Mrunal Thakur: ತೆಲುಗು ಹುಡುಗನನ್ನೇ ಮದುವೆಯಾಗಿ ಇಲ್ಲೇ ಸೆಟಲ್ ಆಗಿ: ನಟಿ ಮೃಣಾಲ್ ಠಾಕೂರ್‌ಗೆ ಅಲ್ಲು ಅರವಿಂದ್ ಸಲಹೆ
ನಟಿ ಮೃಣಾಲ್ ಠಾಕೂರ್ ಅವರು ತೆಲುಗು ಚಿತ್ರರಂಗದಲ್ಲಿ ಸದ್ಯ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸೀತಾರಾಮಂ ಸಿನಿಮಾ ಮೂಲಕ ದಕ್ಷಿಣ ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮೃಣಾಲ್ ಅವರ ನಟನೆಯ "ಡೆಕಾಯಿಟ್" (dacoit) ಸಿನಿಮಾ ಇತ್ತೀಚೆಗೆ ರಿಲೀಸ್ ಕೂಡ ಆಗಿದೆ. ಇದರ ನಡುವೆ ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ ಅವರು ನಟಿ ಮೃಣಾಲ್ ಅವರಿಗೆ ಕುತೂಹಲಕಾರಿ ಮತ್ತು ತಮಾಷೆಯ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ನೀವು ತೆಲುಗು ಹುಡುಗನನ್ನೇ ಮದುವೆಯಾಗಿ ಇಲ್ಲೇ ಹೈದರಾಬಾದ್‌ನಲ್ಲಿ ಸೆಟಲ್ ಆಗಿ ಎಂದು ನಟಿಗೆ ಸಲಹೆ ನೀಡಿದ್ದಾರೆ.
ಮದುವೆಯಾದ್ರೆ ಇಲ್ಲೇ ಇರುತ್ತೀರಿ
ನಟ ಅಡಿವಿ ಶೇಷ್ ಮತ್ತು ಮೃಣಾಲ್ ಠಾಕೂರ್ ನಟನೆಯ 'ಡೆಕಾಯಿಟ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಲ್ಲು ಅರವಿಂದ್ ಈ ಮಾತುಗಳನ್ನು ಹೇಳಿದ್ದಾರೆ. ವೇದಿಕೆಯ ಮೇಲೆ ಮೃಣಾಲ್ ಅವರ ನಟನೆಯನ್ನು ಶ್ಲಾಘಿಸಿದ ಅಲ್ಲು ಅರವಿಂದ್, "ನೀವು ಅದ್ಭುತವಾಗಿ ನಟಿಸುತ್ತೀರಿ. ನಿಮ್ಮನ್ನು ನಾವು ತೆಲುಗು ಚಿತ್ರರಂಗದಲ್ಲೇ ಉಳಿಸಿಕೊಳ್ಳಬೇಕೆಂದರೆ, ನೀವು ಇಲ್ಲೇ ಒಬ್ಬ ಒಳ್ಳೆಯ ಹುಡುಗನನ್ನು ಮದುವೆಯಾಗಬೇಕು. ಆಗ ನೀವು ಇಲ್ಲೇ ಇರುತ್ತೀರಿ, ನಾವು ನಿಮ್ಮಿಂದ ಇನ್ನು ಹೆಚ್ಚಿನ ಸಿನಿಮಾಗಳನ್ನು ನಿರೀಕ್ಷಿಸಬಹುದು" ಎಂದಿದ್ದಾರೆ.

