ಸಿನಿಪ್ರಿಯರಿಗೆ ಹಬ್ಬ.. ಇನ್ಮುಂದೆ ಮಲ್ಟಿಪ್ಲೆಕ್ಸ್‌ನಲ್ಲೂ ಟಿಕೆಟ್ ದರ ಇಷ್ಟೇ ಇರುತ್ತೆ!
ಈಗೆಲ್ಲ ಮಾಲ್‌ಗಳಲ್ಲಿರೋ ಮಲ್ಟಿಪ್ಲೆಕ್ಸ್‌ಗಳಿಗೆ ಸಿನಿಪ್ರೇಕ್ಷಕರು ನುಗ್ಗೋದು ಗ್ಯಾರಂಟಿ. ನೆಚ್ಚಿನ ಸಿನಿಮಾ ಹಾಯಾಗಿ ನೋಡಿ ಬರೋಣ ಅಂದ್ರೆ ಒಂದು ಟಿಕೆಟ್‌ಗೆ ಏನಿಲ್ಲ ಅಂದ್ರೂ ಸಾವಿರಾರು ರೂಪಾಯಿ ಕೊಡಬೇಕು. ಅಷ್ಟರಮಟ್ಟಿಗೆ ಟಿಕೆಟ್ ದರವನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಏರಿಸಿರುತ್ತಾರೆ ಎನ್ನುವುದು ಪ್ರೇಕ್ಷಕರ ಅಳಲು. ಹೀಗಾಗಿ ರಾಜ್ಯ ಸರ್ಕಾರ ಕೂಡ ಈ ದುಬಾರಿಗೆ ಕಡಿವಾಣ ಹಾಕಲು ಮುಂದಾಗಿದೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರ ಅಧಿಕವಾಗಿರುತ್ತದೆ ಎನ್ನುವ ಆರೋಪವಿದೆ. ಇಲ್ಲಿ ಟಿಕೆಟ್ ದರ ನಿಗದಿ ಮಾಡಲು ಯಾವುದೇ ಬಲವಾದ ಕಾನೂನುಗಳಿಲ್ಲದ ಕಾರಣ ಮನಬಂದಂತೆ ಟಿಕೆಟ್ ದರ ಏರಿಸಿ, ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎನ್ನುವ ದೂರಿದೆ. ಇನ್ನು ಸಿನಿಮಾ ಬಿಡುಗಡೆಯಾದ ಮೊದಲ ದಿನವಂತೂ 2000ರಿಂದ 3000 ರೂಪಾಯಿವರೆಗೂ ಟಿಕೆಟ್ ದರ ಇಟ್ಟಿರುತ್ತಾರೆ.

ಸಿನಿಮಾ ಮೇಲಿನ ಹುಚ್ಚಿಗೆ ಪ್ರೇಕ್ಷಕರು ಎಷ್ಟು ದುಬಾರಿಯಾದರೂ ಬಂದು ಸಿನಿಮಾ ನೋಡ್ತಾರೆ ಎಂಬುದನ್ನೇ ಮಲ್ಟಿಪ್ಲೆಕ್ಸ್‌ಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಹೇಳಲಾಗುತ್ತಿದೆ. ಹಾಗಾಗಿ ರಾಜ್ಯದಲ್ಲ ಸಿನಿಮಾ ಟಿಕೆಟ್ ದರಗಳನ್ನು ಏಕಮಾದರಿಯಲ್ಲಿ ನಿಗದಿ ಮಾಡಬೇಕು ಎಂದು ಹಲವು ವರ್ಷಗಳಿಂದಲೂ ಕೂಗು ಕೇಳಿಬರುತ್ತಿದೆ.
ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ರಾಜ್ಯ ಸರ್ಕಾರದ ಮುಂದೆ ಇದೇ ಬೇಡಿಕೆಯನ್ನಿಟ್ಟಿದೆ. ಟಿಕೆಟ್ ದರ ನಿಯಂತ್ರಣ ಸಂಬಂಧ ಮುಂದಿನ ಹತ್ತು ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮುಂದೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರ 250 ರೂಪಾಯಿ ಮೀರುವಂತಿಲ್ಲ ಎಂಬ ನಿಯಮ ಜಾರಿಯಾಗುವ ಸಾಧ್ಯತೆ ಇದೆ.
