Umashree: ಯಕ್ಷಗಾನ ಕ್ಷೇತ್ರಕ್ಕೂ ಕಾಲಿಟ್ಟ ನಟಿ ಉಮಾಶ್ರೀ: ಮಂಥರೆಯಾಗಿ ಮಿಂಚಿದ ಪುಟ್ಟಕ್ಕ
ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರಿ ಎಂತಹ ಪಾತ್ರಕ್ಕಾದರೂ ಸೈ. ಸುಮಾರು 325ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿ ಬೆಳ್ಳಿತೆರೆಯಲ್ಲಿ ಮಿಂಚಿದ್ದ ನಟಿ ಉಮಾಶ್ರಿ ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪುಟ್ಟಕ್ಕನ ಪಾತ್ರದ ಮೂಲಕ ಕಿರುತೆರೆಯನ್ನು ಆಳುತ್ತಿದ್ದಾರೆ. ಪುಟ್ಟಕ್ಕ ನಕ್ಕರೆ ಪ್ರೇಕ್ಷಕರು ನಗುತ್ತಾರೆ, ಪುಟ್ಟಕ್ಕ ಅತ್ತರೆ ಪ್ರೇಕ್ಷಕರು ಕೂಡ ಅಳುತ್ತಾರೆ ಅಷ್ಟರಮಟ್ಟಿಗೆ ಉಮಾಶ್ರೀ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಯಾವುದೇ ಪಾತ್ರ ಒಪ್ಪಿಕೊಂಡರೂ ಆ ಪಾತ್ರಕ್ಕೆ ನೂರಕ್ಕೆ ನೂರು ನ್ಯಾಯಕೊಡಿಸುವ ಅಭಿನಯ ಉಮಾಶ್ರೀ ಅವರದು.
ರಂಗಭೂಮಿ, ಬೆಳ್ಳಿತೆರೆ, ಕಿರುತೆರೆಯಲ್ಲಿ ಭರಪೂರ ಯಶಸ್ಸುಗಳಿಸಿದ ಬಳಿಕ ಹಿರಿಯ ನಟಿ ಉಮಾಶ್ರಿ ಇದೀಗ ನಟನೆಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದು, ಇದೇ ಮೊದಲ ಬಾರಿಗೆ ಯಕ್ಷಗಾನ ರಂಗ ಪ್ರವೇಶ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಮೊದಲ ಬಾರಿಗೆ ಚಂಡೆಯ ಸದ್ದಿಗೆ ಹೆಜ್ಜೆ ಹಾಕಿದ್ದಾರೆ.

ಹೊನ್ನಾವರದ ಸೇಂಟ್ ಅಂಥೋನಿ ಮೈದಾನದಲ್ಲಿ ಶುಕ್ರವಾರ ನಡೆದ ಪೆರ್ಡೂರು ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನದಲ್ಲಿ ಉಮಾಶ್ರೀ ಮಂಥರೆಯಾಗಿ ರಂಗಸ್ಥಳ ಪ್ರವೇಶ ಮಾಡಿದ್ದಾರೆ. ಯಕ್ಷಗಾನ ಕಲಾವಿದರಾದ ಕಾರ್ತಿಕ್ ಚಿಟ್ಟಾಣಿ, ಉದಯ್ ಹೆಗಡೆ, ಅಪ್ಟಣ್ಣ ಗೌಡ ಮಾಗೋಡು ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರೊಂದಿಗೆ ಉಮಾಶ್ರೀ ಮೊದಲ ಬಾರಿಗೆ ಯಕ್ಷಗಾನ ಮಾಡಿದ್ದಾರೆ. ಮಂಥರೆ ಪಾತ್ರದಲ್ಲಿ ಉಮಾಶ್ರೀ ರಂಗಸ್ಥಳಕ್ಕೆ ಬರುತ್ತಿದ್ದಂತೆ ಅಭಿಮಾನಿಗಳ ಶಿಳ್ಳೆ ಚಪ್ಪಾಳೆ ಮುಗಿಲು ಮುಟ್ಟಿದೆ.
ಮಂಥರೆ ಪಾತ್ರದಲ್ಲಿ ಮಿಂಚಿದ ಉಮಾಶ್ರೀ ಅವರ ನಟನೆ, ಕುಣಿತ, ಮಾತು ನೋಡಿದರೆ ಅವರು ಮೊದಲ ಬಾರಿಗೆ ಯಕ್ಷಗಾನ ಮಾಡುತ್ತಿರುವುದು ಅಂತಾ ನಮಗೆ ಎಲ್ಲೂ ಅನಿಸಲಿಲ್ಲ ಎಂದು ಪ್ರೇಕ್ಷಕರು ಹೇಳಿದ್ದಾರೆ. ಮಂಥರೆಯಾಗಿ ರಂಗಸ್ಥಳದಲ್ಲಿರುವ ಉಮಾಶ್ರೀ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇನ್ನು ತಮ್ಮ ಮೊದಲ ಯಕ್ಷಗಾನ ನಟನೆಯ ಬಗ್ಗೆ ಮಾತನಾಡಿರುವ ನಟಿ ಉಮಾಶ್ರೀ 'ಸುಬ್ರಮಣ್ಯ ಚಿಟ್ಟಾಣಿಯವರು ಬಂದು ಯಕ್ಷಗಾನದಲ್ಲಿ ಪಾತ್ರ ಮಾಡುವಂತೆ ಕೋರಿದರು. ನಾನು ಇದನ್ನು ಎಂದಿಗೂ ಮಾಡಿಲ್ಲ. ಕಷ್ಟ ಆಗುತ್ತದೆ ಹೀಗಾಗಿ ಮಾಡುವುದಿಲ್ಲ ಎಂದೆ. ಆದರೆ ರಾಮಚಂದ್ರ ಚಿಟ್ಟಾಣಿಯವರು ನನ್ನ ಬಳಿ ಮಂಥರೆಯ ಪಾತ್ರ ಮಾಡಿಸಬೇಕು ಎನ್ನುವ ಬಯಕೆ ಹೊಂದಿದ್ದರಂತೆ. ಅವರ ಆತ್ಮಕ್ಕೆ ತೃಪ್ತಿ ಸಿಗಲಿ ಅಂತಾ ಪಾತ್ರ ಮಾಡಿದೆ' ಎಂದು ಹೇಳಿದ್ದಾರೆ. ಸದ್ಯ ಯಕ್ಷಗಾನದಲ್ಲಿಯೂ ಸೈ ಎನಿಸಿಕೊಂಡ ಉಮಾಶ್ರೀ ಅವರನ್ನು ಯಕ್ಷ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.












Click it and Unblock the Notifications