Sarigama Viji: ಹಿರಿಯ ನಟ ಸರಿಗಮ ವಿಜಿ ನಿಧನ: ರಾಜಕೀಯ ಗಣ್ಯರಿಂದ ಸಂತಾಪ
ಬೆಂಗಳೂರು, ಜನವರಿ 15: ಕನ್ನಡ ಚಿತ್ರರಂಗ ಹಿರಿಯ ನಟ ಸರಿಗಮ ವಿಜಿ ಅವರು ನಿಧನ ಹೊಂದಿದ್ದಾರೆ. ಸರಿಗಮ ವಿಜಿ ಅವರಿಗೆ 76 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ವಿಜಿ ಅವರಿಗೆ ಶ್ವಾಸಕೋಶದ ಸಮಸ್ಯೆ ಎದುರಾಗಿತ್ತು. ಇಂದು ಬೆಳಗ್ಗೆ ವಿಜಿ ಅವರು ನಿಧನರಾಗಿದ್ದಾರೆ. ವಿಜಿ ಅವರ ಅಗಲಿಕೆಗೆ ಅವರ ಕುಟುಂಬದವರು ಆಪ್ತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದು, ರಾಜಕೀಯ ಗಣ್ಯರು ಸಂತಾಪವನ್ನ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗ ದ ಹಿರಿಯ ನಟ ಸರಿಗಮ ವಿಜಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ವಿಜಿ ಅವರದ್ದು ಸುದೀರ್ಘವಾದ ಸಿನಿಮಾ ಮತ್ತು ರಂಗಭೂಮಿ ಪಯಣ. ನಾಟಕಗಳಲ್ಲಿ ನಟಿಸುತ್ತಿದ್ದ ವಿಜಿ ಅವರ 'ಸಂಸಾರದಲ್ಲಿ ಸರಿಗಮ' ನಾಟಕ ಬಹಳ ಹೆಸರು ಗಳಿಸಿತ್ತು. ಇದೇ ಕಾರಣಕ್ಕೆ ಅವರಿಗೆ ಸರಿಗಮ ವಿಜಿ ಹೆಸರು ಬಂದಿತ್ತು.

ನಾಟಕದಿಂದ ಸಿನಿಮಾಕ್ಕೆ ಪದಾರ್ಪಣೆ ಮಾಡಿದ ವಿಜಿ ಅವರು ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯ ಪಾತ್ರ ಕೆಲವೆಡೆ ವಿಲನ್ ಪಾತ್ರಗಳಲ್ಲಿಯೂ ನಟಿಸಿದ್ದರು ಎಂದಿದ್ದಾರೆ. ಹಿರಿಯರ ಕುಟುಂಬಸ್ಥರು, ಬಂಧುಗಳು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ಸಂತಾಪ ಸೂಚಿಸಿದ್ದು, ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟರಾದ ಸರಿಗಮ ವಿಜಿ ಅವರ ನಿಧನದ ಸಂಗತಿ ತಿಳಿದು ಮನಸ್ಸಿಗೆ ಅತೀವ ದುಃಖವಾಯಿತು. ರಂಗಭೂಮಿ ಹಾಗೂ ಚಲನಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾಗಿದೆ. ಮೃತರ ಆತ್ಮಕ್ಕೆ ಸದ್ಗತಿ ಕೋರಿ ಪ್ರಾರ್ಥಿಸುವೆ. ಓಂ ಶಾಂತಿ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಗೋಪಾಲಯ್ಯನವರು ಸಂತಾಪ ಸೂಚಿಸಿದ್ದು, ಚಲನಚಿತ್ರ ಹಾಸ್ಯ ನಟ ಹಾಸ್ಯದಿಂದಲೇ ಜನರನ್ನು ನಗುವಿನ ಕಡಲಲ್ಲಿ ತೇಲಿಸುತ್ತಿದ್ದ ಸರಿಗಮ ವಿಜಿಯವರು ನನ್ನ ಆತ್ಮೀಯ ಸ್ನೇಹಿತ ಇನ್ನಿಲ್ಲ ಎಂಬ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು.
ಸುಮಾರು 269 ಚಲನಚಿತ್ರಗಳಲ್ಲಿ ಚಲನಚಿತ್ರಗಳಲ್ಲಿ ನಟಿಸಿ ಖ್ಯಾತಿ ಹೊಂದಿದ್ದ ವಿಜಿಯವರು 2400 ಹೂ ಹೆಚ್ಚು ಧಾರವಾಹಿಗಳಲ್ಲಿ ನಿರ್ದೇಶಕರಾಗಿ ಮತ್ತು ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು ಅಂತಹ ಹಾಸ್ಯ ನಟ ಸರಿಗಮ ವಿಜಿ ಅವರನ್ನು ಕಳೆದುಕೊಂಡ ಚಿತ್ರರಂಗ ಬಡವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಕುಟುಂಬ ವರ್ಗಕ್ಕೆ ಮತ್ತು ಅವರ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಇನ್ನೂ ಸರಿಗಮ ವಿಜಿ ಅವರ ಅಂತಿಮ ದರ್ಶನದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಕೆ ಗೋಪಾಲಯ್ಯ, ಸರಿಗಮ ವಿಜಿ ಅವ್ರ ಅಗಲಿಕೆ ಚಿತ್ರರಂಗಕ್ಕೆ.. ನಮಗೆ ದೊಡ್ಡ ನಷ್ಟವಾಗಿದೆ. ನನಗೂ ತುಂಬಾ ಆತ್ಮೀಯ. ನಮ್ಮ ಕಚೇರಿ ಹತ್ತಿರದಲ್ಲೇ ಇರುವುದು ನಾವೆಲ್ಲ ಆತ್ಮೀಯರಾಗಿದ್ದವರು. ಅವರ ಕುಟುಂಬ ನಮ್ಮ ಕುಟುಂಬ ಆತ್ಮೀಯವಾಗಿದ್ವಿ, ಭಗವಂತ ಅವರ ಕುಟುಂಬಕ್ಕೆ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ
ಮೊಮ್ಮಗನ ನಾಮಕರಣ ಕಾರ್ಯವನ್ನು ಇಸ್ಕಾನ್ ನಲ್ಲಿ ಮಾಡಿದ್ರು . ಅವತ್ತೇ ಕೊನೆದಾಗಿ ಭೇಟಿ ಮಾಡಿದ್ದೆ ಎಂದು ತಿಳಿಸಿದರು.












Click it and Unblock the Notifications