Toxic: ರಾಕಿಂಗ್ ಸ್ಟಾರ್ ಯಶ್ ಸಿನಿಮಾದಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್?
ಕೆಜಿಎಫ್ ಸರಣಿ ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ಯಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಕೆಜಿಎಫ್ 2 ಭರ್ಜರಿ ಯಶಸ್ಸಿನ ಬಳಿಕ ಒಂದೂವರೆ ವರ್ಷ ಸಮಯ ತೆಗೆದುಕೊಂಡ ಯಶ್ 'ಟಾಕ್ಸಿಕ್' ಸಿನಿಮಾ ಘೋಷಣೆ ಮಾಡಿದ್ದಾರೆ. 2025ರ ಏಪ್ರಿಲ್ 10 ರಂದು ಸಿನಿಮಾ ಬಿಡುಗಡೆ ದಿನಾಂಕ ಕೂಡ ಘೋಷಣೆ ಮಾಡಿದೆ.
ಗೀತು ಮೋಹನ್‌ದಾಸ್ ಟಾಕ್ಸಿಕ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಟಾಕ್ಸಿಕ್ ಬಗ್ಗೆ ಹೊಸದೊಂದು ಸುದ್ದಿ ಬರುತ್ತಿದ್ದು, ಅದು ನಿಜವಾದರೆ ಟಾಕ್ಸಿಕ್ ಭಾರತೀಯ ಸಿನಿಮಾ ರಂಗದಲ್ಲೇ ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆ ಬರೆಯುವುದು ಖಚಿತವಾಗುತ್ತದೆ. ಮೂಲಗಳ ಪ್ರಕಾರ ಟಾಕ್ಸಿಕ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವಂತೆ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರಿಗೆ ಕೇಳಿದೆ.

ಟಾಕ್ಸಿಕ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲು ಶಾರುಖ್ ಅವರಿಗೆ ಚಿತ್ರತಂಡ ಕೇಳಿದೆ. ಇದಕ್ಕೆ ಶಾರುಖ್ ಖಾನ್ ಒಪ್ಪಿದ್ದಾರ ಇಲ್ಲವಾ ಎನ್ನುವುದು ಇನ್ನೂ ಖಚಿತವಾಗಿಲ್ಲವಾದರೂ, ಈ ಸುದ್ದಿ ಕೇಳಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಸುದ್ದಿ ನಿಜವಾಗುತ್ತಾ?
ಯಶ್ ಕೆಜಿಎಫ್ ಯಶಸ್ಸಿನ ಬಳಿಕ ಅಳೆದು ತೂಗಿ ಟಾಕ್ಸಿಕ್ ಸಿನಿಮಾ ಮಾಡಲು ಒಪ್ಪಿದ್ದಾರೆ. ಅಷ್ಟೇನೂ ಹೆಸರಿಲ್ಲದ ಗೀತು ಮೋಹನ್ ದಾಸ್ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ಮತ್ತೊಂದು ಅಚ್ಚರಿ ಮೂಡಿಸಿದ್ದರು. ದೊಡ್ಡ ದೊಡ್ಡ ನಿರ್ದೇಶಕರನ್ನು ಬಿಟ್ಟು ಯಶ್ ಮಹಿಳಾ ನಿರ್ದೇಶಕರ ಜೊತೆ ಕೆಲಸ ಮಾಡುವುದು ಅಚ್ಚರಿ ಮೂಡಿಸಿದರು, ಯಶ್ ಅವರು ಸ್ಕ್ರಿಪ್ಟ್ ಮೇಲೆ ನಂಬಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಸಿನಿಮಾದಲ್ಲಿ ಕರೀನಾ ಕಪೂರ್ ಕೂಡ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದ್ದು, ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಇದೆಲ್ಲದರ ನಡುವೆ ಈಗ ಶಾರುಖ್ ಖಾನ್ ಅವರ ಜೊತೆ ಯಶ್ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುವ ಸುದ್ದಿ ಬಂದಿದೆ.
ಸತತ ಸೋಲಿನ ಬಳಿಕ 2023ರಲ್ಲಿ ಶಾರುಖ್ ಖಾನ್ ಜವಾನ್, ಪಠಾಣ್ ಸಿನಿಮಾ ಭರ್ಜರಿ ಯಶಸ್ಸಿನ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಇಬ್ಬರೂ ಸೂಪರ್ ಸ್ಟಾರ್ ಗಳಾಗಿದ್ದು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರೆ ಸಿನಿಮಾ ಬಾಕ್ಸಾಫಿಸ್‌ನಲ್ಲಿ ಹೊಸ ದಾಖಲೆ ಬರೆಯಲಿದೆ ಎಂದು ಅಭಿಮಾನಿಗಳು ಈಗಾಗಲೇ ಖುಷಿಯಾಗಿದ್ದಾರೆ.
ನಾನು ಎಲ್ಲೂ ಹೋಗಲ್ಲ ನಾನ್ ಇರೋ ಕಡೆನೆ ಎಲ್ಲಾರನ್ನೂ ಕರೆಸಿಕೊಳ್ತೀನಿ ಎಂದು ಯಶ್ ಈ ಮೊದಲು ಹೇಳಿದ್ದರು. ಅದರಂತೆ ಶಾರುಖ್ ಖಾನ್‌ರನ್ನು ಕನ್ನಡ ಸಿನಿಮಾಗೆ ಕರೆತರುತ್ತಾರ, ಈ ಮೂಲಕ ದಕ್ಷಿಣ ಭಾರತದ ಸಿನಿಮಾದಲ್ಲಿ ಶಾರುಖ್ ಕಾಣಿಸಿಕೊಳ್ಳುತ್ತಾರ ಎನ್ನುವ ಕುತೂಹಲ ಹೆಚ್ಚಾಗಿದೆ.












Click it and Unblock the Notifications