Fact Check: ಭಾರತಕ್ಕೆ ಬೆದರಿಕೆ ಹಾಕಿದರಾ ತಾಲಿಬಾನ್ ಉಗ್ರರು!?
ನವದೆಹಲಿ, ಆಗಸ್ಟ್ 19: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆಯು ಹಿಡಿತ ಸಾಧಿಸಿದ ನಂತರ ಅಂತರ್ಗತ ಭೀತಿ ಹೆಚ್ಚಾಗಿದೆ. ಷರಿಯಾ ಕಾನೂನುಗಳ ಅಡಿಯಲ್ಲಿ ತಾಲಿಬಾನಿಗಳ ಆಡಳಿತವನ್ನು ಸಹಿಸಿಕೊಂಡು ಇರಲಾಗದೇ ಸ್ವದೇಶಿಗಳೇ ದೇಶ ತೊರೆದು ಹೋಗಲು ಹಾತೊರೆಯುತ್ತಿದ್ದಾರೆ. ಇದರ ಮಧ್ಯೆ ತಾಲಿಬಾನ್ ಉಗ್ರರು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ವಿಡಿಯೋ ಸಖತ್ ಸುದ್ದಿಯಾಗಿದೆ.
ಕಾಶ್ಮೀರ ವಿಚಾರದಲ್ಲಿ ಭಾರತ ಸರ್ಕಾರಕ್ಕೆ ತಾಲಿಬಾನ್ ಉಗ್ರರು ಎಚ್ಚರಿಕೆ ನೀಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಫ್ಘಾನಿಸ್ತಾನದ ನಂತರ ತಾಲಿಬಾನಿಗಳ ಮುಂದಿನ ಟಾರ್ಗೆಟ್ ಕಾಶ್ಮೀರ ಎಂದು ಹೇಳಿರುವ ಬಗ್ಗೆ ವಿಡಿಯೋದಲ್ಲಿ ಉಲ್ಲೇಖವಿದೆ.
ಭಾರತಕ್ಕೆ ಬೆದರಿಕೆ ಹಾಕುವ ಮಟ್ಟಿಗೆ ನಿಜವಾಗಿಯೂ ತಾಲಿಬಾನ್ ಉಗ್ರರು ವಿಡಿಯೋ ಸಂದೇಶವನ್ನು ನೀಡಿದ್ದಾರೆಯೇ ಎಂಬುದನ್ನು ಪರಾಮರ್ಶಿಸಿ ನೋಡಿದಾಗ ಅದೊಂದು ನಕಲಿ ಸುದ್ದಿ ಎನ್ನುವುದು ಗೊತ್ತಾಗಿದೆ. "ಇಂಡಿಯಾ ಟುಡೇ ಆಂಟಿ-ಫೇಕ್ ನ್ಯೂಸ್ ವಾರ್ ರೂಮ್" ನಕಲಿ ವಿಡಿಯೋ ಸಹಿತ ಸುದ್ದಿಯ ನಿಜ ಬಣ್ಣವನ್ನು ಬಯಲು ಮಾಡಿದೆ. ಈ ಕುರಿತು ಒನ್ ಇಂಡಿಯಾ ಸತ್ಯಶೋಧನೆ ವರದಿಯಲ್ಲಿ ತಿಳಿದುಕೊಳ್ಳೋಣ.

ಭಾರತಕ್ಕೆ ನಿಜವಾಗಿ ಬೆದರಿಕೆ ಹಾಕಿದರಾ ತಾಲಿಬಾನಿಗಳು?
ಫೇಸ್‌ಬುಕ್ ಹಲವು ಬಳಕೆದಾರರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ತಾಲಿಬಾನ್ ಕಮಾಂಡರ್ ಮುಜಾಹಿದ್ದೀನ್ ಪರವಾಗಿ ನರೇಂದ್ರ ಮೋದಿ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ. "ಒಂದು ವೇಳೆ ಮೋದಿ ಸರ್ಕಾರವು ಒಬ್ಬ ಮುಜಾಹಿದ್ದೀನ್ ಸದಸ್ಯನನ್ನು ಕೊಂದರೆ, ಮೋದಿ ಸರ್ಕಾರದ ವಿರುದ್ಧ 100 ಮುಜಾಹಿದ್ದೀನ್ ಸದಸ್ಯರು ಸೇಡು ತೀರಿಸಿಕೊಳ್ಳುತ್ತಾರೆ," ಎಂದು ವ್ಯಕ್ತಿ ಹೇಳಿದ್ದಾನೆ. ಈ ವೀಡಿಯೋ ಜೊತೆಗೆ "ಭಾರತ ನೀವು ಸಿದ್ಧರಾಗಿ: ಭಾರತವೇ ತಾಲಿಬಾನ್ ಮುಂದಿನ ಗುರಿ ಎಂದು ತಾಲಿಬಾನ್ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ" ಎಂಬ ಫೇಸ್‌ಬುಕ್ ಶೀರ್ಷಿಕೆಯನ್ನು ಹಾಕಲಾಗಿತ್ತು.
ಇಂಡಿಯಾ ಟುಡೇ ಸತ್ಯಶೋಧನೆ ವರದಿ ಹೇಳುವುದೇನು?
"ಇಂಡಿಯಾ ಟುಡೇ ಆಂಟಿ-ಫೇಕ್ ನ್ಯೂಸ್ ವಾರ್ ರೂಮ್" ನಡೆಸಿದ ಸತ್ಯಶೋಧನಾ ವರದಿಯಲ್ಲಿ ತಾಲಿಬಾನಿಗಳು ಬೆದರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿರುವ ಈ ವಿಡಿಯೋ ಎರಡು ವರ್ಷ ಹಳೆಯದ್ದಾಗಿದೆ. ಅಲ್ಲದೇ ಪ್ರಸ್ತುತ ತಾಲಿಬಾನ್ ಉಗ್ರ ಸಂಘಟನೆಯು ಭಾರತಕ್ಕೆ ಯಾವುದೇ ರೀತಿ ಬೆದರಿಕೆಯೊಡ್ಡಿಲ್ಲ ಎಂಬುದು ಸ್ಪಷ್ಟವಾಗಿದೆ. ವೈರಲ್ ಆಗಿರುವ ವಿಡಿಯೋವನ್ನು ಇಲ್ಲಿ ಪೋಸ್ಟ್ ಮಾಡಲಾಗಿದೆ ಒಮ್ಮೆ ನೋಡಿ.
ಪಾಕ್ ಬಳಕೆದಾರರಿಂದ ವಿಡಿಯೋ ಅಪ್ ಲೋಡ್
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದ ಮೂಲ ಹುಡುಕಿ ಹೊರಟಾಗ ಅದು ಎರಡು ವರ್ಷಗಳ ಹಿಂದೆ ಪೋಸ್ಟ್ ಆಗಿರುವುದು ಎಂದು ಗೊತ್ತಾಗಿದೆ. ಪಾಕಿಸ್ತಾನದ ಫೇಸ್‌ಬುಕ್ ಬಳಕೆದಾರರು ಮತ್ತು ಭಾರತೀಯ ವಿರೋಧಿ ಆಶಯವನ್ನು ಇಟ್ಟುಕೊಂಡವರು 2019ರ ಫೆಬ್ರವರಿ ತಿಂಗಳಿನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದರು. ಇದೇ ಅವಧಿಯಲ್ಲೇ ಅದೇ ವಿಡಿಯೋವನ್ನು ಕೆಲವರು ಯುಟ್ಯೂಬ್ ನಲ್ಲಿ ಉರ್ದುವಿನಲ್ಲಿ ಭಾಷಾಂತರಿಸಿದ ಶೀರ್ಷಿಕೆಯಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ "ಪಾಕಿಸ್ತಾನದ ಮೇಲೆ ದಾಳಿಯ ಧೈರ್ಯವನ್ನು ತೋರಿದರೆ ಭಾರತದ ಮೇಲೆ ಅಫ್ಘಾನ್ ತಾಲಿಬಾನಿಗಳು ಸುಮ್ಮನಿರುವುದಿಲ್ಲ ಎಂದು ಬಹಿರಂಗ ಸವಾಲು ಹಾಕಿದೆ," ಎಂಬ ಶೀರ್ಷಿಕೆಯನ್ನು ಹಾಕಲಾಗಿತ್ತು.

ಅಫ್ಘಾನಿಸ್ತಾನದಿಂದ ಯುಎಸ್ ಸೇನೆ ತೆಗೆಯುವ ಬಗ್ಗೆ ಉಲ್ಲೇಖ
ಈ ಹಿಂದೆ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಆಡಳಿತವನ್ನು ಅಫ್ಘಾನಿಸ್ತಾನದಿಂದ ಹೊರಗಟ್ಟುವುದಕ್ಕೆ ಸಂಬಂಧಿಸಿದಂತೆ ಯೋಜಿಸುತ್ತಿದ್ದ ಸಮಯದಲ್ಲಿ ಈ ವಿಡಿಯೋ ಮಾಡಲಾಗಿದೆ. ಪ್ರಸ್ತುತ ವೈರಲ್ ಕ್ಲಿಪ್‌ನಲ್ಲಿ ಮಾತನಾಡುವ ವ್ಯಕ್ತಿ ಯುಎಸ್ ಹೊರಗೆ ಕಳುಹಿಸುವ ಬಗ್ಗೆ ಕೂಡ ಸಹ ಉಲ್ಲೇಖಿಸಿದ್ದಾನೆ. ಆದರೆ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿಗಳು ವ್ಯಾಪಕವಾಗಿ ಪ್ರಕಟವಾಗದ ಕಾರಣ ನಾವು ವೀಡಿಯೊದಲ್ಲಿರುವ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಈ ವಿಡಿಯೋ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Recommended Video

ಪ್ರಸ್ತುತ ಯಾವುದೇ ರಾಷ್ಟ್ರಗಳಿಗೂ ಬೆದರಿಕೆ ಹಾಕಿಲ್ಲ ತಾಲಿಬಾನ್
"ಅಫ್ಘಾನಿಸ್ತಾನ ವಿಮೋಚನೆ ಆಗಿರುವ ಈ ಸಂದರ್ಭದಲ್ಲಿ ತಾಲಿಬಾನ್ ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವುದಕ್ಕೆ ಬಯಸುವುದಿಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. ಅದರ ಜೊತೆ ಕಾಬೂಲ್‌ನಲ್ಲಿ ಇರುವ ವಿದೇಶಿ ದೂತವಾಸ ಕಚೇರಿಗಳು, ರಾಯಭಾರಿ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಭದ್ರತೆ ಮತ್ತು ಸುರಕ್ಷತೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ದೇಶದ ಉಳಿದ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಕಾಬೂಲ್‌ನಲ್ಲಿ ಅಸ್ತಿತ್ವ ಸ್ಥಾಪಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ದುರದೃಷ್ಟವಶಾತ್, ಈ ಹಿಂದಿನ ಸರ್ಕಾರವು ಅಸಮರ್ಥವಾಗಿತ್ತು. ಅವರಿಗೆ ಭದ್ರತೆ ನೀಡಲು ಸಾಧ್ಯವಾಗಲಿಲ್ಲ. ನಾವು ಈಗ ಎಲ್ಲಾ ವಿದೇಶಿ ಸಂಸ್ಥೆಗಳಿಗೆ ಭದ್ರತೆ ಒದಗಿಸುತ್ತೇವೆ. ನಾವು ಅಫ್ಘಾನಿಸ್ತಾನದ ಒಳಗೆ ಅಥವಾ ಹೊರಗೆ ಯಾವುದೇ ಶತ್ರುಗಳನ್ನು ಹುಡುಕುವುದಿಲ್ಲ," ಎಂದಿದ್ದಾರೆ.
ಭಾರತ ಪಾಕಿಸ್ತಾನ ನಡುವಿನ ಸಂಬಂಧ ಸೇರಿದಂತೆ ಬೇರೆ ಯಾವುದೇ ರಾಷ್ಟ್ರಗಳ ವಿಚಾರದಲ್ಲೂ ತಾಲಿಬಾನ್ ಮೂಗು ತೂರಿಸುವುದಕ್ಕೆ ಬಯಸುವುದಿಲ್ಲ ಎಂದು ತಾಲಿಬಾನ್ ವಕ್ತಾರ ಮೊಹಮ್ಮದ್ ಸುಹೈನ್ ಶಾಹೀದ್ ಹೇಳಿದ್ದಾರೆ.

Fact Check
ಕ್ಲೇಮು
ಕಾಶ್ಮೀರದ ಕುರಿತು ತಾಲಿಬಾನ್ ಭಾರತಕ್ಕೆ ಎಚ್ಚರಿಕೆ ನೀಡಿದೆ. ಅವರ ಮುಂದಿನ ಗುರಿ ಭಾರತ ಮತ್ತು ಕಾಶ್ಮೀರ. ಮೋದಿ ಸರ್ಕಾರ ಒಬ್ಬ ಮುಜಾಹಿದ್ದೀನ್ ನನ್ನು ಕೊಂದರೆ ನೂರು ಮುಜಾಹಿದ್ದೀನ್ ಸೇಡು ತೀರಿಸಿಕೊಳ್ಳುವುದಾಗಿ ಅವರು ಬೆದರಿಕೆ ಹಾಕಿದ್ದಾರೆ.
ಪರಿಸಮಾಪ್ತಿ
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದ ಮೂಲ ಹುಡುಕಿ ಹೊರಟಾಗ ಅದು ಎರಡು ವರ್ಷಗಳ ಹಿಂದೆ ಪೋಸ್ಟ್ ಆಗಿರುವುದು ಎಂದು ಗೊತ್ತಾಗಿದೆ.












Click it and Unblock the Notifications