Dhananjaya: ಮದುವೆ ಹೊತ್ತಲ್ಲೇ ನಟ ಡಾಲಿ ವಿರುದ್ಧ ಕೇಳಿಬಂತು ಆರೋಪ, ಏನದು?
ಕನ್ನಡ ಚಿತ್ರರಂಗದ ನಟ ಡಾಲಿ ಧನಂಜಯ್ ಅವರ ಮದುವೆ ಸಮಾರಂಭ ಮೈಸೂರಿನಲ್ಲಿ ಅದ್ಧೂರಿಯಾಗಿ ನೆರವೇರುತ್ತಿದೆ. ಇಂದು ಮತ್ತು ನಾಳೆ ಡಾಲಿಯ ಮದುವೆ ಸಾಂಸ್ಕೃತಿಕ ನಗರಿಯಲ್ಲಿ ನಡೆಯಲಿದೆ. ಹುಟ್ಟೂರಿನಲ್ಲಿ ಮದುವೆ ಶಾಸ್ತ್ರಗಳು ಮುಗಿಸಿ, ಮೈಸೂರಿಗೆ ಬಂದಿರುವ ಜೋಡಿ, ನಿನ್ನೆ ಹಳದಿ ಶಾಸ್ತ್ರದಲ್ಲಿ ಕಂಗೊಳಿಸಿದೆ. ಇನ್ನು ಮದುವೆ ಹೊತ್ತಲ್ಲೇ ನಟ ಡಾಲಿ ವಿರುದ್ಧ ಆರೋಪವೊಂದು ಕೇಳಿಬಂದಿದೆ.
ಮೈಸೂರಿನಲ್ಲಿ ಧನಂಜಯ್ ಅವರ ವಿವಾಹ ಸಮಾರಂಭದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಎಲ್ಲರೂ ಡಾಲಿ-ಧನ್ಯತಾ ಜೋಡಿ ನೂರ್ಕಾಲ ಬದುಕಿ ಬಾಳಲಿ ಎಂದು ಹರಸುತ್ತಿದ್ದಾರೆ. ಇದೇ ವೇಳೆ ಗುಂಪೊಂದು ಡಾಲಿ ಬಗ್ಗೆ ಆರೋಪವೊಂದನ್ನು ಮಾಡುತ್ತಿದೆ. ಇದಕ್ಕೆ ಕಾರಣ ಡಾಲಿ ಅವರೇ ಹೇಳಿದ್ದ ಆ ಒಂದು ಡೈಲಾಗ್.

ಹೌದು ಡಾಲಿ ಧನಂಜಯ್ ಅವರ "ಬಡವರ ಮಕ್ಳು ಬೆಳೀಬೇಕು ಕಣ್ರಯ್ಯಾ" ಎನ್ನುವ ಡೈಲಾಗ್ ಸಖತ್ ಫೇಮಸ್. ಇದೇ ಡೈಲಾಗ್ ಉಲ್ಲೇಖಿಸಿ ಡಾಲಿ ಅವರ ಬಗ್ಗೆ ಕೆಲವರು ಕೊಂಕು ಮಾತುಗಳನ್ನಾಡುತ್ತಿದ್ದಾರೆ. ಮೈಸೂರಿನಲ್ಲಿ ಡಾಲಿ-ಧನ್ಯತಾ ಮದುವೆಗಾಗಿ ದೇವಸ್ಥಾನ ಮಾದರಿಯ ಬೃಹತ್ ಸೆಟ್ ಹಾಕಲಾಗಿದೆ. ಈ ವಿಡಿಯೋಗಳು ತುಂಬಾ ವೈರಲ್ ಆಗಿವೆ. ಎಲ್ಲರೂ ಇದಕ್ಕೆ ವಾವ್! ಎನ್ನುತ್ತಿದ್ದರೆ, ಕೆಲವರು ಬಡವರ ಮಕ್ಕಳ ಮದುವೆ ತುಂಬಾ ಸಿಂಪಲ್ಲಾಗಿ ನಡೀತಿದ್ಯಲ್ಲಾ? ಎಂದು ವ್ಯಂಗ್ಯ ಮಾಡುತ್ತಿದ್ದಾರೆ.

