ಸುಮಲತಾ ಅಂಬರೀಶ್ ದೊಡ್ಮಗನಾಗಿ ಈ ಜವಾಬ್ದಾರಿ ನಿಭಾಯಿಸ್ತಾರಾ ದರ್ಶನ್?
ನಟ ದರ್ಶನ್ ತೂಗುದೀಪ ಅವರು ಮಂಡ್ಯದ ಗಂಡು ಅಂಬರೀಶ್ ಕುಟುಂಬದೊಂದಿಗೆ ಮೊದಲಿನಿಂದಲೂ ಒಡನಾಟ ಹೊಂದಿದ್ದಾರೆ. ಇನ್ನು ಸುಮಲತಾ ಅವರನ್ನು ಮದರ್ ಇಂಡಿಯಾ ಎಂದು ದರ್ಶನ್ ಕರೆದರೆ, ಸುಮಲತಾ ಅವರು ದರ್ಶನ್‌ರನ್ನ ಮನೆಮಗ, ದೊಡ್ಮಗ ಎಂದೇ ಕರೆಯುತ್ತಿದ್ದರು. ಆದರೆ, ಇತ್ತೀಚೆಗೆ ದರ್ಶನ್ ಅವರು ಸುಮಲತಾ, ಅಭಿಷೇಕ್ ಹಾಗೂ ಅವಿವಾ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡುವ ಮೂಲಕ ಶಾಕ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಅಂಬರೀಶ್ ಕುಟುಂಬದೊಂದಿಗೆ ದರ್ಶನ್ ಮುನಿಸಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿದೆ. ಇಂದು ಈ ವದಂತಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.
ದರ್ಶನ್ ಅವರ ನಡೆಯು ಹಲವು ಅನುಮಾನಗಳನ್ನು ಮೂಡಿಸಿತ್ತು. ಇದ್ದಕ್ಕಿದ್ದಂತೆ ಅಂಬರೀಶ್ ಕುಟುಂಬದವರನ್ನು ಅನ್ ಫಾಲೋ ಮಾಡುವ ಮೂಲಕ ಅವರೊಂದಿಗೆ ನಂಟು ಕಳೆದುಕೊಂಡ್ರಾ? ಯಾವ ಕಾರಣಕ್ಕೆ ದರ್ಶನ್ ಸಿಟ್ಟಾಗಿದ್ದಾರೆ? ಎಂಬ ಪ್ರಶ್ನೆಗಳೆಲ್ಲವೂ ಮುನ್ನೆಲೆಗೆ ಬಂದಿವೆ. ಈ ಬಗ್ಗೆ ಸುಮಲತಾ ಅವರು ಸ್ಪಷ್ಟನೆಯೂ ನೀಡಿದ್ದಾರೆ. ತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದ ಸೃಷ್ಟಿಸಬೇಡಿ ಎಂದು ಮನವಿ ಕೂಡ ಮಾಡಿದ್ದಾರೆ. ಆದರೂ ದರ್ಶನ್ ಹಾಗೂ ಅಂಬರೀಶ್ ಕುಟುಂಬದ ನಡುವೆ ವಿರಸ ಮೂಡಿದೆ ಎಂದೇ ಹೇಳಲಾಗುತ್ತಿದೆ.

