Max Movie Review: ‘ಮ್ಯಾಕ್ಸ್’ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್
ಕಿಚ್ಚಾ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಭರ್ಜರಿಯಾಗಿ ತೆರೆ ಕಂಡಿದೆ. ಸಿನಿಮಾ ನೋಡಿದ ಜನ ಕಿಚ್ಚನ ಅಭಿನಯಕ್ಕೆ ಮಾರು ಹೋಗಿದ್ದಾರೆ. ಸಿನಿಮಾ ಕತೆ, ಹಾಡು, ನೃತ್ಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸಿಂಪಲ್ಲಾಗಿ ಬಂದರೂ ಕೂಡ ಸಿನಿಮಾ ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. ಹಾಗಾದರೆ ಸಿನಿಮಾದ ರಿವ್ಯೂವ್ ಹೇಗಿದೆ, ಸಿನಿಮಾ ನೋಡಿದ ಜನ ಸಿನಿಮಾ ಬಗ್ಗೆ ಹೇಳುತ್ತಿರುವುದೇನು?
ಮ್ಯಾಕ್ಸ್ ಸಿನಿಮಾ ಒಂದೇ ರಾತ್ರಿ ನಡೆಯುವ ಕತೆಯಾಗಿದೆ. ಈ ಸಿನಿಮಾದಲ್ಲಿ ಒಬ್ಬ ಸಸ್ಪೆಂಡ್ ಆಗಿರುವ ಆಫೀಸರ್ ಬೆಳಿಗ್ಗೆ ಕೆಲಸಕ್ಕೆ ಹಾಜರಾಗಬೇಕು. ಆದರೆ ಬೆಳಿಗ್ಗೆಗಿಂತ ಮುಂಚೆನೆ ಅವರು ಸ್ಟೇಷನ್‌ಗೆ ಹೋಗಬೇಕಾದ ಸಂದರ್ಭ ಬರುತ್ತದೆ. ಈ ಆಫೀಸರ್ ಸ್ಟೇಷನ್ ಬರುವಷ್ಟರಲ್ಲಿ ಸಾವಿರಾರು ಸಮಸ್ಯೆಗಳು ಉದ್ಭವವಾಗಿರುತ್ತವೆ. ಇದಾದ ಬಳಿಕ ಸಿನಿಮಾ ಕತೆ ಏನು? ಸ್ಟೇಷನ್‌ನಲ್ಲಿ ಶುರುವಾದ ಸಮಸ್ಯೆ ಏನು? ಹೇಗೆ ಶುರುವಾಯ್ತು? ಯಾರಿಗೆ ಸಂಬಂಧಿಸಿದ್ದು? ಎನ್ನುವುದೆಲ್ಲಾ ಗೊತ್ತಾಗುತ್ತಾ ಹೋಗುತ್ತದೆ. ಇದೇ ಸಿನಿಮಾದ ಸ್ಟೋರಿ.

ಈ ಸಿನಿಮಾದಲ್ಲಿ ತುಂಬಾ ಅದ್ಭುತವಾಗಿ ಕಾಣಿಸಿದ್ದು ಕ್ಯಾಮರಾ ವರ್ಕ್. ಮ್ಯೂಸಿಕ್ ಕೂಡ ಸಖತ್ತಾಗಿದೆ. ಎಲ್ಲೂ ಕೂಡ ಅವ್ಯವಸ್ಥಿತವಾಗಿ ಮ್ಯೂಸಿಕ್ ಕೇಳಿಸುವುದಿಲ್ಲ. ಈ ಚಿಕ್ಕ ಕತೆಯನ್ನು ಬೇಗ ತೋರಿಸಲು ಸ್ಕ್ರೀನ್ ಪ್ಲೇ ಅನ್ನ ಬೇಗ ಬೇಗ ಚೇಂಜ್ ಮಾಡುತ್ತಾ ಹೋಗಿದ್ದಾರೆ. ಹೀಗಾಗಿ ಸಿನಿಮಾ ಎಲ್ಲೂ ಕೂಡ ಬೇಸರ ತರುವುದಿಲ್ಲ.
ಜೊತೆಗೆ ಸಿನಿಮಾದಲ್ಲಿ ಈ ಸೀನ್ ಬೇಕಾಗಿರಲಿಲ್ಲ, ಈ ಸೀನ್ ಬೇಡ ಆಗಿತ್ತು ಅಂತ ಎಲ್ಲೂ ಕೂಡ ಅನಿಸುವುದೇ ಇಲ್ಲ. ಆದರೆ ಈ ಕತೆಗೆ ಐಟಂ ಸಾಂಗ್ ಸಿಂಕ್ ಆಗಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಐಟಂ ಸಾಂಗ್ ಮಾತ್ರ ಅದ್ಭುತವಾಗಿ ಮೂಡಿ ಬಂದಿದೆ. ಹಾಡು, ನೃತ್ಯ ಹಾಗೂ ವೀಡಿಯೋ ಸೀನ್ ಎಲ್ಲವೂ ಕೇಳುಗರಿಗೆ ಖುಷಿ ತಂದಿದೆ.
