ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ದಿನಾಂಕ, ಸ್ಥಳ ನಿಗದಿ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಮದುವೆ ಕುರಿತು ಹೊಸ ಸುದ್ದಿ ಹೊರಬಿದ್ದಿದೆ. ಕಳೆದ ಅಕ್ಟೋಬರ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥವನ್ನು ಗುಟ್ಟಾಗಿ ಹೈದರಾಬಾದ್‌ನಲ್ಲಿ ಮಾಡಿಕೊಂಡಿದ್ದರು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ಫೆಬ್ರವರಿ ರಶ್ಮಿಕಾ ಹಾಗೂ ವಿಜಯ್ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ ಎಂದೂ ಹೇಳಲಾಗಿತ್ತು. ಇದೀಗ ಇವರ ಮದುವೆ ದಿನಾಂಕ ಹಾಗೂ ಮದುವೆ ನಡೆಯುವ ಸ್ಥಳ ಎಲ್ಲಿ ಎನ್ನುವುದು ರಿವೀಲ್ ಆಗಿದೆ.
ನಿಶ್ಚಿತಾರ್ಥದ ಸುದ್ದಿಯನ್ನು ರಶ್ಮಿಕಾ ಹಾಗೂ ವಿಜಯ್ ಎಲ್ಲೂ ಬಹಿರಂಗವಾಗಿ ಖಚಿತಪಡಿಸಲಿಲ್ಲ. ಆದರೆ ಈ ಸುದ್ದಿ ಹರಿದಾಡಿದ ನಂತರ ಇಬ್ಬರೂ ಕೈಯಲ್ಲೂ ವಿಶೇಷ ಉಂಗುರಗಳು ಗಮನ ಸೆಳೆದಿದ್ದವು. ಹೀಗಾಗಿ ನಿಶ್ಚಿತಾರ್ಥ ನಡೆದಿರುವುದು ನಿಜ ಎಂದೇ ಅಭಿಮಾನಿಗಳು ನಂಬಿದ್ದರು. ಇದೀಗ ಇವರ ಮದುವೆ ಸಮಾರಂಭಕ್ಕೆ ಸ್ಥಳ ನಿಗದಿಯಾಗಿದ್ದು, ರಾಜಸ್ಥಾನದ ಉದಯಪುರ ಅರಮನೆಯಲ್ಲಿ ಇವರ ಮದುವೆ ನೆರವೇರಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಫೆಬ್ರವರಿ 26ಕ್ಕೆ ಮದುವೆ
ನಟ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ನಂತರ ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ ಆಯೋಜಿಸಲಿದ್ದಾರೆ ಎಂದು ವರದಿಯಾಗಿದೆ. ನಿಶ್ಚಿತಾರ್ಥದಂತೆಯೇ ಈ ವಿವಾಹ ಕೂಡ ತುಂಬಾ ಖಾಸಗಿಯಾಗಿ ನಡೆಯಲಿದೆ. ಇಬ್ಬರ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರವೇ ಮದುವೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಕೆಲವೇ ಮಂದಿಗೆ ಆಹ್ವಾನ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಂದರ್ಶನವೊಂದರಲ್ಲಿ ಮದುವೆ ರಶ್ಮಿಕಾ ಅವರನ್ನು ಪ್ರಶ್ನೆ ಮಾಡಿದಾಗ, "ನಾನು ಮದುವೆಯನ್ನು ದೃಢೀಕರಿಸಲು ಅಥವಾ ನಿರಾಕರಿಸಲು ಇಷ್ಟಪಡುವುದಿಲ್ಲ. ಅದರ ಬಗ್ಗೆ ಯಾವಾಗ ಮಾತನಾಡಬೇಕೋ ಆಗ ನಾವು ಮಾತನಾಡುತ್ತೇವೆ" ಎಂದು ಅಚ್ಚರಿ ಹೇಳಿಕೆ ನೀಡಿದ್ದರು. ಅಕ್ಟೋಬರ್ 3ರಂದು ಖಾಸಗಿ ನಿಶ್ಚಿತಾರ್ಥ ನಡೆದಿದ್ದು, ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹ ಸಮಾರಂಭ ನಡೆಯಲಿದೆ ಎಂದು ವರದಿಗಳು ಹೇಳುತ್ತಿವೆ. ಈ ಸುದ್ದಿ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಫೋಟೋಗಳು ವೈರಲ್ ಆಗಿವೆ. ಅವರ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

2018ರಿಂದಲೂ ಮದುವೆ ಗಾಸಿಪ್
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಪ್ರೀತಿ ವಿಚಾರವಾಗಿ ಗಾಸಿಪ್‌ಗಳು 2018ರಿಂದಲೇ ಸುದ್ದಿಯಲ್ಲಿವೆ. ವಿಶೇಷವಾಗಿ "ಗೀತ ಗೋವಿಂದಂ" ಮತ್ತು "ಡಿಯರ್ ಕಾಮ್ರೇಡ್" ಚಿತ್ರಗಳ ನಂತರ ಇವರು ಡೇಟಿಂಗ್‌ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಒಟ್ಟಿಗೆ ಪ್ರವಾಸಕ್ಕೆ ತೆರಳಿದ್ದ ಫೋಟೋಗಳು, ವೇದಿಕೆಗಳಲ್ಲಿ ಕೈ ಹಿಡಿದುಕೊಂಡು ಕಾಣಿಸಿಕೊಳ್ಳುವುದು, "ಸಿಂಗಲ್ ಅಲ್ಲ" ಎಂಬ ಹೇಳಿಕೆಗಳು ಈ ವದಂತಿಗೆ ಪುಷ್ಟಿ ನೀಡಿದ್ದವು.
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಟಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿ ಮಿಂಚಿದರು. ನಂತರ ತಮಿಳು, ಬಾಲಿವುಡ್‌ನಲ್ಲಿಯೂ ರಶ್ಮಿಕಾ ಅವರು ಜನಪ್ರಿಯತೆ ಗಳಿಸಿದ್ದಾರೆ. ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಶ್ರೀವಲ್ಲಿ ಪಾತ್ರ ಮಾಡಿ ಗಮನ ಸೆಳೆದಿದ್ದರು. ಇತ್ತೀಚೆಗೆ ಅವರ "ದಿ ಗರ್ಲ್‌ಫ್ರೆಂಡ್", "ಥಾಮಾ" ಸಿನಿಮಾಗಳು ರಿಲೀಸ್ ಆಗಿದ್ದು, ಪುಷ್ಪ ಸರಣಿ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.












Click it and Unblock the Notifications