Kiccha Sudeep: ಕಿಚ್ಚ ಸುದೀಪ್ ಬಿಗ್ ಬಾಸ್‌ನಿಂದ ಹೊರಬರಲು ಅಸಲಿ ಕಾರಣವೇನು?
ಕನ್ನಡದಲ್ಲಿ ಬಿಗ್ ಬಾಸ್ ಆರಂಭದಿಂದ ಇಲ್ಲಿಯವರೆಗೂ ಕಿಚ್ಚ ಸುದೀಪ್ ತಮ್ಮ ನಿರೂಪಣೆ ಹಾಗೂ ನಾಯಕತ್ವ ಗುಣದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಂಡು ಬಂದಿದ್ದರು. ಆದರೆ ಈ ಬಾರಿ ಬಾಸ್ ಕನ್ನಡ ಸೀಸನ್ 11ರ ನಿರೂಪಣೆ ಬಳಿಕ ಶೋನಿಂದ ಹೊರಬರಲು ಸುದೀಪ್ ನಿರ್ಧರಿಸಿದ್ದಾರೆ. ಈ ಬಗ್ಗೆ ಅಧೀಕೃತವಾಗಿ ಸುದೀಪ್ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆದರೆ ಸುದೀಪ್ ಯಾಕೆ ಬಿಗ್ ಬಾಸ್‌ನಿಂದ ಹೊರಬಂದರು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ
ಈ ಪ್ರಶ್ನೆಗೆ ಉತ್ತರ ಇಲ್ಲಿದ್ದು, ಸ್ವತಃ ಕಿಚ್ಚ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ. 'ಬಿಗ್ ಬಾಸ್ ಸಾಕು ಸರ್. ಎಷ್ಟು ಮಾಡ್ತಾರೆ ಅದನ್ನೇ. ಎಲ್ಲರನ್ನೂ ರಿಪೇರಿ ಮಾಡ್ತಾ ಕೂರಲು ಬಂದಿದ್ದೇನಾ ನಾನು. ಬೇರೆ ಕೆಲಸಗಳು ಸಹ ಇರುತ್ತದೆ. ಸಾಕು ಅಂತಾ ಅಲ್ಲ. ಬಿಗ್ ಬಾಸ್ ತುಂಬಾ ಒಳ್ಳೆ ಪ್ರಯತ್ನ. ಅಲ್ಲಿಗೆ ಹಾಕುವ ಶ್ರಮ ಏನು ಎಂದು ನನ್ನ ಜೊತೆಗಿದ್ದವರನ್ನು ಕೇಳಿ. ಉದಾಹರಣೆಗೆ ಕಳೆದ ಸೀಜನ್ ಸಮಯದಲ್ಲಿ ಮಹಬಲೀಪುರದಲ್ಲಿ ಶೂಟಿಂಗ್ ಮಾಡುತ್ತಿದ್ದೇವು. ಇಲ್ಲಿಗೆ ಚೆನ್ನೈನಿಂದ ಒಂದೂವರೆ ಗಂಟೆ ರಸ್ತೆ ಮೂಲಕ ಹೋಗಬೇಕು. ಅಷ್ಟು ದೂರ'.

'ಬೆಂಗಳೂರಿನ ನನ್ನ ಮನೆಯಿಂದ ಏರ್‌ಪೋರ್ಟ್‌ಗೆ ಒಂದೂವರೆ ಗಂಟೆ ಬೇಕು. ಅಲ್ಲಿ ವಿಮಾನಕ್ಕೆ ಒಂದು ಗಂಟೆ ಕಾಯಬೇಕು. ಅದಾದ ಮೇಲೆ ನೆಲವತ್ತು ನಿಮಿಷ ಪ್ರಯಾಣ. ನೆಲವತ್ತು ನಿಮಿಷ ಆದ ಮೇಲೆ ಇಳಿದು ಮತ್ತೆ ಒಂದೂವರೆ ಗಂಟೆ ಪ್ರಯಾಣ. ಅಲ್ಲಿಗೆ ಹೋಗಿ ಶೂಟಿಂಗ್ ಮಾಡಬೇಕು. ಕೊನೆಗೆ ಅಲ್ಲಿ ಶೂಟಿಂಗ್ ಮುಗಿಸುವುದು ಬೆಳಗ್ಗಿನ ಜಾವ ಮೂರು ಗಂಟೆ ಆಗುತ್ತಿತ್ತು. ಮುಖ ತೊಳೆದುಕೊಂಡಿ ಸೀದಾ ಮತ್ತೆ ಏರ್‌ಪೋರ್ಟ್‌ಗೆ. ಐದು ಗಂಟೆಗೆ ಮತ್ತೆ ಪ್ರಯಾಣ ಶುರು'.
'ಅಲ್ಲಿಂದ ಬೆಂಗಳೂರಿಗೆ ಬಂದು ಮನೆಗೆ ಬಂದು ಅಪ್ಪ-ಅಮ್ಮನನ್ನು ಮಾತನಾಡಿಸಿಕೊಂಡು ನನ್ನ ಊಟ ವ್ಯಾಯಾಮ ಮುಗಿಸುವುದರೊಳಗೆ ಎಲ್ಲಾ ಎಪಿಸೋಡ್‌ಗಳನ್ನು ನೋಡಬೇಕು. ಅದು ನೋಡಿ ಮುಗಿಸುವುದರಷ್ಟರಲ್ಲಿ ಮತ್ತೆ ರಾತ್ರಿ. ಬೆಳಗ್ಗೆ ಎದ್ದು ಎರಡು ಸಂಚಿಕೆ ಮುಗಿಸಿಕೊಟ್ಟು ಮತ್ತೆ ರಾತ್ರಿ ಶೂಟಿಂಗ್‌ಗೆ ಹೋಗುತ್ತಿದ್ದೆ ನಾನು. ಇದನ್ನೇ ಇಡೀ ಸೀಸನ್ ಮಾಡಿ ಒತ್ತಡ ಆಗುತ್ತಿತ್ತು ನನಗೆ. ತುಂಬಾ ಒತ್ತಡ ಆಗುತ್ತಿತ್ತು ನನಗೆ'.

'ಬೆಂಗಳೂರಿನಲ್ಲೇ ಇದ್ದರೆ ಒಕೆ. ಆದರೆ ಎಲ್ಲೆಲ್ಲೋ ಇದ್ದರೆ ಶೂಟಿಂಗ್‌ಗೆ ಸಮಯ ಕೊಡಲು ಆಗುತ್ತಿರಲಿಲ್ಲ. ಕಾರಣ ಏನು ಅಂದರೆ ಗುರುವಾರ ಎಲ್ಲಾ ಮುಗಿಸಿ ಶುಕ್ರವಾರ ಓಡಿಬರಬೇಕು. ಸಾವಿರ ಜನ ಸೇರಿ ಶೂಟಿಂಗ್ ಮಾಡುತ್ತಿರುತ್ತೇವೆ. ನನ್ನಿಂದ ಶುಕ್ರವಾರ, ಶನಿವಾರ ಅದು ನಿಲ್ಲುತ್ತದೆ. ಸಿನಿಮಾಗಳು ಇಲ್ಲ ಅಂದಾಗ ಬೇರೆ. ಆದರೆ ಸಿನಿಮಾಗಳು ಇದ್ದಾಗ ಎಲ್ಲವೂ ವಿಳಂಬ ಆಗುತ್ತದೆ. ನಾನು ಖುಷಿಯಿಂದಲೇ ಈ ನಿರ್ಧಾರ ಮಾಡಿದ್ದೇನೆ. ಬೇರೆಯಾದರೂ ಈ ಶೋ ಮಾಡಲಿ ಅಂತಾ ಅನಿಸಿತು. ನಾವು ಹೊಸತೇನಾದರೂ ಮಾಡೋಣ' ಎಂದು ನಟ ಕಿಚ್ಚ ಸುದೀಪ್ ಟಿವಿ ೯ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಬಿಗ್ ಬಾಸ್‌ನಿಂದ ಹೊರಬರಲು ಅಸಲಿ ಕಾರಣ ತಿಳಿಸಿದ್ದಾರೆ.












Click it and Unblock the Notifications