Allu Arjun vs Revanth Reddy: ತೆಲುಗು ಸಿನಿಮಾಗಳಿಗೆ ಶಾಕ್ ಕೊಟ್ಟ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ
ಪುಷ್ಪ 2 ಸಿನಿಮಾ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಘಟನೆ ಇದೀಗ ತೆಲಂಗಾಣದಲ್ಲಿ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುಷ್ಪ 2 ಸಿನಿಮಾ ನಾಯಕ ಅಲ್ಲು ಅರ್ಜುನ್‌ರನ್ನು ಬಂಧಿಸಲಾಗಿತ್ತು, ಬಳಿಕ ಅವರಿಗೆ ಅದೇ ದಿನ ಜಾಮೀನು ಸಿಕ್ಕಿತ್ತು. ಇದೇ ಘಟನೆ ಇದೀಗ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ತೆಲುಗಿ ಚಿತ್ರರಂಗದ ನಡುವಿನ ಘರ್ಷಣೆಗೆ ಕಾರಣವಾಗಿದೆ.
ಶನಿವಾರ ವಿಧಾನಸಭೆಯಲ್ಲಿ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ರೇವಂತ್ ರೆಡ್ಡಿ, ಅಲ್ಲು ಅರ್ಜುನ್ ಪೊಲೀಸರಿಗೆ ಸೂಚನೆ ಕೊಡದೇ ಚಿತ್ರಮಂದಿರಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲು ಅರ್ಜುನ್ ಬಂಧಿಸಿ ಜಾಮೀನು ಸಿಕ್ಕಿ ಬಿಡುಗಡೆಯಾಗುತ್ತಿದ್ದಂತೆ ಚಿತ್ರರಂಗದ ಪ್ರಮುಖರೆಲ್ಲಾ ಅಲ್ಲು ಅರ್ಜುನ್ ಮನೆಗೆ ಹೋಗಿದ್ದರು. ಆತ ಏನೋ ಮಹಾಸಾಧನೆ ಮಾಡಿದ್ದಾನೆ ಎನ್ನುವಂತೆ ಆಡಿದ್ದರು. ಆದರೆ ಚಿತ್ರಮಂದಿರದ ಬಳಿ ಕಾಲ್ತುಳಿದಲ್ಲಿ ಮಹಿಳೆ ಮೃತಪಟ್ಟಿದ್ದರೆ, ಆಕೆಯ 9 ವರ್ಷದ ಮಗ ಬ್ರೈನ್ ಡೆಡ್ ಆಗಿ ಆಸ್ಪತ್ರೆಯಲ್ಲಿದ್ದಾನೆ ಒಬ್ಬನೇ ಒಬ್ಬನಾದರೂ ಚಿತ್ರರಂಗದವರು ಹೋಗಿ ನೋಡಿದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಬ್ಬರು ಪ್ರಮುಖ ನಟರು ಡಿಸೆಂಬರ್ 4ರಂದು ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡುತ್ತಾರೆ ಭದ್ರತೆ ನೀಡಬೇಕು ಎಂದು ಕೋರಿ ಡಿಸೆಂಬರ್ 2ರಂದು ಚಿತ್ರಮಂದಿರ ಆಡಳಿತ ಮಂಡಳಿ ಪೊಲೀಸ್ ಇಲಾಖೆಗೆ ಪತ್ರ ನೀಡಿದೆ, ಆದರೆ ಜನಸಂದಣಿ ನಿರ್ವಹಣೆ ಕಷ್ಟ ಎಂದು ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು ಎಂದು ರೇವಂತ್ ರೆಡ್ಡಿ ವಿಧಾನಸಭೆಗೆ ಮಾಹಿತಿ ನೀಡಿದರು.
ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಬಳಿಕವೂ ಅಲ್ಲು ಅರ್ಜುನ್ ರೋಡ್ ಶೋ ನಡೆಸಿದ್ದಾರೆ, ನೆರೆದಿದ್ದ ಅಭಿಮಾನಿಗಳಿಗೆ ಕೈ ಬೀಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ರೇವಂತ್ ರೆಡ್ಡಿ, ನಾನು ಜನಸಾಮಾನ್ಯರ ಪರ ನಿಲ್ಲತ್ತೇನೆ, ಯಾವ ಒತ್ತಡಕ್ಕೂ ಮಣಿಯಲ್ಲ ಎಂದರು.
ತೆಲುಗು ಸಿನಿಮಾ ರಂಗಕ್ಕೆ ಶಾಕ್!
ನಾನು ಸಿಎಂ ಆಗಿರುವವರೆಗೂ ತೆಲಂಗಾಣದಲ್ಲಿ ಯಾವುದೇ ಬೆನಿಫಿಟ್ ಶೋ ಮತ್ತು ಟಿಕೆಟ್ ದರ ಏರಿಕೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಹೇಳುವ ಮೂಲಕ ಇಡೀ ತೆಲುಗು ಚಿತ್ರರಂಗಕ್ಕೆ ಶಾಕ್ ಕೊಟ್ಟಿದ್ದಾರೆ. ಇದು ತೆಲುಗಿನಲ್ಲಿ ನಿರ್ಮಾಣವಾಗಲಿರುವ ಭಾರಿ ಬಜೆಟ್ ಸಿನಿಮಾಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.
ಆರೋಪ ನಿರಾಕರಿಸಿದ ಅಲ್ಲು ಅರ್ಜುನ್
ವಿಧಾನಸಭೆಯಲ್ಲಿ ತಮ್ಮ ಮೇಲೆ ಸಿಎಂ ಆರೋಪ ಮಾಡುತ್ತಿದ್ದಂತೆ ಸಂಜೆ ಮಾಧ್ಯಮಗೋಷ್ಠಿ ನಡೆಸಿದ ನಟ ಅಲ್ಲು ಅರ್ಜುನ್ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದರು. "ನಾನು ಯಾವುದೇ ನಿಯಮ ಮೀರಿಲ್ಲ, ಅನುಮತಿ ಇಲ್ಲದೇ ಇದ್ದರೆ ಪೊಲೀಸರೇ ನನ್ನನ್ನು ಚಿತ್ರಮಂದಿರದ ಒಳಗೆ ಹೋಗಲು ಬಿಡುತ್ತಿರಲಿಲ್ಲ. ನನಗೆ ಅಂತಹ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಕಾನೂನಿಗೆ ನಾನು ಯಾವಾಗಲೂ ಗೌರವ ಕೊಡುತ್ತೇನೆ. ಪೊಲೀಸರೇ ನನಗೆ ಮಾರ್ಗದರ್ಶನ ನೀಡಿದರು, ಅದರಂತೆ ನಾನು ಚಿತ್ರಮಂದಿರಕ್ಕೆ ಹೋಗಿತ್ತದೆ. ಅಲ್ಲಿ ಯಾವುದೇ ಮೆರವಣಿಗೆ ಮಾಡಿಲ್ಲ, ಚಿತ್ರಮಂದಿರದ ಮುಂದೆ ನೆರೆದಿದ್ದ ಪ್ರೇಕ್ಷಕರನ್ನು ನೋಡಿ ಕೈಬೀಸಿದ್ದೇನೆ ಅಷ್ಟೇ" ಎಂದು ಹೇಳಿದರು.












Click it and Unblock the Notifications