ ಚನ್ನಬಸಪ್ಪ ಅಂಗಡಿ (63) ಅವರು ಜನಪ್ರಿಯತೆ ಮತ್ತು ವಿವಾದಗಳನ್ನು ಸಮನಾಗಿ ಗಳಿಸಿದಂತಿರುವ ಜನನಾಯಕ.

2014ರಲ್ಲಿಯೇ ಹ್ಯಾಟ್ರಿಕ್ ಸಾಧಿಸಿದ್ದ ಸುರೇಶ್ ಅಂಗಡಿ ಅವರು ನಾಲ್ಕನೇ ಬಾರಿಯೂ ಗೆದ್ದ ನಂತರ, ವೀರಶೈವ-ಲಿಂಗಾಯತ ಕೋಟಾದಡಿ ಮಂತ್ರಿಗಿರಿ ತಾನಾಗಿಯೇ ಹುಡುಕಿಕೊಂಡು ಬಂದಿದೆ. ಅಂಗಡಿ ಅವರು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕೇಂದ್ರ ಸಚಿವರಾದ ನಂತರವೂ ಬೆಳಗಾವಿ ಲೋಕಸಭಾ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂಬುದು ಅಲ್ಲಿನ ಜನರ ಆಶಯ.

ಮೋದಿ ಸಂಪುಟ 2.0 LIVE : ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ಸ್ವೀಕಾರ

ಕನ್ನಡಿಗರ ಮತಗಳಿಂದಲೇ ನಾಲ್ಕು ಬಾರಿ ಸಂಸತ್ತಿಗೆ ಆರಿಸಿ ಬಂದಿರುವ ಸುರೇಶ್ ಅಂಗಡಿ ಅವರಿಗೆ ಮರಾಠಿ ಮತ್ತು ಮರಾಠಿಗರ ಮೇಲೆ ವಿಶೇಷ ಪ್ರೀತಿಯಿದೆ. ಇದನ್ನು ಅವರು ಹಲವು ಬಾರಿ ಪ್ರದರ್ಶಿಸಿ ವಿವಾದಕ್ಕೂ ಈಡಾಗಿದ್ದಾರೆ. ಬೆಳಗಾವಿ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂಬ ಆರೋಪ ಅವರ ಮೇಲಿದ್ದರೂ ಸತತವಾಗಿ ಆರಿಸಿ ಬಂದಿದ್ದಾರೆ ಸುರೇಶ್ ಅಂಗಡಿಯವರು.

ಈ ಬಾರಿ ಮಂತ್ರಿಗಿರಿ ಒಲಿದು ಬರುತ್ತಿದ್ದಂತೆ ಬೆಳಗಾವಿಯ ಅವರ ಮನೆಯಲ್ಲಿ ಭಾರೀ ಸಂತಸದ ವಾತಾವರಣ ಸೃಷ್ಟಿಯಾಗಿದೆ. ಸಿಹಿ ಹಂಚಿ, ಪಟಾಕಿ ಸಿಡಿ ಮನೆಮಂದಿ ಮತ್ತು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬ ಅನುಮಾನವಿತ್ತು. ಆದರೂ, ಅಡೆತಡೆಗಳನ್ನು ಮೀರಿ, ನರೇಂದ್ರ ಮೋದಿ ಅಲೆಯ ಮೇಲೆ ಏರಿ ಗೆದ್ದಿದ್ದಲ್ಲದೆ, ಈ ಕೇಂದ್ರ ಸಚಿವರೂ ಆಗಿದ್ದಾರೆ. ಅವರ ಕಿರುಪರಿಚಯ ಇಲ್ಲಿದೆ.

ಹುಟ್ಟುಹಬ್ಬಕ್ಕೆ ಮೊದಲೇ ಭರ್ಜರಿ ಗಿಫ್ಟ್

ಹುಟ್ಟುಹಬ್ಬಕ್ಕೆ ಮೊದಲೇ ಭರ್ಜರಿ ಗಿಫ್ಟ್

ಕರ್ನಾಟಕದ ಮಾಜಿ ಸಚಿವ ವಿಎಸ್ ಕೌಜಲಗಿ ಅವರ ಸಂಬಂಧಿಯಾಗಿರುವ ಸುರೇಶ್ ಅಂಗಡಿ ಅವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಕೆಕೆ ಕೊಪ್ (ಕನಸಿನ ಕರವಿನ ಕೊಪ್) ಎಂಬ, ಕನ್ನಡಿಗರೇ ಹೆಚ್ಚಾಗಿರುವ ಗ್ರಾಮದಲ್ಲಿ. ತಂದೆ ಚನ್ನಬಸಪ್ಪ ಮತ್ತು ತಾಯಿ ಸೋಮವ್ವ. ಜನಿಸಿದ್ದು 1955ರ ಜೂನ್ 1ರಂದು. ಅಂದರೆ, ಅವರ ಹುಟ್ಟುಹಬ್ಬಕ್ಕೆ ಎರಡು ದಿನ ಮೊದಲೇ ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಿ ನರೇಂದ್ರ ಮೋದಿಯವರು ಭರ್ಜರಿ ಉಡುಗೊರೆ ನೀಡಿದ್ದಾರೆ. ಹೆಂಡತಿ ಮಂಗಳಾ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ನಗರ ಬಡಾವಣೆಯಲ್ಲಿ ಸುರೇಶ್ ಅಂಗಡಿ ಅವರ ನಿವಾಸ.

ಬೆಳಗಾವಿಯಲ್ಲಿ ವಿದ್ಯಾಭ್ಯಾಸ, ಉದ್ಯಮ

ಬೆಳಗಾವಿಯಲ್ಲಿ ವಿದ್ಯಾಭ್ಯಾಸ, ಉದ್ಯಮ

ಆರಂಭಿಕ ವಿದ್ಯಾಭ್ಯಾಸವನ್ನು ಅವರು ಬೆಳಗಾವಿಯಲ್ಲಿಯೇ ಪಡೆದಿದ್ದಾರೆ. ಎಸ್ಎಸ್ಎಸ್ ಸಮಿತಿ ಕಾಮರ್ಸ್ ಕಾಲೇಜಿನಲ್ಲಿ ಪದವಿ ಗಳಿಸಿದ ಸುರೇಶ್ ಅಂಗಡಿ ಅವರು, ಬೆಳಗಾವಿಯ ಪ್ರತಿಷ್ಠಿತ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಕಾನೂನು ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ರಾಜಕೀಯಕ್ಕೆ ಧುಮುಕುವ ಮೊದಲು ಅಂಗಡಿ ಅವರು ತಮ್ಮದೇ ಉದ್ಯಮವನ್ನೂ ಹೊಂದಿದ್ದರು. ಬೆಳಗಾವಿಯ ವಾಣಿಜ್ಯ ಮಂಡಳಿ ಎಕ್ಸಿಕ್ಯುಟಿವ್ ಸದಸ್ಯರಾಗಿ, ಕೇಂದ್ರ ಹಣಕಾಸು ಇಲಾಖೆಯ ಆಹಾರ, ಗ್ರಾಹಕ ವ್ಯವಹಾರ ಮತ್ತು ಸಾರ್ವಜನಿಕ ಸರಬರಾಜು ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಸಲಿಗೆ, ಸುರೇಶ್ ಅಂಗಡಿ ಅವರೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೂ ಬೀಗರು. ಶೆಟ್ಟರ್ ಅವರ ಮಗ ಸಂಕಲ್ಪ ಅವರು ಅಂಗಡಿ ಅವರ ಮಗಳು ಶ್ರದ್ಧಾ ಅವರ ಕೈಹಿಡಿದಿದ್ದಾರೆ.

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

ಸತತ ನಾಲ್ಕು ಬಾರಿ ಸಂಸದನಾಗಿ ಆಯ್ಕೆ

ಸತತ ನಾಲ್ಕು ಬಾರಿ ಸಂಸದನಾಗಿ ಆಯ್ಕೆ

ಸ್ವಂತ ವ್ಯಾಪಾರ ಹೊಂದಿದ್ದ ಸುರೇಶ್ ಅಂಗಡಿ ಅವರು ಸಕ್ರೀಯ ರಾಜಕೀಯಕ್ಕೆ ಧುಮುಕಿದ್ದು 1996ರಲ್ಲಿ, ಅದೇ ವರ್ಷ ಬಿಜೆಪಿಯ ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. 2001ರಲ್ಲಿ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮೇಲೇರಿದ ಅಂಗಡಿ ಅವರು 2004ರಲ್ಲಿ ಮೊದಲ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಕಾಂಗ್ರೆಸ್ಸಿನ ಅಮರಸಿನ್ಹ್ ವಸಂತರಾವ್ ಪಾಟೀಲ ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದರು. 2009ರ ಚುನಾವಣೆಯಲ್ಲಿಯೂ ಇದೇ ಮರುಕಳಿಸಿತು. 2014ರ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರು ಬದ್ಧವೈರಿ ಕಾಂಗ್ರೆಸ್ಸಿನ ಘಟವಾಣಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು 75,860 ಮತಗಳ ಅಂತರದಿಂದ ಸೋಲಿಸಿದ್ದರು. 2019ರ ಕದನದಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿ ಡಾ. ವಿಎಸ್ ಸಾಧುನವರ್ ಅವರನ್ನು 391,304 ಮತಗಳ ಭಾರೀ ಅಂತರದಿಂದ ಅಂಗಡಿ ಸದೆಬಡಿದಿದ್ದಾರೆ.

