ಬ್ಲಾಕ್‌ಬಸ್ಟರ್ 'ಅನಿಮಲ್' ಬಳಿಕ 4.5 ಕೋಟಿ ಸಂಭಾವನೆ ಪಡೆಯುತ್ತಾರಾ ರಶ್ಮಿಕಾ ಮಂದಣ್ಣ?: ನಟಿ ಹೇಳಿದ್ದೇನು?
ಮುಂಬೈ, ಫೆಬ್ರವರಿ 07: ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಮಾಡಲಿ.. ಸಿನಿಮಾ ಸಕ್ಸಸ್ ಆಗಲಿ, ಸೋಲು ಕಾಣಲಿ.. ಒಟ್ಟು ಸುದ್ದಿಯಲ್ಲಿರುತ್ತಾರೆ. ಒಮದಲ್ಲ ಒಂದು ವಿಷಯಕ್ಕೆ ಸದಾ ಚರ್ಚೆಯಲ್ಲಿ ಇರುತ್ತಾರೆ. ಇತ್ತೀಚೆಗೆ ಬಿಡುಗಡೆಯಾದ 'ಅನಿಮಲ್' ಸಿನಿಮಾ ಯಶಸ್ಸಿನ ನಂತರ ಅವರ ಸಂಭಾವನೆ ಬಗ್ಗೆ ಸಕತ್ ಚರ್ಚೆ ನಡೆಯುತ್ತಿದೆ.
ಕನ್ನಡದ ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟವರು. ಬಳಿಕ ತೆಲುಗು, ತಮಿಳು ಸಿನಿಮಾಗಳ ಮೂಲಕ ಈಗ ಬಾಲಿವುಡ್‌ಗೆ ಕಾಲಿಟ್ಟು ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ. ಈಗ 'ಅನಿಮಲ್' ಸಿನಿಮಾ ಸಕತ್ ಸಕ್ಸಸ್ ಕಂಡಿದೆ. 'ಪುಷ್ಪ: ದಿ ರೈಸ್'ನಂತಹ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೇ ವೇಳೆ ರಶ್ಮಿಕಾ ಮಂದಣ್ಣ ಅವರ ಸಂಭಾವನೆಯ ಬಗ್ಗೆ ಜನರು ಕುತೂಹಲ ಹೊರಹಾಕಿದ್ದು, ಪ್ರತಿ ಚಿತ್ರಕ್ಕೆ 4 ರಿಂದ 4.5 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಯೊಂದು ಹಬ್ಬಿದೆ.

4 ರಿಂದ 4.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಾ ಕಿರಿಕ್ ಬೆಡಗಿ?
ಅನಿಮಲ್ ಸಿನಿಮಾ ಯಶಸ್ಸಿನ ಬಳಿಕ ರಶ್ಮಿಕಾ ಮಂದಣ್ಣ ತನ್ನ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಮುಂದಿನ ಪ್ರತಿ ಚಿತ್ರಕ್ಕೆ 4 ರಿಂದ 4.5 ಕೋಟಿ ರೂಪಾಯಿ ಪಡೆಯುತ್ತಾರೆ ಎಂಬ ವದಂತಿಗಳಿವೆ. ಇದು ಸಾಕಷ್ಟು ಸುದ್ದಿಯಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಸುದ್ದಿಯಾಗಿದೆ. ಇದಕ್ಕೆ ನಟಿ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ.
ಫಿಲ್ಮಿ ಬೌಲ್ ಎಂಬ ಆನ್‌ಲೈನ್ ಪೋರ್ಟಲ್ ತನ್ನ ಟ್ವಿಟರ್ ಖಾತೆಯಲ್ಲಿ, " ಅನಿಮಲ್ ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನು ಮತ್ತೆ ಹೆಚ್ಚಿಸಿಕೊಂಡಿದ್ದಾರೆ. ಆಂತರಿಕ ವರದಿಗಳಿಂದ, ಪ್ರಸ್ತುತ, ಅವರು ಪ್ರತಿ ಚಿತ್ರಕ್ಕೆ ಸುಮಾರು 4 - 4.5 ಅನ್ನು ಸಂಭಾವನೆ ಪಡೆಯುತ್ತಾರೆ" ಎಂದು ತಿಳಿಸಿತ್ತು.

ಈ ಊಹಾಪೋಹಗಳು ಕೈ ಮೀರುವ ಮುನ್ನವೇ ಪ್ರತಿಕ್ರಿಯಿಸಿದ ನಟಿ ರಶ್ಮಿಕಾ ಮಂದಣ್ಣ, "ಯಾರು ಇದೆಲ್ಲಾ ಹೇಳುತ್ತಾರೆ..? ನನಗೆ ಆಶ್ಚರ್ಯವಾಗುತ್ತದೆ. ಇದನ್ನೆಲ್ಲಾ ನೋಡಿದ ನಂತರ ನಾನು ಇದನ್ನು ನಿಜವಾಗಿಯೂ ಪರಿಗಣಿಸಬೇಕು ಎಂದು ಅನ್ನಿಸುತ್ತಿದೆ. ನನ್ನ ನಿರ್ಮಾಪಕರು ಯಾಕೆ ಇಷ್ಟೊಂದು ಸಂಭಾವನೆ ಎಂದು ಕೇಳಿದರೆ, ಆಗ ನಾನು 'ಇಲ್ಲಿನ ಮಾಧ್ಯಮಗಳು ಇದನ್ನು ಹೇಳುತ್ತಿವೆ ಸಾರ್ ಮತ್ತು ನಾನು ಅವರ ಮಾತಿಗೆ ತಕ್ಕಂತೆ ಬದುಕಬೇಕು ಎಂದು ನಾನು ಭಾವಿಸುತ್ತೇನೆ.. ನಾನು ಏನು ಮಾಡಲಿ...? ಎಂದು ಹೇಳುತ್ತೇನೆ" ಎಂದಿದ್ದಾರೆ.
ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಕೊನೆಯದಾಗಿ ಬಾಲಿವುಡ್ ಸಿನಿಮಾ 'ಅನಿಮಲ್'ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವನ್ನು ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಸಹನಟನಾಗಿ ಕಾಣಿಸಿಕೊಂಡಿದ್ದಾರೆ. ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಗೀತಾಂಜಲಿ ಪಾತ್ರದಲ್ಲಿ ನಟಿಸಿದ್ದಾರೆ.
ರಶ್ಮಿಕಾ ಮಂದಣ್ಣ ಮುಂಬರುವ ಸಿನಿಮಾಗಳು
ರಶ್ಮಿಕಾ ಮಂದಣ್ಣ ಸದ್ಯ ಹಲವು ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಪುಷ್ಪ ಸೀಕ್ವೆಲ್ ಪುಷ್ಪ: ದಿ ರೂಲ್‌ನಲ್ಲಿ ಮತ್ತೆ ಶ್ರೀವಲ್ಲಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದು, ಅಲ್ಲು ಅರ್ಜುನ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ತೆಲುಗಿನ 'ರೇನ್‌ಬೋ' ಮತ್ತು 'ದಿ ಗರ್ಲ್‌ಫ್ರೆಂಡ್' ಚಿತ್ರಗಳ ಶೂಟಿಂಗ್‌ನಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದಲ್ಲದೆ ಹಿಂದಿ ಚಿತ್ರ 'ಚಾವಾ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.












Click it and Unblock the Notifications