ದರ್ಶನ್ ಅವರು ಅಂಬರೀಶ್ ಅವರ ಕುಟುಂಬದ ಎಲ್ಲ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗಿಯಾಗುತ್ತಿದ್ದರು. ಮನೆಮಗನಂತೆ ಶುಭ ಕಾರ್ಯಗಳಲ್ಲಿ ಜೊತೆಯಾಗುತ್ತಿದ್ದರು. ಇಂದು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅವರ ಮಗುವಿನ ನಾಮಕರಣ ಮಹೋತ್ಸವ ಇಂದು ನೆರವೇರುತ್ತಿದೆ. ಈ ಕಾರ್ಯಕ್ರಮಕ್ಕೆ ದರ್ಶನ್ ಅವರು ಬರ್ತಾರಾ ಅಥವಾ ಬರಲ್ವಾ? ಎನ್ನುವುದು ಈಗಿರುವ ವದಂತಿಗೆ ಸ್ಪಷ್ಟನೆ ನೀಡಲಿದೆ. ಮೈಸೂರಿನಲ್ಲಿ ಡೆವಿಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ದರ್ಶನ್ ಅವರು ಸುಮಲತಾ ಅವರ ಮನೆಯಲ್ಲಿ ನಡೆಯುವ ಶುಭಕಾರ್ಯಕ್ಕೆ ಬಂದೇ ಬರ್ತಾರೆ ಎಂದೂ ಹೇಳಲಾಗುತ್ತಿದೆ. ಒಂದು ವೇಳೆ ಬರದಿದ್ದರೆ, ಇಬ್ಬರ ನಡುವೆ ಮನಸ್ತಾಪ ಇದೆ ಎನ್ನುವುದು ಖಚಿತವಾಗಲಿದೆ. ಈಗ ಎಲ್ಲರ ಚಿತ್ತ ಈ ಶುಭಕಾರ್ಯದತ್ತ ಇದೆ.
ದರ್ಶನ್ ಅವರು ಅಭಿಷೇಕ್ ಅವರ ಮದುವೆಯಲ್ಲಿ ಪಾಲ್ಗೊಂಡು ಸಖತ್ ಎಂಜಾಯ್ ಮಾಡಿದ್ದರು. ಮನೆಮಗನಂತೆ ಜೊತೆ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದಾಗಲೂ ಅಲ್ಲಿಗೆ ತೆರಳಿ ಭೇಟಿಯಾಗಿ ಬಂದಿದ್ದರು. ಜಾಮೀನು ಪಡೆದು ಹೊರಬಂದ ನಂತರ ಈಗ ದಿಢೀರನೆ ಮನಸ್ತಾಪದ ವದಂತಿ ಶುರುವಾಗಿರುವುದು ಅಚ್ಚರಿ ಮೂಡಿಸಿದೆ. ಸುಮಲತಾ ಅವರು ಹಾಕಿದ್ದ ಪೋಸ್ಟ್‌ವೊಂದು ದರ್ಶನ್ ಅವರಿಗೆ ಟಾಂಗ್ ನೀಡುವಂತಿತ್ತು ಎಂದೂ ಸೋಶಿಯಲ್ ಮೀಡಿಯಾದಲ್ಲಿ ವಿಚಾರ ಹಬ್ಬಿತ್ತು.
ದರ್ಶನ್ ಅವರು ಅನ್‌ಫಾಲೋ ಮಾಡಿದ ಬಳಿಕ ಸುಮಲತಾ ಅಂಬರೀಶ್ ಅವರು ಪ್ರತಿಕ್ರಿಯಿಸಿದ್ದರು. ನನ್ನ ಹಿಂದಿನ ಒಂದು ಪೋಸ್ಟ್ ಕುರಿತು ಅನಗತ್ಯವಾದ ವಿವಾದ ಸೃಷ್ಟಿಯಾಗಿರುವುದರಿಂದ ಈ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ನನ್ನ ಪೋಸ್ಟ್ ಯಾರನ್ನಾದರೂ ಗುರಿಯಾಗಿಸಿ ಮಾಡಿದ್ದಲ್ಲ. ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ. ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಅನ್ನೋದನ್ನ ಗಮನಿಸುವ ಅಭ್ಯಾಸ ನನಗಿಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು ಎಂದು ಸ್ಪಷ್ಟನೆ ನೀಡಿದ್ದರು.

ನಿಜಕ್ಕೂ, ದರ್ಶನ್ ಅವರು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಇದು ಅವರ ವೈಯಕ್ತಿಕ ಆಯ್ಕೆ. ಅದನ್ನು ಎಲ್ಲರೂ ಗೌರವಿಸಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಅಗತ್ಯವಿಲ್ಲ. ತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ. ನನ್ನ ಪೋಸ್ಟ್ ಯಾರನ್ನೂ ಉದ್ದೇಶಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ನಾನು ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎಳೆದು ತರುವ ಅಭ್ಯಾಸವನ್ನು ಎಂದಿಗೂ ಹೊಂದಿಲ್ಲ ಎಂದು ಸುಮಲತಾ ಹೇಳಿದ್ದರು.












Click it and Unblock the Notifications