Kiccha Sudeep: ಬಿಗ್ ಬಾಸ್‌ಗೆ ಗುಡ್ ಬೈ ಹೇಳಿದ ನಟ ಕಿಚ್ಚ ಸುದೀಪ್ : ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಮಾಣಿಕ್ಯ
ಬೆಂಗಳೂರು, ಜನವರಿ 20: ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ನಟ ಸುದೀಪ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು, ಕಳೆದ 11 ಸೀಸನ್‌ಗಳಿಂದ ನಾನು ಬಿಗ್ ಬಾಸ್ ಅನ್ನು ತುಂಬಾ ಇಷ್ಟಪಟ್ಟಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಎಲ್ಲರಿಗೂ ಧನ್ಯವಾದಗಳು. ಮುಂಬರುವ ಫೈನಲ್ ಆತಿಥೇಯನಾಗಿ ನನ್ನ ಕೊನೆಯದು, ಮತ್ತು ನಿಮ್ಮೆಲ್ಲರನ್ನೂ ನನ್ನ ಅತ್ಯುತ್ತಮ ಮನರಂಜನೆಗಾಗಿ ಆಶಿಸುತ್ತೇನೆ. ಇದು ಮರೆಯಲಾಗದ ಪ್ರಯಾಣ, ಅದನ್ನು ನನ್ನ ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಈ ಅವಕಾಶ ನೀಡಿದ ಕಲರ್ಸ್ ಕನ್ನಡಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ ಮತ್ತು ಗೌರವವಿದೆ ಎಂದು ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮವನ್ನ ನಟ ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಿದ್ದು, ಆರಂಭದಿಂದ ಬಿಗ್ ಬಾಸ್ ಕನ್ನಡದ ಹೋಸ್ಟ್ ಆಗಿ 11 ಸೀಸನ್ಗಳನ್ನು ನಡೆಸಿಕೊಟ್ಟಿದ್ದಾರೆ. ಇದು ನನ್ನ ಕೊನೆಯ ಸೀಸನ್ ಎಂದು ನಟ ಕಿಚ್ಚ ಸುದೀಪ್ ಅವರು ಈ ಮೊದಲು ಹೇಳಿದ್ದರು. ಈಗ ಅವರು ಅಧಿಕೃತವಾಗಿ ಬಿಗ್ ಬಾಸ್ ತೊರೆಯುವ ಬಗ್ಗೆ ಘೋಷಣೆ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮ ನಡೆಯುವ ಮೊದಲು ಸೀಸನ್ 11 ನಡೆಸಿಕೊಡುವುದಿಲ್ಲ ಎಂದು ಕಿಚ್ಚ ಸುದೀಪ್ ಅವರು ನೇರವಾಗಿ ತಿಳಿಸಿದ್ದರು. ಆದರೆ ವಾಹಿನಿ ಮತ್ತು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಬಿಗ್ ಬಾಸ್ ಸೀಸನ್ ಶೋ ನಡೆಸಲು ಒಪ್ಪಿಗೆ ನೀಡಿದ್ದರು. ಈ ಹಿಂದೆ ಮ್ಯಾಕ್ಸ್ ಸಿನಿಮಾದ ಸಂದರ್ಶನದಲ್ಲಿ ಮಾತನಾಡಿದ ಸುದೀಪ್, ಎಷ್ಟು ಮಾಡುವುದು? ಎಲ್ಲರನ್ನೂ ರಿಪೇರಿ ಮಾಡುತ್ತಾ ಕುಳಿತುಕೊಳ್ಳಲು ನಾನು ಬಂದಿದ್ದೀನಾ? ಬೇರೆ ಕೆಲಸಗಳು ಇರುತ್ತವೆ. ತುಂಬ ಶ್ರಮ ಬೇಕು. ಅದು ಯಾರಿಗೂ ಅರ್ಥ ಆಗುತ್ತಿಲ್ಲ ಎಂದು ತಿಳಿಸಿದ್ದರು.
ಕಳೆದ ಬಿಗ್ ಬಾಸ್ ಸೀಸನ್ ನಡೆಯುವಾಗ ನನ್ನ ಸಿನಿಮಾದ ಶೂಟಿಂಗ್ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿತ್ತು. ಚೆನ್ನೈನಿಂದ ಅಲ್ಲಿಗೆ ಹೋಗಲು ಒಂದೂವರೆ ಗಂಟೆ ಬೇಕು. ಬೆಂಗಳೂರಿನಿಂದ ನಾನು ಅಲ್ಲಿಗೆ ಹೋಗಿ, ಅಲ್ಲಿ ಶೂಟಿಂಗ್ ಮಾಡಿ, ಮಧ್ಯರಾತ್ರಿ ಶೂಟಿಂಗ್ ಮುಗಿಸಿ, ಖಾಸಗಿ ವಿಮಾನದಲ್ಲಿ ವಾಪಸ್ ಬೆಂಗಳೂರಿಗೆ ಬಂದು ಬಿಗ್ ಬಾಸ್ ಎಪಿಸೋಡ್ ನೋಡಿ, ವೀಕೆಂಡ್ ಸಂಚಿಕೆ ಶೂಟ್ ಮಾಡಬೇಕು. ಇದರಿಂದ ನನಗೆ ತುಂಬ ಸುಸ್ತಾಗುತ್ತಿತ್ತು. ನಾನು ಬೆಂಗಳೂರಿನಲ್ಲಿ ಇದ್ದರೆ ಯಾವುದೇ ಸಮಸ್ಯೆ ಇಲ್ಲ. ಬೇರೆ ಕಡೆ ಸಿನಿಮಾ ಶೂಟಿಂಗ್ ಇದ್ದಾಗ ಈ ಶೋ ಮಾಡಲು ಕಷ್ಟ ಆಗುತ್ತದೆ ಎಂದು ಖಾಸಗಿ ಸಂದರ್ಶನದಲ್ಲಿ ನಟ ಸುದೀಪ್ ಅವರು ತಿಳಿಸಿದ್ದರು.












Click it and Unblock the Notifications