Bigg Boss: ಸುದೀಪ್ ಬಳಿಕ ಬಿಗ್ ಬಾಸ್‌ಗೆ ಮತ್ತೊಂದು ಶಾಕ್; ನೋಟಿಸ್ ಕೊಟ್ಟ ಪೊಲೀಸರು
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಕನ್ನಡ ನಿರೂಪಣೆಯಿಂದ ಹೊರಬರುವುದಾಗಿ ಸುದೀಪ್ ಹೇಳಿದ ಬೆನ್ನಲ್ಲೇ ಕಾರ್ಯಕ್ರಮ ಆಯೋಜಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕುಂಬಳಗೋಡು ಠಾಣೆ ಪೊಲೀಸರು ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ವರ್ಗ , ನರಕ ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಲಾಗಿತ್ತು. ಬಂಧೀಖಾನೆ ರೀತಿ ಸೆಟ್ ಹಾಕಿದ್ದು ಅಲ್ಲಿ ಕೆಲವು ಸ್ಪರ್ಧಿಗಳನ್ನು ಇರಿಸಲಾಗಿತ್ತು. ಮಹಿಳಾ ಸ್ಪರ್ಧಿಗಳು ಕೂಡ ನರಕದ ಸೆಟ್‌ನಲ್ಲಿದ್ದರು, ಅವರಿಗೆ ಶೌಚಕ್ಕೆ ಹೋಗಲು ಸ್ವರ್ಗದಲ್ಲಿದ್ದ ಸ್ಪರ್ಧಿಗಳು ಅನುಮತಿ ನೀಡಬೇಕಿತ್ತು, ಇದು ಮಾನವ ಹಕ್ಕುಗಳ ಉಲ್ಲಂಘನೆ, ಮತ್ತು ಯಾವುದೇ ಖಾಸಗಿ ವ್ಯಕ್ತಿಗೆ ವ್ಯಕ್ತಿಗಳನ್ನು ಬಂಧಿಸುವ ಅಧಿಕಾರ ಇರುವುದಿಲ್ಲ ಎಂದು ಆಕ್ಷೇಪಣೆ ವ್ಯಕ್ತಪಡಿಸಿದ್ದ ಮಹಿಳಾ ಆಯೋಗ, ಪೊಲೀಸ್ ಠಾಣೆಗೆ ದೂರು ನೀಡಿತ್ತು.

ಮಹಿಳಾ ಆಯೋಗದ ದೂರಿನ ಬೆನ್ನಲ್ಲೇ ಕುಂಬಳಗೋಡು ಪೊಲೀಸರು ಹೇಳಿಕೆ ದಾಖಲಿಸಲು ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ಹೋಗಿದ್ದರು. ಆದರೆ ಈ ಸಂದರ್ಭದಲ್ಲಿ ಆಯೋಜಕರು ಪೊಲೀಸರಿಗೆ ಸಿಗದ ಕಾರಣ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಭಾನುವಾರ ಆಯೋಜಕರು ಠಾಣೆಗೆ ಬಂದು ಹೇಳಿಕೆ ನೀಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಬಿಗ್ ಬಾಸ್ ಮನೆಗೆ ನುಗ್ಗಿದ ಕ್ರೇನ್
ಕಾನೂನಾತ್ಮಕ ಸಮಸ್ಯೆ ಎದುರಾಗುವ ಭೀತಿ ಬೆನ್ನಲ್ಲೇ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ, ನರಕ ಕಲ್ಪನೆಗೆ ತಿಲಾಂಜಲಿ ಇಡಲಾಗಿದೆ. ಕ್ರೇನ್ ತೆಗೆದುಕೊಂಡು ಬಂದು ನರಕದ ಸೆಟ್‌ನಲ್ಲಿದ್ದ ಕಂಬಿಗಳನ್ನು ಕಿತ್ತುಕೊಂಡು ಹೋಗಲಾಗಿದೆ.
ಇದೇ ನನ್ನ ಕೊನೆಯ ಸೀಸನ್
ಬಿಗ್ ಬಾಸ್ ಕನ್ನಡದ 11ನೇ ಆವೃತ್ತಿಯಲ್ಲಿ ನಿರೂಪಕರಾಗಿ ಕೆಲಸ ಮಾಡುತ್ತಿರುವ ಕಿಚ್ಚ ಸುದೀಪ್ ಇದೇ ನಿರೂಪಕನಾಗಿ ಇದೇ ನನ್ನ ಕೊನೆಯ ಸೀಸನ್ ಎಂದು ಖಚಿತಪಡಿಸಿದ್ದಾರೆ. ಸತತವಾಗಿ 11 ಆವೃತ್ತಿಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದಿದ್ದ ಸುದೀಪ್, ಮುಂದಿನ ಸೀಸನ್‌ನಲ್ಲಿ ನಾನು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಕಾರ್ಯಕ್ರಮದಿಂದ ಹೊರ ಬರಲು ಯಾವುದೇ ಕಾರಣವನ್ನು ನೀಡದೇ ಇದ್ದರೂ, ಸುದೀಪ್ ಅವರ ಈ ನಿರ್ಧಾರ ಕೆಲವು ಅಭಿಮಾನಿಗಳಿಗೆ ಬೇಸರ ತಂದರೆ ಇನ್ನೂ ಕೆಲವರು ಖುಷಿಪಟ್ಟಿದ್ದಾರೆ. ಸುದೀಪ್ ನಿರೂಪಣೆ ಬಿಟ್ಟು ಉತ್ತಮ ಸಿನಿಮಾ ಮಾಡುವತ್ತ ಗಮನ ಹರಿಸಲಿ ಎಂದು ಕೆಲವು ಅಭಿಮಾನಿಗಳು ಕೇಳಿದ್ದಾರೆ.
ಇದು ನನ್ನ ಕೊನೆಯ ಬಿಗ್ ಬಾಸ್ ಕಾರ್ಯಕ್ರಮ ನೀವು ತೋರಿದ ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳು. ಈ ಆವೃತ್ತಿಯನ್ನು ದೊಡ್ಡ ಮೊತ್ತದಲ್ಲಿ ಯಶಸ್ವಿಯಾಗಿಸೋಣ, ನನ್ನ ನಿರ್ಧಾರಕ್ಕೆ ಕಲರ್ಸ್ ಕನ್ನಡ ಮತ್ತು ಅಭಿಮಾನಿಗಳು ಗೌರವಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.












Click it and Unblock the Notifications