ಅಲ್ಲದೆ ಧನಂಜಯ್ ಹಾಗೂ ಧನ್ಯತಾರ ಎಂಗೇಜ್‌ಮೆಂಟ್ ಕೂಡ ತುಂಬಾ ಸಿಂಪಲ್ ಆಗಿ ನಡೆದಿತ್ತು. ಇದನ್ನು ಕಂಡು ಹಲವರು ಡಾಲಿ ಅವರ ಬಗ್ಗೆ ಮೆಚ್ಚುಗೆಯೂ ವ್ಯಕ್ತಪಡಿಸಿದ್ರು. ದೊಡ್ಡ ನಟನಾಗಿ ಬೆಳೆದರೂ ಇಷ್ಟು ಸರಳತೆ ಇದೆಯಲ್ಲ ಎಂದು ಕೊಂಡಾಡಿದ್ದರು. ಅಲ್ಲದೆ ಮೈಸೂರಿನಲ್ಲಿ ಮದುವೆ ಕೂಡ ತುಂಬಾ ಸಿಂಪಲ್ ಆಗಿ ಆಗುವುದಾಗಿ ಹೇಳಿದ್ದರು. ನೋಡಿದರೆ ದುಬಾರಿ ಸೆಟ್ ಹಾಕಿಸಿ ಎಲ್ಲರಂತೆಯೇ ಮದುವೆಯಾಗುತ್ತಿದ್ದಾರೆ. ಹಾಗಾದ್ರೆ ಬಡವರ ಮಕ್ಕಳು ಹೇಗಾಗ್ತಾರೆ? ಎಂದು ಕುಹಕವಾಡುತ್ತಿದ್ದಾರೆ.

ಈ ವಿಚಾರದಲ್ಲಿ ಹಲವರು ನಟ ಡಾಲಿ ಬೆನ್ನಿಗೆ ನಿಂತಿದ್ದಾರೆ. "ಮದುವೆ ಹೇಗಾಗಬೇಕು ಎನ್ನುವುದು ಅವರ ನಿರ್ಧಾರಕ್ಕೆ ಬಿಟ್ಟಿದ್ದು. ಈ ಬಗ್ಗೆ ಟೀಕಿಸುವ ಹಕ್ಕು ಯಾರಿಗೂ ಇಲ್ಲ. ಬಡವರ ಮಕ್ಕಳು ಬೆಳಿಬೇಕು ಎಂದು ಡಾಲಿ ಹೇಳಿದ್ರು. ಅದರಂತೆ ಅವರು ಇಂದು ಚಿತ್ರರಂಗದಲ್ಲಿ ಬೆಳೆದಿದ್ದಾರೆ. ಅದ್ಧೂರಿ ಸೆಟ್ ಹಾಕಿಸಿ ಮದುವೆ ಮಾಡಿಕೊಳ್ಳುವಷ್ಟು ಅವರು ಬೆಳೆದಿದ್ದಾರೆ. ಅವರ ಬಾಯಲ್ಲಿ ಹೇಳಿದ್ದನ್ನೇ ಮಾಡಿ ತೋರಿಸಿದ್ದಾರೆ. ಸಾಧ್ಯವಾದರೆ ಮುದ್ದಾದ ಜೋಡಿಗೆ ಶುಭಹಾರೈಸಿ. ಆಗದಿದ್ದರೆ ತೆಪ್ಪಗಿರಿ" ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಡಾಲಿ ಧನಂಜಯ್ ಅವರು ಚಿತ್ರದುರ್ಗದ ವೈದ್ಯೆ ಧನ್ಯತಾ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಇವರ ಮದುವೆ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದು, ಎರಡು ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿದೆ. ಅರುಣ್ ಸಾಗರ್ ಅವರು ಸೆಟ್ಗಳನ್ನು ನಿರ್ಮಿಸಿದ್ದಾರೆ. ಮದುವೆಯಲ್ಲಿ ಭಾಗಿಯಾಗುವ ಅಭಿಮಾನಿಗಳು, ಕುಟುಂಬಸ್ಥರು, ಗಣ್ಯರಿಗೆ ಬಾಯಲ್ಲಿ ನೀರೂರಿಸಿರುವ ಭರ್ಜರಿ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿದೆ.











Click it and Unblock the Notifications