ಸದ್ಯದಲ್ಲೇ ಲವ್ ಖಾಯಿಲೆಗೆ ಟ್ರೀಟ್ಮೆಂಟ್ ಕೊಡ್ತೀನಿ ಎಂದ ರೌಡಿ ಬೇಬಿ
ಗಟ್ಟಿಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಅಮೂಲ್ಯ ಪಾತ್ರದಿಂದ ಜನಪ್ರಿಯತೆ ಪಡೆದಿದ್ದ ನಿಶಾ ರವಿಕೃಷ್ಣನ್ ಅಣ್ಣಯ್ಯ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಕಿರುತೆರೆಯಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಿಶಾ, ಈ ಧಾರಾವಾಹಿಯಲ್ಲಿ ಪಾರ್ವತಿ ಎನ್ನುವ ವೈದ್ಯೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಿಶಾ ರವಿಕೃಷ್ಣನ್, ಡಾ.ಪಾರ್ವತಿಯಾಗಿ ಕಾಣಿಸಿಕೊಂಡ ಪ್ರೋಮೋಗಳು ಸಖತ್ ವೈರಲ್ ಆಗುತ್ತಿದ್ದು, ಪ್ರೇಕ್ಷಕರು ಅಣ್ಣಯ್ಯ ಧಾರಾವಾಹಿ ಆರಂಭಕ್ಕೆ ಕಾತುರರಾಗಿದ್ದಾರೆ. ಅಂದಹಾಗೆ ಅಣ್ಣಯ್ಯ ಧಾರಾವಾಹಿ ಸೋಮವಾರದಿಂದ ಆರಂಭವಾಗಲಿದೆ.
ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ ಪಾತ್ರದಲ್ಲಿ ಬಹಳ ರಗಡ್‌ಆಗಿ ಕಾಣಿಸಿಕೊಂಡಿದ್ದ ನಿಶಾ ರವಿಕೃಷ್ಣನ್ ಇದೀಗ ಪಾರ್ವತಿ ಎನ್ನುವ ಮೃದು ಸ್ವಭಾವದ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ನಟಿ ನಿಶಾ ರವಿಕೃಷ್ಣನ್ ಮಾತನಾಡಿದ್ದು, ಪಾರ್ವತಿ ಪಾತ್ರಕ್ಕೂ ನನ್ನ ನಿಜ ಸ್ವಭಾವಕ್ಕೂ ಹೊಂದಾಣಿಕೆ ಇದೆ ಎಂದಿದ್ದಾರೆ.

ನ್ಯೂಸ್‌ಫಸ್ಟ್ ಜೊತೆ ಮಾತನಾಡಿದ ಅವರು, 'ಪಾತ್ರದ ಪ್ರಕಾರ ಹೋಗುವುದಾದರೆ ಅಮೂಲ್ಯ ಹಾಗೂ ಪಾರ್ವತಿ ಪಾತ್ರ ಒಂದೇ ರೀತಿ ಅಂತಾ ಎಲ್ಲಿಯೂ ಅನಿಸಲ್ಲ. ಯಾಕೆಂದರೆ ಎರಡೂ ಪಾತ್ರಕ್ಕೂ ಬಹಳ ವ್ಯತ್ಯಾಸ ಇದೆ. ರೌಡಿ ಬೇಬಿನೆ ಬೇರೆ ತರ. ಆದರೆ ಇಲ್ಲಿ ಪಾರ್ವತಿ ಡಾಕ್ಟರ್. ಸೇಮ್ ಅಂತಾ ಪ್ರೇಕ್ಷಕರಿಗೆ ಯಾವತ್ತೂ ಅನಿಸಲ್ಲ. ಜನರು ಈ ಪಾತ್ರವನ್ನು ಇಷ್ಟ ಪಟ್ಟೇ ಪಡುತ್ತಾರೆ ಎನ್ನುವ ನಂಬಿಕೆ ನನಗೆ ಇದೆ' ಎಂದರು.
'ಗಟ್ಟಿಮೇಳ ಆರಂಭದಲ್ಲಿ ನಾನು ಬಹಳ ಕಷ್ಟಪಟ್ಟು ಕಳಿತು ನಟನೆ ಮಾಡುತ್ತಿದ್ದೆ. ಯಾಕೆಂದರೆ ನನ್ನ ನಿಜ ಜೀವನದ ಕ್ಯಾರೆಕ್ಟರ್‌ಗೆ ವಿರುದ್ಧವಾಗಿತ್ತು. ನಾನು ತುಂಬಾ ಮಾತನಾಡಲ್ಲ. ಆದರೆ ಅಮೂಲ್ಯ ಪಾತ್ರದಲ್ಲಿ ಹಾಗೇ ಇರಬೇಕಾಗಿತ್ತು. ಆದರೆ ಪಾರ್ವತಿ ಎನ್ನುವುದು ತುಂಬಾ ಪ್ರಬುದ್ಧವಾದ ಪಾತ್ರ. ಹೇಗೆ ಅವಳು ತನ್ನ ಸಂಸಾರವನ್ನು ನಿಭಾಯಿಸುತ್ತಾಳೆ. ಹೇಗೆ ತನ್ನ ನಾದಿನಿಯಂದಿರನ್ನು ನಿಭಾಯಿಸುತ್ತಾಳೆ. ಹೀರೋ ಜೊತೆ ಹೇಗೆ ಬಲವಾಗಿ ನಿಲ್ಲುತ್ತಾಳೆ ಎನ್ನುವುದೇ ಪಾರ್ವತಿ ಪಾತ್ರ. ಪಾರ್ವತಿ ನಿಶಾಗೆ ಸ್ವಲ್ಪ ಹತ್ತಿರ. ಮೃದುವಾಗಿ ಇರುವ ಪಾತ್ರ. ಕಮ್ಮಿ ಮಾತನಾಡುವುದು, ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಹೀಗಾಗಿ ನನ್ನ ಸ್ವಭಾವಕ್ಕೆ ಪಾರ್ವತಿ ಪಾತ್ರ ಹತ್ತಿರ ಆಗುತ್ತದೆ' ಎಂದು ಹೇಳಿದರು.

ಪಾರ್ವತಿ ಡಾಕ್ಟರ್ ಯಾವ ಖಾಯಿಲೆಗೆ ಚಿಕಿತ್ಸೆ ಕೊಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಿಶಾ, 'ಸದ್ಯಕ್ಕೆ ಎಲ್ಲಾ ಖಾಯಿಲೆಗೂ ಚಿಕಿತ್ಸೆ ಕೊಡುತ್ತಿದ್ದೀನಿ ಅಂತಾ ನನಗೆ ಗೊತ್ತು. ಸದ್ಯದಲ್ಲೇ ಲವ್ ಖಾಯಿಗೆ ಟ್ರೀಟ್ಮೆಂಟ್ ಕೊಡುತ್ತೀನಿ ಅಂತಾ ಗೊತ್ತಾಗುತ್ತಿದೆ. ಧಾರಾವಾಹಿ ಪ್ರಸಾರಕ್ಕೆ ನನಗೆ ತುಂಬಾ ಭಯವಾಗುತ್ತಿದೆ. ಜನರ ತಲೆಯಿಂದ ಅಮೂಲ್ಯ ಎನ್ನುವುದನ್ನು ಹೊರಗೆ ತರುವ ಜವಾಬ್ದಾರಿ ನನಗೆ ಇದೆ. ಈ ಪಾತ್ರವನ್ನು ಜನರು ಹೇಗೆ ಒಪ್ಪಿಕೊಳ್ಳುತ್ತಾರೆ ಅಂತಾ ತುಂಬಾ ಕುತೂಹಲದಿಂದ ಕಾಯುತ್ತಿದ್ದೇನೆ' ಎಂದು ಹೇಳಿದರು.












Click it and Unblock the Notifications