ಈ ಸಿನಿಮಾದ ಸೆಕೆಂಡ್ ಆಫ್‌ವರೆಗೂ ತುಂಬಾ ಚೆನ್ನಾಗಿ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದ್ದಾರೆ ನಿರ್ದೇಶಕರು. ಆದರೆ ಸೆಕೆಂಡ್ ಆಫ್ ನಂತರ ಸಿನಿಮಾದಲ್ಲಿ ಇನ್ನೂ ಏನೋ ಬೇಕಿತ್ತು ಅನಿಸಲು ಶುರುವಾಗುತ್ತದೆ. ಸಿನಿಮಾದ ಕೊನೆಯಲ್ಲಿ ಸಿನಿಮಾ ಬೇರೆಯದ್ದೇ ಸ್ವರೂಪ ಪಡೆದುಕೊಳ್ಳುತ್ತದೆ. ಸಿನಿಮಾ ಕೊನೆಯಲ್ಲಿ ಬರುವ ಟ್ವಿಸ್ಟ್ ವೀಕ್ಷಕರಿಗೆ ತೃಪ್ತಿ ನೀಡಿದೆ. ಸಿನಿಮಾದ ಕತೆಗೆ ಕೊನೆಯಲ್ಲಿ ಒಂದು ತೂಕ ಸಿಗಲಿದೆ. ಸಿನಿಮಾ ಕೊನೆಯಲ್ಲಿ ವೀಕ್ಷಕರು ಭಾವುಕರಾಗಿದ್ದಾರೆ.
ಇನ್ನೂ ಸುದೀಪ್ ಅವರ ಅಭಿನಯದ ಬಗ್ಗೆ ಮಾತನಾಡುವ ಹಾಗೇ ಇಲ್ಲ. ಅವರ ಅಭಿಮಾನಿಗಳು ಸಿನಿಮಾ ನೋಡಿ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಹೆಚ್ಚು ತಮಿಳು ಹಾಗೂ ತೆಲುಗು ಆರ್ಟಿಸ್ಟ್ ಗಳಿಗೆ ಅವಕಾಶ ನೀಡಲಾಗಿದೆ. ಕರ್ನಾಟಕದಿಂದ ಒಂದಿಷ್ಟು ಜನ ಮಾತ್ರ ಇದ್ದಾರೆ. ಕನ್ನಡ ಬಾರದ ತೆಲುಗು ಮತ್ತು ತಮಿಳು ಆರ್ಟಿಸ್ಟ್ ಗಳಿಗೆ AI ಬಳಸಿ ಲಿಪ್ ಸಿಂಕ್ ಮಾಡಿಸಲಾಗಿದೆ. AI ಬಳಸಿದರೆ ಲಿಪ್ ಸಿಂಕ್ ಆಗಿಲ್ಲ ಅನ್ನೋ ದೂರು ಬರೋದೇ ಇಲ್ಲ. ಈ ವಿಷಯದಲ್ಲಿ ಟೆಕ್ನಾಲಜಿಯನ್ನು ಹೊಗಳಲೇ ಬೇಕು.
ಒಟ್ಟಾರೆಯಾಗಿ ಸಿನಿಮಾ ಮಾಸ್ ಆಗಿದೆ, ಸಿನಿಮಾದಲ್ಲಿ ಫೈಟಿಂಗ್ ಕೂಡ ತುಂಬಾ ಅದ್ಭುತವಾಗಿ ಇದೆ. ಸಿನಿಮಾದ ಕೊನೆಯಲ್ಲಿ ಸುದೀಪ್ ಬರುವ ಸ್ಟೈಲ್, ಕಾಸ್ಟ್ಯೂಮ್ ಕೂಡ ಸಿಕ್ಕಾಪಟ್ಟೆ ಮಾಸ್ ಆಗಿದೆ. ಈ ದೃಶ್ಯಕ್ಕೆ ಕಿಚ್ಚಾ ಸುದೀಪ್ ಅವರ ಅಭಿಮಾನಿಗಳು ಕೂಗಾಡಿ ಶಿಳ್ಳೆ ಕೂಡ ಹೊಡೆದಿದ್ದಾರೆ.
ಒಟ್ಟಿನಲ್ಲಿ ಸಿನಿಮಾ ನೋಡಿದ ಜನ ಮಿಶ್ರ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನೀವೇನಾದ್ರೂ ಮ್ಯಾಕ್ಸ್ ಸಿನಿಮಾ ನೋಡಿದ್ದರೆ ನಿಮಗೆ ಸಿನಿಮಾ ಹೇಗಿತ್ತು ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.












Click it and Unblock the Notifications