Bigg Boss Kannada: 'ಬಿಗ್ ಬಾಸ್‌ಗೆ ನಮ್ಮನ್ನು ಕರಿಯೋಕೆ ಅವರಿಗೆ ಯೋಗ್ಯತೆ ಇಲ್ಲ'
ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಇತ್ತೀಚಿಗೆ ಅಸಮಾಧಾನ ಎನ್ನುವುದು ಸಾಮಾನ್ಯವಾಗಿದೆ. ಬಿಗ್ ಬಾಸ್ ಆರಂಭವಾಗುತ್ತದೆ ಎಂದು ತಿಳಿದಾಗ ಒಂದಿಷ್ಟು ಸಂಭಾವ್ಯ ಪಟ್ಟಿಗಳು ಹರಿದಾಡುತ್ತದೆ. ಬಳಿಕ ಶೋ ಆರಂಭದಲ್ಲಿ ಆ ಸ್ಪರ್ಧಿಗಳು ಇರದೇ ಇದ್ದಾಗ ಅಥವಾ ನಿರೀಕ್ಷಿಸಿದ ಸ್ಪರ್ಧಿಗಳು ಇರದೇ ಇದ್ದಾಗ ಪ್ರೇಕ್ಷಕರಿಗೆ ನಿರಾಸೆಯಾಗುವುದು ಸಾಮಾನ್ಯ. ಆದರೆ ಕೆಲವು ಕಲಾವಿದರೂ ಕೂಡ ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆ ವಿಚಾರದ ಬಗ್ಗೆ ಆಗಾಗ ಅಸಮಾಧಾನ ಹೊರಹಾಕುತ್ತಾರೆ.
ಬಿಗ್ ಬಾಸ್‌ನಲ್ಲಿ ಇತ್ತೀಚಿಗೆ ಯುವ ನಟ-ನಟಿಯರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವರಿಗೆ ಅವಕಾಶ ನೀಡಲಾಗುತ್ತಿದೆ ಹೊರತು ತೆರೆ ಮರೆಗೆ ಸರಿದಿರುವ ಕೆಲವು ಹಿಂದಿನ ಜನಪ್ರಿಯರ ಕಲಾವಿದರಿಗೆ ಅವಕಾಶ ನೀಡುತ್ತಿಲ್ಲ ಎನ್ನುವ ಆರೋಪವಿದೆ. ಹಿಂದೆಲ್ಲಾ ಜನರಿಗೆ ಚಿರಪರಿಚಿತರಾಗಿ ಈಗ ತೆರೆ ಮರೆಗೆ ಸರಿದವರಿಗೆ ಅವಕಾಶ ಕೊಟ್ಟರೆ ಅವರ ಬದುಕಿನ ಬಗ್ಗೆ ಸಹ ಪ್ರೇಕ್ಷಕರು ತಿಳಿಯಬಹುದು ಎನ್ನುವುದು ಕೆಲ ಬಿಗ್ ಬಾಸ್ ಪ್ರೇಕ್ಷಕರ ಅಭಿಪ್ರಾಯ.

ಇದೀಗ ನಟ ಹಾಗೂ ಕುರಿ ಬಾಂಡ್ ಕಾರ್ಯಕ್ರಮದ ಖ್ಯಾತಿಯ ಕುರಿ ಸುನೀಲ್ ಕೂಡ ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಸಂದರ್ಶನದ ವೇಳೆ ಕುರಿ ಸುನೀಲ್ ಬಿಗ್ ಬಾಸ್‌ಗೆ ಮತ್ತೆ ಹೋಗುತ್ತೀರ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಲಾಯರ್ ಜಗದೀಶ್ ಸದ್ಯಕ್ಕೆ ಇಲ್ಲ ಸರ್ ಕರೆದಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಕುರಿ ಸುನೀಲ್, ನಿಮ್ಮನೆಲ್ಲಾ ಬಿಡಿ ಸರ್ ಎಲ್ಲರೂ ಕರೆಯುತ್ತಾರೆ. ನಮ್ಮನ್ನೆಲ್ಲಾಯಾರು ಕರೆಯುತ್ತಾರೆ ಸರ್. ಚಿಕ್ಕ ಕಲಾವಿದರು ನಮಗೆಲ್ಲಾ ಅಂತಹ ಯೋಗ್ಯತೆ ಇದೆಯಾ ಎಂದ ಅವರು, ಅದೇ ವೇಳೆ ನಮ್ಮನ್ನು ಹಾಕಿಕೊಳ್ಳಲು ಅವರಿಗೆ ಯೋಗ್ಯತೆ ಇಲ್ಲ ಎಂದು ನಾನು ಹೇಳುತ್ತೇನೆ. ಬಿಡಿ ಹೊರಗಡೆ ನನ್ನ ಅನ್ನದಾತರು ಗುರುತಿಸಿ ನೀವು ಕುರಿ ಅಲ್ವಾ, ಸುನೀಲ್ ಅಲ್ವಾ ಕೇಳುತ್ತಾರೆ ಅಷ್ಟು ಸಾಕು ನನಗೆ ಎಂದು ಕುರಿ ಸುನೀಲ್ ಹೇಳಿದ್ದಾರೆ.
ಈ ವೇಳೆ ಲಾಯರ್ ಜಗದೀಶ್, 'ನೀವು ತುಂಬಾ ಅನುಭವಸ್ಥರು. ಕೆಲವೊಮ್ಮೆ ಕೆಲವರು ಎಷ್ಟು ಕಾಸ್ಟ್ಲಿ ಆಗುತ್ತಾರೆ ಎಂದರೆ ನಮ್ಮ ಮಹಾತ್ಮ ಗಾಂಧೀಜಿ ಅವರಿಗೆ ನೋಬೆಲ್ ಕೊಟ್ಟರೆ ಮಹಾತ್ಮ ಗಾಂಧೀಜಿಗೆ ಮಾಡುವ ಅವಮಾನ ಅದು. ಅದೇ ರೀತಿ ಕುರಿ ಸುನೀಲ್ ಅವರೇ ನೀವು ಬಿಗ್ ಬಾಸ್ ಅನ್ನು ಮೀರಿ ಬೆಳೆದಿದ್ದೀರಾ' ಎಂದು ಫ್ರೀಡಂ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.












Click it and Unblock the Notifications