Yash: ಅಭಿಮಾನಿಗಳನ್ನು ತಳ್ಳಿದ ಬಾಡಿಗಾರ್ಡ್‌ಗೆ ಯಶ್ ಮಾಡಿದ್ದೇನು?
ನಟ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್‌ಗೆ ಆರಂಭಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಶೂಟಿಂಗ್ ಆರಂಭಕ್ಕೆ ಮುನ್ನ ಯಶ್, ರಾಧಿಕಾ ಧರ್ಮಸ್ಥಳದ ಮಂಜುನಾಥ ದೇವಸ್ಥಾನ ಮತ್ತು ಉಜಿರೆಯ ಸಮೀಪ ಇರುವ ಸೂರ್ಯ ನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದಲ್ಲಿ ಅಭಿಮಾನಿಗಳು ಯಶ್‌ರನ್ನು ನೋಡಲು ಮುಗಿಬಿದ್ದರು, ಈ ಸಂದರ್ಭದಲ್ಲಿ ಯಶ್ ಬಾಡಿಗಾರ್ಡ್ ಅಭಿಮಾನಿಗಳನ್ನು ನೂಕಿದ್ದು, ಯಶ್ ಕೋಪಕ್ಕೆ ಕಾರಣವಾಗಿದೆ.
ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ನೂರಾರು ಅಭಿಮಾನಿಗಳು ಯಶ್‌ರನ್ನು ನೋಡಲು, ಜೊತೆಯಲ್ಲಿ ಫೋಟೊ ತೆಗೆಸಿಕೊಳ್ಳಲು ಮುಂದಾದರು. ಯಶ್ ಬಳಿ ಬರುತ್ತಿದ್ದ ಅಭಿಮಾನಿಗಳನ್ನು ಅವರ ಬಾಡಿಗಾರ್ಡ್ ದೂರ ತಳ್ಳಿದರು. ಕೂಡಲೇ ಕೋಪಗೊಂಡ ಯಶ್, ಆ ರೀತಿ ಮಾಡದಂತೆ ಬಾಡಿಗಾರ್ಡ್‌ಗೆ ಹೇಳಿದರು.

ಯಶ್ ಅಭಿಮಾನಿಗಳ ಜೊತೆ ನಡೆದುಕೊಳ್ಳುವ ರೀತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಂತಹದ್ದೇ ಸಂದರ್ಭದಲ್ಲೂ ಯಶ್ ಅಭಿಮಾನಿಗಳ ಜೊತೆ ಶಾಂತವಾಗಿ ವರ್ತಿಸುತ್ತಾರೆ. ಅವರ ಜೊತೆ ಫೋಟೊ ತೆಗೆಸಿಕೊಳ್ಳುವುದು, ಮಾತನಾಡುವುದನ್ನು ಮಾಡುತ್ತಾರೆ. ಅದಕ್ಕೆ ಅವರು ಅಭಿಮಾನಿಗಳಿಗೆ ಯಾವಾಗಲೂ ಹತ್ತಿರವಾಗಿ ಇರುತ್ತಾರೆ.
ಅಭಿಮಾನಿಗಳು ಹಣ ಖರ್ಚು ಮಾಡಿಕೊಂಡು ನನ್ನ ಹುಟ್ಟುಹಬ್ಬ ಮಾಡಬೇಡಿ, ನಿಮ್ಮ ಮನೆಗೆ ಮೊದಲು ಹೀರೋಗಳಾಗಿ. ಅಪ್ಪ ಅಮ್ಮ, ಅಕ್ಕ ತಂಗಿಯರನ್ನು ನೋಡಿಕೊಳ್ಳಿ ಅವರಿಗೆ ಮೊದಲ ಪ್ರಾಶಸ್ತ್ಯ ಕೊಡಿ ಎಂದು ಪ್ರತಿ ಬಾರಿ ಮನವಿ ಮಾಡುತ್ತಾರೆ. ಕೆಜಿಎಫ್ ಸರಣಿ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಂಡ ಬಳಿಕ ಯಶ್ ಜನಪ್ರಿಯತೆ ಹೆಚ್ಚಾಗಿದ್ದು ದೇಶಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ.
ಟಾಕ್ಸಿಕ್ ಶೂಟಿಂಗ್ ಯಾವಾಗ?
ಕೆಜಿಎಫ್ 2 ಸಿನಿಮಾ ಬಳಿಕ ಸಾಕಷ್ಟು ಗ್ಯಾಪ್ ಬಳಿಕ ಯಶ್ ಮುಂದಿನ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲೇ ಮುಂದಿನ ಸಿನಿಮಾ ಹೆಸರು ಟಾಕ್ಸಿಕ್ ಎಂದು ಘೋಷಣೆ ಮಾಡಲಾಗಿತ್ತು. ಅದಾದ ಬಳಿಕ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಕೊಟ್ಟಿಲ್ಲ. ಈಗ ಮೂಲಗಳ ಪ್ರಕಾರ ಸಿನಿಮಾ ಶೂಟಿಂಗ್‌ಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು ಆಗಸ್ಟ್ 8 ರಂದು ಬೆಂಗಳೂರಿನಲ್ಲೇ ಶೂಟಿಂಗ್ ಶುರುವಾಗಲಿದೆ ಎಂದು ಹೇಳಲಾಗಿದೆ.
ಶೂಟಿಂಗ್ ಆರಂಭಕ್ಕೆ ಮುನ್ನ ಯಶ್ ದಂಪತಿಗಳು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಸಿನಿಮಾಗಾಗಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದ್ದು ಸಿನಿಮಾದ ಬಹುತೇಕ ಶೂಟಿಂಗ್ ಇಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
ಹಾಲಿವುಡ್‌ನ ತಂತ್ರಜ್ಞರು ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ ಎಂದು ವರದಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವ ಉದ್ದೇಶದಿಂದ, ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾಗಾಗಿ ಯಶ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಮುಂದಿನ ವರ್ಷ ಸಿನಿಮಾ ತೆರೆ ಕಾಣಲಿದೆ.












Click it and Unblock the Notifications