Mata Guruprasad: ಗುರುಪ್ರಸಾದ್ ಆತ್ಮಹ*ಗೆ ಶರಣು: ಸಂಬಂಧಿ ರವಿ ಹೇಳಿದ್ದೇನು?
ಸಾಲದ ಕಿರುಕುಳಕ್ಕೆ ಬೇಸತ್ತು ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ (52) ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುಪ್ರಸಾದ್ ಕನ್ನಡದಲ್ಲಿ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿ ಡೇರ್ ಡೆವಿಲ್ ಡೈರೆಕ್ಟರ್, 'ಅಕ್ಷರ' ಮಾಂತ್ರಿಕ ಎಂದು ಹೆಸರು ಮಾಡಿದ್ದರು.
ಎದ್ದೇಳು ಮಂಜುನಾಥ, ಸೂಪರ್ ರಂಗ, ಮಠ, ಗುರು ಸೇರಿದಂತೆ ಇನ್ನಿತರ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ ಅವರ ಆತ್ಮಹತ್ಯೆ ಚಂದನವನವನ್ನು ಬೆಚ್ಚಿಬೀಳಿಸಿದೆ. ಈ ಬಗ್ಗೆ ಅವರ ಸಂಬಂಧಿ ರವಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

'ನಮಗೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ವಿಚಾರ ಟಿವಿಯಲ್ಲಿ ಪ್ರಸಾರ ಆದಾಗಲೇ ಗೊತ್ತಾಗಿದ್ದು. ಎಷ್ಟು ದಿನದ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಎರಡು ವಾರಗಳ ಹಿಂದೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು ಎನ್ನುವ ವಿಚಾರಣ ಈಗ ಗೊತ್ತಾಗಿದೆ. ಪುಸ್ತಕ ಖರೀದಿ ಮಾಡಿ ಹಣ ಕೊಟ್ಟಿಲ್ಲ ಎಂದು ಪುಸ್ತಕ ಮಳಿಗೆ ಮಾಲೀಕ ದೂರು ನೀಡಿದ್ದಾರೆ. ಐದು ಸೆಟ್ ಪುಸ್ತಕಗಳಿಗೆ 65 ಸಾವಿರ ನೀಡಬೇಕಿತ್ತು. ಪುಸ್ತಕ ಖರೀದಿ ಮಾಡಿ ಹಣ ನೀಡದೇ ಇದ್ದರಿಂದ ಜಯನಗರದ ಪೊಲೀಸ್ ಠಾಣೆಯಲ್ಲಿ ಪುಸ್ತಕ ಮಳಿಗೆ ಮಾಲೀಕ ದೂರು ನೀಡಿದ್ದಾರೆ ಎನ್ನುವ ವಿಚಾರ ಗೊತ್ತಾಗಿದೆ. ಇಷ್ಟು ಬಿಟ್ಟರೆ ನಮಗೆ ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ' ಎಂದು ಗುರುಪ್ರಸಾದ್ ಸಂಬಂಧಿ ರವಿ ಹೇಳಿದ್ದಾರೆ.
ಮಂಡ್ಯ ರಮೇಶ್ ಹಿರಿಯ ನಟ ಮಾತನಾಡಿ, 'ಗುರುಪ್ರಸಾದ್ ವಿಚಾರವಂತ, ಬುದ್ಧಿವಂತ, ಪ್ರಜ್ಞಾವಂತನೂ ಹೌದು. ತುಂಬಾ ಇನೋಸೆಂಟ್ ವ್ಯಕ್ತಿ. ನಮ್ಮ ಪಾತ್ರಗಳ ಯಶಸ್ಸು ಅವರಿಗೇ ಸಲ್ಲಬೇಕು. ಅವರು ಯಾರು ಹೇಳಿದ್ದನ್ನೂ ಕೇಳ್ತಾಯಿರಲಿಲ್ಲ. ತಾವು ಅಂದುಕೊಂಡಂತೆ ಸಿನಿಮಾ ಮಾಡೋರು. ತಾವು ಮಾಡಿದ್ದೇ ಹಾದಿಯಾಗಿತ್ತು. ಪವರ್ ಇತ್ತು. ಆದರೆ ಅದನ್ನು ಬಳಸಿಕೊಳ್ಳುವ ರೀತಿ ಸ್ವಲ್ಪ ಬೇರೆಯಾಗಿತ್ತು' ಎಂದಿದ್ದಾರೆ.
ನಟ ಜಗ್ಗೇಶ್ ಮಾತನಾಡಿ, 'ಅವರು ನಿರ್ದೇಶನದ ಮಠ ಸಿನಿಮಾದಲ್ಲಿ ನಾನು ನಟನೆ ಮಾಡಿದ್ದೆ. ಅವರೊಂದಿಗೆ ತುಂಬಾ ಚೆನ್ನಾಗಿ ಒಡನಾಟ ಇತ್ತು. ಆದರೆ ಸಾವಿರಾರು ಬಾರಿ ಅವರು ಆತ್ಮಹತ್ಯೆಯ ಬಗ್ಗೆ ಮಾತನಾಡಿದ್ದಾರೆ. ನಾನು ಸೋಲು ಕಂಡ ತಕ್ಷಣ ಸಾವು ಎಂದು ಸಾವಿರಾರು ಬಾರಿ ಹೇಳಿದ್ದಾರೆ. ನಾನು ಅವರಿಗೆ ಬುದ್ಧಿ ಹೇಳಿದ್ದೆ. ನಾನು ನೆನಪಿಟ್ಟು ಹೋಗ್ತೀನಿ ಅಂತಿದ್ದರು. ದಾಂಪತ್ಯದಲ್ಲಿ ಸಮಸ್ಯೆ ಇತ್ತು' ಎಂದಿದ್ದಾರೆ.












Click it and Unblock the Notifications