Max Movie: ಒಂದೇ ದಿನ ಒಟಿಟಿ, ಕಿರುತೆರೆಯಲ್ಲಿ ಸುದೀಪ್‌ರ 'ಮ್ಯಾಕ್ಸ್' ಬಿಡುಗಡೆ
ಬಿಗ್ ಸ್ಕ್ರೀನ್‌ನಲ್ಲಿ ಮ್ಯಾಕ್ಸ್ ಆಗಿ ಮ್ಯಾಕ್ಸಿಮಮ್ ಅಬ್ಬರಿಸಿದ್ದ ಕಿಚ್ಚ ಸುದೀಪ್ ಇದೀಗ ಒಟಿಟಿ, ಕಿರುತೆರೆಯಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ. 2024ರ ಸ್ಯಾಂಡಲ್‌ವುಡ್‌ನ ದೊಡ್ಡ ಬ್ಲಾಕ್ ಬಸ್ಟರ್ 'ಮ್ಯಾಕ್ಸ್' ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದ್ದು, ವಿಶೇಷವೆಂದರೆ ಒಟಿಟಿ ಮತ್ತು ಕಿರುತೆರೆಯಲ್ಲಿ ಒಂದೇ ದಿನ ಪ್ರಸಾರವಾಗಲಿದೆ.
ಜೀ ಎಂಟರ್ ಟೈನ್‌ಮೆಂಟ್ ದೊಡ್ಡ ಮೊತ್ತಕ್ಕೆ 'ಮ್ಯಾಕ್ಸ್' ಒಟಿಟಿ ಮತ್ತು ಸ್ಯಾಟಲೈಟ್ಸ್ ಹಕ್ಕುಗಳನ್ನು ಖರೀದಿ ಮಾಡಿದ್ದು, ಒಂದೇ ದಿನ ಬಿಡುಗಡೆ ಮಾಡಲು ನಿರ್ಧರಿಸಿದೆ. ಫೆಬ್ರವರಿ 15 ರಂದು ಸಂಜೆ 5.30ಕ್ಕೆ ಮ್ಯಾಕ್ಸ್ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಒಟಿಟಿ ಫ್ಲಾಟ್‌ಫಾರ್ಮ್ ಜೀ 5 ನಲ್ಲಿ ಕೂಡ ಅದೇ ದಿನ 'ಮ್ಯಾಕ್ಸ್' ಬಿಡುಗಡೆಯಾಗಲಿದೆ.

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಎರಡೂವರೆ ವರ್ಷಗಳ ಅಭಿಮಾನಿಗಳನ್ನು ಕಾಯಿಸಿದ್ದ ನಟ ಸುದೀಪ್ ನಿರಾಸೆ ಮಾಡಿರಲಿಲ್ಲ. ಭಾರಿ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬಂದಿದ್ದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಬಡಿಸಿದ್ದರು.
ದಾಖಲೆಯ ಗಳಿಕೆ
ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿದ್ದು 2024ರಲ್ಲಿ ಸ್ಯಾಂಡಲ್‌ವುಡ್‌ನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಮ್ಯಾಕ್ಸ್ 60-70 ಕೋಟಿ ರೂಪಾಯಿ ಗಳಿಸಿರಬಹುದು ಎಂದು ಗಾಂಧಿನಗರದಲ್ಲಿ ಚರ್ಚೆಯಾಗಿದ್ದು, ಒಟಿಟಿ ಮತ್ತು ಸ್ಯಾಟಲೈಟ್ ರೈಟ್ಸ್ ದೊಡ್ಡ ಮೊತ್ತಕ್ಕೆ ಹರಾಜಾಗಿದೆ ಎಂದು ಹೇಳಲಾಗಿದೆ.
ಒಂದೇ ರಾತ್ರಿಯಲ್ಲಿ ನಡೆಯುವ ಕಥೆ
ಮ್ಯಾಕ್ಸ್ ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಾದರೂ, ಇಡೀ ಸಿನಿಮಾ ನೋಡುಗರನ್ನು ಸೀಟಿನ ತುದಿಗೆ ಕೂರಿಸುವಂತೆ ಮಾಡಿದ್ದಾರೆ ನಿರ್ದೇಶಕ ವಿಜಯ್ ಕಾರ್ತಿಕೇಯ. ಖಡಕ್ ಪೊಲೀಸ್ ಅಧಿಕಾರಿ ಮಹಾಕ್ಷಯ್ ಪಾತ್ರದಲ್ಲಿ ಸುದೀಪ್ ಖದರ್ ತೋರಿಸಿದ್ದಾರೆ. ಆಕ್ಷನ್, ಮಾಸ್ ಡೈಲಾಗ್ ಸಿನಿಮಾದ ದೊಡ್ಡ ಶಕ್ತಿ. ಚಿತ್ರಕಥೆ ಸಿನಿಮಾಗೆ ವೇಗ ತುಂಬಿದೆ. ಅಜನೀಶ್ ಲೋಕನಾಥ್‌ರ ಹಿನ್ನಲೆ ಸಂಗೀತ ಚಿತ್ರದ ಮತ್ತೊಂದು ದೊಡ್ಡ ಪ್ಲಸ್.
ಕಿಚ್ಚ ಸುದೀಪ್ ಜೊತೆಗೆ ವರಲಕ್ಷ್ಮಿ ಶರತ್ ಕುಮಾರ್, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ, ಸುನಿಲ್, ಉಗ್ರಂ ಮಂಜು, ಪ್ರಮೋದ್ ಶೆಟ್ಟಿ, ರೆಡಿನ್ ಕಿಂಗ್‌ಸ್ಲೆ, ಕರಣ್ ಆರ್ಯ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ದೊಡ್ಡ ಪರದೆಯಲ್ಲಿ ಮ್ಯಾಕ್ಸಿಮಮ್ ಮನರಂಜನೆ ನೀಡಿರುವ 'ಮ್ಯಾಕ್ಸ್' ಕಿರುತೆರೆಯಲ್ಲೂ ಮ್ಯಾಕ್ಸಿಮಮ್ ಹಿಟ್ ಆಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications