ಲೋಕಸಭಾ ಚುನಾವಣೆ ಫಲಿತಾಂಶ ನಂತರ ಮೈತ್ರಿ ಸರಕಾರ ಬೀಳುತ್ತದೆ ಎನ್ನಲು 4 ಕಾರಣ

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರವು ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ಬಿದ್ದುಹೋಗುತ್ತದೆ ಎಂದು ಎಲ್ಲಿ ನೋಡಿದರೂ ಸುದ್ದಿ. ಹೌದಾ? ಈ ಸರಕಾರ ಬಿದ್ದು ಹೋಗುತ್ತದೆ ಎಂದು ಅಷ್ಟು ಖಾತ್ರಿಯಾಗಿ ಹಾಗೂ ಇಷ್ಟೊಂದು ಸಲ ಹೇಳುತ್ತಿರುವುದಕ್ಕೆ ಕಾರಣ ಏನು? ಅವುಗಳನ್ನು ಎಳೆ ಎಳೆಯಾಗಿ ತೆರೆದಿಡ ಬೇಕಾಗುತ್ತದೆ.

ಕಾಂಗ್ರೆಸ್ ನಿಂದ ರಾಜ್ಯದ ಅಧ್ಯಕ್ಷರು ದಿನೇಶ್ ಗುಂಡೂರಾವ್, ಸಮನ್ವಯ ಸಮಿತಿ ಹಾಗೂ ಶಾಸಕಾಂಗ ಪಕ್ಷದ ಅಧ್ಯಕ್ಷರು ಸಿದ್ದರಾಮಯ್ಯ. ಉಪ ಮುಖ್ಯಮಂತ್ರಿ ಆಗಿರುವವರು ಡಾ.ಜಿ.ಪರಮೇಶ್ವರ. ಇನ್ನು ಸರಕಾರದಲ್ಲಿ ಪ್ರಭಾವಿಯಾಗಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿಯೂ ಆಪ್ತರಾಗಿ- ಜಾತಿ ಬಾಂಧವರಾಗಿ ಮಿಂಚುತ್ತಿರುವವರು ಡಿ.ಕೆ.ಶಿವಕುಮಾರ್.

ಜೆಡಿಎಸ್ ನಲ್ಲಿ ಒಂದೇ ವಾಕ್ಯ: ದೇವೇಗೌಡರ ಕುಟುಂಬದ ಎಲ್ಲರೂ ಈ ಸರಕಾರದಲ್ಲಿ ಪ್ರಭಾವಿಗಳು. ಈ ಪೈಕಿ ಎಚ್.ಡಿ.ರೇವಣ್ಣ ಅವರನ್ನು ಸೂಪರ್ ಸಿಎಂ ಎಂದು ಕರೆಯುವುದು ಅದೇ ಕಾರಣಕ್ಕೆ. ಅವರು ಎಲ್ಲ ಇಲಾಖೆಗಳಲ್ಲೂ ಹಸ್ತ ಕ್ಷೇಪ ಮಾಡುತ್ತಾರೆ ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಆಕ್ಷೇಪ. ಇವೆಲ್ಲ ಟ್ರೇಲರ್ ಆಯಿತು, ಈ ಸರಕಾರ ಬೀಳುತ್ತದೆ ಅನ್ನೋದಕ್ಕೆ ಕಾರಣ ಏನು ಅಂತೀರಾ?

ವಿಪರೀತ ಅಧಿಕಾರ ಕೇಂದ್ರಗಳಿವೆ

ವಿಪರೀತ ಅಧಿಕಾರ ಕೇಂದ್ರಗಳಿವೆ

ಈ ಮೈತ್ರಿ ಸರಕಾರದಲ್ಲಿ ವಿಪರೀತ ಅಧಿಕಾರ ಕೇಂದ್ರಗಳಿವೆ. ಎಚ್.ಡಿ.ಕುಮಾರಸ್ವಾಮಿ, ರೇವಣ್ಣ, ದೇವೇಗೌಡರು, ಸಿದ್ದರಾಮಯ್ಯ, ಶಿವಕುಮಾರ್, ಪರಮೇಶ್ವರ್... ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಎಲ್ಲಿ ಕೈ ಇಟ್ಟರೂ ಅಲ್ಲಿಗೆ ಮತ್ತೊಂದು ಬಣದ, ಗುಂಪಿನವರ ಗುರುತು ಬಿದ್ದುಹೋಗುತ್ತದೆ. ತಮ್ಮ ಕೆಲಸ ಆಗುತ್ತಿಲ್ಲ ಎಂಬ ಆರೋಪ ಸಹಜವಾಗಿ ಕೇಳಿಬರುತ್ತದೆ. ಕೆಲವು ಸಲ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಅದರಲ್ಲಿ ಯಾರು ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ? ಯಾರಿಗೆ ಹೆಚ್ಚು ಧ್ವನಿ ಎತ್ತರಿಸಿ, ಜಬರಿಸಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಆಗುವುದಿಲ್ಲವೋ ಅಂಥ ಗುಂಪಿನ ಕೆಲಸಗಳು ಆಗುವುದಿಲ್ಲ. ಇನ್ನು ಇದೇನೇ ಮೈತ್ರಿ ಸರಕಾರ ಅಂದರೂ ಜೆಡಿಎಸ್ ನ ಶಕ್ತಿ ತುಸು ಹೆಚ್ಚಾಗಿಯೇ ಇರುತ್ತದೆ. ಆ ಕಾರಣಕ್ಕೆ ಕಾಂಗ್ರೆಸ್ ನವರಿಗಿಂತ ಜೆಡಿಎಸ್ ನವರ ಕೆಲಸಗಳೇ ಹೆಚ್ಚಿನ ಪಕ್ಷ ಆಗುತ್ತಿರುತ್ತವೆ. ಈಗ ಕಾಂಗ್ರೆಸ್ ಶಾಸಕರಲ್ಲಿ ಧುಮ್ಮಿಕ್ಕುತ್ತಿರುವ ಮೊದಲ ಅಸಮಾಧಾನ ಇದು: 'ನಮ್ಮ ಕೆಲಸಗಳು ಆಗುತ್ತಿಲ್ಲ'. ಹೀಗಾದರೆ ಜೆಡಿಎಸ್ ನಮ್ಮನ್ನು ನುಂಗಿ ಹಾಕಿಬಿಡುತ್ತದೆ. ಅದೇ ಜೆಡಿಎಸ್ ಶಾಸಕರನ್ನು ಕೇಳಿ: ನಮಗೆ ಕಾಂಗ್ರೆಸ್ ನವರು ಅಡ್ಡಗಾಲಾಗಿದ್ದಾರೆ. ಎಲ್ಲಿ ಸಾಧ್ಯವೋ ಅಲ್ಲೆಲ್ಲ ಹಿಂಸೆ ಕೊಡ್ತಾರೆ ಅಂತಾರೆ. ಒಟ್ಟಿನಲ್ಲಿ ಎರಡೂ ಪಕ್ಷದವರಿಗೆ ಸಮಾಧಾನ ಇಲ್ಲ.

ಸರಕಾರ ಯಶಸ್ವಿಯಾದರೆ ಕೀರ್ತಿ ಯಾರಿಗೆ?

ಸರಕಾರ ಯಶಸ್ವಿಯಾದರೆ ಕೀರ್ತಿ ಯಾರಿಗೆ?

ಸರಕಾರದ ಯಶಸ್ಸಿನ ಪಾಲು ಯಾರಿಗೆ ಸೇರಬೇಕು ಅನ್ನೋದು ಅತಿ ದೊಡ್ಡ ಪ್ರಶ್ನೆ. ಕುಮಾರಸ್ವಾಮಿ ಅವರು ಈ ಹಿಂದೆ ಬಿಜೆಪಿ ಜತೆಗೆ ಸೇರಿ ಮೈತ್ರಿ ಸರಕಾರ ರಚನೆ ಮಾಡಿದ್ದರಲ್ಲಾ, ಆ ವೇಳೆ ಅವರು ಮುಖ್ಯಮಂತ್ರಿ ಆಗಿ ಅತ್ಯುತ್ತಮವಾದ ಕೆಲಸ ಮಾಡಿದ್ದಾಗಿ ಹೇಳಿಕೊಳ್ಳುತ್ತಾರೆ. ಆ ಕೆಲಸಗಳ ಕ್ರೆಡಿಟ್ ಪೂರ್ತಿಯಾಗಿ ಜೆಡಿಎಸ್ ನ ಬುಟ್ಟಿಯೊಳಗೇ ಹಾಕಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಸರಕಾರದಲ್ಲಿ ಭಾಗೀದಾರ ಪಕ್ಷವಾಗಿದ್ದ ಬಿಜೆಪಿಗೂ ಆ ಶ್ರೇಯಸ್ಸಿನ ಪಾಲು ಸಿಗಬೇಕಲ್ಲವೆ? ಈಗ ಕೂಡ ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದರೆ ಅದರಲ್ಲಿ ಕಾಂಗ್ರೆಸ್ ಗೆ ಸಹ ಕ್ರೆಡಿಟ್ ಕೊಡುತ್ತಾರಾ? ಮುಂದಿನ ಚುನಾವಣೆಗಳಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಅಖಾಡಕ್ಕೆ ಇಳಿದರೆ ಈಗಿನ ಸರಕಾರದ ಸಾಧನೆಯ ಪಾಲು ಯಾರಿಗೆ ಸಲ್ಲಿಕೆ ಆಗಬೇಕು ಎಂದು ನಿರ್ಧರಿಸುವುದು ಹೇಗೆ? ಮುಖ್ಯಮಂತ್ರಿಗಳು, ನಮ್ಮ ಸರಕಾರದಿಂದ ಇಂಥಿಂಥ ಯೋಜನೆಗಳೆಲ್ಲ ಜಾರಿಗೆ ಬಂದವು. ಸಾಧನೆಗಳಾದವು ಅಂತ ಮಾಧ್ಯಮಗಳಲ್ಲಿ ಜಾಹೀರಾತು ನೀಡುವಾಗ ಕೂಡ ಇಷ್ಟುದ್ದ-ಅಷ್ಟಗಲದ ಫೋಟೋಗಳು, ವಿಡಿಯೋಗಳು ಬರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರದೇ ವಿನಾ, ಕಾಂಗ್ರೆಸ್ಸಿಗರದಲ್ಲ. ಅದೇ ವೇಳೆ ಲೆಕ್ಕಾಚಾರ ಉಲ್ಟಾ ಆಗಿ ಕೆಟ್ಟ ಹೆಸರು ಬಂದರೆ ಬಹುಪಾಲು ಹೊಡೆತ ಜೆಡಿಎಸ್ ಗೇ ಬೀಳುತ್ತದೆ. ಆದರೆ ಚಿಂತೆ ಯಾರಿಗೆ ಹೆಸರು ಸೇರಬೇಕು ಎಂಬ ಬಗ್ಗೆಯೇ.

ಕಾರ್ಯಕರ್ತರು ರಾಜೀ ಮಾಡಿಕೊಳ್ಳುತ್ತಿಲ್ಲ

ಕಾರ್ಯಕರ್ತರು ರಾಜೀ ಮಾಡಿಕೊಳ್ಳುತ್ತಿಲ್ಲ

ಬಹುತೇಕ ಕಡೆ ಕಾರ್ಯಕರ್ತರನ್ನು ಸ್ವತಃ ಆಯಾ ಪಕ್ಷಗಳ ನಾಯಕರು ಸಮಾಧಾನ ಮಾಡಿರುವುದು ಹೇಗೆಂದರೆ, ಇವೆಲ್ಲ ಲೋಕಸಭಾ ಚುನಾವಣೆ ಮುಗಿಯುವ ತನಕ ಮಾತ್ರ. ಆ ಮೇಲೆ ಇದು ಉಳಿಯುವ ಸರಕಾರ ಅಲ್ಲ ಎಂದು ತಾವಾಗಿಯೇ ಹೇಳಿದ್ದಾರೆ. ಅಷ್ಟರಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾದರೆ ಅಲ್ಲೆಲ್ಲ ಮೈತ್ರಿ ಮಾತಿಲ್ಲ. ಅದು ಯಾವ ಕಾರಣಕ್ಕೆ ಲೋಕಸಭಾ ಚುನಾವಣೆ ಎಂಬ ಡೆಡ್ ಲೈನ್ ಹೇಳಿದ್ದರೆಂದರೆ, ಒಂದು ವರ್ಷ ಸಮಯ ಇದೆ. ಅಷ್ಟರಲ್ಲಿ ಹೊಂದಾಣಿಕೆ ಮೂಡಿದರೆ ಸಮಸ್ಯೆ ಆಗುವುದಿಲ್ಲ. ಈ ಮೈತ್ರಿ ಹೀಗೇ ಮುಂದುವರಿಸಿದರೆ ಬಿಜೆಪಿಯವರನ್ನು ಅಧಿಕಾರದಿಂದ ದೂರ ಇಟ್ಟ ಹಾಗೇ. ಏಕೆಂದರೆ ಕಾಂಗ್ರೆಸ್- ಜೆಡಿಎಸ್ ಒಟ್ಟಾಗಿ ಹೋದರೆ ಬಹುತೇಕ ಕಡೆ ಸ್ಥಳೀಯವಾಗಿ ಅಧಿಕಾರ ಹಿಡಿಯುವುದು ಸಲೀಸು. ಅದು ಈಗಾಗಲೇ ಸಾಬೀತಾಗಿದೆ. ಅದನ್ನು ಒಪ್ಪಿಸಲು ಸಾಧ್ಯವಾಗಿ ಬಿಟ್ಟರೆ ಅಲ್ಲಿಗೆ ಎಲವೂ ಸರಿಹೋಗುತ್ತದೆ ಎಂಬುದು ಲೆಕ್ಕಾಚಾರ ಆಗಿತ್ತು. ಆದರೆ ಒಂದು ವರ್ಷಕ್ಕೆ ಸಮೀಪ ಬಂದರೂ ಎರಡೂ ಪಕ್ಷಗಳ ಮಧ್ಯೆ ಸಾಮೀಪ್ಯ ಮೂಡಲೇ ಇಲ್ಲ. ಸ್ಥಳೀಯವಾಗಿ ಪ್ರತಿಷ್ಠೆ ವಿಷಯವಾಗಿರುವ ಪಕ್ಷವನ್ನು ಕಾರ್ಯಕರ್ತರು ಅಷ್ಟು ಸುಲಭಕ್ಕೆ ರಾಜೀ ಮಾಡಿಕೊಳ್ಳುವುದಿಲ್ಲ ಎನ್ನುವುದು ಅರಿವಾಗ ತೊಡಗಿದೆ. ಮಂಡ್ಯ, ಹಾಸನ, ತುಮಕೂರು, ಬೆಂಗಳೂರು ಉತ್ತರ ಹೀಗೆ ಬಹಳಷ್ಟು ಕಡೆ ಅಂಥ ಅನುಭವ ಆಗಿದೆ.

ಎರಡೂ ಪಕ್ಷದಲ್ಲೂ ದೋಸ್ತಿ ಬೇಡ ಅನ್ನೋರಿದ್ದಾರೆ

ಎರಡೂ ಪಕ್ಷದಲ್ಲೂ ದೋಸ್ತಿ ಬೇಡ ಅನ್ನೋರಿದ್ದಾರೆ

ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದನ್ನು ಬಿಟ್ಟರೆ ಮತ್ತೊಂದು ಎಂಬಂತೆ ಇದ್ದವು. ಉದಾಹರಣೆಗೆ ಜೆಡಿಎಸ್ ತೊರೆದ ಚೆಲುವರಾಯಸ್ವಾಮಿ ಅಂಡ ಅದರ್ಸ್ ಹೋಗಿದ್ದು ಸೀದಾ ಕಾಂಗ್ರೆಸ್ ಗೆ. ಇನ್ನು ಸಿದ್ದರಾಮಯ್ಯ ಅವರದು ಸಹ ಮೂಲ ಜೆಡಿಎಸ್. ಅಲ್ಲಿ ಅವರು ಅನುಭವಿಸಿದ ಅವಮಾನ. ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲು. ಎಚ್ ಡಿಕೆ- ದೇವೇಗೌಡರು ಕೊಟ್ಟ ಏಟುಗಳನ್ನೆಲ್ಲ ಮರೆತು, ಸರಕಾರ ಉಳಿಸಿಕೊಂಡು ಹೋಗಬೇಕು ಅಂದರೆ ಸಾಧ್ಯವಾ? ಜೆಡಿಎಸ್ ನಲ್ಲೇನೂ ಅಸಮಾಧಾನಿತರ ಸಂಖ್ಯೆ ಕಡಿಮೆ ಇಲ್ಲ. ಜಿ.ಟಿ.ದೇವೇಗೌಡರು, ಎಚ್.ವಿಶ್ವನಾಥ್ ಸೇರಿ ಹಲವರಿಗೆ ಕಾಂಗ್ರೆಸ್ ಮೇಲೆ ಇನ್ನೊಂದು ಜನ್ಮಕ್ಕಾಗುವಷ್ಟು ಸಿಟ್ಟಿದೆ. ಆದರೆ ತಾವಾಗಿಯೇ 'ತಾಳಿ' ಹರಿದುಕೊಂಡು ಬರುವುದು ಎರಡೂ ಪಕ್ಷದವರಿಗೆ ಇಷ್ಟವಿಲ್ಲ. ಮುಖ್ಯವಾಗಿ ಮೇಲ್ಮಟ್ಟದಲ್ಲಿ ಇರುವ ವರಿಷ್ಠ ನಾಯಕರಿಗೆ ಜನರ ಕಣ್ಣೆದುರು ತಾವು ಕೆಟ್ಟವರು ಎನಿಸಿಕೊಳ್ಳುವುದು ಬೇಡ. ಜೆಡಿಎಸ್ ಹಾಗೂ ಕಾಂಗ್ರೆಸ್ ಬಗ್ಗೆ ದ್ವೇಷ ಇರುವ, ಆ ಪಕ್ಷದಿಂದ ಈ ಪಕ್ಷಕ್ಕೆ ಬಂದಿರುವ ನಾಯಕರಿಗೆ ಈ ದೋಸ್ತಿ ಕಡಿದುಕೊಂಡು ಆಚೆಗೆ ಬರುವುದು ಸ್ವಾಭಿಮಾನದ ವಿಷಯ. ಲೋಕಸಭೆ ಚುನಾವಣೆ ಆದ ಮೇಲೆ ಎದುರಿಸಬೇಕಾದ ದೊಡ್ಡ ಯುದ್ಧ ಯಾವುದು? ಆಮೇಲೆ ತಾವು ಜಾತ್ಯತೀತರು ಎಂದು ಸಾರಿ ಹೇಳುವ ಮತ್ತೊಂದು ಸಂದರ್ಭ ಯಾವುದು? ಆದ್ದರಿಂದ ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಎಲ್ಲರೂ ಎದುರು ನೋಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+