Year Ender 2025: ಈ ವರ್ಷ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾಗಳು
ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷವೂ ಹಲವು ಸಿನಿಮಾಗಳು ರಿಲೀಸ್ ಆಗಿದ್ದು, ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಕೂಡ ಮಾಡಿವೆ. ಕೆಲವು ಸಿನಿಮಾಗಳು ನಿರೀಕ್ಷಿತ ಮಟ್ಟದ ಸಕ್ಸಸ್ ಕಾಣದೆ ಮಕಾಡೆ ಮಲಗಿದವು. ಇನ್ನು 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಕನ್ನಡ ಸಿನಿಮಾಗಳು ಯಾವುವು ಎಂದು IMDb ಪಟ್ಟಿ ಮಾಡಿದೆ. ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಆಧಾರದ ಮೇಲೆ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ ಕನ್ನಡ ಸಿನಿಮಾಗಳ ವಿವರ ಇಲ್ಲಿದೆ.
ಪುರಾಣ, ಆಕ್ಷನ್, ಪ್ರಣಯ ಮತ್ತು ಹಾಸ್ಯದಂತಹ ಪ್ರಕಾರಗಳಲ್ಲಿ ಬ್ಲಾಕ್‌ಬಸ್ಟರ್‌ಗಳು, ಹಿಟ್‌ಗಳು ಮತ್ತು ಫ್ಲಾಪ್ ಸಿನಿಮಾಗಳು ಈ ವರ್ಷ ತೆರೆ ಕಂಡಿವೆ. ಕೆಲ ಸಿನಿಮಾಗಳು ಬ್ಲಾಕ್‌ಬಸ್ಟರ್ ಆಗುವ ಮೂಲಕ ಅಗ್ರ ಸ್ಥಾನಗಳಲ್ಲಿವೆ.

* ಕಾಂತಾರ ಚಾಪ್ಟರ್-1: ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಚಾಪ್ಟರ್-1 ಸಿನಿಮಾ 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಕನ್ನಡ ಸಿನಿಮಾಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಸುಮಾರು ₹125 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ ಈ ಸಿನಿಮಾ ಈವರೆಗೆ ಬರೋಬ್ಬರಿ ₹847.5 ಕೋಟಿ ಗಳಿಸಿ ಮುನ್ನಡೆ ಸಾಧಿಸಿ, ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾ ಎನಿಸಿಕೊಂಡಿದೆ.
* ಮಹಾವತಾರ ನರಸಿಂಹ: ಸುಮಾರು ₹40 ಕೋಟಿ ಬಜೆಟ್‌ನಲ್ಲಿ ತೆರೆಕಂಡ ಮಹಾವತಾರ ನರಸಿಂಹ ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾ ಎನಿಸಿಕೊಂಡಿದೆ. ₹326.34 ಕೋಟಿ ಗಳಿಸಿರುವ ಮಹಾವತಾರ ನರಸಿಂಹ, ಹಿರಣ್ಯಕಶಿಪು ಎಂಬ ರಾಕ್ಷಸನ ವಿರುದ್ಧ ವಿಷ್ಣುವಿನ ಪ್ರತಾಪದ ಕುರಿತಾದ ಸಿನಿಮಾ ಆಗಿದೆ.
* ಸು ಫ್ರಂ ಸೋ: ನಿರ್ದೇಶಕ ಜೆ.ಪಿ.ತುಮಿನಾಡು ಅವರ ಸು ಫ್ರಂ ಸೋ ಸಿನಿಮಾ ಈ ವರ್ಷದ ಬೆಸ್ಟ್ ಕಾಮಿಡಿ ಸಿನಿಮಾ ಎನಿಸಿಕೊಂಡಿದೆ. ರಾಜ್ ಬಿ.ಶೆಟ್ಟಿ ತಾರಾಗಣದ ಈ ಸಿನಿಮಾ ಬಜೆಟ್ ₹5.5 ಕೋಟಿ. ಬ್ಲಾಕ್‌ಬಸ್ಟರ್ ಆಗಿ ₹122.75 ಕೋಟಿ ಗಳಿಸಿದೆ.
* ಜೂನಿಯರ್: ರಾಜಕಾರಣಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಅವರ ಚೊಚ್ಚಲ ಸಿನಿಮಾ ಜೂನಿಯರ್ ₹25 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡು ಬಾಕ್ಸ್ ಆಫೀಸ್‌ನಲ್ಲಿ ಕೇವಲ ₹12.45 ಕೋಟಿ ಗಳಿಸಿತು. ಇದಕ್ಕೆ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಆಕ್ಷನ್ ಕಟ್ ಹೇಳಿದ್ದು, ಬಾಲಿವುಡ್ ನಟಿ ಜೆನೆಲಿಯಾ ದೇಶಮುಖ್, ಶ್ರೀಲೀಲಾ ಮುಖ್ಯ ಪಾತ್ರದಲ್ಲಿದ್ದಾರೆ.
* ಎಕ್ಕಾ: ನಟ ಯುವ ರಾಜ್‌ಕುಮಾರ್ ನಟನೆಯ ಎಕ್ಕಾ ಸಿನಿಮಾ ಕೂಡ ಈ ವರ್ಷದ ಟಾಪ್ ಸಿನಿಮಾಗಳಲ್ಲಿ ಸ್ಥಾನ ಪಡೆದಿದೆ. ರೋಹಿತ್ ಪದಕಿ ನಿರ್ದೇಶನದ ಈ ಸಿನಿಮಾ ಬಜೆಟ್ ₹10 ಕೋಟಿ, ಬಾಕ್ಸ್ ಆಫೀಸ್‌ನಲ್ಲಿ ₹11.39 ಕೋಟಿ ಬಾಚಿಕೊಂಡಿದೆ.

* ಮಾದೇವ: ನಟ ವಿನೋದ್ ಪ್ರಭಾಕರ್ ನಟನೆಯ ಮಾದೇವ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. ನವೀನ್ ರೆಡ್ಡಿ ನಿರ್ದೇಶನದ ಈ ಸಿನಿಮಾದ ಬಜೆಟ್ ₹4 ಕೋಟಿ, ಗಲ್ಲಾಪೆಟ್ಟಿಗೆಯಲ್ಲಿ ₹7.37 ಕೋಟಿ ಬಾಚುವ ಮೂಲಕ ಪ್ರೇಕ್ಷಕರ ಗಮನ ಸೆಳೆಯಿತು.
* ಚೂ ಮಂತರ್: ನಟ ಶರಣ್ ಅಭಿನಯದ ಹಾರರ್ ಸಿನಿಮಾ ಚೂ ಮಂತರ್ ಬಜೆಟ್ ₹8 ಕೋಟಿ, ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದು ₹ 6.45 ಕೋಟಿ. ನಿರ್ದೇಶಕ ನವನೀತ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
* ಬ್ರಾಟ್: ಡಾರ್ಲಿಂಗ್ ಕೃಷ್ಣ ನಟನೆಯ ಬ್ರಾಟ್ ಸಿನಿಮಾ ಈ ವರ್ಷ ಹೆಚ್ಚು ಸೌಂಡ್ ಮಾಡಿತು. ನಿರ್ದೇಶಕ ಶಶಾಂಕ್ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಗಲ್ಲಾಪೆಟ್ಟಿಗೆಯಲ್ಲಿ 5.56 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಇನ್ನುಳಿದ ಸ್ಥಾನಗಳಲ್ಲಿ ಕೃಷ್ಣ ಅಜಯ್ ರಾವ್ ಅವರ "ಯುದ್ಧಕಾಂಡ-2", ರಾಣಾ ನಟನೆಯ "ಏಳುಮಲೆ", ಧನ್ವೀರ್ ನಟನೆಯ "ವಾಮನ", "ಮನದ ಕಡಲು", "ವೀರ ಚಂದ್ರಹಾಸ" ಈ ವರ್ಷ ತೆರೆಕಂಡ ಟಾಪ್ ಸಿನಿಮಾಗಳಾಗಿವೆ.












Click it and Unblock the Notifications