ಬಾಲಿವುಡ್ ಬಾದ್‌ಶಾಗೆ ಜೀವ ಬೆದರಿಕೆ: Y+ ಭದ್ರತೆ ನೀಡಿದ 'ಮಹಾ' ಸರ್ಕಾರ!
'ಪಠಾಣ್' ಸಿನಿಮಾದ ಬಳಿಕ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿದ್ದು ಮಹಾರಾಷ್ಟ್ರ ಸರ್ಕಾರ ಅವರ ಭದ್ರತೆಯನ್ನು Y+ ವರ್ಗಕ್ಕೆ ಏರಿಸಿದೆ. ಮುಂಬೈನ ಪೊಲೀಸ್ ಮೂಲಗಳು ಇದನ್ನು ಖಚಿತಪಡಿಸಿವೆ ಎಂದು ವರದಿಯಾಗಿದೆ. ಆದರೆ ನಟ ಎದುರಿಸುತ್ತಿರುವ ಬೆದರಿಕೆಗಳ ನಿರ್ದಿಷ್ಟ ಸ್ವರೂಪವನ್ನು ಬಹಿರಂಗಪಡಿಸಲಾಗಿಲ್ಲ.
ಇದಕ್ಕೂ ಮುನ್ನ ಅವರ ಭದ್ರತೆಗೆ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು. ಜೊತೆಗೆ ಭದ್ರತೆಗಾಗಿ ಅವರದೇ ಆದ ವೈಯಕ್ತಿಕ ಅಂಗರಕ್ಷಕರಿದ್ದರು. ಆದರೀಗ ಹೈ-ಪವರ್ ಕಮಿಟಿಯ ಶಿಫಾರಸುಗಳನ್ನು ಅನುಸರಿಸಿ ಶಾರುಖ್ ಖಾನ್ ಅವರ ಭದ್ರತೆಯನ್ನು Y+ ಭದ್ರತೆಗೆ ಮೇಲ್ದರ್ಜೆಗೇರಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.

ಜವಾನ್ ನಟ ಶಾರುಖ್ ಖಾನ್ ಜೊತೆಗೆ ಸದ್ಯ ರಾಜ್ಯದ ವಿಐಪಿ ಭದ್ರತಾ ಘಟಕದ 6 ಟ್ರೆಂಡ್ ಕಮಾಂಡೋಗಳ ತಂಡ ಯಾವಾಗಲೂ ಇರುತ್ತದೆ. ಭದ್ರತಾ ತಂಡ ಯಾವಾಗಲು ಎಂಪಿ -5 ಮೆಷಿನ್ ಗನ್‌ಗಳನ್ನು ಮತ್ತು ಎಕೆ -47 ಅಸಾಲ್ಟ್ ರೈಫಲ್‌ಗಳನ್ನು ಮತ್ತು ಗ್ಲಾಕ್ ಪಿಸ್ತೂಲ್‌ಗಳನ್ನು ಹೊಂದಿರುತ್ತದೆ.
ಶಾರುಖ್ ಖಾನ್ ಅವರಿಗೆ ನೀಡಿದ ಹೆಚ್ಚುವರಿ ಭದ್ರತೆಯ ಹೊರತಾಗಿ ಅವರ ನಿವಾಸವಾದ ಮನ್ನತ್ ಸುತ್ತಲೂ 24/7 ಪೊಲೀಸರು ಉಪಸ್ಥಿತರಿರುತ್ತಾರೆ. ಅವರ ಬಂಗಲೆಯ ಸುತ್ತಮುತ್ತಲಿನ ಜನರ ಮೇಲೆ ನಿಗಾ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚುವರಿ ಭದ್ರತೆ
ವರದಿಯ ಪ್ರಕಾರ Y+ ವಿಭಾಗದಲ್ಲಿ ನಟ ಆರು ಕಮಾಂಡೋಗಳು, ನಾಲ್ಕು ಪೊಲೀಸ್ ಸಿಬ್ಬಂದಿ ಮತ್ತು ಟ್ರಾಫಿಕ್ ಕ್ಲಿಯರೆನ್ಸ್ ವಾಹನ ಸೇರಿದಂತೆ 11 ಭದ್ರತಾ ಸಿಬ್ಬಂದಿಯನ್ನು ಪಡೆಯುತ್ತಾರೆ.
ಗೇಮಿಂಗ್ ಮತ್ತು ಬೇಷರಮ್ ಸಾಂಗ್ ವಿವಾದ
ಈ ವರ್ಷದ ಆಗಸ್ಟ್‌ನಲ್ಲಿ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ಗಳನ್ನು ಅನುಮೋದಿಸುವ ಸೆಲೆಬ್ರಿಟಿಗಳ ವಿರುದ್ಧ ಪ್ರತಿಭಟನೆಯಿಂದಾಗಿ ನಟನ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಯಿತು. ಇಂತಹ ಅನುಮೋದನೆಗಳು ಯುವ ಪೀಳಿಗೆಯನ್ನು ದಾರಿತಪ್ಪಿಸಬಹುದು ಮತ್ತು ಭ್ರಷ್ಟಗೊಳಿಸಬಹುದು ಎಂಬ ಕಳವಳವನ್ನು ಈ ಪ್ರತಿಭಟನೆಗಳು ಎತ್ತಿ ತೋರಿಸಿದವು.
ಇದಲ್ಲದೆ ಶಾರುಖ್ ಖಾನ್ ಅವರ 'ಪಠಾಣ್' ಚಿತ್ರದ 'ಬೇಷರಂ ರಂಗ್' ಹಾಡಿನ ಸುತ್ತ ವಿವಾದವೆದ್ದಿತ್ತು. ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನೆಲೆಸಿರುವ ಪರಮಹಂಸ ಆಚಾರ್ಯ ಅವರು ನಟನ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದರು. ಇದು ಶಾರುಖ್ ಖಾನ್ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಕಾರಣವಾಯಿತು.
ಎಸ್‌ಆರ್‌ಕೆ ಮುಂದಿನ ನಡೆ
ಪ್ರಸ್ತುತ ತಮ್ಮ ಎರಡು ಚಿತ್ರಗಳಾದ 'ಜವಾನ್' ಮತ್ತು 'ಪಠಾಣ್'ಗಳ ಬ್ಯಾಕ್-ಟು-ಬ್ಯಾಕ್ ಯಶಸ್ಸನ್ನು ಆನಂದಿಸುತ್ತಿರುವ ಶಾರುಖ್ ಖಾನ್, ಮುಂದೆ ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಖ್ಯಾತ ನಿರ್ದೇಶಕ ಹಿರಾನಿ ಅವರೊಂದಿಗೆ ಅವರ ಮೊದಲ ಸಹಯೋಗವನ್ನು ಸೂಚಿಸುತ್ತದೆ. ತಾಪ್ಸಿ ಪನ್ನು ಸಹ ಒಳಗೊಂಡಿರುವ ಈ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ.
JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್‌ಗಳ ಬೆಂಬಲದೊಂದಿಗೆ ಡಂಕಿ ಸಿನಿಮಾ ಶಾರುಖ್ ಅವರ 2023 ರ ಮೂರನೇ ಬಿಡುಗಡೆಯಾಗಿದೆ. ನಟರಾದ ವಿಕ್ಕಿ ಕೌಶಲ್ ಮತ್ತು ಧರ್ಮೇಂದ್ರ ಕೂಡ ಡಂಕಿಯಲ್ಲಿ ಪ್ರಮುಖ ಪಾತ್ರಗಳನ್ನು ಹೊಂದಿದ್ದಾರೆ.












Click it and Unblock the Notifications