Kichcha Sudeepa: ರಾಜ್ಯ ಚಲನಚಿತ್ರ ಪ್ರಶಸ್ತಿ ನಿರಾಕರಿಸಿದ ಕಿಚ್ಚ ಸುದೀಪ್: ಕಾರಣವೇನು?
ಬೆಂಗಳೂರು, ಜನವರಿ 23: 2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ನಿನ್ನೆ ಪ್ರಕಟವಾಗಿದ್ದು, ಪೈಲ್ವಾನ್ ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ಅತ್ಯುತ್ತಮ ನಟ ಹಾಗೂ ದಯಾಳ್ ಪದ್ಮನಾಭನ್ ನಿರ್ದೇಶನದ ತ್ರಯಂಬಕಂ ಚಿತ್ರದ ನಟನೆಗಾಗಿ ಅನುಪಮಾ ಗೌಡ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ಆದರೆ ಇದೀಗ ನಟ ಕಿಚ್ಚ ಸುದೀಪ್ ರಾಜ್ಯ ಸರ್ಕಾರ ನೀಡಿದ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
ಕೆಲವು ವೈಯಕ್ತಿಕ ಕಾರಣಗಳಿಂದ ಕೆಲವು ವರ್ಷಗಳಿಂದ ನಾನು ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ ಎಂದಿರುವ ಕಿಚ್ಚ ಸುದೀಪ್, ತಮ್ಮ ಪ್ರತಿಭೆಯಿಂದ ಪ್ರಾಮಾಣಿವಾಗಿ ಶ್ರಮಿಸಿದ ಹಲವಾರು ಅರ್ಹ ಕಲಾವಿದರಿದ್ದಾರೆ. ಈ ಪ್ರತಿಷ್ಠಿತ ಗೌರವವನ್ನು ಅವರು ಸ್ವೀಕರಿಸುವುದರಿಂದ ನನಗೆ ಹೆಚ್ಚು ಖುಷಿಯಾಗುತ್ತದೆ ಎನ್ನುವ ಮೂಲಕ 2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಸುದೀಪ್ ನಿರಾಕರಿಸಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್, 'ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಬಂದಿರುವುದು ನಿಜಕ್ಕೂ ಗೌರವದ ಸಂಗತಿ. ಈ ಗೌರವಕ್ಕಾಗಿ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಾನು ಕೆಲವು ವೈಯಕ್ತಿಕ ಕಾರಣಗಳಿಂದ ಕೆಲವು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ. ನಾನು ಈ ನಿರ್ಧಾರವನ್ನು ಮುಂದುವರಿಸಲು ಬದ್ಧನಾಗಿದ್ದೇನೆ. ನನಗೆ ಹೋಲಿಸಿದರೆ, ತಮ್ಮ ಪ್ರತಿಭೆಯಿಂದ ಪ್ರಾಮಾಣಿವಾಗಿ ಶ್ರಮಿಸಿದ ಹಲವಾರು ಅರ್ಹ ಕಲಾವಿದರಿದ್ದಾರೆ. ಈ ಪ್ರತಿಷ್ಠಿತ ಗೌರವವನ್ನು ಅವರು ಸ್ವೀಕರಿಸುವುದರಿಂದ ನನಗೆ ಹೆಚ್ಚು ಖುಷಿಯಾಗುತ್ತದೆ' ಎಂದಿದ್ದಾರೆ.
'ಜನರನ್ನು ರಂಜಿಸುವ ನನ್ನ ಶ್ರಮ ಯಾವುದೇ ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆಯೇ ಇರುತ್ತದೆ. ತೀರ್ಪುಗಾರರ ಈ ನಿರ್ಧಾರವು ನನ್ನ ಶ್ರಮವನ್ನು ಮುಂದುವರಿಸುವ ದಿಕ್ಕಿನಲ್ಲಿ ಪ್ರೇರಣೆಯಾಗುತ್ತದೆ. ನನ್ನನ್ನು ಆಯ್ಕೆ ಮಾಡಿರುವ ಪ್ರತಿಯೊಬ್ಬ ತೀರ್ಪುಗಾರ ಸದಸ್ಯರಿಗೂ ನಾನು ಋಣಿಯಾಗಿದ್ದೇನೆ. ನನ್ನ ಈ ನಿರ್ಧಾರಕ್ಕೆ ತೀರ್ಪುಗಾರರ ಸದಸ್ಯರು ಮತ್ತು ರಾಜ್ಯ ಸರ್ಕಾರಕ್ಕೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನೀವು ನನ್ನ ಈ ನಿರ್ಧಾರವನ್ನು ಗೌರವಿಸುತ್ತೀರಿ ಮತ್ತು ನಾನು ಆಯ್ಕೆ ಮಾಡಿದ ದಾರಿಯನ್ನು ಬೆಂಬಲಿಸುತ್ತೀರಿ ಎಂದು ನಾನು ನಂಬುತ್ತೇನೆ. ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದು ನಟ ಕಿಚ್ಚ ಸುದೀಪ್ ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.












Click it and Unblock the Notifications