ಲಾಯರ್ ಜಗದೀಶ್‌ಗೆ ಸಿಗ್ತಿಲ್ಲ ಜಾಮೀನು: ಜೈಲು ಸೇರಿ ಎರಡು ತಿಂಗಳು
ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಜೈಲು ಸೇರಿ ಇಂದಿಗೆ ಎರಡು ತಿಂಗಳು ಕಳೆದಿದ್ದು, ಈವರೆಗೂ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಈ ಹಿಂದೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದ ಸಮಯದಲ್ಲಿ ದರ್ಶನ್ ಪರ ಧ್ವನಿ ಎತ್ತಿದ್ದ ಲಾಯರ್ ಜಗದೀಶ್ ತಾವೇ ಅವರನ್ನು ಜಾಮೀನಿನ ಮೇಲೆ ಹೊರಗಡೆ ತರುವುದಾಗಿ ಹೇಳಿದ್ದರು. ಆದರೆ ಈಗ ಸ್ವತಃ ತಮಗೆ ಜಾಮೀನು ಸಿಗದ ಸ್ಥಿತಿಯಲ್ಲಿ ಲಾಯರ್ ಜಗದೀಶ್ ಇದ್ದಾರೆ.
ಲಾಯರ್ ಜಗದೀಶ್ ಜೈಲು ಸೇರಿದ್ದೇಕೆ..?
ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನ ಹಲವೆಡೆ ದೇವರ ಉತ್ಸವಗಳು ನಡೆಯುತ್ತಿದ್ದು, ಕೊಡಿಗೆಹಳ್ಳಿಯಲ್ಲಿ ಕೂಡ ಅಣ್ಣಮ್ಮ ದೇವಿಯ ಉತ್ಸವ ಆಯೋಜಿಸಲಾಗಿತ್ತು. ಕೊಡಿಗೆಹಳ್ಳಿ ಸ್ಥಳೀಯರು ಅಣ್ಣಮ್ಮ ದೇವಿಯನ್ನು ಕೂರಿಸಿದ್ದರು. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಸ್ತೆಗೆ ಅಡ್ಡವಾಗಿ ಪೆಂಡಾಲ್ ಹಾಕಲಾಗಿತ್ತು. ಈ ವಿಚಾರಕ್ಕೆ ಅಸಮಾಧಾನಗೊಂಡಿದ್ದ ಲಾಯರ್ ಜಗದೀಶ್ ಪೊಲೀಸರಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಲಾಯರ್ ಜಗದೀಶ್ ದೂರು ನೀಡಿರುವುದಕ್ಕೆ ಕೋಪಗೊಂಡ ಸ್ಥಳೀಯರು ಈ ಬಗ್ಗೆ ಮಾತನಾಡಲು ಅವರ ಮನೆ ಬಳಿ ತೆರಳಿದ್ದರು. ಈ ವೇಳೆ ಗಲಾಟೆಯಾಗಿದ್ದು, ಸ್ಥಳೀಯರು ಹಾಗೂ ಲಾಯರ್ ಜಗದೀಶ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಗಲಾಟೆ ತಾತ್ಕಾಲಿಕವಾಗಿ ಅಂದು ಅಂತ್ಯಗೊಂಡಿತ್ತು. ಆದರೆ ಸ್ಥಳೀಯರು ಮತ್ತು ಲಾಯರ್ ಜಗದೀಶ್ ನಡುವಿನ ಮನಸ್ತಾಪ ಬೂದಿ ಮುಚ್ಚಿದ ಕೆಂಡದಂತಿತ್ತು.
ಬಳಿಕ ಕೊಡಿಗೆಹಳ್ಳಿಯ ಅಣ್ಣಮ್ಮ ದೇವಿಯ ಉತ್ಸವದ ದಿನ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಹಾಗೂ ಸ್ಥಳೀಯರ ಮಧ್ಯೆ ಮಾರಾಮಾರಿ ಜೋರಾಗಿದ್ದು, ಗಲಾಟೆಯಲ್ಲಿ ಲಾಯರ್ ಜಗದೀಶ್ ಗಾಯಗೊಂಡಿದ್ದರು. ಮೂಗಿನಿಂದ ರಕ್ತ ಬರುತ್ತಿರುವುದನ್ನು ಲೆಕ್ಕಿಸದೇ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಈ ಬಗ್ಗೆ ಮಾತನಾಡಿದ್ದರು.

ಈ ಘಟನೆಯ ವೇಳೆ ಲಾಯರ್ ಜಗದೀಶ್ ಆಯುಧಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದ ವಿಡಿಯೋಗಳು ಕೂಡ ವೈರಲ್ ಆಗಿದ್ದವು. ಇನ್ನು ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ನಾಗರಾಜ್ ಎನ್ನುವವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಜೊತೆಗೆ ಲಾಯರ್ ಜಗದೀಶ್ ವಿರುದ್ಧ ಕೂಡ ಪ್ರತಿದೂರು ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ತನಿಖೆಗಿಳಿದ ಪೊಲೀಸರು ಗಲಾಟೆಯಲ್ಲಿ ಭಾಗಿಯಾದ ಸ್ಥಳೀಯರು ಹಾಗೂ ಲಾಯರ್ ಜಗದೀಶ್, ಅವರ ಪುತ್ರ ಹಾಗೂ ಇಬ್ಬರು ಗನ್ ಮ್ಯಾನ್ಗಳನ್ನು ಬಂಧಿಸಿದ್ದರು.












Click it and Unblock the Notifications