2017ರಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಮಾಡಲಾಗಿತ್ತು. ರಾಜ್ಯದಲ್ಲಿರುವ ಮಲ್ಟಿಪ್ಲೆಕ್ಸ್‌ಗಳು ದುಬಾರಿ ಟಿಕೆಟ್ ದರ ನಿಗದಿ ಮಾಡುತ್ತಿವೆ. ಇದರಿಂದ ಸಿನಿಮಾಪ್ರಿಯರಿಗೆ ಭಾರಿ ಸಮಸ್ಯೆ ಆಗುತ್ತಿದೆ ಎಂದು ವಾಣಿಜ್ಯ ಮಂಡಳಿ ಸರ್ಕಾರದ ಗಮನ ಸೆಳೆದಿತ್ತು. ಆಗಲೇ ಸಿದ್ದರಾಮಯ್ಯ ಅವರು ಟಿಕೆಟ್ ದರ ಏರಿಕೆಗೆ ಕಡಿವಾಣ ಹಾಕುವಂತೆ ವಾರ್ತಾ ಇಲಾಖೆಗೆ ಸೂಚಿಸಿತ್ತು. ಸಿಎಂ ನಿರ್ದೇಶನದ ಮೇರೆಗೆ ವಾರ್ತಾ ಇಲಾಖೆ ಕೂಡ ಆದೇಶವೂ ಹೊರಡಿಸಿತ್ತು ಎನ್ನಲಾಗಿದೆ.

ಬಳಿಕ ಸರ್ಕಾರದ ಆದೇಶಕ್ಕೆ ಮಲ್ಟಿಪ್ಲೆಕ್ಸ್‌ಗಳು ಭಾರಿ ವಿರೋಧ ವ್ಯಕ್ತಪಡಿಸಿ, ಕೋರ್ಟ್ ಮೆಟ್ಟಿಲೇರಿದ್ದವು. ಈ ಆದೇಶಕ್ಕೆ ಕೋರ್ಟ್‌ನಿಂದ ತಡೆ ಕೂಡ ತಂದಿದ್ದವು. ಸದ್ಯ ಕೋರ್ಟ್ ನೀಡಿದ್ದ ತಡೆ ಆದೇಶ ಈಗ ಕ್ಯಾನ್ಸಲ್ ಆಗಿದ್ದು, ರಾಜ್ಯ ಸರ್ಕಾರವು ಹೊಸ ಆದೇಶ ಹೊರಡಿಸಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ರಾಜ್ಯದಲ್ಲಿ ಸಿನಿಮಾ ಟಿಕೆಟ್ ದರ ನಿಯಂತ್ರಣದ ಬಗ್ಗೆ ಸಿಎಂ ಗಮನಕ್ಕೆ ತಂದಿದೆ. ಮುಂದಿನ 10 ದಿನಗಳಲ್ಲಿ ಟಿಕೆಟ್ ದರ ನಿಯಂತ್ರಣ ಸಂಬಂಧ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸುವ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.
ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರವು ಅಬ್ಬಬ್ಬಾ ಎಂದರೆ, 250 ರೂಪಾಯಿ ಮೀರುವುದಿಲ್ಲ. ಆದರೆ ಕರ್ನಾಟಕದ ಮಲ್ಪಿಪ್ಲೆಕ್ಸ್‌ಗಳಲ್ಲಿ ಸಾವಿರಾರು ರೂಪಾಯಿ ದಾಟುತ್ತಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ವಾಣಿಜ್ಯ ಮಂಡಳಿ ಸರ್ಕಾರಕ್ಕೆ ಕೋರಿದೆ. ಹಾಗಾಗಿ ಮೂಲಗಳ ಪ್ರಕಾರ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಇನ್ನು ಮುಂದೆ ಟಿಕೆಟ್ ದರ 250 ರೂಪಾಯಿ ಮೀರುವಂತಿಲ್ಲ ಎಂಬ ನಿಯಮ ಸದ್ಯದಲ್ಲೇ ಜಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ಬೇರೆ ಭಾಷೆಗಳ ಸಿನಿಮಾಗಳಿಗೂ ದುಬಾರಿ ಟಿಕೆಟ್ ದರ ವಿಧಿಸುತ್ತಿದ್ದಾರೆ. ಇದರಿಂದ ಕನ್ನಡದ ಸಿನಿಮಾಗಳಿಗೂ ಭಾರಿ ಹೊಡೆತ ಬೀಳುತ್ತಿದೆ. ಮೊದಲೇ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಎದುರಿಸುತ್ತಿವೆ. ಇದರ ನಡುವೆ ಟಿಕೆಟ್ ದರಗಳು ದುಬಾರಿಯಾದರೆ ಸಿನಿಮಾ ನೋಡಲು ಪ್ರೇಕ್ಷಕರ ಸಂಖ್ಯೆ ಕೂಡ ಕ್ಷೀಣಿಸಲಿದೆ ಎಂದು ಚಿತ್ರರಂಗದವರು ಅಳಲು ತೋಡಿಕೊಂಡಿದ್ದಾರೆ. ಒಂದು ವೇಳೆ ಸರ್ಕಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸದಿದ್ದರೆ, ನಾವೇ ಏನಾದ್ರೂ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications