'ಇವನೇನು ಸುಂದರ ಇಲ್ವಾ, ರೂಪವಂತ ಅಲ್ವಾ': ಕಣ್ಣೀರಿಟ್ಟಿದ್ದ ತರುಣ್ ಸುಧೀರ್ ತಾಯಿ
ಬೆಂಗಳೂರು, ಆಗಸ್ಟ್ 09: ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ತಾರಾ ಜೋಡಿ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಇತ್ತೀಚಿಗಷ್ಟೇ ತಮ್ಮ ಪ್ರೀತಿ-ಮದುವೆ ಬಗ್ಗೆ ಬಹಿರಂಹ ಪಡಿಸಿದ್ದ ಈ ಜೋಡಿ ಬೆಂಗಳೂರಿನ ಮೈಸೂರು ರೋಡ್‌ನಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಇದೇ ಆಗಸ್ಟ್ 11 ರಂದು ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ಈಗಾಗಲೇ ಮದುವೆಯ ಶಾಸ್ತ್ರಗಳು ಹಾಗೂ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಇತ್ತೀಚಿನ ವರ್ಷಗಳಲ್ಲಿ ಯಶಸ್ಸು ಕಾಣುತ್ತಿರುವ ತರುಣ್, ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಉತ್ತಮ ಸಿನಿಮಾಗಳನ್ನು ನೀಡಬೇಕು ಎನ್ನುವ ಅಭಿಲಾಷೆಯಲ್ಲಿದ್ದಾರೆ. ಹೀಗಾಗಿ ಈ ಹಿಂದೆ ಮದುವೆ ಬಗ್ಗೆ ಮಾತನಾಡಿದ್ದ ತರುಣ್ ಸುಧೀರ್, ಸದ್ಯಕ್ಕೆ ಮದುವೆ ಬಗ್ಗೆ ಆಲೋಚನೆ ಇಲ್ಲ, ಮದುವೆ ಆಗದೇ ನೆಮ್ಮದಿಯಾಗಿ ಇದ್ದೇನೆ ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ತಾಯಿ ಮಾಲತಿ ಮಾತ್ರ ಮಗನಿಗೆ ಮದುವೇ ಮಾಡಿಯೇ ಸಿದ್ಧ ಎನ್ನುತ್ತಿದ್ದರು.

ಇದೀಗ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಮದುವೆ ಸಿದ್ಧತೆ ಭರದಿಂದ ಸಾಗುತ್ತಿದ್ದು, ಈ ಹಿಂದೆ ತರುಣ್ ಸುಧೀರ್ ಅವರ ತಾಯಿ ಮಗನಿಗೆ ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವ ನೋವನ್ನು ಹಂಚಿಕೊಂಡಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಗೋಲ್ಡ್‌ನ್ ಸ್ಟಾರ್ ಗಣೇಶ್ ನಡೆಸಿಕೊಡುತ್ತಿದ್ದ ಗೋಲ್ಡ್‌ನ್ ಗ್ಯಾಂಗ್‌ಗೆ ತರುಣ್ ಸುಧೀರ್ ಹಾಗೂ ಅವರ ಆಪ್ತ ಗೆಳೆಯರು ಬಂದಿದ್ದ ಸಂದರ್ಭದಲ್ಲಿ ತರುಣ್ ಸುಧೀರ್ ಮಾಲತಿ ಕೂಡ ಬಂದಿದ್ದರು. ಈ ವೇಳೆ ತರುಣ್ ಯಾಕೆ ಮದುವೆಯಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದರು.
'ಅವನ ಅಣ್ಣ-ಅತ್ತಿಗೆ ಇರುತ್ತಾರೆ. ಆದರೆ ಇವನಿಗೆ ಅಂತಾ ನೀನು ಊಟ ಮಾಡಿದ್ಯಾ ಅಂತಾ ಕೇಳೋರೆ ಇಲ್ಲ. ನೀವೆಲ್ಲಾ ಎಷ್ಟು ಒಳ್ಳೆ ಸ್ನೇಹಿತರು. ನೀವೇ ಈಗ ತಂದೆ-ತಾಯಿ ಅವನಿಗೆ ಈಗ. ಆದರೆ ಅವನಿಗೆ ಸಂಗಾತಿ ಅಂತಾ ಬಂದರೆ ಒಳ್ಳೆಯದು ಅಲ್ವಾ, ನನಗೆ ಯೋಚನೆ ಆಗುತ್ತದೆ. ಇವನೇನು ಸುಂದರ ಇಲ್ವಾ, ರೂಪವಂತ ಇಲ್ವಾ, ಇವನಿಗೆ ಒಳ್ಳೆಯ ಗುಣ ಇಲ್ವಾ ಎಂದು' ನೋವು ಹೊರಹಾಕಿದ್ದರು.

'ತರುಣ್ ಇಂದಿನವರೆಗೂ ಒಂದು ಅಡಿಕೆ ಹೋಳನ್ನು ಕೈಯಲ್ಲಿ ಮುಟ್ಟಿಲ್ಲ. ಒಂದು ಸಿಗರೇಟು ಮುಟ್ಟಿಲ್ಲ. ಇಷ್ಟು ಒಳ್ಳೆ ಗುಣ ಇರುವ ಹುಡುಗನಿಗೆ ಒಂದು ಹೆಣ್ಣು ಯಾಕೆ ಸಿಗ್ತಿಲ್ಲ. ಇವನಿಗೆ ಯಾಕೆ ಸೆಟ್ ಆಗುತ್ತಿಲ್ಲ. ಪ್ರತಿ ದಿನ ರಾತ್ರಿ- ಹಗಲು ಇದೇ ಆಲೋಚನೆ ನನಗೆ. ದೇವರಲ್ಲಿ ದಿನ ಇದನ್ನೇ ಪ್ರಾರ್ಥನೆ ಮಾಡುತ್ತೇನೆ' ಎಂದು ಕಣ್ಣೀರು ಹಾಕಿದ್ದರು. ಆದರೆ ಈಗ ಮಾಲತಿ ಸುಧೀರ್ ಅವರ ಬಹುದಿನದ ಕನಸು ನನಸಾಗುತ್ತಿದ್ದು, ತರುಣ್ ಸುಧೀರ್ ಇನ್ನೇನು ಒಂದೇ ದಿನದಲ್ಲಿ ಹಸೆಮಣೆ ಏರಲಿದ್ದಾರೆ. ಇದು ಅವರ ಅಭಿಮಾನಿಗಳು ಖುಷಿಯ ವಿಚಾರವಾಗಿದೆ.












Click it and Unblock the Notifications