Ranabaali ಚಿತ್ರದ ಜಯಮ್ಮ ಪಾತ್ರಕ್ಕೆ ಸಿಕ್ಕ ಪ್ರೀತಿಗೆ ಭಾವುಕರಾದ ರಶ್ಮಿಕಾ, ಪತಿ ವಿಜಯ್ ದೇವರಕೊಂಡ ಬಗ್ಗೆ ಹೇಳಿದ್ದೇನು?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ರಣಬಲಿ ಸಿನಿಮಾ ಬಿಡುಗಡೆಯಾಗಿದ್ದು ಅದಕ್ಕೆ ಸಿಕ್ಕ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರದಲ್ಲಿ ಜಯಮ್ಮ ಎಂಬ ಹಳ್ಳಿ ಸೊಗಡಿನ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿರುವ ನಟಿ, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸುದೀರ್ಘ ಪತ್ರವೊಂದನ್ನ ಹಂಚಿಕೊಂಡಿದ್ದಾರೆ.

ಸ್ಟಾರ್ ನಟ ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ, ವಿಮರ್ಶಕರಿಂದ ಸಿಗುತ್ತಿರುವ ಅಭೂತಪೂರ್ವ ಬೆಂಬಲ ಕಂಡು ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

Rashmika Mandanna Overwhelmed By Ranabaali Success Pens Emotional Note For Vijay amp amp Fans Today

ಜಯಮ್ಮ ಪಾತ್ರ: ಅಪ್ಪಟ ಪ್ರೀತಿ ಮತ್ತು ತ್ಯಾಗದ ಸಂಕೇತ

ರಶ್ಮಿಕಾ ಮಂದಣ್ಣ ತಮ್ಮ ಪೋಸ್ಟ್‌ನಲ್ಲಿ ತಾನು ನಿರ್ವಹಿಸಿದ 'ಜಯಮ್ಮ' ಪಾತ್ರದ ಬಗ್ಗೆ ವಿಶೇಷವಾಗಿ ಬರೆದುಕೊಂಡಿದ್ದಾರೆ. "ಜಯಮ್ಮ ಎಂದರೆ ಅಪ್ಪಟ ಪ್ರೀತಿಯ ಮೂರ್ತಿ. ಒಬ್ಬ ಮಹಿಳೆಯ ನಿಜವಾದ ಶಕ್ತಿ ಹಾಗೂ ಅವಳ ಜವಾಬ್ದಾರಿ ಏನು ಎಂಬುದನ್ನ ಈ ಪಾತ್ರ ನನಗೆ ಬಹಳ ಹತ್ತಿರದಿಂದ ಕಲಿಸಿದೆ. ತನ್ನ ಜನರಿಗಾಗಿ ಸದಾ ಮುಂಚೂಣಿಯಲ್ಲಿ ನಿಲ್ಲುವುದು, ಯಾವುದೇ ಆಪತ್ತು ಬಂದರೂ ಅವರನ್ನ ರಕ್ಷಿಸುವುದು ಮತ್ತು ತನ್ನೆಲ್ಲಾ ಪ್ರೀತಿಯನ್ನ ಷರತ್ತುಗಳಿಲ್ಲದೆ ಧಾರೆ ಎರೆಯುವುದೇ ಜಯಮ್ಮನ ವ್ಯಕ್ತಿತ್ವ" ಎಂದು ಅವರು ಹೇಳಿದ್ದಾರೆ.

ಚಿತ್ರದಲ್ಲಿನ ಜಯಮ್ಮ ಪಾತ್ರ ಮತ್ತು ಒಟ್ಟಾರೆ ರಣಬಲಿಗೆ ಚಿತ್ರಕ್ಕೆ ಸಿಗುತ್ತಿರುವ ಪ್ರೀತಿ ನೋಡಿ ನನ್ನ ಮನಸ್ಸು ತುಂಬಿ ಬಂದಿದೆ, ಈ ಸಂತೋಷವನ್ನ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಅವರು ಭಾವುಕರಾಗಿದ್ದಾರೆ.

ರಣಬಲಿ ಸಿನಿಮಾ: ಒಗ್ಗಟ್ಟು ಮತ್ತು ಹೋರಾಟದ ಕಥೆ

ಈ ಚಿತ್ರ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ, ಅದರ ಆಚೆಗೆ ಸಮಾಜಕ್ಕೆ ಬೇಕಾದ ಒಂದು ಒಗ್ಗಟ್ಟಿನ ಸಂದೇಶವನ್ನ ಸಾರುತ್ತದೆ ಎನ್ನುತ್ತಾರೆ ರಶ್ಮಿಕಾ. "ನಮ್ಮ ಸಮುದಾಯದ ಆಂತರಿಕ ಶಕ್ತಿ, ನಾವು ನಂಬಿರುವ ದೇವರ ಮೇಲಿನ ಅಚಲವಾದ ನಂಬಿಕೆ, ಎಷ್ಟೇ ಕತ್ತಲು ಆವರಿಸಿದರೂ, ಕಷ್ಟಗಳು ಎದುರಾದರೂ ಸಣ್ಣ ಸಣ್ಣ ಖುಷಿಯನ್ನ ಒಟ್ಟಾಗಿ ಆಚರಿಸುವ ವಿಶಿಷ್ಟ ಗುಣವನ್ನ ರಣಬಲಿ ಅದ್ಭುತವಾಗಿ ತೆರೆಯ ಮೇಲೆ ತಂದಿದೆ. ಯಾವುದೇ ಹೊರಗಿನ ದುಷ್ಟ ಶಕ್ತಿಗಳು ನಮ್ಮ ಮೇಲೆ ದಬ್ಬಾಳಿಕೆ ಮಾಡಲು ಬಂದಾಗ, ನಾವು ಕೇವಲ ಮೂಕ ಪ್ರೇಕ್ಷಕರಂತೆ ಸುಮ್ಮನೆ ನಿಂತು ನೋಡುವುದಿಲ್ಲ. ನಾವೆಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಅವರ ವಿರುದ್ಧ ಹೋರಾಡುತ್ತೇವೆ. ಅದೇ ಈ ಚಿತ್ರದ ಜೀವಾಳ" ಎಂದು ರಶ್ಮಿಕಾ ಚಿತ್ರದ ತಿರುಳನ್ನು ಬಿಚ್ಚಿಟ್ಟಿದ್ದಾರೆ.

ಜೊತೆಗೆ, ಇದೊಂದು ಅದ್ಭುತ ಕಲಾಕೃತಿಯಾಗಿದ್ದು, ಪ್ರತಿಯೊಬ್ಬರೂ ಚಿತ್ರಮಂದಿರದಲ್ಲೇ ಹೋಗಿ ಈ ದೃಶ್ಯಕಾವ್ಯದ ಅನುಭವವನ್ನ ಪಡೆಯಬೇಕು ಎಂದು ಅವರು ಸಿನಿಪ್ರಿಯರಲ್ಲಿ ಮನವಿ ಮಾಡಿದ್ದಾರೆ.

ಪತಿ ವಿಜಯ್‌ ದೇವರಕೊಂಡಗೆ ನಾನು ನಿಮ್ಮ ಅಭಿಮಾನಿ ಎಂದ ರಶ್ಮಿಕಾ

ನಿರ್ದೇಶಕ ರಾಹುಲ್ ಸಂಕೃತ್ಯನ್ ಅವರ ನಿರ್ದೇಶನದ ಬಗ್ಗೆಯೂ ರಶ್ಮಿಕಾ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ರಾಹುಲ್ ಅವರನ್ನ 'ಭಾರತೀಯ ಚಿತ್ರರಂಗದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರು' ಎಂದು ಕೊಂಡಾಡಿರುವ ರಶ್ಮಿಕಾ, ಅವರ ಕಥೆ ಹೇಳುವ ಶೈಲಿ ಅದ್ಭುತವಾಗಿದ್ದು, ಅವರ ಈ ಕಲೆ ಸದಾ ಕಾಲ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದ್ದಾರೆ.

ಇನ್ನು, ತಮ್ಮ ನೆಚ್ಚಿನ ಸಹನಟ ಮತ್ತು ಪತಿ ವಿಜಯ್ ದೇವರಕೊಂಡ ಬಗ್ಗೆ ಬರೆಯುತ್ತಾ, "ನಾನು ಮೊದಲಿನಿಂದಲೂ ಹೇಳಿದಂತೆ, ನಾನು ಯಾವಾಗಲೂ ನಿಮ್ಮ ಕೆಲಸದ ದೊಡ್ಡ ಅಭಿಮಾನಿ. ನಿಮ್ಮ ಕಠಿಣ ಶ್ರಮಕ್ಕೆ ಇಂದು ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವುದನ್ನು ನೋಡಿ ನನಗೆ ಅತ್ಯಂತ ಸಂತೋಷ, ಶಾಂತಿ ಮತ್ತು ನೆಮ್ಮದಿ ಸಿಕ್ಕಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳಿಗೆ ರಶ್ಮಿಕಾ ಕೃತಜ್ಞತೆ

ಕೊನೆಯಲ್ಲಿ, ಇಡೀ ಚಿತ್ರತಂಡದ ಒಗ್ಗಟ್ಟಿನ ಶ್ರಮವನ್ನ ಸ್ಮರಿಸಿರುವ ರಶ್ಮಿಕಾ, ಈ ಚಿತ್ರವನ್ನ ಇಷ್ಟು ಸುಂದರವಾಗಿ ರೂಪಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಚಿತ್ರವನ್ನು ಈಗಾಗಲೇ ವೀಕ್ಷಿಸಿ, ಗೆಲ್ಲಿಸಿದ ಪ್ರತಿಯೊಬ್ಬರಿಗೂ ದೊಡ್ಡ 'ಬೋನ್-ಕ್ರಷಿಂಗ್ ಹಗ್ಸ್' (ಬಿಗಿಯಾದ ಅಪ್ಪುಗೆ) ಕಳುಹಿಸಿದ್ದಾರೆ.

"ನೀವು ಚಿತ್ರವನ್ನ ಹಾಗೂ ನನ್ನ ಜಯಮ್ಮ ಪಾತ್ರವನ್ನ ಇಷ್ಟಪಡುತ್ತಿರುವುದು ನನಗೆ ಬಹಳ ಮುಖ್ಯ. ನೀವು ಥಿಯೇಟರ್‌ನಿಂದ ಹೊರಬಂದ ಬಹಳ ಕಾಲದ ಮೇಲೂ ರಣಬಲಿ ಮತ್ತು ಜಯಮ್ಮ ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ ಎಂದು ನಾನು ಭಾವಿಸುತ್ತೇನೆ - ಪ್ರೀತಿಯಿಂದ ನಿಮ್ಮ ಜಯಮ್ಮ" ಎಂದು ಹೇಳುವ ಮೂಲಕ ತಮ್ಮ ಪತ್ರವನ್ನು ಮುಗಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+