ಕಳ್ಳರ ನಿಷ್ಠೆ: ನಿರ್ದೇಶಕನ ಕಷ್ಟ ನೋಡಿ ಕದ್ದ ವಸ್ತುಗಳನ್ನು ವಾಪಸ್ ಕೊಟ್ಟ ಖದೀಮರು!
ಕಳ್ಳರು ಅಂದ್ರೆ ಕ್ರೂರಿಗಳು, ಕಳ್ಳರಿಗೆ ಮನಸ್ಸೇ ಇರೋದಿಲ್ಲ. ದುಡ್ಡಿಗಾಗಿ ಖದೀಮರು ಏನು ಬೇಕಾದ್ರೂ ಮಾಡ್ತಾರೆ ಅನ್ನೋ ಆರೋಪಗಳು ಇವೆ. ಆದರೆ ಇಲ್ಲಿ ಒಂದು ಕಳ್ಳರ ಗ್ಯಾಂಗ್, ದುಡ್ಡಿಗಾಗಿ ಅಲ್ಲ ಮಾನವೀಯತೆಗೆ ಬೆಲೆ ಕೊಟ್ಟಿದೆ. ಅಷ್ಟೇ ಅಲ್ಲ ರಾಷ್ಟ್ರ ಪ್ರಶಸ್ತಿ ವಿಜೇತ, ಸಿನಿಮಾ ನಿರ್ದೇಶಕನ ವಸ್ತು ವಾಪಸ್ ಮಾಡಿದ್ದಾರೆ ಕಳ್ಳರು. ಹಾಗಾದರೆ ಈ ಕಹಾನಿಯಲ್ಲಿ ಆಗಿದ್ದು ಏನು ಗೊತ್ತಾ? ಬನ್ನಿ ಕಂಪ್ಲೀಟ್ ಕಥೆಯನ್ನ ಇಂಚಿಂಚಾಗಿ ತಿಳಿಯೋಣ.
ನಿಮಗೆಲ್ಲಾ ಎಂ. ಮಣಿಕಂದನ್ ಅವರ ಹೆಸರು ಗೊತ್ತಿರಬಹುದು. ಅಷ್ಟಕ್ಕೂ ನಿರ್ದೇಶಕ ಎಂ. ಮಣಿಕಂದನ್ ಅವರು ತಮ್ಮ ಅದ್ಭುತವಾದ ಸಿನಿಮಾಗಳ ಮೂಲಕವೇ ದೇಶದ ಗಮನವನ್ನು ಸೆಳೆದವರು. ಹೀಗಾಗಿ ಜನಪ್ರಿಯ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು ತಮಿಳು ಇಂಡಸ್ಟ್ರಿಯ ಈ ಡೈರೆಕ್ಟರ್. ಹಿಂದೆ ಧನುಶ್ ನಿರ್ಮಾಣ ಮಾಡಿದ್ದ 'ಕಾಕ ಮೊಟೈ' ಸಿನಿಮಾನ ಕೂಡ ಅವರು, ನಿರ್ದೇಶನ ಮಾಡಿದ್ದರು. ಆ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. 2022ರಲ್ಲಿ ಬಿಡುಗಡೆಯಾಗಿ ದೊಡ್ಡ ಹೆಸರು ಮಾಡಿದ್ದ 'ಕಡೈಸಿ ವ್ಯವಸಾಯಿ' ಸಿನಿಮಾ ಕೂಡ ರಾಷ್ಟ್ರಪ್ರಶಸ್ತಿ ಗೆದ್ದಿತ್ತು. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಿದ್ದರು. ಇಂತಹ ನಿರ್ದೇಶಕನ ಮನೆಯಲ್ಲಿ ಈಗ ವಿಚಿತ್ರ ಘಟನೆ ನಡೆದಿದೆ.

ಮನೆಗೆ ನುಗ್ಗಿ ಕಳ್ಳರು ಏನ್ ಮಾಡಿದ್ರು?
ಅಷ್ಟಕ್ಕೂ ರಾಷ್ಟ್ರ ಪ್ರಶಸ್ತಿ ವಿಜೇತ ತಮಿಳು ಸಿನಿಮಾ ನಿರ್ದೇಶಕ ಎಂ. ಮಣಿಕಂದನ್ ಅವರ ಮನೆಯಲ್ಲಿ, ಫೆಬ್ರವರಿ ಅಂದ್ರೆ ಈ ತಿಂಗಳ ಆರಂಭದಲ್ಲಿ ಕಳ್ಳತನ ಆಗಿತ್ತು. ನಿರ್ದೇಶಕರಾದ ಮಣಿಕಂದನ್ ಅವರ ಮನೆ ಬೀಗ & ಬೀರು ಬೀಗ ಒಡೆದು ಮನೆಯಲ್ಲಿರುವ, ಬೆಲೆಬಾಳುವ ವಸ್ತು ದರೋಡೆ ಮಾಡಿದ್ದರು ಕಳ್ಳರು. ಹಾಗೇ ಮಣಿಕಂದನ್ ಅವರಿಗೆ ನೀಡಿದ್ದ ರಾಷ್ಟ್ರ ಪ್ರಶಸ್ತಿ ಸಹ ಕಳ್ಳರ ಪಾಲಾಗಿ ಹೋಗಿತ್ತು. ಹೀಗೆ ಖ್ಯಾತ ನಿರ್ದೇಶಕ ಮಣಿಕಂದನ್‌ರ ಮನೆಗೆ ಹೀಗೆ ಕಳ್ಳರು ಕನ್ನ ಹಾಕಿದ್ದ ಸುದ್ದಿ ಎಲ್ಲೆಲ್ಲೂ ವೈರಲ್ ಆಗಿತ್ತು.
ಕಳ್ಳರ ಮನಸ್ಸು ಕರಗಿತ್ತು!
ಇನ್ನು ಈ ಸುದ್ದಿ ವೈರಲ್ ಆಗುತ್ತಿದ್ದಂತೆ, ಕಳ್ಳರು ಮಣಿಕಂದನ್‌ರ ಅಮೂಲ್ಯ ವಸ್ತುವೊಂದನ್ನ ಇದೀಗ ವಾಪಸ್ ಕೊಟ್ಟಿದ್ದಾರೆ. ಜೊತೆಗೆ ಕ್ಷಮೆ ಕೋರಿ ಪತ್ರ ಸಹ ಬರೆದಿದ್ದಾರಂತೆ. ಹಾಗಾದರೆ ನಿರ್ದೇಶಕನ ಮನೆಗೆ ಕಳ್ಳರು ವಾಪಸ್ ಕಳುಹಿಸಿದ ವಸ್ತು ಯಾವುದು ಗೊತ್ತೆ? ಅಂದಹಾಗೆ, ಹೀಗೆ ಕಳ್ಳರು ಮಣಿಕಂದನ್ ಮನೆಯಲ್ಲಿ 1 ಲಕ್ಷ ರೂಪಾಯಿ ನಗದು ಸೇರಿ ಸುಮಾರು 5 ಗ್ರಾಂ ಚಿನ್ನವನ್ನ ದರೋಡೆ ಮಾಡಿದ್ದರಂತೆ. ಇದರ ಜೊತೆಗೆ 'ಕಡೈಸಿ ವ್ಯವಸಾಯಿ' ಸಿನಿಮಾಗಾಗಿ ನೀಡಿದ್ದ ರಾಷ್ಟ್ರ ಪ್ರಶಸ್ತಿ ಸಹ ಕದ್ದೊಯ್ದಿದ್ದರು. ಈಗ ರಾಷ್ಟ್ರಪ್ರಶಸ್ತಿ ಮರಳಿಸಿದ ಕಳ್ಳರ ಪಡೆ, ಜೊತೆಗೆ ಪತ್ರವನ್ನು ಸಹ ಇಟ್ಟು ಹೋಗಿದ್ದಾರಂತೆ.
ಅಂದಹಾಗೆ ಮಣಿಕಂದನ್ ಅವರದ್ದು, ಮೂಲತಃ ಮಧುರೈ ಜಿಲ್ಲೆಯ ಉಸಿಲಾಂಪಟ್ಟಿ ಗ್ರಾಮ. ಮಣಿಕಂದನ್ ಸಿನಿಮಾದ ಕೆಲಸ ಇಲ್ಲದಿರುವ ಸಮಯದಲ್ಲಿ, ಇದೇ ಮನೆಯಲ್ಲಿ ಇರುತ್ತಾರಂತೆ. ಮಣಿಕಂದನ್ ಸಿನಿಮಾದ ಕೆಲಸಕ್ಕೆ ಚೆನ್ನೈಗೆ ಬಂದ್ರೆ ಅವರ ಡ್ರೈವರ್ ಮನೆ ನೋಡಿಕೊಳ್ಳುತ್ತಾರೆ ಮಣಿಕಂದನ್ ಚೆನ್ನೈಗೆ ಬಂದಿದ್ದಾಗ ಉಸಿಲಾಂಪಟ್ಟಿಯ ಅವರ ಮನೆಯಲ್ಲಿ ಕಳ್ಳತನ ಆಗಿತ್ತು. ಈ ಘಟನೆಯ ಕುರಿತಾಗಿ ಮಣಿಕಂದನ್ ವಾಹನ ಚಾಲಕ ಪೊಲೀಸರಿಗೆ ಕಂಪ್ಲೇಂಟ್ ನೀಡಿದ್ದರು. ಪ್ರಕರಣದ ತನಿಖೆ ಮಾಡುತ್ತಿರುವಾಗ ಕಳ್ಳರು ನಿರ್ದೇಶಕರ ರಾಷ್ಟ್ರಪ್ರಶಸ್ತಿ ಮರಳಿಸಿ ಕ್ಷಮೆ ಕೂಡ ಕೇಳಿದ್ದಾರೆ!












Click it and Unblock the Notifications