ಲಾವಣ್ಯ ತ್ರಿಪಾಠಿಗೂ ಇದೇ ಮಾರು ಹೇಳಿದ್ದ ಅಲ್ಲು ಅರವಿಂದ್
ನಾನು ಈ ಹಿಂದೆ ನಟಿ ಲಾವಣ್ಯ ತ್ರಿಪಾಠಿಗೂ ಇದೇ ರೀತಿ ಹೇಳಿದ್ದೆ. ನೋಡಿ, ಅವರು ಇಂದು ಮೆಗಾ ಕುಟುಂಬದ ಸೊಸೆಯಾಗಿದ್ದಾರೆ (ವರುಣ್ ತೇಜ್ ಪತ್ನಿ). ಈಗ ನಿಮಗೂ ಅದೇ ರೀತಿ ಆಶೀರ್ವದಿಸುತ್ತಿದ್ದೇನೆ, ಇದು ನಿಜವಾಗಲಿ ಎಂದು ಅಲ್ಲು ಅರವಿಂದ್ ಹಾರೈಸಿದ್ದಾರೆ. ಈ ಮಾತಿನಿಂದ ನಟಿ ಮೃಣಾಲ್ ಠಾಕೂರ್ ಕ್ಷಣಕಾಲ ನಾಚಿ ನೀರಾದರು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಕ್ಲಿಪ್ ಭಾರಿ ವೈರಲ್ ಆಗುತ್ತಿದ್ದು, ಮೃಣಾಲ್ ಅಭಿಮಾನಿಗಳು "ಅಲ್ಲು ಅರವಿಂದ್ ಅವರ ಆಶೀರ್ವಾದ ಖಂಡಿತ ಫಲಿಸುತ್ತದೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಮೃಣಾಲ್ ಸ್ಟಾರ್ ಬದಲಿಸಿದ 'ಸೀತಾರಾಮಂ'
'ಸೀತಾರಾಮಂ' ಚಿತ್ರದ ಮೂಲಕ ತೆಲುಗು ವೀಕ್ಷಕರ ಮನಗೆದ್ದಿರುವ ಮೃಣಾಲ್, ಈಗ 'ಡೆಕಾಯಿಟ್' ಯಶಸ್ಸಿನ ಖುಷಿಯಲ್ಲಿದ್ದಾರೆ. ಜೊತೆಗೆ ಮೇ 22ರಂದು ತೆರೆಕಾಣಲಿರುವ ವರುಣ್ ಧವನ್ ಅಭಿನಯದ ಬಾಲಿವುಡ್ ಚಿತ್ರದಲ್ಲೂ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಡಿಮೆ ಅವಧಿಯಲ್ಲೇ ಮೃಣಾಲ್ ಠಾಕೂರ್ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಹೊರಹೊಮ್ಮಿದ್ದಾರೆ. 'ಸೀತಾರಾಮಂ' ಮತ್ತು 'ಹಾಯ್ ನಾನ್ನ' ಚಿತ್ರಗಳಲ್ಲಿನ ಅವರ ಸಹಜ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ಅಭಿನಯದ 'ಫ್ಯಾಮಿಲಿ ಸ್ಟಾರ್' ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡದಿದ್ದರೂ, ಮೃಣಾಲ್ ಅವರ ಅಭಿನಯಕ್ಕೆ ಮಾತ್ರ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.
ಅಲ್ಲು ಅರವಿಂದ್ ಅವರು ಮೃಣಾಲ್ ಮದುವೆಯ ಬಗ್ಗೆ ಮಾಡಿರುವ ಕಾಮೆಂಟ್ ಈಗ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಊಹೆಗಳನ್ನು ಮಾಡುತ್ತಿದ್ದಾರೆ. ಆದರೆ, ಮೃಣಾಲ್ ಠಾಕೂರ್ ಮಾತ್ರ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಸದ್ಯಕ್ಕೆ ಅವರು ತಮ್ಮ ವೃತ್ತಿಜೀವನದ ಮೇಲೆ ಸಂಪೂರ್ಣ ಗಮನ ಹರಿಸಿದ್ದಾರೆ. ವಿಭಿನ್ನ ಪಾತ್ರಗಳಿಗೆ ಹೆಸರಾಗಿರುವ ಮೃಣಾಲ್, ಈಗ 'ಡೆಕಾಯಿಟ್' ಚಿತ್ರದ ಭರ್ಜರಿ ಯಶಸ್ಸಿನಲ್ಲಿದ್ದಾರೆ. ಈ ಚಿತ್ರದ ಮೂಲಕ ಅವರು ಮತ್ತೊಮ್ಮೆ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕೇವಲ ಗ್ಲಾಮರ್ ಪಾತ್ರಗಳಿಗಷ್ಟೇ ಸೀಮಿತವಾಗದೆ, ನಟನೆಯ ಮೂಲಕ ಪ್ರೇಕ್ಷಕರ ಹೃದಯ ಗೆಲ್ಲುತ್ತಿರುವ ಮೃಣಾಲ್, ಟಾಲಿವುಡ್‌ನ ಸ್ಟಾರ್ ನಟಿಯಾಗಿ ಭದ್ರವಾಗಿ ನೆಲೆಯೂರಿದ್ದಾರೆ.












Click it and Unblock the Notifications