ಅಮೇರಿಕಾ-ಚೀನಾದಲ್ಲಿ ಟ್ರೆಂಡ್ ಆದ ಎಐ ಸಂಗಾತಿಗಳು; ಒಂಟಿತನ, ಬಯಕೆಗಳಿಗೆ ಇದೇ ಮದ್ದು ಎನ್ನುತ್ತಿದೆ ಯುವಸಮೂಹ
ಅಮೆರಿಕಾ ಮತ್ತು ಚೀನಾದಲ್ಲಿ ಎಐ ಬಾಯ್‌ಫ್ರೆಂಡ್ ಮತ್ತು ಎಐ ಗರ್ಲ್‌ಫ್ರೆಂಡ್ ಟ್ರೆಂಡ್ ಸಾಮಾಜಿಕ ಕಾರಣಗಳಿಂದ ಬೆಳೆಯುತ್ತಿದೆ. ಅಮೆರಿಕಾದ ಯುವಕರ ಏಕಾಂಗಿ ಭಾವನೆಗಳಿಂದ ಹಿಡಿದು ಚೀನಾದ ಮಹಿಳೆಯರ ಮೇಲಿನ ಮದುವೆ ಒತ್ತಡದವರೆಗೆ — ಎಐ ಸಂಗಾತಿಗಳು ಪ್ರಾಮುಖ್ಯತೆ ಪಡೆಯುತ್ತಿವೆ.
ಈಗಿನ ಯುವಜನರಿಗೆ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಇರುವುದು ಸಾಮಾನ್ಯ. ಆದರೆ ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಸಾಗುತ್ತಿರುವ ನಮಗೆ ಎಐ ಬಾಯ್‌ಫ್ರೆಂಡ್/ಗರ್ಲ್‌ಫ್ರೆಂಡ್ ಬಗ್ಗೆ ಎಷ್ಟು ಗೊತ್ತಿದೆ. ಭಾರತದ ಉದ್ಯೋಗ ವಲಯದಲ್ಲಿ ಎಐ ಕ್ರಾಂತಿ ಮಾಡುತ್ತಿರುವುದು ಒಂದೆಡೆಯಾದರೆ, ಉದ್ಯೋಗ ಭೀತಿ ಸೃಷ್ಟಿಸಿರುವುದು ಅಷ್ಟೇ ಸತ್ಯ. ಹೊರ ರಾಷ್ಟ್ರಗಳಲ್ಲಿ ಇದೇ ಎಐಗಳು ಸಂಗಾತಿಗಳಾಗಿ ಯುವಜನರ ಆತಂಕಗಳನ್ನು ದೂರ ಮಾಡುತ್ತಿವೆ ಎಂದರೆ ನಂಬಲೇಬೇಕು. ಅಂಥ ಎಐ ಸಂಗಾತಿಗಳ ಟ್ರೆಂಡ್ ಅಮೇರಿಕಾ ಹಾಗೂ ಚೀನಾಗಳಲ್ಲಿ ಪ್ರಚಲಿತದಲ್ಲಿದೆ. ಆದರೆ ಎರಡೂ ರಾಷ್ಟ್ರಗಳಲ್ಲಿ ಈ ಎಐ ಸಂಗಾತಿಗಳ ಅಗತ್ಯತೆ, ಇದರ ಹುಟ್ಟಿಗೆ ಕಾರಣವಾದ ಅಂಶಗಳು ಮಾತ್ರ ಭಿನ್ನ. ಅವು ಏನೆಲ್ಲ ಎಂಬ ವಿಶ್ಲೇಷಣೆ ಈ ಲೇಖನದಲ್ಲಿದೆ.
ಚೀನಾದಲ್ಲಿ ಎಐ ಬಾಯ್‌ಫ್ರೆಂಡ್, ಅಮೇರಿಕಾದಲ್ಲಿ ಎಐ ಗರ್ಲ್‌ಫ್ರೆಂಡ್ ಸಖತ್ ಸದ್ದು ಮಾಡುತ್ತಿರುವ ತಂತ್ರಜ್ಞಾನಗಳು. ಹಾಗಂತ ಇದರಿಂದ ಎರಡೂ ರಾಷ್ಟ್ರಗಳ ನಡುವೆ ಸಂಬಂಧವೇನೂ ಬೆಸೆಯುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕಾ ಮತ್ತು ಚೀನಾ ಎಂಬ ಎರಡು ಮಹಾ ರಾಷ್ಟ್ರಗಳು ಎಐ ಆಧಾರಿತ ಡಿಜಿಟಲ್ ಸಂಗಾತಿಗಳನ್ನು ಹೇಗೆ ಅಭಿವೃದ್ಧಿಪಡಿಸುತ್ತಿವೆ ಎಂಬುದಕ್ಕೆ ಇದೊಂದು ಸಾಕ್ಷಿಯಷ್ಟೇ.

ಸದಾ ಲಭ್ಯವಿರುವ ಡಿಜಿಟಲ್ ಗೆಳತಿ
ಅಮೆರಿಕಾ ಇಂಟರ್ನೆಟ್ ಜಗತ್ತಿನಲ್ಲಿ "AI ಗರ್ಲ್‌ಫ್ರೆಂಡ್" ಮಾದರಿಯ ಎಐ ಸಂಗಾತಿಗಳು ಹೆಚ್ಚು ಜನಪ್ರಿಯವಾದುದು. ಇವು ಸಾಮಾನ್ಯವಾಗಿ ಪುರುಷ ಬಳಕೆದಾರರನ್ನು ಗುರಿಯಾಗಿರುತ್ತವೆ. ಈ ಡಿಜಿಟಲ್ ಗೆಳತಿಯು ಸದಾ ಲಭ್ಯ ಇರುತ್ತಾಳೆ. ಅವಳು ಕೋಪಗೊಳ್ಳುವುದಿಲ್ಲ, ತಿರಸ್ಕರಿಸುವುದಿಲ್ಲ, ನಿಮ್ಮ ಮಾತಿಗೆ ವಿರುದ್ಧವಾಗಿ ನಿಲ್ಲುವುದಿಲ್ಲ. ಅವಳನ್ನು ನಿಮ್ಮ ಇಷ್ಟಕ್ಕೆ ತಕ್ಕಂತೆ ರೂಪಿಸಬಹುದು. ಅಮೆರಿಕಾದಲ್ಲಿ ಯುವ ಪುರುಷರಲ್ಲಿ ಒಂಟಿತನ ಹೆಚ್ಚಾಗಿದೆ ಎಂದು ಹಲವು ಅಧ್ಯಯನಗಳು ಹೇಳುತ್ತವೆ. ಹೀಗಾಗಿ ಸೋಷಿಯಲ್ ಮೀಡಿಯಾ, ಗೇಮಿಂಗ್, ಆನ್‌ಲೈನ್‌ನಲ್ಲೇ ಮುಳುಗಿರುವ ಅವರಿಗೆ ಈ ಎಐ ಗರ್ಲ್‌ಫ್ರೆಂಡ್ಸ್ ಜೊತೆಯಾಗುತ್ತಿದ್ದಾರೆ. ಇಲ್ಲಿ ನೇರ ಸಂಬಂಧಗಳಲ್ಲಿ ಆತಂಕ, ನಿರಾಕರಣೆಯ ಭಯ, ಬದಲಾಗುತ್ತಿರುವ ಲಿಂಗ ಸಮಾನತೆ ಚರ್ಚೆಗಳು ಇವೆಲ್ಲವೂ ಗೊಂದಲ ಉಂಟು ಮಾಡಿರುವ ಕಾರಣ ಎಐ ಕಡೆಗೆ ಯುವಕರ ಮನಸ್ಸು ವಾಲುತ್ತಿದೆ ಎಂದು ವರದಿಯಾಗಿದೆ.
ಎಐ ಗರ್ಲ್‌ಫ್ರೆಂಡ್ ಏನೆಲ್ಲ ಮಾಡುತ್ತಾಳೆ?
ಈ ಎಐ ಗರ್ಲ್‌ಫ್ರೆಂಡ್ ತಕ್ಷಣದ ಗಮನ, ನಿರಂತರ ಮೆಚ್ಚುಗೆ, ನಿರಾಕರಣೆಯಿಲ್ಲದ "ಪ್ರೇಮ", ನಿಯಂತ್ರಿಸಬಹುದಾದ ಸಂಬಂಧದ ಭಾವನೆ ನೀಡುತ್ತಾಳೆ. ಅಮೆರಿಕಾದಲ್ಲಿ ಮತ್ತು ಇಂಗ್ಲಿಷ್ ಭಾಷಾಭಿಮಾನಿ ಇಂಟರ್‌ನೆಟ್ ವಲಯದಲ್ಲಿ ಜನಪ್ರಿಯ ಎಐ ಸಂಗಾತಿಗಳು ಬಹುತೇಕ ಪುರುಷ ಬಳಕೆದಾರರಿಗೆ ವಿನ್ಯಾಸಗೊಳಿಸಲ್ಪಟ್ಟಿವೆ. ಈ "ಎಐ ಗರ್ಲ್‌ಫ್ರೆಂಡ್" ಎಂದಿಗೂ ಲಭ್ಯವಿರುವವಳು, ಭಾವನಾತ್ಮಕವಾಗಿ ಜೊತೆಗೆ ನಿಲ್ಲುವವಳು, ಅಗತ್ಯವಿದ್ದರೆ-ನೀವು ಬಯಸಿದರೆ ಫ್ಲರ್ಟಿಂಗ್ ಮಾಡುತ್ತಾಳೆ, ಅವಳು ತಿರಸ್ಕರಿಸುವುದಿಲ್ಲ. ತಕರಾರು ಮಾಡುವುದಿಲ್ಲ, ಸಂಬಂಧ ಮುರಿಯುವುದಿಲ್ಲ.

ಪಾಶ್ಚಾತ್ಯ ದೇಶಗಳಲ್ಲಿ ಯುವ ಪುರುಷರು ಹೆಚ್ಚುತ್ತಿರುವ ಏಕಾಂಗಿ ಭಾವನೆ, ಡೇಟಿಂಗ್ ಬಗ್ಗೆ ಆತಂಕ ಮತ್ತು ಬದಲಾಗುತ್ತಿರುವ ಲಿಂಗಸಮಾನತಾ ಸಂಭಾಷಣೆಗಳ ನಡುವೆ ತತ್ತರಿಸುತ್ತಿದ್ದಾರೆ. ಹಲವರು "ನಿಜವಾದ ಸಂಬಂಧಗಳಲ್ಲಿ ತಿರಸ್ಕಾರದ ಭಯ" ಇರುವುದರಿಂದ ಇಂತಹ ಎಐ ಸಂಗಾತಿಯನ್ನು ಆರಿಸುತ್ತಿದ್ದಾರೆ ಎನ್ನಲಾಗಿದೆ. ಅಮೆರಿಕಾದ ಫೆಡರಲ್ ಟ್ರೇಡ್ ಕಮೀಷನ್ (FTC) ಈ ಎಐ ಸಂಗಾತಿ ಅಪ್ಲಿಕೇಶನ್‌ಗಳ ಬಗ್ಗೆ ವಿಚಾರಣೆ ಆರಂಭಿಸಿದಾಗ ಯುವಕರ ಭಾವನಾತ್ಮಕ ಅವಲಂಬನೆ ಮತ್ತು ಅತಿಯಾಗಿ ತಂತ್ರಜ್ಞಾನಕ್ಕೆ ಒಳಗಾಗುವುದು, ಆತಂಕ, ಮಾನಸಿಕ ಮತ್ತು ಸಾಮಾಜಿಕವಾಗಿ ಒಬ್ಬ ವ್ಯಕ್ತಿ ಮತ್ತೊಬ್ಬ ಮಾನವನ ಅಗತ್ಯವಿಲ್ಲದೆ ಬದುಕುವ ಸಾಧ್ಯತೆ ಹೆಚ್ಚಾಗಿ ಕಂಡುಬಂದಿದೆ.
ಚೀನಾದಲ್ಲಿ ಎಐ ಬಾಯ್‌ಫ್ರೆಂಡ್ಸ್ ಟ್ರೆಂಡ್
ಇನ್ನು ಚೀನಾದಲ್ಲಿನ ಚಿತ್ರಣ ಬೇರೆಯೇ ಯಾಗಿದೆ. ಅಲ್ಲಿ ಎಐ ಸಂಗಾತಿ ಬಳಕೆದಾರರಲ್ಲಿ ಪ್ರಮುಖರು ನಗರ ಪ್ರದೇಶದ ವಿದ್ಯಾವಂತ ಮಹಿಳೆಯರೇ ಆಗಿದ್ದಾರೆ. ವಿಶೇಷವಾಗಿ ಇವರೆಲ್ಲ 20ರಿಂದ 30ರ ವಯಸ್ಸಿನವರು. ಇಲ್ಲಿ ಎಐ ಬಾಯ್‌ಫ್ರೆಂಡ್ಸ್ ಭಾವನಾತ್ಮಕವಾಗಿ ಗಮನಹರಿಸುವ, ಕಥಾನಕ ಆಧಾರಿತ, ದೀರ್ಘಾವಧಿಯ ಸಂಭಾಷಣೆಯೊಂದಿಗೆ ವಿನ್ಯಾಸಗೊಂಡಿದ್ದಾರೆ. ಚೀನಾದ ಜನಸಂಖ್ಯಾ ಹಿನ್ನೆಲೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಇಲ್ಲಿ ಕುಸಿಯುತ್ತಿರುವ ಮದುವೆ ಪ್ರಮಾಣ, ಜನನದರ ಇಳಿಕೆ ಮತ್ತು ಲಿಂಗ ಅಸಮತೋಲನಗಳು ಸರ್ಕಾರದ ಕಳವಳದ ವಿಷಯವಾಗಿದೆ. ಈ ಸಂದರ್ಭದಲ್ಲಿ ಎಐ ಆತ್ಮೀಯತೆ ಕೇವಲ ವೈಯಕ್ತಿಕ ಆಯ್ಕೆ ಅಲ್ಲ, ಅದು ಸಾಮಾಜಿಕ-ರಾಜಕೀಯ ಪ್ರಶ್ನೆಯಾಗಿ ಉದ್ಭವಿಸಿದೆ.
ನಗರ ಪ್ರದೇಶದ ಮಹಿಳೆಯರಿಗೆ ಸಂಪ್ರದಾಯಬದ್ಧ ಮದುವೆ ಎಂದರೆ ವೃತ್ತಿ ತ್ಯಾಗ, ಕುಟುಂಬದ ನಿರೀಕ್ಷೆಗಳು, ಮತ್ತು ಪಿತೃ ಪ್ರಧಾನ ವ್ಯವಸ್ಥೆಯ ಒತ್ತಡ ಎಂಬ ಭಾವನೆ ಇದೆ. ಹೀಗಾಗಿ ಎಐ ಬಾಯ್‌ಫ್ರೆಂಡ್ ಇದಕ್ಕೊಂದು ಪರ್ಯಾಯ ಎನ್ನುವಂತೆ ಪ್ರೀತಿ, ಬೆಂಬಲ ಮತ್ತು ಮನಸಾರೆ ಕೇಳುವ ಸಂಗಾತಿಯಾಗುತ್ತಿವೆ. ಇಲ್ಲಿ ಕೂಡ ಎಐ ಬಾಯ್‌ಫ್ರೆಂಡ್ ಎಲ್ಲವನ್ನೂ ಕೇಳುತ್ತಾನೆ, ಮೆಚ್ಚುತ್ತಾನೆ, ಬೆಂಬಲಿಸುತ್ತಾನೆ. "ಮಕ್ಕಳು ಯಾವಾಗ?" ಎಂದು ಕೇಳುವುದಿಲ್ಲ. "ಕೆಲಸ ಬಿಡು" ಎಂದು ಹೇಳುವುದಿಲ್ಲ. ಇದರಿಂದ ಕೆಲ ಮಹಿಳೆಯರಿಗೆ ಇದು ಸುರಕ್ಷಿತ ಭಾವನಾತ್ಮಕ ಸ್ಥಳವಾಗುತ್ತಿದೆ. ಮತ್ತೊಂದೆಡೆ ಈ ರೀತಿಯ ಭಾವನಾತ್ಮಕ ತೃಪ್ತಿಕರ ಎಐ ಸಂಬಂಧಗಳು ಮಹಿಳೆಯರನ್ನು ಮದುವೆಯಿಂದ ಇನ್ನಷ್ಟು ದೂರ ಮಾಡುತ್ತವೆಯೇ? ಎಂಬ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿವೆ.
ಎಐ ಸಂಗಾತಿಗಳು ಏಕಾಂಗಿ ಭಾವನೆ, ಮಹಿಳಾ-ಪುರುಷ ಸಂಘರ್ಷ ಅಥವಾ ಜನಸಂಖ್ಯಾ ಆತಂಕಗಳನ್ನು ಸೃಷ್ಟಿಸಿಲ್ಲ. ಅಮೆರಿಕಾದ ಎಐ ಗರ್ಲ್‌ಫ್ರೆಂಡ್ಸ್-ತಿರಸ್ಕಾರದ ಭಯದಲ್ಲಿರುವ ಯುವ ಪುರುಷರ ಪ್ರತಿಬಿಂಬವಾದರೆ, ಚೀನಾದ ಎಐ ಬಾಯ್‌ಫ್ರೆಂಡ್ಸ್ ಸಾಮಾಜಿಕ ಒತ್ತಡಗಳಿಂದ ಕೂಡಿರುವ ಮಹಿಳೆಯರ ಪ್ರತಿಬಿಂಬ ಎಂದು ಕರೆಯಲಾಗಿದೆ. ಈ ಎರಡಲ್ಲೂ ಕಾಣಬಹುದಾದ ಸಾಮ್ಯತೆ ಎಂದರೆ ಮಾನವ ಸಂಬಂಧಗಳಲ್ಲಿ ಏನೋ ಸಡಿಲವಾಗುತ್ತಿದೆ ಎಂಬ ಭಾವನೆ. ತಂತ್ರಜ್ಞಾನವು ಆ ಖಾಲಿ ಜಾಗವನ್ನು ತುಂಬುತ್ತಿದೆ.
ಇಲ್ಲಿ ಪ್ರಶ್ನೆ ಎಐ ಸುರಕ್ಷಿತವೇ? ಎಂಬುದಲ್ಲ. ಏಕೆ ಇಷ್ಟು ಜನರು ಕೃತಕ ಸಂಗಾತಿಯನ್ನು ನಿಜವಾದ ವ್ಯಕ್ತಿಗಿಂತ ಹೆಚ್ಚು ಆರಾಮದಾಯಕವೆಂದು ಭಾವಿಸುತ್ತಿದ್ದಾರೆ ಎಂಬುದು. ಮಾನವನ ಆತ್ಮೀಯತೆಯ ಮೂಲ ಗುಣಗಳಾದ ತಿರಸ್ಕಾರ, ಅಸಹಜ ಕ್ಷಣಗಳು, ಹೊಂದಾಣಿಕೆಯೇ ಇಲ್ಲಿರುವ ಅಪಾಯ. ಆದರೆ ಎಐ ಈ ಅಪಾಯವನ್ನು ತೆಗೆದುಹಾಕುತ್ತದೆ. ಮುಖ್ಯವಾಗಿ ಎಐ ಯುಗದಲ್ಲಿ ನಿಮ್ಮ ಡಿಜಿಟಲ್ ಸಂಗಾತಿ ಯಾವ ದೇಶದಿಂದ ಬರುತ್ತಾನೆ ಎಂಬುದು ನಿಮ್ಮ ಸಮಾಜದ ಆತಂಕಗಳಿಗೆ ಹಿಡಿದ ಕನ್ನಡಿ.
ಅಮೆರಿಕಾ ತನ್ನ ಒಂಟಿತನವನ್ನು ಎದುರಿಸುತ್ತಿದೆ. ಚೀನಾ ತನ್ನ ಜನಸಂಖ್ಯಾ ಆತಂಕವನ್ನು ಎದುರಿಸುತ್ತಿದೆ. ಎರಡೂ ದೇಶಗಳು ಒಂದೇ ತಂತ್ರಜ್ಞಾನವನ್ನು ಬಳಸುತ್ತಿವೆ. ಆದರೆ ಅವು ನಿರ್ಮಿಸುವ ಪ್ರೇಮ ಕಥೆಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಎಐ ಸಂಗಾತಿಗಳು ಭವಿಷ್ಯದ ಸಂಬಂಧಗಳ ಮುನ್ನೋಟವಾಗಬಹುದು. ಆದರೆ ಅವು ನಮ್ಮ ಸಮಾಜಗಳು ಇನ್ನೂ ಸರಿಪಡಿಸದ ಗಾಯಗಳನ್ನೂ ಬಯಲಿಗೆಳೆಯುತ್ತವೆ. ತಂತ್ರಜ್ಞಾನ ಪ್ರಶ್ನೆಗೆ ಉತ್ತರ ನೀಡಬಹುದು. ಆದರೆ ಆತ್ಮೀಯತೆಯ ಖಾಲಿತನಕ್ಕೆ ಪರಿಹಾರ ಮಾನವ ಸಮಾಜವೇ ಹುಡುಕಬೇಕು.
ರೊಮ್ಯಾಂಟಿಕ್ ಎಐ ಸಂಗಾತಿಗಳಿಗೆ ಬೇಡಿಕೆ
ಇತ್ತೀಚಿನ ಅಧ್ಯಯನವೊಂದರ ಪ್ರಕಾರ ರೊಮ್ಯಾಂಟಿಕ್ ಎಐ ಸಂಗಾತಿಗಳ ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕಾ ಪ್ರಮುಖ ಸ್ಥಾನದಲ್ಲಿದೆ. 110 ಜನಪ್ರಿಯ ಎಐ ಕಂಪ್ಯಾನಿಯನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ 52ರಷ್ಟು ಕಂಪನಿಗಳು ಅಮೆರಿಕಾದಲ್ಲಿ ಪ್ರಧಾನ ಕಚೇರಿ ಹೊಂದಿದ್ದವು. ಇದಕ್ಕೆ ಹೋಲಿಸಿದರೆ ಚೀನಾದ ಪಾಲು ಕೇವಲ ಶೇ 10ರಷ್ಟು ಮಾತ್ರ ಎನ್ನಲಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಅಮೆರಿಕಾದ ಪ್ರಾಬಲ್ಯವನ್ನು ತೋರಿಸುತ್ತದೆ ಎಂದು ಚೀನಾ ಟಾಕ್ ವರದಿ ಮಾಡಿದೆ.

ಈ ಎಐ ಸಂಗಾತಿ ಆಪ್‌ಗಳು ಬಹುತೇಕವಾಗಿ ಪುರುಷರ ಲೈಂಗಿಕ ಕಲ್ಪನೆಗಳನ್ನು ಗುರಿಯಾಗಿಸಿಕೊಂಡಿವೆ. ಇತ್ತೀಚಿನ ಮತ್ತೊಂದು ವರದಿ ಪ್ರಕಾರ, ಸಕ್ರಿಯ ಆಪ್‌ಗಳಲ್ಲಿ ಶೇ 17ರಷ್ಟು ಆಪ್‌ಗಳ ಹೆಸರಿನಲ್ಲಿ ಗರ್ಲ್‌ಫ್ರೆಂಡ್ ಪದ ಇದ್ದರೆ, ಶೇ 4ರಷ್ಟು ಮಾತ್ರವೇ ಬಾಯ್‌ಫ್ರೆಂಡ್ ಎನ್ನುವ ಪದ ಇದೆ. ಡೇಟಿಂಗ್ ಅಥವಾ ರೊಮ್ಯಾಂಟಿಕ್ ಬಾಂಧವ್ಯಕ್ಕಾಗಿ ವಿನ್ಯಾಸಗೊಳಿಸಿದ ಈ ಎಐ ಚಾಟ್‌ಬಾಟ್‌ಗಳು ಜಾಗತಿಕವಾಗಿ ಸುಮಾರು 29 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿವೆ ಎಂದು ಅಂದಾಜಿಸಲಾಗಿದೆ.
ಅಮೆರಿಕಾದ ಎಐ ಸಂಗಾತಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಮೇಲುಗೈ ಸಾಧಿಸಿರುವುದು ತಂತ್ರಜ್ಞಾನ, ವ್ಯವಹಾರ ಮಾದರಿ ಮತ್ತು ಸಾಂಸ್ಕೃತಿಕ ಬೇಡಿಕೆಗೆ ಸಾಕ್ಷಿಯಾಗಿದ್ದು, ಮುಂದಿನ ವರ್ಷಗಳಲ್ಲಿ ಈ ಕ್ಷೇತ್ರ ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಆದರೆ ಅದೇ ಸಮಯದಲ್ಲಿ ಸಮಾಜದ ಮೇಲೆ ಅದರ ಪರಿಣಾಮಗಳ ಬಗ್ಗೆ ಚರ್ಚೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯೂ ಇದೆ.
ಅಮೆರಿಕಾದಲ್ಲಿ "AI ಗರ್ಲ್‌ಫ್ರೆಂಡ್ಸ್" ಜಾಗತಿಕ ಮಾರುಕಟ್ಟೆಯನ್ನು ಆಳುತ್ತಿದ್ದರೆ, ಚೀನಾದಲ್ಲಿ ಚಿತ್ರಣ ಸಂಪೂರ್ಣವಾಗಿ ಭಿನ್ನವಾಗಿದೆ. ಚೀನಾದ ಎಐ ಸಂಗಾತಿ ಮಾರುಕಟ್ಟೆಯಲ್ಲಿ ಅತ್ಯಂತ ಗಮನಾರ್ಹ ಅಂಶವೆಂದರೆ ಲಿಂಗ ಪಾತ್ರಗಳ ಬದಲಾವಣೆ. ಇಲ್ಲಿ ಪ್ರಮುಖವಾಗಿ "AI ಬಾಯ್‌ಫ್ರೆಂಡ್"ಗಳೇ ಜನಪ್ರಿಯ. ಈ ಟ್ರೆಂಡಿಂಗ್ ಉತ್ಪನ್ನಗಳು ಬಹುತೇಕವಾಗಿ ಮಹಿಳಾ ಬಳಕೆದಾರರನ್ನು ಗುರಿಯಾಗಿಸಿಕೊಂಡಿವೆ. ಪ್ರಮುಖ ಪ್ಲಾಟ್‌ಫಾರ್ಮ್‌ಗಳ ಹೋಮ್‌ಪೇಜ್‌ಗಳಲ್ಲಿ ಪುರುಷ ಪಾತ್ರಗಳೇ ಮುಖ್ಯವಾಗಿ ಕಾಣಿಸುತ್ತವೆ. ಮಹಿಳಾ ಪಾತ್ರಗಳು ಹಿಂಬದಿಯಲ್ಲಿರುತ್ತವೆ.
ಇದು ಕೇವಲ ಮಾರ್ಕೆಟಿಂಗ್ ತಂತ್ರವಲ್ಲ, ಬಳಕೆದಾರರ ವಾಸ್ತವಿಕ ಬೇಡಿಕೆಯ ಪ್ರತಿಬಿಂಬ. ಚೀನಾದ ನಗರ ಪ್ರದೇಶಗಳಲ್ಲಿ ವಿಶೇಷವಾಗಿ 20ರಿಂದ 35 ವರ್ಷದೊಳಗಿನ ವಿದ್ಯಾವಂತ ಮಹಿಳೆಯರು ಎಐ ಬಾಯ್‌ಫ್ರೆಂಡ್‌ಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಎಐ ಬಾಯ್‌ಫ್ರೆಂಡ್‌ಗಳ ಜನಪ್ರಿಯತೆ ಚೀನಾದಲ್ಲಿ ತಂತ್ರಜ್ಞಾನ ಬಳಕೆಯ ಹೊಸ ಅಧ್ಯಾಯವನ್ನು ಸೂಚಿಸುತ್ತದೆ. ಇದು ಕೇವಲ ಮನರಂಜನೆ ಅಥವಾ ಒಂಟಿತನ ನಿವಾರಣೆ ಮಾತ್ರವಲ್ಲ. ಇದು ಮಹಿಳೆಯರ ಭಾವನಾತ್ಮಕ ಸ್ವಾಯತ್ತತೆ ಮತ್ತು ಆಯ್ಕೆಗಳ ಸಂಕೇತವೂ ಆಗಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications