Darshan Thoogudeepa: ದರ್ಶನ್ ಸ್ವಾಗತಕ್ಕೆ ಸಜ್ಜಾಗಿದ್ದ ಅಭಿಮಾನಿಗಳಿಗೆ ಶಾಕ್ ಕೊಟ್ಟ ಪೊಲೀಸರು!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್, ಪವಿತ್ರಾ ಗೌಡ ಮತ್ತು ತಂಡಕ್ಕೆ ದಿನಕ್ಕೊಂದು ಸಂಕಷ್ಟ ಎದುರಾಗುತ್ತಿದೆ. ಈಗಾಗಲೇ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಮತ್ತು ಗ್ಯಾಂಗ್ 50 ದಿನ ಕಳೆದಿದೆ. ಹೊರಗಡೆ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಿಡುಗಡೆಗಾಗಿ ದೇವರ ಬಳಿ ಪ್ರಾರ್ಥನೆ ಮಾಡುತ್ತಿದ್ದಾರೆ. ದರ್ಶನ್ ಹೊರಬಂದರೆ ಹಬ್ಬ ಮಾಡಲು ಕಾದಿದ್ದ ಅಭಿಮಾನಿಗಳಿಗೆ ಪೊಲೀಸರು ಈಗ ಶಾಕ್ ಕೊಟ್ಟಿದ್ದಾರೆ.
ದರ್ಶನ್ ಜಾಮೀನು ಅರ್ಜಿ ಸಲ್ಲಿಸಬೇಕು ಎಂದರೆ, ಪೊಲೀಸರು ಮೊದಲು ಚಾರ್ಜ್‌ಶೀಟ್ ಸಲ್ಲಿಸಬೇಕು. ಕೊಲೆ ಪ್ರಕರಣ ಆಗಿರುವ ಕಾರಣ, ಪೊಲೀಸರಿಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು 90 ದಿನಗಳ ಕಾಲಾವಕಾಶ ಇದ್ದು, ಎಲ್ಲಾ ಸಾಕ್ಷಿಗಳನ್ನು ಕಲೆಹಾಕಿರುವ ಪೊಲೀಸರು ಚಾರ್ಜ್‌ಶೀಟ್ ಅನ್ನು ಸಿದ್ದಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ಪ್ರಭಾವಿಯಾಗಿರುವ ಕಾರಣ, ಹೊರ ಬಂದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅಪಾಯವಿದೆ ಎಂದು ಪೊಲೀಸರಿಗೆ ಗೊತ್ತಿದ್ದುಅದಕ್ಕಾಗಿಯೇ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪೊಲೀಸರ ಲೆಕ್ಕಾಚಾರಗಳೇನು?
90 ದಿನಗಳ ಒಳಗಾಗಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಲು ಸಾಧ್ಯವಾಗದೇ ಇದ್ದರೆ, ಇದನ್ನೇ ಮುಂದಿಟ್ಟುಕೊಂಡು ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಅದಕ್ಕೆ 90 ದಿನಗಳಿಗೆ ಮುಂಚೆಯೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಚಾರ್ಜ್‌ಶೀಟ್ ಸಂಪೂರ್ಣವಾಗಿ ಸಲ್ಲಿಕೆ ಮಾಡಲು ಸಾಧ್ಯವಾಗದೇ ಇದ್ದರೆ, 90 ದಿನಗಳ ಒಳಗೆ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿ ಟ್ರಯಲ್ ಆರಂಭಿಸುವ ಲೆಕ್ಕಾಚಾರ ಪೊಲೀಸರದ್ದಾಗಿದೆ. ಇದರಿಂದ ದರ್ಶನ್‌ಗೆ ಜಾಮೀನು ಸಿಗುವುದು ಮತ್ತಷ್ಟು ತಡವಾಗಲಿದೆ ಎಂದು ಹೇಳಲಾಗಿದೆ.
ಚಾರ್ಜ್‌ಶೀಟ್ ಸಲ್ಲಿಸಲು ತಡ ಏಕೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ 17 ಆರೋಪಿಗಳಿದ್ದಾರೆ. ಇದರಿಂದಲೇ ಪೊಲೀಸರಿಗೆ ತನಿಖೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಕೊಲೆ ಪ್ರಕರಣದಲ್ಲಿ ಎಲ್ಲಾ ಆರೋಪಗಳ ಪಾತ್ರವೇನು, ಒಬ್ಬರಿಗೊಬ್ಬರಿಗೆ ಏನು ಸಂಬಂಧ, ಅವರ ವಿರುದ್ಧ ಸಾಕ್ಷಿಗಳು ಇದನ್ನೆಲ್ಲಾ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ವಿವರವಾಗಿ ಉಲ್ಲೇಖಿಸಬೇಕಿರುವುದರಿಂದಲೇ ಸುದೀರ್ಘ ಸಮಯ ತೆಗೆದುಕೊಳ್ಳುತ್ತಿದ್ದಾರೆ.
ಪಟ್ಟಣಗೆರೆ ಶೆಡ್‌ನಲ್ಲಿ ಹತ್ಯೆ ನಡೆದಿದ್ದರೂ, ಶವವನ್ನು ಬೇರೆಡೆ ಬಿಸಾಕಲಾಗಿತ್ತು. ಅದಕ್ಕೂ ಮುನ್ನ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತರಲಾಗಿತ್ತು. ಮೈಸೂರಿನಲ್ಲಿ ದರ್ಶನ್‌ರನ್ನು ಪೊಲೀಸರು ಬಂಧಿಸಿದ್ದರು. ಈ ಎಲ್ಲಾ ಕಡೆ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಸಾಕ್ಷಿಗಳ ಸಂಗ್ರಹ, ವಿಚಾರಣೆ, ಹೇಳಿಕೆ ದಾಖಲು, ಬೆರಳಚ್ಚು ವರದಿ, ರಕ್ತದ ಮಾದರಿ ಪರೀಕ್ಷೆ, ಮೊಬೈಲ್ ಟವರ್ ಲೊಕೇಷನ್, ಕಾಲ್ ರೆಕಾರ್ಡಿಂಗ್, ಮೆಸೇಜ್‌ಗಳು ಎಲ್ಲವನ್ನೂ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಸಲ್ಲಿಸಬೇಕು. ಎಲ್ಲಾ ಸಾಕ್ಷಿಗಳು ತಾಳೆ ಆಗಬೇಕು, ಇಲ್ಲವಾದಲ್ಲಿ ಕಾನೂನಿನಲ್ಲಿ ಆರೋಪಿಗಳು ತಪ್ಪಿಸಿಕೊಳ್ಳುವ ಅವಕಾಶ ಇದ್ದು, ಪೊಲೀಸರು ಎಚ್ಚರಿಕೆಯಿಂದ ಚಾರ್ಜ್‌ಶೀಟ್ ಸಿದ್ದಪಡಿಸುತ್ತಿದ್ದಾರೆ.











Click it and Unblock the Notifications