ಪ್ರಭಾಸ್ ಎದುರು ಸೋತ ಶಾರುಖ್ ಸಿನಿಮಾ? ಶಾರುಖ್ ಖಾನ್ ‘ಡಂಕಿ’ ಗಳಿಸಿದ್ದು ಎಷ್ಟು ಕೋಟಿ ರೂಪಾಯಿ?
ದಕ್ಷಿಣ ಭಾರತದ ಸಿನಿಮಾಗಳು ಮತ್ತು ಬಾಲಿವುಡ್ ಸಿನಿಮಾ ನಡುವೆ ಮತ್ತೊಮ್ಮೆ 'ಬಾಕ್ಸ್ ಆಫಿಸ್' ವಾರ್ ಶುರುವಾದಂತೆ ಕಾಣುತ್ತಿದೆ. ಒಂದು ಕಡೆ ನಟ ಶಾರುಖ್ ಖಾನ್ ಅಭಿನಯ ಮಾಡಿರುವ 'ಡಂಕಿ' ಡಿಸೆಂಬರ್ 21ಕ್ಕೆ ರಿಲೀಸ್ ಆಗಿದೆ. ನಿನ್ನೆ ಡಿಸೆಂಬರ್ 22ಕ್ಕೆ 'ಸಲಾರ್' ರಿಲೀಸ್ ಆಗಿದೆ. ಹೀಗಿದ್ದಾಗ ಸಲಾರ್ ಸಿನಿಮಾ ಶಾರುಖ್‌ರ ಸಿನಿಮಾಗಿಂತಲು ಭಾರಿ ದೊಡ್ಡ ಮೊತ್ತದ ಹಣ ಬಾಚಿದೆಯಂತೆ. ಈ ಮೂಲಕ ಬಾಕ್ಸ್ ಆಫಿಸ್ ಫೈಟ್ ಬಲು ಜೋರಾಗಿದೆ.
ಬಾಲಿವುಡ್ ಸಿನಿಮಾಗಳು, ದಕ್ಷಿಣ ಭಾರತದ ಸಿನಿಮಾಗಳ ಎದುರು ಡಮ್ಮಿ ಅನ್ನೋ ಆರೋಪ ಮೊದಲಿನಿಂದಲೂ ಇದೆ. ಹಾಗೇ ಈ ಆರೋಪಕ್ಕೆ ಸಾಕ್ಷಿ ಎನ್ನುವಂತೆ ಸಾಲು ಸಾಲು ಹಿಂದಿ ಸಿನಿಮಾಗಳು ಸೌತ್ ಸಿನಿಮಾಗಳ ಎದುರು ಸೋತಿವೆ. ಇದೀಗ ಅದೇ ಟ್ರೆಂಡ್ 'ಸಲಾರ್' & 'ಡಂಕಿ' ಸಿನಿಮಾ ನಡುವೆಯೂ ಮುಂದುವರಿದಂತೆ ಕಾಣುತ್ತಿದೆ. ಅದು ಹೇಗೆ ಅಂದ್ರೆ ಈಗ ಶಾರುಖ್ ಖಾನ್ ಅವರ ಸಿನಿಮಾ ಬಾಕ್ಸ್ ಆಫಿಸ್ ಗಳಿಕೆಯಲ್ಲಿ ಭಾರಿ ಹಿಂದೆ ಬಿದ್ದಿದೆ. ಆದ್ರೆ ಇದೇ ಸಮಯದಲ್ಲಿ ನಟ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯುತ್ತಿದೆ. ಹಾಗಾದ್ರೆ ಎರಡು ಸಿನಿಮಾಗಳು ಎಷ್ಟು ಕೋಟಿ ಗಳಿಸಿವೆ? ಮುಂದೆ ಓದಿ.

ಕನ್ನಡಿಗರು ನಿರ್ಮಿಸಿದ 'ಸಲಾರ್' ಅಬ್ಬರ
ಅಂದಹಾಗೆ ಕನ್ನಡದ ನಿರ್ಮಾಪಕ ಹಾಗೂ ನಿರ್ದೇಶಕರು ಸೇರಿ, ಪ್ರಭಾಸ್ ಅವರ ಸಲಾರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹೀಗೆ ಪ್ರಭಾಸ್ ಅವರ ಸಿನಿಮಾ ಡಿಸೆಂಬರ್ 22ಕ್ಕೆ ಅಂದ್ರೆ ನಿನ್ನೆ ರಿಲೀಸ್ ಆಗಿದ್ದು, ಮೊದಲ ದಿನವೇ ಬರೋಬ್ಬರಿ 175 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಆದರೆ ಇದೇ ಸಮಯದಲ್ಲಿ ಒಂದು ದಿನ ಮೊದಲೇ ರಿಲೀಸ್ ಆಗಿದ್ದ ಬಾಲಿವುಡ್ ಬಾದ್ ಷಾ, ಶಾರುಖ್ ಖಾನ್ ಅವರ 'ಡಂಕಿ' ಸಿನಿಮಾ 2 ದಿನ ಸೇರಿ ಕೇವಲ 50 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಸಿನಿಮಾ ಮಾಡಲು ಎಷ್ಟು ಕೋಟಿ ಖರ್ಚು?
ಶಾರುಖ್ ಅವರ 'ಡಂಕಿ' ಚಿತ್ರವನ್ನ, ಬರೋಬ್ಬರಿ 120 ಕೋಟಿ ರೂಪಾಯಿ ಬಂಡವಾಳ ಹಾಕಿ ನಿರ್ಮಾಣ ಮಾಡಲಾಗಿದೆ. ಜಗತ್ತಿನಾದ್ಯಂತ ಚಿತ್ರ ರಿಲೀಸ್ ಮಾಡಿ, ದೊಡ್ಡ ಮೊತ್ತದ ಕಲೆಕ್ಷನ್ ಆಗಲಿದೆ ಎನ್ನುವ ನಿರೀಕ್ಷೆ ಇತ್ತು. ಸಾವಿರಾರು ಥಿಯೇಟರ್ ಶಾರುಖ್ ಖಾನ್ ಡಂಕಿ ಚಿತ್ರವನ್ನು ಸೆಲೆಬ್ರೇಟ್ ಮಾಡಲು ಕಾಯುತ್ತಿದ್ದವು. ಆದರೆ ಆಗಿದ್ದೆಲ್ಲ ಉಲ್ಟಾ, ಶಾರುಖ್ ಅವರ ಸಿನಿಮಾ ಮೊದಲ ದಿನ ನಿರೀಕ್ಷೆಗಿಂತ ಕಡಿಮೆ ಮೊತ್ತ ಕಲೆಕ್ಷನ್ ಮಾಡಿ, 30 ಕೋಟಿ ರೂಪಾಯಿಗೆ ತೃಪ್ತಿ ಪಟ್ಟುಕೊಂಡಿತ್ತು. ಇನ್ನು 2ನೇ ದಿನ ಭಾರಿ ಇಳಿಕೆ ಕಂಡು ಕೇವಲ 20 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ.

ಕೆಜಿಎಫ್ ದಾಖಲೆಗೂ ಕುತ್ತು ಬಂತಾ?
ಭಾರತದಲ್ಲಿ ಮೊದಲ ದಿನ ಭರ್ಜರಿ ಗಳಿಕೆ ಮಾಡಿದ ಸಿನಿಮಾ ಪೈಕಿ ಈಗ 'ಸಲಾರ್' ಸಿನಿಮಾ 3ನೇ ಸ್ಥಾನಕ್ಕೆ ಹೋಗಿದೆ. ಹೇಗಂದ್ರೆ ಮೊದಲ ದಿನ, ಹೆಚ್ಚು ಹಣ ಮಾಡಿದ ಭಾರತದ ಸಿನಿಮಾ ಪೈಕಿ RRR ಮೊದಲ ಸ್ಥಾನ ಪಡೆದಿದೆ. ಆರ್‌ಆರ್‌ಆರ್ ಮೊದಲ ದಿನ 223 ಕೋಟಿ ರೂಪಾಯಿ ಗಳಿಸಿತ್ತು. ಬಾಹುಬಲಿ-2 ಮೊದಲ ದಿನ 214.5 ಕೋಟಿ ರೂಪಾಯಿ ಸಂಪಾದನೆ ಮಾಡಿತ್ತು.
ಇದನ್ನ ಬಿಟ್ಟರೆ ಕನ್ನಡಿಗರ 'ಕೆಜಿಎಫ್ ಚಾಪ್ಟರ್-2' ಬರೋಬ್ಬರಿ 164.5 ಕೋಟಿ ರೂಪಾಯಿ ವಸೂಲಿ ಮಾಡಿತ್ತು. ಆದರೆ 'ಕೆಜಿಎಫ್ ಚಾಪ್ಟರ್-2' ದಾಖಲೆ ಹಿಂದಿಕ್ಕಿದೆ ಸಲಾರ್ ಸಿನಿಮಾ. ಈಗ ಸಲಾರ್ 175 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಈ ಮೂಲಕ ಸಲಾರ್ ಈಗ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಹೊಸ ದಾಖಲೆ ನಿರ್ಮಿಸುತ್ತಾ ಇತಿಹಾಸವನ್ನ ಸೃಷ್ಟಿ ಮಾಡುತ್ತಿದೆ. ಹಾಗೇ ಇನ್ನಷ್ಟು ದಾಖಲೆ ನಿರ್ಮಿಸುವ ಸೂಚನೆ ನೀಡಿದೆ.












Click it and Unblock the Notifications