ಪಾರು ಧಾರಾವಾಹಿ ನಟನಿಗೆ ಏನಾಯ್ತು? ಗುರುತೇ ಸಿಗದಂತಾದ ಮ್ಯಾಕ್ಸ ಖ್ಯಾತಿಯ ಶ್ರೀಧರ್
ಪಾರು, ವಧು ಸೇರಿದಂತೆ ಕನ್ನಡದ ಕೆಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದ ನಟ ಶ್ರೀಧರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ಫೆಕ್ಷನ್‌ನಿಂದ ತೀವ್ರ ಅಸ್ವಸ್ಥಗೊಂಡಿರುವ ನಟ ಶ್ರೀಧರ್ ಅವರು ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ವೆಚ್ಚ ಭರಿಸಲಾಗದೇ ಧನ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಸದ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಶ್ರೀಧರ್ ಅವರನ್ನು ತಾಯಿ ನೋಡಿಕೊಳ್ಳುತ್ತಿದ್ದು, ಖಾಸಗಿ ಆಸ್ಪತ್ರೆಯಾದ ಕಾರಣ ಪ್ರತಿ ದಿನ ಚಿಕಿತ್ಸೆಗೆ 10 ರಿಂದ 15 ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ಆದಾಯ ಇಲ್ಲದೇ ಹಣ ಸಹಾಯಕ್ಕಾಗಿ ನಟ ಹಾಗೂ ಅವರ ಆಪ್ತರು ಮನವಿ ಮಾಡಿದ್ದಾರೆ.

ನಟ ಶ್ರೀಧರ್ ಮಾಡಿದ್ದಾರೆ ಎನ್ನಲಾದ ಮೆಸೇಜ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 'ನಮಸ್ಕಾರ, ನಾನು ಶ್ರೀಧರ. ಇದ್ದಕ್ಕಿದ ಹಾಗೆ ಅನಾರೋಗ್ಯಕ್ಕೆ ತುತ್ತಾಗಿ ಬಹಳಷ್ಟು ಸಂಕಷ್ಟದಲ್ಲಿದ್ದೇನೆ. ಆಸ್ಪತ್ರೆಯ ಖರ್ಚನ್ನು ಭರಿಸಲಾಗದಷ್ಟು ತೊಂದರೆಯಾಗಿದೆ. ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಒಂದು ದಿನಕ್ಕೆ ಆಸ್ಪತ್ರೆಯ ಖರ್ಚು, ಮಾತ್ರೆಯ ಖರ್ಚು 10ರಿಂದ 15 ಸಾವಿರ ರೂಪಾಯಿ ಆಗುತ್ತಿದೆ. ಇದ್ದ ಉಳಿತಾಯದ ಹಣ, ಸಹಾಯದ ಹಣ ಎಲ್ಲವೂ ಮುಗಿದುಹೋಗಿದೆ. ದಯಮಾಡಿ ತಾವೆಲ್ಲರೂ ಕೈಲಾದ ಹಣದ ಸಹಾಯ ಮಾಡಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ನನ್ನನ್ನು ಬದುಕಿಸಲು ಪ್ರಯತ್ನಿಸಿ, ಕೈಲಾದಷ್ಟು ಹಣದ ಸಹಾಯ ಮಾಡಿ' ಎಂದಿರುವ ನಟ ಶ್ರೀಧರ್ ಗೂಗಲ್ ಪೇ ನಂಬರ್ ಹಾಗೂ ಬ್ಯಾಂಕಿನ ವಿವರಗಳನ್ನು ನೀಡಿದ್ದಾರೆ.
ನಟ ಶ್ರೀಧರ್ ಅವರ ಪರ ಕಮಲಿ ಧಾರಾವಾಹಿ ಖ್ಯಾತಿಯ ಅಂಕಿತಾ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. 'ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಅಂಕಿತಾ. ಈ ವಿಡಿಯೋ ಮಾಡುತ್ತಿರುವ ಉದ್ದೇಶ ನಮ್ಮ ಕಿರುತೆರೆ ಹಾಗೂ ಬೆಳ್ಳಿತೆರೆಯ ನಟರಾದ ಶ್ರೀಧರ್ ಎನ್ ಅವರು, ಪಾರು ಧಾರಾವಾಹಿ ಹಾಗೂ ಮಾಕ್ಸ್ ಸಿನಿಮಾದಲ್ಲಿ ನೀವು ಅವರನ್ನು ನೋಡಿರುತ್ತೀರಿ. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಆಸ್ಪತ್ರೆಗೆ ಬಹಳ ಖರ್ಚಾಗುತ್ತಿದೆ. ಹೀಗಾಗಿ ನಿಮ್ಮೆಲ್ಲರ ಸಹಾಯ ಬೇಕು ಅಂತಾ ಅವರು ಕೇಳಿಕೊಳ್ಳುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ಅವರ ತಾಯಿ ಬಿಟ್ಟು ಬೇರೆ ಕುಟುಂಬಸ್ಥರು ಯಾರೂ ಇಲ್ಲ. ಹೀಗಾಗಿ ನಾನು ಎಲ್ಲಾ ಕಲಾವಿದರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು' ನಟಿ ಅಂಕಿತಾ ಮನವಿ ಮಾಡಿದ್ದಾರೆ.












Click it and Unblock the Notifications