ಪೊಲೀಸ್ ರೈಡ್ ವೇಳೆ ಹೋಟೆಲ್‌ನಿಂದ ಓಡಿ ಹೋದ ಖ್ಯಾತ ನಟ, ಏಕೆ?
ದಕ್ಷಿಣ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೊ (Shine Tom Chacko) ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮಲಯಾಳಂ ಮಾತ್ರವಲ್ಲದೆ ಅವರು ತೆಲುಗು ಸಿನಿಮಾಗಳಲ್ಲೂ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ಮೇಲೆ ಶಾಕಿಂಗ್ ಆರೋಪ ಕೇಳಿಬಂದಿದೆ. ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿದ್ದ ನಟ ಶೈನ್ ಟಾಮ್ ಚಾಕೊ ಅವರು ಎಸ್ಕೇಪ್ ಆಗಿದ್ದಾರೆ ಎಂದು ವರದಿಯಾಗಿದೆ. ಗುರುವಾರ ಖಾಸಗಿ ಹೋಟೆಲ್‌ನಿಂದ ನಡೆಸಿದ ದಾಳಿಯ ಸಂದರ್ಭದಲ್ಲಿ ಪರಾರಿಯಾಗಿದ್ದ ನಟ ಶೈನ್ ಟಾಮ್ ಚಾಕೊ ಅವರನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದ್ದು, ನೋಟಿಸ್ ಜಾರಿ ಮಾಡಲು ಕೊಚ್ಚಿ ಪೊಲೀಸರು ಮುಂದಾಗಿದ್ದಾರೆ. ಇಷ್ಟಕ್ಕೂ ನಟನ ಮೇಲೆ ಕೇಳಿಬಂದಿರುವ ಆರೋಪವೇನು ಗೊತ್ತಾ?
ಪ್ರಸ್ತುತ ಅವರು ಸಿನಿಮಾ ಸೆಟ್‌ಗಳಲ್ಲಿ ಡ್ರಗ್ಸ್ ಸೇವನೆಯ ಆರೋಪ ಎದುರಿಸುತ್ತಿದ್ದಾರೆ. ಕೊಚ್ಚಿಯ ಹೋಟೆಲ್‌ನಲ್ಲಿ ಪೊಲೀಸ್ ದಾಳಿಯ ಸಮಯದಲ್ಲಿ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ನಟ ಶೈನ್ ಅವರು ಹೋಟೆಲ್ ಆವರಣದಿಂದ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಯಲ್ಲಿ ನಟ ಕಾಂಪೌಂಡ್‌ನಿಂದ ಓಡಿಹೋಗಿ ಬೈಕ್ ಹತ್ತಿ ಪರಾರಿಯಾಗುತ್ತಿರುವುದು ಸೆರೆಯಾಗಿದೆ.

ಆದರೆ ನಟ ಯಾರ ಬೈಕ್ ಬಳಸಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ. ಅವರು ಯಾರಿಂದಾದರೂ ಲಿಫ್ಟ್ ಕೇಳಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಶೈನ್ ಕೊಚ್ಚಿಯ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡು ಮುಂಜಾನೆಯೇ ತ್ರಿಶೂರ್ ಪ್ರದೇಶದ ಕಡೆಗೆ ಹೊರಟಿದ್ದರು ಎನ್ನಲಾಗಿದೆ. ಅವರು ತ್ರಿಶೂರ್ ಮೂಲದವರಾಗಿದ್ದರೂ, ಅವರು ತಮ್ಮ ಕುಟುಂಬದ ನಿವಾಸಕ್ಕೆ ಹೋಗಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವರದಿಗಳ ಪ್ರಕಾರ ನಟ ಪ್ರಸ್ತುತ ತಲೆಮರೆಸಿಕೊಂಡಿದ್ದು, ಪತ್ತೆಯಾದ ನಂತರ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ನಟಿ ವಿನ್ಸಿ ಅಲೋಶಿಯಸ್ ಅವರು ಸೆಟ್‌ಗಳಲ್ಲಿ ಮಾದಕ ದ್ರವ್ಯ ಬಳಸುವ ಸಹ-ನಟರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ ನಂತರ ಈ ಘಟನೆ ನಡೆದಿದೆ. ನಟಿ ವಿನ್ಸಿ ಅವರು ಸಹ ನಟನೊಬ್ಬ ಮಾದಕ ದ್ರವ್ಯ ಸೇವಿಸಿದ ಬಗ್ಗೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಎಎಂಎಂಎ) ಮತ್ತು ಕೇರಳ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಅಲ್ಲದೆ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ವಿನ್ಸಿ ನಟ ಸೆಟ್‌ನಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದು. ಆದರೆ ಅವರು ಆ ನಟನ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿಲ್ಲ. ಆದರೆ ವಿನ್ಸಿ ಹೇಳಿದ್ದು, ಆರೋಪಿ ನಟ ಶೈನ್ ಬಗ್ಗೆಯೇ ಎಂದು ತಿಳಿದುಬಂದಿದೆ. ಏಕೆಂದರೆ ಇಬ್ಬರೂ ಮುಂಬರುವ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯು ಶಿಸ್ತು ಕ್ರಮದ ಕುರಿತು ಚರ್ಚಿಸಲು ತುರ್ತು ಸಭೆ ಕರೆಯಲು ಸಿದ್ಧತೆ ನಡೆಸುತ್ತಿವೆ. ನಟಿ ವಿನ್ಸಿ ಅಲೋಶಿಯಸ್ ದೂರಿನ ನಂತರ ಚಲನಚಿತ್ರೋದ್ಯಮದ ಮೇಲೆ ಹೆಚ್ಚಿನ ಒತ್ತಡ ಹೇರಲಾಗಿದೆ. ಶೈನ್ ಅವರ ಮೊಬೈಲ್ ಫೋನ್‌ನ ಕೊನೆಯ ಟವರ್ ಲೊಕೇಶನ್ ಆಧರಿಸಿ, ತನಿಖಾಧಿಕಾರಿಗಳು ಶೈನ್ ಅವರ ಪ್ರಸ್ತುತ ಸ್ಥಳ ತಮಿಳುನಾಡಿನ ಪೊಲ್ಲಾಚಿಯಲ್ಲಿದೆ ಎಂದು ಪತ್ತೆಹಚ್ಚಿದ್ದಾರೆ.












Click it and Unblock the Notifications