ಭಗವಾಧ್ವಜ ವಿವಾದ, ಕನ್ನಡಿಗರಿಗೆ ಕ್ಷಮೆ

ಭಗವಾಧ್ವಜ ವಿವಾದ, ಕನ್ನಡಿಗರಿಗೆ ಕ್ಷಮೆ

ಸುರೇಶ್ ಅಂಗಡಿಯವರನ್ನು ಸುತ್ತಿಬಂದಿರುವ ವಿವಾದಗಳು ಒಂದೆರಡಲ್ಲ. ಬೆಳಗಾವಿ ನಗರ ಪಾಲಿಕೆಯ ಕಚೇರಿಯ ಮೇಲೆ ಎಂಇಎಸ್ ನ ಭಗವಾಧ್ವಜ ಹಾರಿಸಬೇಕೆಂದು ಎಂಇಎಸ್ ಪ್ರತಿಭಟನೆ ನಡೆಸಿದ್ದಾಗ ಕನ್ನಡಿಗರಾದ ಸುರೇಶ್ ಅಂಗಡಿ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಲ್ಲದೆ ಆ ಹೋರಾಟಕ್ಕೆ ಬೆಂಬಲ ನೀಡಿದ್ದರು. ಇದರಿಂದ ಅಂಗಡಿ ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ರಾಜ್ಯಾದ್ಯಂತ ಭಾರೀ ಪ್ರತಿಭಟನೆಗಳು ನಡೆದ ನಂತರ ಸುರೇಶ್ ಅಂಗಡಿ ಅವರು ಕನ್ನಡಿಗರ ಕ್ಷಮೆ ಯಾಚಿಸಿದ್ದರು. ಅವರ ವಿರುದ್ಧ ಹಿರಿಯ ಸಾಹಿತಿಗಳು, ಕನ್ನಡ ಹೋರಾಟಗಾರರು ಭಾಗವಹಿಸಿದ್ದರು. ಸಾಹಿತಿಗಳು ಮತ್ತು ಕನ್ನಡ ಕಟ್ಟಾಳುಗಳಿಗೆ ಆದ ನೋವು ಸಮಸ್ತ ಕನ್ನಡಿಗರ ನೋವು ಎಂದು ಭಾವಿಸಿ ಕನ್ನಡಿಗರ ಕ್ಷಮೆ ಯಾಚಿಸುತ್ತೇನೆ ಎಂದು ಸುರೇಶ್ ಅಂಗಡಿ ಹೇಳಿದ್ದರು.

ಮೋದಿ ಸರ್ಕಾರ್ 2 : ಕೇಂದ್ರ ಸಚಿವ ಸಂಪುಟ ಸೇರಿದವರ ಪಟ್ಟಿ

ಕುದುರೆ ನೋಡಿ ಕತ್ತೆ ಗೆಲ್ಲಿಸಿದರು

ಕುದುರೆ ನೋಡಿ ಕತ್ತೆ ಗೆಲ್ಲಿಸಿದರು

ಸುರೇಶ್ ಅಂಗಡಿ ಅವರು 2019ರಲ್ಲಿ ಭರ್ಜರಿಯಾಗಿ ಗೆದ್ದ ನಂತರವೂ ವಿವಾದ ಬೆನ್ನು ಹತ್ತಿ ಬಂದಿತ್ತು. ಕ್ಷೇತ್ರದಲ್ಲಿ ಏನೂ ಕೆಲಸ ಮಾಡಿಲ್ಲ ಎಂಬ ಆರೋಪ ಅವರ ಮೇಲಿದೆ. ಹೀಗಾಗಿ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಕೂಡ ಖಾತ್ರಿ ಇರಲಿಲ್ಲ. ಆದರೆ, ಗೆದ್ದ ನಂತರ, 'ಕುದುರೆಯನ್ನು ನೋಡಿ ಕತ್ತೆಯನ್ನು ಜನ ಗೆಲ್ಲಿಸಿದ್ದಾರೆ' ಎಂದು ನಗರದ ಹಲವೆಡೆಗಳಲ್ಲಿ ಅವರ ವಿರುದ್ಧ ಭಿತ್ತಿಪತ್ರಗಳು ಕಂಡುಬಂದಿದ್ದವು. ಇದು ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಹಿಂದೆ ಸುರೇಶ್ ಅಂಗಡಿ ಅವರ ವಿರೋಧಿಗಳ ಕಿತಾಪತಿಯೂ ಇರಬಹುದು.

ಪಾಕ್ ವಿರೋಧಿಗಳನ್ನು ಗುಂಡಿಟ್ಟು ಕೊಲ್ಲಿ

ಪಾಕ್ ವಿರೋಧಿಗಳನ್ನು ಗುಂಡಿಟ್ಟು ಕೊಲ್ಲಿ

ಹುಬ್ಬಳ್ಳಿಯ ಗಣೇಶ್ ಪೇಟೆಯನ್ನು ಪಾಕಿಸ್ತಾನಕ್ಕೆ ಹೋಲಿಸಿ ಮೌಲ್ವಿ ಅಬ್ದುಲ್ ಹಬೀಬ್ ಇಮಾಮ್ ಸಾಬ್ ಎಂಬ ವ್ಯಕ್ತಿ ಈದ್ ಮಿಲಾದ್ ಸಂದರ್ಭದಲ್ಲಿ ಹೇಳಿಕೆ ನೀಡಿದಾಗ, ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಬೆಳಗಾವಿಗೆ ಅಂದಿನ ಕಾಂಗ್ರೆಸ್ (ಸಿದ್ದರಾಮಯ್ಯ) ಸರಕಾರ ವರ್ಗಾವಣೆ ಮಾಡಿದಾಗ, ಪಾಕಿಸ್ತಾನವನ್ನು ಬೆಂಬಲಿಸುವ ವ್ಯಕ್ತಿಗಳನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಸುರೇಶ್ ಅಂಗಡಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ದೇಶದಲ್ಲಿ ಕೊಲೆ, ದರೋಡೆ ಮಾಡುವ ರಾಜಕೀಯ ಪಕ್ಷ ಇದ್ದರೆ ಅದು ಕಾಂಗ್ರೆಸ್ ಎಂದು ಅವರು ಕೆಂಡ ಕಾರಿದ್ದರು.

ಮೋದಿ ಸಂಪುಟ ಸೇರುವ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಪರಿಚಯ

ಐಐಟಿಗಾಗಿ ಸುರೇಶ್ ಹೋರಾಟ

ಐಐಟಿಗಾಗಿ ಸುರೇಶ್ ಹೋರಾಟ

ಕರ್ನಾಟಕದಲ್ಲಿ (ಧಾರವಾಡ ಅಥವಾ ಬೆಳಗಾವಿ) ಐಐಟಿಯನ್ನು ಸ್ಥಾಪಿಸಬೇಕೆಂಬ ಪ್ರಸ್ತಾವನೆ ಇದ್ದಾಗ ಸುರೇಶ್ ಅಂಗಡಿ ಅವರು ಸಾಕಷ್ಟು ಹೋರಾಟ ಮಾಡಿದ್ದರು. ಅಂದಿನ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಅಂಗಡಿ ಅವರು ಪತ್ರವನ್ನೂ ಬರೆದಿದ್ದರು. ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದ ಸ್ಮೃತಿ ಇರಾನಿ ಅವರು, ಐಐಟಿ ಸ್ಥಾಪಿಸಲು ಉಚಿತವಾಗಿ ಮತ್ತು ಯಾವುದೇ ಕಾನೂನು ತೊಡಕಿಲ್ಲದ, ಪ್ರಶಸ್ತವಾದ ಸ್ಥಳದಲ್ಲಿ, ಎಲ್ಲ ಮೂಲಸೌಕರ್ಯಗಳೂ ಇರುವ 500ರಿಂದ 600 ಎಕರೆ ಜಮೀನು ಬೇಕಾಗುತ್ತದೆ, ಎಂದು ಪ್ರತಿಪತ್ರ ಕಳಿಸಿದ್ದರು. ಕಡೆಗೂ ಬೆಳಗಾವಿಗೆ ಐಐಟಿ ಒಲಿಯಲೇ ಇಲ್ಲ.

English summary
Belgaum (Karnataka) Lok Sabha MP Suresh Angadi profile in Kannada. Suresh Angadi has won Lok Sabha election for the 4th time consecutively from Belagavi, now inducted into Narendra Modi cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more